Monday, September 21, 2020

ಅಲ್ಲಮಪ್ರಭುದೇವರ ವಚನ ನಿರ್ವಚನ

 


ಅಲ್ಲಮಪ್ರಭುದೇವರ ವಚನ ನಿರ್ವಚನ

ಅಲ್ಲಮಪ್ರಭುಗಳ ವಚನಗಳು ಅನುಭಾವಿಕ ಪ್ರಪಂಚಕ್ಕೆ ದೊರೆತ ಅನರ್ಘ್ಯ ರತ್ನಗಳು. ಇವು ಮಾನವನ ಅಂತರ್ಯಾಮಿಯಾಗಿರುವ ಪರತತ್ವವನ್ನು ನಿರ್ದೇಶಿಸುತ್ತವೆ.

ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬರೆದಿರುವ ಈ ಬೃಹತ್ ಕೃತಿ ಅಲ್ಲಮರ 694 ವಚನಗಳಿಗೆ ನಿರ್ವಚನ ಹೊಂದಿರುತ್ತದೆ. ವಿದ್ವಾಂಸರಿಗೂ ಸುಲಭಗ್ರಾಹ್ಯವಲ್ಲದ ಅಲ್ಲಮಪ್ರಭುಗಳ ಪರಮಾನುಭವದ ಪ್ರೋಜ್ವಲ ವಚನಗಳ ಅಧ್ಯಯನ ಚಿಂತನ ವ್ಯಾಖ್ಯಾನಗೋಷ್ಠಿಯ ಸೂತ್ರಧಾರರಾಗಿ ತಮ್ಮ ಅನುಭಾವಪೂರ್ಣವಾದ  ದಿವ್ಯದೀಪ್ತಿಯ ಭಾಷ್ಯವನ್ನು ಶ್ರೀಗಳು ನೀಡಿದ್ದಾರೆ.

ಒಂದು ವಚನದ ತಾತ್ಪರ್ಯ

ಅಲ್ಪಜ್ಞಾನಿ ಪ್ರಕೃತಿಸ್ವಭಾವಿ, ಮಧ್ಯಮಜ್ಞಾನಿ ವೇಷದಾರಿ,

ಅತೀತಜ್ಞಾನಿ ಆರೂಢ, ಆರೂಢನನಾರೂ ಅರಿಯಬಾರದಯ್ಯಾ

ಜ್ಞಾನವನರಿಯದಾತ ಅಜ್ಙಾನಿ, ನಾಮನಷ್ಟ

ಚತುರ್ವಿದದೊಳಗೆ ಆವಂಗವೂ ಅಲ್ಲ,

ಗುಹೇಶ್ವರಾ, ನಿಮ್ಮ ಶರಣ

ಭಾವ : ಜ್ಞಾನಿಗಳಲ್ಲಿ ನಾಲ್ಕು ವಿಧ. ಒಂದು ಅಲ್ಪಜ್ಞಾನಿ, ಲೌಕಿಕ ಜ್ಞಾನವುಳ್ಳವ. ಅವನದು ಪ್ರಾಕೃತಿಕ ಸ್ವಭಾವ. ದೇಹಾದಿಗಳಲ್ಲಿ ಅಭಿಮಾನ, ವಿಷಯಗಳಲ್ಲಿ ಆಸಕ್ತಿ, ಎರಡು-ಮಧ್ಯಮಜ್ಞಾನಿ: ಲೌಕಿಕ ಮತ್ತು ಅಲೌಕಿಕ ಎರಡನ್ನೂ ಅರಿತವ. ಅದೂ ಶಾಬ್ದಿಕವಾಗಿ ಅವನು ವೇಷದಾರಿ: ನೋಡಲು ಜ್ಞಾನಿ ಅನುಭಾವಿಯಲ್ಲ. ಮೂರು-ಅತೀತ ಜ್ಞಾನಿ ದೇಹ,ಮನ, ಬುದ್ಧಿಗಳ ಆಚೆಗೆ ಆತ್ಮತತ್ವವನ್ನು ಅರಿತವ. ಆತ್ಮಜ್ಞಾನಿ. ಅವನು ಜಾಗ್ರಾದಿ ಅವಸ್ಥೆಗಳನ್ನೆಲ್ಲ ಏರಿ ತುರೀಯ ಸ್ಥಿತಿಯಲ್ಲಿ ನಿಂತುದರಿಂದ ಆರೂಢ. ಅವನದು ಅವಸ್ಥಾತೀತ ನಿಲುವು. ಆದಯದರಿಂದ ಅವನನ್ನು ಅರಿಯುವುದು ಸುಲಭವಲ್ಲ. ನಾಲ್ಕು ಅಜ್ಞಾನಿ ತಾನು ಅನ್ಯ ಎಂಬ ಭೇದಜ್ಙಾನ ಇಲ್ಲದವ. ಆತ್ಮ ನಿಮಗ್ನ. ಅವನದು ನಾಮ ರೂಹುಗಳ ಭಾವವಿಲ್ಲದ ಒಂದು ಬಗೆಯ ಜ್ಞಾನೋನ್ಮತ್ತ  ಅವಸ್ಥೆ. ಈ ನಾಲ್ವರಲ್ಲಿ ಶರಣ ಯಾವನೂ ಅಲ್ಲ. ಶರಣ ಶರಣನೇ. ಅವನದು ಅರಿವು ಆನಂದದ ಸ್ಥಿತಿ.

 ಹೀಗೆ ತಾತ್ಪರ್ಯ ಮಾಡಿರುವುದರ ಜೊತೆಗೆ ಒಂದೊಂದು ಸಾಲಿಗೂ ಮತ್ತೆ ವಿವರವಾಗಿ ನಿರ್ವಚನ ಮಾಡಿದ್ದು ವಚನ ಸಾಹಿತ್ಯ ಅಭಿಮಾನಿಗಳಿಗೆ ವಚನಾನಂದವನ್ನು ಉಂಟುಮಾಡುತ್ತದೆ. ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿರುವ ಈ ಕೃತಿಯು 1116 ಪುಟಗಳನ್ನು ಹೊಂದಿರುತ್ತದೆ. ಮುಖ ಬೆಲೆ ರೂ. 750.  ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ

9980393469

 

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

No comments:

Post a Comment