ದಾಸೋಹ ಸಿರಿ ಉದಾತ್ತ ವ್ಯಕ್ತಿತ್ವದ ದಿವ್ಯಮಾನವ ಶಿವಕುಮಾರ ಶ್ರೀ
ಉದರ ತಣಿಸಿ ಮಿದುಳ ಬೆಳಸಿ
ಮಲಿನ ಮನದ ಮುಸುಕ ಹರಿಸಿ
ಜಾತಿಯಳಿಸಿ ಜನತೆ ಹರಸಿ
ಜ್ಯೋತಿಯಾಗಿ ಬೆಳಗುತಿದೆ ಸಿದ್ಧಗಂಗೆ
ತುಮಕೂರಿನ ಲೇಖಕರಾದ ರಾಜಶೇಖರಯ್ಯನವರು ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮಿಗಳ ಬಗ್ಗೆ ಬರೆದಿರುವ ಕವಿತೆ ಅಕ್ಷರಶÀಃ ಸತ್ಯವಾದದ್ದು. ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಶೂನ್ಯಪೀಠ ಪರಂಪರೆಯ ಗೋಸಲಸಿಧ್ಧೇಶ್ವರರು ಸ್ಥಾಪಿಸಿದ ಸಿದ್ಧಗಂಗಾ ಮಠ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರು, ಶ್ರೀ ಅಡವಿಸ್ವಾಮಿಗಳು, ಶ್ರೀ ಉದ್ಧಾನ ಶಿವಯೋಗಿಗಳು, ಶ್ರೀ ಮರುಳಾರಧ್ಯರಿಂದ ವಿಸ್ತರಣೆಗೊಂಡು ಶ್ರೀ ಶಿವಕುಮಾರಸ್ವಾಮಿಗಳ ಪಟ್ಟಾಧಿಕಾರದ ನಂತರ ಇಡೀ ವಿಶ್ವವೇ ಸಿದ್ಧಗಂಗೆಯನ್ನು ಕಣ್ತುಂಬಿಕೊಳ್ಳುವAತಹ ಭಕ್ತಿ ಮತ್ತು ದಾಸೋಹ ಕೇಂದ್ರವಾಗಿ ರೂಪುಗೊಂಡಿತು. ಶ್ರೀ ಸಿದ್ಧಗಂಗಾಮಠದಲ್ಲಿ ಬೆಳಗಿನ ಯುಗವನ್ನು ನಿರ್ಮಾಣ ಮಾಡಿದ ಶ್ರೀಗಳ ವ್ಯಕ್ತಿತ್ವದ ಬಗ್ಗೆ ಚಿತ್ತ ಹರಿಸೋಣ ಬನ್ನಿ.
ಶ್ರೀ ಶಿವಕುಮಾರಸ್ವಾಮಿಗಳವರದು ಎತ್ತರದ ನಿಲುವು, ವಿಶಾಲವಾದ ಹಣೆಯಲ್ಲಿ ಸದಾ ಕಂಗೊಳಿಸುವ ವಿಭೂತಿ, ಕಾರುಣ್ಯರಸ ತುಂಬಿದ ಹೊಳೆವ ಕಣ್ಣುಗಳು, ದಾಸೋಹ ಮತ್ತು ಸೇವೆಯನ್ನೇ ಉಸಿರು ಮತ್ತು ಧ್ಯೇಯವನ್ನಾಗಿ ಮಾಡಿಕೊಂಡು ನೂರು ವರ್ಷಗಳಿಗೂ ಹೆಚ್ಚು ಕಾಲ ಕನ್ನಡದ ನೆಲವನ್ನು ಪುಣ್ಯಭೂಮಿಯನ್ನಾಗಿ ಮಾಡಿದ ಶ್ರೀಗಳು ೧೯೦೮ ಏಪ್ರಿಲ್ ೧ ರಂದು ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಗಂಗಮ್ಮ ಮತ್ತು ಹೊನ್ನೇಗೌಡ ದಂಪತಿಗಳ ಹದಿಮೂರನೆಯ ಮಗನಾಗಿ ಜನಿಸಿ ೧೯೩೦ ಮಾರ್ಚ್ ೩ ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ ೮೯ ವರ್ಷಗಳ ಸುದೀರ್ಘ ಅವಧಿಯಲ್ಲಿ ಕೋಟ್ಯಾಂತರ ಭಕ್ತರ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು.
ಜ್ಞಾನ ಎನ್ನುವುದು ಬಹಳ ಪವಿತ್ರವಾದುದು. ಶ್ರೇಷ್ಠವಾದುದು. ಅದು ಅಮೂಲ್ಯ ರತ್ನ, ಯಾರೂ ನಿಖರವಾದ ಜ್ಞಾನ ಸಂಪಾದನೆ ಮಾಡುತ್ತಾರೋ ಅವರು ನಿಜವಾದ ಜ್ಞಾನಿಯಾಗುತ್ತಾನೆ ಆತನೇ ನಿಜವಾದ ಶ್ರೀಮಂತ ಎಂದು ಹೇಳುತ್ತಿದ್ದ ಶ್ರೀಗಳು ತಮ್ಮ ಮಠದಲ್ಲಿ ಪ್ರತೀ ವರ್ಷ ಹತ್ತು ಸಾವಿರ ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಿಕೊಳ್ಳಲು ತಂದೆ ತಾಯಿ ಇಲ್ಲದ, ನಿರ್ಗತಿಕ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಮತ್ತು ದಾಸೋಹ ನೀಡಿ ಆ ವಿದ್ಯಾರ್ಥಿಗಳು ವಿಶ್ವದ ನಾನಾ ದೇಶಗಳಲ್ಲಿ ನೆಲೆಸಿ ಉದ್ಯೋಗ ಪಡೆದು ನಮ್ಮ ದೇಶದ ಕೀರ್ತಿಯನ್ನು ಹರಡಲು ಕಾರಣರಾದರು.
ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ.
ಎಂಬ ರಾಷ್ಟçಕವಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಸಾಲುಗಳು ಎಷ್ಟು ಅರ್ಥಗರ್ಭಿತವಾಗಿವೆ ಎಂಬುದನ್ನು ಮನಗಂಡರೆ ಶ್ರೀಗಳ ವ್ಯಕ್ತಿತ್ವ ಅರ್ಥವಾಗುತ್ತದೆ. ರಾಜಕೀಯ, ಸಿನಿಮಾ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಯಾವುದೇ ಸಾಧಕರೂ ಕೂಡಾ ಸಿದ್ಧಗಂಗೆಗೆ ಹೋಗಿ ಶ್ರೀಗಳ ದರ್ಶನ ಮಾಡಿ ತಮ್ಮ ವಿವಿಧ ಚಟುವಟಿಕೆಗಳನ್ನು ಪ್ರಾರಂಭ ಮಾಡುತ್ತಿದ್ದರು. ದೇಶದ ಪ್ರಥಮ ಪ್ರಜೆಗಳಾದ ರಾಷ್ಟçಪತಿಗಳು ಹಾಗೂ ಪ್ರಧಾನಮಂತ್ರಿಗಳಾದಿಯಾಗಿ ಶ್ರೀಮಠಕ್ಕೆ ಬಂದು ಶ್ರೀಗಳ ದರ್ಶನಾಶೀರ್ವಾದ ಪಡೆದು ಹೋಗುತ್ತಿದ್ದರು ಎಂದರೆ ಶ್ರೀಗಳ ದಿವ್ಯಶಕ್ತಿಯ ಮಹತ್ವ ಎಲ್ಲರಿಗೂ ಅರಿವಾಗುತ್ತದೆ.
ದಾಸೋಹಕ್ಕೆ ತುಂಬಾ ಮಹತ್ವ ನೀಡುತ್ತಿದ್ದ ಶ್ರೀಗಳು ಮಠಕ್ಕೆ ಬರುವ ಭಕ್ತರಿಗೆ ಮೊದಲು ದಾಸೋಹ ಸ್ವೀಕರಿಸಿ ನಂತರ ದರ್ಶನ ಮಾಡಿ ಎಂದು ಹೇಳುತ್ತಿದ್ದರು. ಅವರ ಮರಣವನ್ನೂ ಕೂಡಾ ಮಠದಲ್ಲಿ ದಾಸೋಹವಾದ ನಂತರ ಘೋಷಣೆ ಮಾಡಿ ಎಂದು ಕಿರಿಯ ಶ್ರೀಗಳಿಗೆ ಹೇಳಿದ್ದರು ಎಂದರೆ ದಾಸೋಹದ ಚಕ್ರವರ್ತಿಯಾಗಿದ್ದರು ಎಂಬುದನ್ನು ನಿಸ್ಸಂಶಯವಾಗಿ ತಿಳಿದುಕೊಳ್ಳಬಹುದು.
ಭಾರತದ ದಿವಂಗತ ಮಾಜಿ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು ಸಿದ್ಧಗಂಗಾ ಹಲವು ಗಂಗಾಗಳ ಸಂಗಮ ಪ್ರವಾಹ. ಇಲ್ಲಿ ಕರ್ಮದ ಗಂಗಾ, ಗೌರವಗಂಗಾ ಮತ್ತು ಕಾರುಣ್ಯಗಂಗಾಗಳು ಸಮರಸಗೊಂಡು ಹರಿಯುತ್ತಿವೆ. ಜ್ಞಾನಯಜ್ಞ ನಡೆದಿದ್ದು ಶತಮಾನಗಳ ಪರ್ಯಂತ ಮುಂದುವರೆದಿದೆ. ಪೂಜ್ಯ ಶ್ರೀ ಸ್ವಾಮೀಜಿಯವರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿ ಶ್ರೀಮಠದ ಪರಿಸರವನ್ನೆಲ್ಲ ಕ್ರಿಯಾಶೀಲಗೊಳಿಸಿದೆ. ಸರ್ಕಾರಿ ಶಾಲೆಗಳು ಶಿಕ್ಷಣವನ್ನು ನೀಡುತ್ತವೆ ಆದರೆ ಸಂಸ್ಕಾರವನ್ನು ಕೊಡಲಾರವು. ಶಿಕ್ಷಣ ಮತ್ತು ಸಂಸ್ಕಾರ ಎರಡನ್ನೂ ಏಕಕಾಲದಲ್ಲಿ ಸಿದ್ಧಗಂಗಾ ಮಠ ನೀಡುತ್ತಿದೆ ಎಂದು ಹೇಳಿ ಉತ್ತರದಲ್ಲಿ ಗಂಗೆ ದಕ್ಷಿಣದಲ್ಲಿ ಸಿದ್ಧಗಂಗೆ ಎಂದು ತಮ್ಮ ಕವಿವಾಣಿಯಲ್ಲಿ ಹೇಳಿರುವುದು ಮಠದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪೂಜ್ಯ ಶ್ರೀಗಳು ಇಲ್ಲದೇ ೧೧೬ನೇ ಜಯಂತಿಯನ್ನು ಆಚರಿಸುತ್ತಿದ್ದು, ಅವರು ಬೋಧಿಸಿದ ಮೌಲ್ಯ ಶಿಕ್ಷಣವನ್ನು ಅರಿತು ನಾವು ನಡೆದದ್ದೇ ಆದರೆ ನಮ್ಮ ಇಹಲೋಕದ ಜೀವನ ಸಾರ್ಥಕವಾಗುತ್ತದೆ.
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರ
ಶರಣು ವಿಶ್ವವಚನ ಫೌಂಡೇಷನ್
#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬
ಮೊ. ೯೯೦೧೧೩೭೯೪೮





