Saturday, May 15, 2021

ಜಾನಪದದಲ್ಲಿ ಬಸವಣ್ಣ

 _*ಜಾನಪದದಲ್ಲಿ ಅಣ್ಣ ಬಸವಣ್ಣ*_ 


🔸🔹🔸🔹🔸🔹🔸🔹🔸🔹


ಶರಣೆನ್ನಿರೋ ನೀವು ಶರಣು ಶರಣೆನ್ನಿರೋ ಶರಣರಿಗೆ 

ಶರಣೆಂದರೆ ಭವಪಾಶ ಕಳೆಯುವುದು


ಮುಗ್ಧ ಶರಣರ ಹಾಡು  ಸಿದ್ದಿ ಮಂತ್ರವು ನೋಡು

ಸಿದ್ಧಾಗೊ ಹಾಡು ಹಾಡುದಕೆ

ಸಿದ್ಧಾಗೊ ಹಾಡು ಹಾಡುದಕೆ ಎಲೆ ಜೀವ

ಶುದ್ಧಾಗಿ ಹೊಂದು ಶಿವಪದವ


ಕರುಣ ಬಂದರೆ ಕಾಯೋ 

ಮರಣ ಬಂದರೆ ಒಯ್ಯೋ 

ಕರುಣಿ ಕಲ್ಯಾಣ ಬಸವಯ್ಯ ಶಿವಲಿಂಗ

ಕಡೆತನಕ ಕಾಯೋ ಅಭಿಮಾನ 


ನಂದಿಪಟ ಹಾರಾಡಿ ಮಂದಿರಕೆ ಮೆರೆಯುವವು

ಸಂದು ಸಾಲುಗಳ ಮನೆಮಾರು

ಸಂದು ಸಾಲುಗಳ ಮನೆಮಾರು ಕಲ್ಯಾಣ 

ಚಂದಾದ ಬೀಡು ಶರಣರಿಗೆ


ಬಸವ ಸಾರಿದನು ಕುಶಲದಲಿ ವಚನಗಳ 

ಮುಸುಕಿರುಳು ಹರಿದು ನಸುಕಾತು 

ಮುಸುಕಿರುಳು ಹರಿದು ನಸುಕಾತು ಜಗದೊಳಗೆ 

ಹೊಸಮತದ ಸೂರ್ಯನುದಿಸಿದನು 


ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ

ಚೆಲ್ಲಿದನು ತಂದು ಶಿವಬೆಳಕ..

ಚೆಲ್ಲಿದನು ತಂದು ಶಿವಬೆಳಕ ನಾಡೊಳಗೆ 

ಸೊಲ್ಲೆತ್ತಿ ಜನರು ಕೊಂಡಾಡುವರು 


ಮಲ್ಲಿಗೆ ಇರುವಾಗ ಮುಳ್ಯಾಕೆ ಮುಡಿಯುತಿ 

ಕಲ್ಯಾಣದಲ್ಲಿ ಬಸವಯ್ಯಾ.. 

ಕಲ್ಯಾಣದಲ್ಲಿ ಬಸವಯ್ಯನಿರುವಾಗ 

ಕಲ್ಲಿಗ್ಯಾಕೆ ಕೈಯ ಮುಗಿಯುತಿ


ಶರಣರ ನೆನೆದರೆ ಸರಗಿಯ ಇಟ್ಟಂಗ 

ಹವಳ‌ ಮಲ್ಲಿಗೆ ಮುಡಿದಂಗಾ

ಹವಳ ಮಲ್ಲಿಗೆ ಮಡಿದಂಗಾ 

ಕಲ್ಯಾಣ ಶರಣರ ನೆನೆ ಮನವೇ


ಬಸವ ಹೂಡಿದ ಬಂಡಿ ಶಿಶುವು ಏರಿತು ನಂದಿ

ದೆಸೆಗೆಟ್ಟು ಲೋಕ ಕೈಲಾಸ

ದೆಸೆಗೆಟ್ಟು ಲೋಕ ಕೈಲಾಸ ಕಾಯಕದ

ಉಸಿರಾತು ನಾಡ ಸಿರಿಯಾಯ್ತು


ಬಸವ ರಾಜ್ಯದ ಸಿರಿಯು ಬಸವ ಬಡವರ ನಿಧಿಯು 

ಬಸವನೇ ಮಳೆ ಬೆಳೆಯು ನಾಡೊಳಗೆ 

ಬಸವನೇ ಮಳೆ ಬೆಳೆಯು ನಾಡೊಳಗೆ 

ಬಸವನೇ ಸಿರಿಸಗ್ಗ ಸೊಪಾನ


ಹಂತಿಪದಕೊಂದಿಲ್ಲ ನಿಂತು ಬೆನಕನ ಪೂಜೆ

ಹಂತಿಯೊಳು ಪೂಜೆ ಶರಣರಿಗೆ

ಹಂತಿಯೊಳು ಪೂಜೆ ಶರಣರಿಗೆ ನೀ ಕೇಳೋ

ಗಣಪತಿಗೆ ಸ್ವಂತ ನೆನೆಯೆಂದ ಒಕ್ಕಲಿಗ


ಅರಿಯುದಕೆ ಕುರುಹೆಂದು ಕರಲಿಂಗ ನೀ ಕೊಟ್ಟಿ

ಶರಣೆಂಬು ನುಡಿಯ ಛಲ ಮಾಡಿ

ಶರಣೆಂಬು ನುಡಿಯ ಛಲ ಮಾಡಿ ಶಿವಮತಕೆ

ಗುರು ಬಸವಲಿಂಗ ನಿಜ ಮಂತ್ರ 


ಉತ್ತಿ ಬಿತ್ತುವ ಮಂತ್ರ ಬಿತ್ತಿ ಬೆಳೆಯುವ ಮಂತ್ರ 

ಸತ್ಯ ಶಿವಮಂತ್ರ ನಿನ್ನೆಸರು 

ಸತ್ಯ ಶಿವಮಂತ್ರ ನಿನ್ನೆಸರು ಬಸವಯ್ಯ 

ನಿತ್ಯ ಮಹಮಂತ್ರ ಮತ್ಯದೊಳು 


ಬಸವಯ್ಯ ನಿನ್ನ ಹೆಸರು ದೆಸೆದೆಸೆಗೆ ಶಿವಮಂತ್ರ 

ಪೊ(ಹೊ)ಸಮತಕೆ ಮಂತ್ರ ನಿತ್ಯದಲಿ 

ಪೊ(ಹೊ)ಸಮತಕೆ ಮಂತ್ರ ನಿತ್ಯದಲಿ ಬಸವಯ್ಯ 

ಒಕ್ಕಲಿಗ ನಿನ್ನ ಹೆಸರ ಜಪಿಸುವನು 


ಕಾಯಕವ ಕಲಿಸುದಕೆ ನಾಯಕನೋ ಬಸವಯ್ಯ 

ಜೀಯಾ ಪೊ(ಹೊ)ಸ ಮತಕೆ ಶಿವಭಕ್ತಿ

ಜೀಯಾ ಪೊ(ಹೊ)ಸ ಮತಕೆ ಶಿವಭಕ್ತಿ ಸಾರುದಕೆ 

ರಾಯ ಜೀವನದ ಪೊಸ ನುಡಿಗೆ 


ಕಾಯಕವೇ ಶಿವಭಕ್ತಿ ಕಾಯಕವೇ ಶಿವಭಜನೆ 

ಕಾಯಕವೇ ಲಿಂಗ ಶಿವಪೂಜೆ

ಕಾಯಕವೇ ಲಿಂಗ ಶಿವಪೂಜೆ ಶಿವಯೋಗ 

ಕಾಯಕವೇ ಕಾಯ್ದು ಕೈಲಾಸ


ಉಂಡು ತೇಗಿತು ಲೋಕ ಕೊಂಡಾಡಿತು ಕಾಯಕವ 

ಕಂಡಕಂಡಲ್ಲಿ ದಾಸೋಹ

ಕಂಡಕಂಡಲ್ಲಿ ದಾಸೋಹ 

ಕಾಯಕವ ಕಂಡ ಜೀವನವೆಲ್ಲಾ ಶಿವಮಾತು 


ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು 

ದೇಶದೇಶವೆಲ್ಲ ಪೊ(ಹೊ)ಸ ಮಾತ

ದೇಶದೇಶವೆಲ್ಲ ಪೊ(ಹೊ)ಸ ಮಾತ ಕೇಳುತಲಿ 

ಮಾಸಿದವು ವೇದ ಹುಸಿಯೆಂದು 


ಸಾಧು ಸಾದಲೆ ಬಸವ ಓದು ಕಲಿತಿತು ಲೋಕ 

ಮೇಧಿನಿಗೆ ಬಂತು ಹೊಸ ಬೆಳಕು 

ಮೇಧಿನಿಗೆ ಬಂತು ಹೊಸ ಬೆಳಕು ನಿನ್ನಿಂದ

ಒಕ್ಕಲಿಗ ಪೊಸ ಮಂತ್ರ ಜಪಿಸುವನು


ಓದಿದನು ಬಸವಯ್ಯ ವೇದದೊಳಗಿನ ಹುಸಿಯ 

ಭೇದ ಭೇದವನೇ ಬಿಚ್ಚಿಟ್ಟ

ಭೇದ ಭೇದವನೇ ಬಿಚ್ಚಿಟ್ಟ ಜನಪದಕೆ 

ತೇದುಂಡ ಜೀವಿ ಬಸವಯ್ಯ 


ಹೊಲೆಯಲಲ್ಲದೆ ಲೋಕ ತಲೆಯಲ್ಲಿ ಹುಟ್ಟುವುದೆ

ಹೊಲೆಯ ಎಣಿಸಿದರೆ ತಿಳಿವುಂಟೆ

ಹೊಲೆಯ ಎಣಿಸಿದರೆ ತಿಳಿವುಂಟೆ ಶರಣರಿಗೆ

ಹೊಲಬಳಿದು ಬೇರೆ ಕುಲವುಂಟೆ 


ಹೊಲೆಯ ಮಾದಿರರೆಂಬ ಬಲೆಯ ಕಿತ್ತೆಸೊದೋನೆ

ಭಲಿರೇ ಬಸವಯ್ಯ ಬಸವರಸ 

ಭಲಿರೇ ಬಸವಯ್ಯ ಬಸವರಸ ನಿನ್ನೆಸರು 

ನಿತ್ಯ ನೆಲೆಯಾಯ್ತು ಜನಪದಕೆ 


ಹೊಲಸು ತಿಂಬುವ ಹೊಲೆಯ ಹೊಲಬಿಲ್ಲವ ಹೊಲೆಯ

ನೆಲೆಸಲ್ಹುಸಿನುಡಿಯು ಎದೆಯೊಳಗೆ

ನೆಲೆಸಲ್ಹುಸಿನುಡಿಯು ಎದೆಯೊಳಗೆ ಹೊಲೆಯರಸ

ಹೊಲೆಯರೆನ್ನುವರೆ ಶರಣರಿಗೆ


ಹಂತಿಯದು ಹಾಡೆಂದು ಪಂಥ ಕಟ್ಟಲಿಬೇಡ

ಕಂತಿ ಕರಗುವುದು ನಿಂತಲ್ಲಿ

ಕಂತಿ ಕರಗುವುದು ನಿಂತಲ್ಲಿ ಬಸವಯ್ಯ

ಕುಂತು ಎದೆಯೊಳಗೆ ಹಾಡಿಸಿದ 


ಬಸವ ಭಕ್ತಿಯ ಬೀಜ 

ಬಸವ ಮುಕ್ತಿಯ ತೇಜ 

ಬಸವ ಕಾಯಕದ ಗುರುಬೀಜ 

ಬಸವ ಕಾಯಕದ ಗುರುಬೀಜ ಶಿವಮತಕೆ 

ಬಸವ ಓಂಕಾರ ಶಿವನಾಮ 


🔸🔹🔸🔹🔸🔹🔸🔹🔸🔹


ಈ ಪೋಸ್ಟಿನಲ್ಲಿ ಪ್ರಸ್ತಾಪಿಸಲಾದ ಆಯ್ದ ಕೆಲವು ತ್ರಿಪದಿಗಳು ಹಲವಾರು ಹಾಡುಗಳ ಭಾಗ ಗರತಿ ಪದ , ಹಂತಿ ಪದ , ಕುಟ್ಟುವ ಬೀಸುವ ಪದಗಳಲ್ಲಿ ಬರುತ್ತದೆ..

ಬೀಸುವ ಪದದಲ್ಲಿ 

ಆದಿ ಮುಕ್ಕಿಗೆ ಶರಣು , ಗೋಧಿ ಅಕ್ಕಿಗೆ ಶರಣು 

ಓನಾಮದಯ್ಯನಿಗೆ ಶರಣು ಕಲ್ಯಾಣದ ಬಸವಯ್ಯನಿಗೆ ಶರಣು.. ಪ್ರಥಮ ಪ್ರಭುದೇವರಿಗೆ ಶರಣು ಚೆನ್ನಬಸವನಿಗೆ ಶರಣು ಅಕ್ಕನಾಗಾಯಿ ಪಾದಕ್ಕೆ ಶಿವಶರಣು... 

ಹೀಗೆ ಶರಣು , ಶರಣು ಶಿವಶರಣು ಎಂದು ಮೂರು ಸಾಲಿಗೆ ಮೂರು ಶರಣರ ಹೆಸರನ್ನು ಸೇರಿ ಹಾಡುತ್ತಾರೆ.


ಜಾನಪದದ ಸೊಲ್ಲಿಗೆ ಸೊಲ್ಲು ಕಟ್ಟಿ ಹಾಡುವುದು ಹಿಂದಿನ ಕಾಲದವರ ಬಾಯಲ್ಲಿ ಕೇಳಿದರೆ ಚೆಂದ.. 

ಮುಂದೆ ಈ ಹಾಡುಗಳಿಗೆ ಮಾಡ್ರನ್ ಟಚ್ ಬಂದರೂ ಬರಬಹುದು.. ಆದರೆ ಇವನ್ನು ಹಳ್ಳಿಯಲ್ಲಿ ತಾಳ ದಮ್ಮಡಿ ತಂಬೂರಿ ಹಿಡಿದುಕೊಂಡು ಹಾಡಿದಂತಹ ಭಜನೆಯ ಸ್ವಾದವನ್ನು ಕೇಳಿಯೇ ಅನುಭವಿಸಬೇಕು. 


ಶಿವಯೋಗ ಶಿವಾನುಭಾವ ಮಂಟಪ


🔸🔹🔸🔹🔸🔹🔸🔹🔸🔹

Thursday, May 6, 2021

ಷಣ್ಮುಖಸ್ವಾಮಿ

 *ಷಣ್ಮುಖ ಸ್ವಾಮಿಗಳ ವಚನ* 

ಅಡವಿಯಲ್ಲಿದ್ದ ಗೋವು, ಮನೆಯಲ್ಲಿರ್ದ ಕರುವಿಂಗೆ ಚಿಂತಿಸಿ, ಬಂದು ಹಾಲೂಡಿಸಿ ಮೋಹ ಮಾಡುವುದಲ್ಲದೆ, ಆ ಕರುವೆತ್ತ ಬಲ್ಲುದಯ್ಯ? ನಾನು ಕರ್ಮದೇಹವಿಡಿದು ಪರಿಭವದಲ್ಲಿ ತೊಳಲುತ್ತಿರಲು, ನೀನು ದಯಹುಟ್ಟಿ ಎನ್ನಮರವೆಯ ಸಂಸಾರ ತೊಲಗಿಸಿ ಕರುಣದಿಂದ ಸಲುಹಬೇಕೆಂಬ, ಚಿಂತೆ ನಿನಗಲ್ಲದೆ ನಾನೇನ ಬಲ್ಲನೆಯ್ಯ ಅಖಂಡೇಶ್ವರಾ? 

ಶರಣಾಗತಿಯ ವಚನ, ಹಸು ಕಾಡಿನಲ್ಲಿ ಮೇಯುತ್ತಿದ್ದರೂ,ಹಸುವಿಗೆ ಕರುವಿನ ಯೋಗಕ್ಷೇಮದ, ಕರುವನ್ನು ಉಪಚರಿಸುವ, ಕಾಪಾಡುವ ಚಿಂತೆ. ಆ ಚಿಂತೆಯ ಅನುಭವ ಕರುವಿಗೆ ಬಾರದು. ಅದೇ ರೀತಿಯಲ್ಲಿ ಸಂಸಾರದ ಕಷ್ಟ ದುಃಖ  ಜಂಜಡಗಳಲ್ಲಿ ಮುಳುಗಿರುವ ನಮ್ಮನ್ನು ಆ ದೇವರೇ,  ಹಸು ಕರುವನ್ನು ಪಾಲಿಸಿದಂತೆ ಪಾಲಿಸಬೇಕೆಂದು ಷಣ್ಮುಖಸ್ವಾಮಿಗಳು ಮೊರೆಯಿಡುತ್ತಾರೆ.

..................................................................

Wednesday, May 5, 2021

ಅನುಭಾವ

 ಅಕ್ಕಿ ಅನ್ನಕ್ಕೆ ಕೇಳಿತು...ನೀನು ನಾನೇ ಆಗಿದ್ದೆ, ಆದರೆ ಹೇಗೆ ಅನ್ನವಾದೆ?


ಅನ್ನ ಹೇಳಿತು... ನೀರು, ಬೆಂಕಿಗಳ ಸಂಪರ್ಕಕ್ಕೆ ಒಳಗಾದರೆ ಅವುಗಳ ಸಂಸ್ಕಾರದಿಂದ ಮೃದುವಾದೆ... ಮಧುರವಾದೆ. ಅಕ್ಕಿ ಎನ್ನುವ 'ಭಾವ' ಕಳೆದು ಕೊಂಡೆ... ಅನ್ನ ಎನ್ನುವ 'ಅನುಭಾವ' ಪಡೆದು ಕೊಂಡೆ...


ಅದೇ ರೀತಿ ಸಜ್ಜನರ ಸಂಗದಿಂದ ನಮ್ಮಲ್ಲಿರುವ ಅಜ್ಞಾನ, ದುರಿತ, ದುಮ್ಮಾನಗಳ 'ಭಾವ' ಕಾಠಿಣ್ಯತೆ ತೊಲಗಿ... ಪುಣ್ಯ, ಜ್ಞಾನ, ಮೋಕ್ಷಗಳೆಂಬ ಮೃದುತ್ವದ 'ಅನುಭಾವ' ದೊರೆಯುತ್ತದೆ.


🌹👏🌹 ಶುಭ ಮುಂಜಾನೆ🌹👏🌹