ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಬೆಳಗಿದ ಜಗನ್ಮಾತೆ ಅಕ್ಕಮಹಾದೇವಿ
ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರಿಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಅಯ್ದು ವಚನ
ಅಜಗಣ್ಣನ ಅಯ್ದು ವಚನಕ್ಕೆ ಕೂಡಲಚೆನ್ನಸಂಗಮದೇವಾ
ಮಹಾದೇವಿಯಕ್ಕಗಳದೊಂದೆ ವಚನ
ಚಿನ್ಮಯಜ್ಞಾನಿ ಚನ್ನಬಸವಣ್ಣನವರ ವಚನ ಕನ್ನಡ ನಾಡಿನ ಪ್ರಥಮ ಕವಯಿತ್ರಿ ಎಂಬ ಹಿರಿಮೆಗೆ ಭಾಜನರಾದ ದಿಟ್ಟ ಹೆಜ್ಜೆ, ಧೀರ ನುಡಿಯ ಜಗನ್ಮಾತೆ ಅಕ್ಕಮಹಾದೇವಿಯವರ ಸಾಮರ್ಥ್ಯವನ್ನು ಬಿಂಬಿಸುತ್ತದೆ. ವಚನ ಸಾಹಿತ್ಯವೆಂದ ಕೂಡಲೇ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು ಬಸವಣ್ಣನವರಾದರೆ, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿ. ಅರಸೊತ್ತಿಗೆಯನ್ನು ಧಿಕ್ಕರಿಸಿ, ಬ್ರಹ್ಮಚರ್ಯವನ್ನು ಪಾಲಿಸಿ ಜಗತ್ತಿನಲ್ಲಿ ಯಾವ ಹೆಣ್ಣು ಸಾಧಿಸಲಾರದ ಮಹಾಸಾಧನೆಯನ್ನು ಮಾಡಿ ವಿಶ್ವದ ಪ್ರಥಮ ಸಂಸತ್ತು ಎಂದು ಕರೆಯಲ್ಪಡುವ ಅನುಭವಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುಗಳಿಂದ ‘ವಿಶ್ವ ಸ್ತ್ರೀ ಕುಲದ ಜ್ಯೋತಿ’ ಎಂದು ಹೊಗಳಿಸಿಕೊಂಡವರು ಅಕ್ಕ. ಇವರ ಜೀವನ ದರ್ಶನವನ್ನು ಪರಿಚಯ ಮಾಡಲು ದಿನ, ತಿಂಗಳು, ವರ್ಷ ಕಳೆದರೂ ಸಾಲದು. ಆದರೂ ಸಾಸಿವೆಯಲ್ಲಿ ಸಾಗರವನ್ನು ಅಡಗಿಸುವ ಕೌಶಲ್ಯದಂತೆ ಅಕ್ಕನ ವ್ಯಕ್ತಿತ್ವದ ಸಂಕ್ಷಿಪ್ತ ಪರಿಚಯವನ್ನು “ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಬೆಳಗಿದ ಜಗನ್ಮಾತೆ ಅಕ್ಕಮಹಾದೇವಿ” ಎಂಬ ಶೀರ್ಷಿಕೆಯಡಿಯಲ್ಲಿ ಮಾಡಿಕೊಡಲು ಪ್ರಯತ್ನಿಸುವೆ.
ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ತಾಲ್ಲೂಕಿನಲ್ಲಿ ‘ಉಡುಗಣಿ’ ಅಥವಾ ಉಡುತಡಿ ಪಟ್ಟಣದಲ್ಲಿ ವಾಸವಾಗಿದ್ದ ಓಂಕಾರಶೆಟ್ಟಿ ಮತ್ತು ಲಿಂಗಮ್ಮ (ನಿರ್ಮಲಶೆಟ್ಟಿ ಮತ್ತು ಸುಮತಿ)ರವರು ಯಾವಾಗಲೂ ಶಿವನ ಚಿಂತೆ ಶಿವನ ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದರು. ಕೆಲವು ಕಾಲದ ನಂತರ ಹುಣ್ಣಿಮೆಯ ಪೂರ್ಣಚಂದ್ರನಂತೆ ದವನದ ಹುಣ್ಣಿಮೆಯ ದಿನ ಮಹಾದೇವಿ ಜನ್ಮತಾಳಿದಳು. ಅಕೆಯ ಹುಟ್ಟು ಹೆಸರು ಮಹಾದೇವಿ. ಎಳೆಯ ವಯಸ್ಸಿನಲ್ಲಿಯೇ ದೈವೀಲೀಲೆಗಳನ್ನು ಪ್ರದರ್ಶಿಸುವುದನ್ನು ದಂಪತಿಗಳಿಬ್ಬರೂ ಕಣ್ತುಂಬ ನೋಡಿ ಹರ್ಷಭರಿತರಾಗುತ್ತಾರೆ. ಉಡುತಡಿಯ ಜ್ಞಾನನಿಧಿಗಳಾಗಿದ್ದ ಶ್ರೀ ಗುರುಲಿಂಗದೇವರು ಮಹಾದೇವಿಗೆ ಶಿಕ್ಷಣ ನೀಡುತ್ತಾರೆ. ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಪ್ರೌಢಿಮೆಯನ್ನು ಸಂಪಾದಿಸಿ ಶ್ರೀ ಗುರುಲಿಂಗದೇವರಿAದಲೇ ಲಿಂಗದೀಕ್ಷೆಯನ್ನು ಪಡೆಯುತ್ತಾಳೆ. ದೀಕ್ಷಾ ಸಂಸ್ಕಾರ ಹೊಂದಿದ ಅಕ್ಕನ ಕೊರಳಲ್ಲಿ ರುದ್ರಾಕ್ಷಿ ಮತ್ತು ಲಿಂಗ, ಮಸ್ತಕದ ಮೇಲೆ ವಿಜೃಂಭಿಸುವ ಭಸ್ಮ, ಗಂಧದ ಬೊಟ್ಟು ಈಕೆಯ ಆಭರಣಗಳು, ಉಡುತಡಿಯಲ್ಲಿರುವ ಗುರುಲಿಂಗದೇವರ ಮಠಕ್ಕೆ ಹೋಗಿ ಪ್ರವಚನ ಕೇಳುವುದು, ಊರ ಹತ್ತಿರದಲ್ಲಿಯೇ ಇದ್ದ ಮಲ್ಲಯ್ಯನ ಗುಡಿಗೆ ಹೋಗಿ ಲಿಂಗವ ಪೂಜಿಸುತ್ತಾ ಶಿವಚಿಂತೆ, ಶಿವಧ್ಯಾನದಲ್ಲಿ ಕಾಲ ಕಳೆಯುತ್ತಿರಬೇಕಾದರೆ ಆಕೆಯ ಅಂತರಾಳದಿAದ ವಚನಗಳು ನಿರರ್ಗಳವಾಗಿ ಹೊರಬೀಳಲು ಪ್ರಾರಂಭವಾದವು. ಶರಣಸತಿ-ಲಿಂಗಪತಿಯಾಗಿ ದೇವನನ್ನು ಆರಾಧಿಸುತ್ತಾ ಸಾಗಿದಂತೆ ಆಕೆಗೆ ಆಧ್ಯಾತ್ಮಿಕ ವಿರಹ ವೇದನೆ ಪ್ರಾರಂಭಿಸಿತು.
ಹುಲುಬಾಳಿನ ಹುಲ್ಲುಮೊರಡಿಯನ್ನುಳಿದು ಪರಮಾನುಭವದ ಗಿರಿಯಲ್ಲಿ ನಲಿವ ನವಿಲಾಗಿ, ಕಿರಿವಳ್ಳವನ್ನುಳಿದು ತಿಳಿವಿನ ಕೊಳದಲ್ಲಿ ತೇಲುವ ಹಂಸೆಯಾಗಿ, ಮಹತ್ತಿನ ಮಾಮರದಲ್ಲಿ ಸ್ವರಗೈವ ಕೋಗಿಲೆಯಾಗಿ, ಪರಮಾತ್ಮನೇ ಪತಿಯೆಂಬ ಪವಿತ್ರ ಸಂಕಲ್ಪದ ಪುಷ್ಪಕ್ಕೆಳೆಸುವ ಭ್ರಮರದ ರೀತಿ ವಿಹರಿಸುತ್ತಾ ಶಿವನನ್ನು ಪೂಜಿಸುತ್ತಾ ಅವನನ್ನೇ ಧ್ಯಾನಿಸುತ್ತಾ ಅವನನ್ನೇ ವರಿಸುವ ಹಂತಕ್ಕೆ ತಲುಪಿದ್ದಳು ಎಂಬುದು ಅಕ್ಕನ ಅನೇಕ ವಚನಗಳಲ್ಲಿ ಕಾಣಬಹುದು.
ಹರನೇ ನೀನೆನಗೆ ಗಂಡನಾಗಬೇಕೆAದು
ಅನಂತಕಾಲ ತಪಿಸಿದ್ದೆ ನೋಡಾ
ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದರೆ
ಶಶಿಧರನ ಹತ್ತಿರಕ್ಕೆ ಕಳುಹಿಸಿದರೆಮ್ಮವರು
ಭಸ್ಮವನೇ ಹೂಸಿ ಕಂಕಣವನೇ ಕಟ್ಟಿದರು
ಚೆನ್ನಮಲ್ಲಿಕಾರ್ಜುನಯ್ಯಾ ನನಗೆ ನೀನಾಗಬೇಕೆಂದು
ಹೀಗೆ ಅಕ್ಕ ಯೌವನಕ್ಕೆ ಬಂದಾಗ ಸಖಿಯರು ಕಾಡಿಸಿ ಪೀಡಿಸಿ ನಿನ್ನ ಪ್ರಿಯತಮ ಯಾರು ಎಂದು ಪ್ರಶ್ನಿಸಿದಾಗ ಅಕ್ಕ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ ನಾನು ಮದುವಣಿಗಿ ಎಂಬ ಉತ್ತರ ನೀಡುತ್ತಾಳೆ. ಮತ್ತೆ ಸಖಿಯರು ಪರಶಿವನನ್ನು ಅಂತರಂಗದ ಆರಾಧ್ಯದೈವನಾಗಿಸಿಕೊಂಡು ಲೌಕಿಕವಾಗಿ ಗಂಡನೊಬ್ಬನ ಕೈಹಿಡಿಯಬಹುದಲ್ಲವೇ? ಎಂದಾಗ ಅಕ್ಕ
ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ?
ಲೌಕಿಕಕ್ಕೊಬ್ಬ ಗಂಡನೆ ಪಾರಮಾರ್ಥಕ್ಕೊಬ್ಬ ಗಂಡನೆ ?
ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ ಮಿಕ್ಕಿನ ಗಂಡರೆಲ್ಲ
ಮುಗಿಲ ಮರೆಯ ಬೊಂಬೆಯಂತೆ ಎನ್ನುತ್ತಾಳೆ.
ಅಂದು ಉಡುತಡಿಯಲ್ಲಿ ಹಬ್ಬ. ಜನರಲ್ಲಿ ಉತ್ಸಾಹ ಮತ್ತು ಉಲ್ಲಾಸ ಏಕೆಂದರೆ ಕೌಶಿಕ ಮಹಾರಾಜ ‘ವೈಹಾಳಿ’ ಬರುವವನಿದ್ದಾನೆ. ಹಬ್ಬದ ಊಟವ ಮಾಡಿ ಉಬ್ಬಿದ ಉತ್ಸಾಹದಿಂದ ಹೊಸ ಬಟ್ಟೆಗಳನ್ನು ತೊಟ್ಟು ಅಕ್ಕ ಮತ್ತು ಅವಳ ಗೆಳತಿಯರು ಮನೆಯ ಉಪ್ಪರಿಗೆಯಲ್ಲಿ ನಿಂತಿದ್ದಾರೆ. ವೈಭವದ ಮೆರವಣಿಗೆಯ ಇಕ್ಕೆಲಗಳಲ್ಲಿ ಜನಸ್ತೋಮ. ಆನೆಯ ಮೇಲೆ ಕುಳಿತ ಕೌಶಿಕ ಮಹಾರಾಜ ತನ್ನ ನೋಡಲು ನೆರೆದಂತಹ ಜನಸಮೂಹಕ್ಕೆ ಪ್ರತಿವಂದಿಸಿ ಪುರದ ಉಪ್ಪರಿಗೆಗಳ ಕಡೆ ದೃಷ್ಟಿಯನ್ನು ಬೀರುತ್ತಾ ಬರುವಾಗ ಕೌಶಿಕನ ಕಣ್ಣು ಉಪ್ಪರಿಗೆಯ ಮೇಲೆ ನಿಂತಿದ್ದ ದಿವ್ಯ ಸೌಂದರ್ಯದ ಅಧಿದೇವತೆಯಾದ ಅಕ್ಕನ ಮೇಲೆ ಬೀಳುತ್ತದೆ. ಆಕೆಯ ಸೌಂದರ್ಯಕ್ಕೆ ಮಾರುಹೋಗಿ ದಿಜ್ಞೂಡನಾಗಿ ಕಾಮಾಂಧನಾಗಿ ಲಗುಬಗೆಯಿಂದ ಮೆರವಣಿಗೆ ಮುಗಿಸಿ ಅರಮನೆಗೆ ಹೋಗಿ ಅಕ್ಕನನ್ನು ಮದುವೆಯಾಗಲು ಆತನ ಹೃದಯ ಹಾತೊರೆಯುತ್ತದೆ. ವಿದೂಷಕ ವಸಂತಕನನ್ನು ಕರೆಸಿ ಮಹಡಿಯಲ್ಲಿ ಮಿಂಚಿ ಮಾಯವಾದ ಸೌಂದರ್ಯ ತರುಣಿಯನ್ನು ಮದುವೆಯಾಗ ಬಯಸಿದ್ದೇನೆ. ಆಕೆಯ ತಂದೆ ತಾಯಿ ಒಪ್ಪಿಸಿ ಆಕೆಗೆ ವಸ್ತಾçಭರಣ ನೀಡಿ ಒಪ್ಪಿಸಿ ಕರೆದುಕೊಂಡು ಬಾ ಎನ್ನುತ್ತಾನೆ. ಹೆಗ್ಗಡತಿಯರು ಮಹಾದೇವಿ ಮನೆಗೆ ಬಂದು ಅರಸನ ಅಭಿಲಾಷೆ ತಿಳಿಸಿದಾಗ ಆಕೆಯ ತಂದೆ ತಾಯಿಗಳು ಕಕ್ಕಾಬಿಕ್ಕಿಯಾಗಿ ಮುಂದುಗಾಣದಾದರು. ಏಕೆಂದರೆ ಅಕ್ಕ ಶಿವಭಕ್ತೆ. ರಾಜ ಜೈನಮತಕ್ಕೆ ಸೇರಿದವ ಭವಿ. ರಾಜಾಜ್ಞೆ ಮೀರಿದರೆ ತಲೆದಂಡವಾಗುತ್ತದೆ ಎಂದು ತಿಳಿದು ಅಕ್ಕ ಹಾಗೂ ಅಕ್ಕನ ಗುರುಗಳು ಎಲ್ಲಾ ಸಮಾಲೋಚಿಸಿದ ನಂತರ ಅಕ್ಕ ತನ್ನ ನಿರ್ಧಾರವನ್ನು ಪ್ರಕಟಿಸುತ್ತಾಳೆ.
ತಾನು ಐದು ವಾರಗಳ ಕಾಲ ವ್ರತವನ್ನು ಆಚರಿಸುತ್ತಿದ್ದೇನೆ. ನಾನು ವಿಧಿಸುವ ಮೂರು ಷರತ್ತುಗಳಿಗೆ ರಾಜ ಬದ್ಧನಾಗಿದ್ದರೆ ಮಾತ್ರ ಅರಮನೆಗೆ ಬರುವುದಾಗಿ ತಿಳಿಸುತ್ತಾಳೆ. ಆ ಷರತ್ತುಗಳೆಂದರೆ
೧. ನಿತ್ಯ ಪೂಜಾದಿ ಆಚರಣೆಗಳಿಗೆ ಅಡ್ಡಿಯಾಗಬಾರದು.
೨. ಗುರು, ಲಿಂಗ ಮತ್ತು ಜಂಗಮ ಸೇವೆಗೆ ಅವಕಾಶ ಇರಬೇಕು.
೩. ಭವಿಯಾದ ರಾಜನು ಶಿವಭಕ್ತನಾಗಬೇಕು.
ರಾಜ ಈ ಷರತ್ತುಗಳಿಗೆ ಸಮ್ಮತಿಸಿ ಆಕೆಯನ್ನು ಅರಮನೆಗೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಾನೆ. ಆಗ ಅಕ್ಕ ಕೌಶಿಕನ ಅರಮನೆಯನ್ನು ಪ್ರವೇಶಿಸಿ ಆತನ ಖೆಡ್ಡಾದಲ್ಲಿ ಸಿಕ್ಕಿ ತನ್ನ ಆಧ್ಯಾತ್ಮ ಜೀವನ ನೆನೆದು ಅನೇಕ ವಚನಗಳನ್ನು ನುಡಿಯುತ್ತಾಳೆ. ಕೌಶಿಕ ಮಹಾರಾಜ ಅಕ್ಕನಲ್ಲಿರುವ ಆಧ್ಯಾತ್ಮ ಭಾವನೆ ಕಡಿಮೆ ಮಾಡಿ ರಸಿಕ ಭಾವನೆ ಹುಟ್ಟಿಸಲು ಮಾಡಿದ ಪ್ರಯತ್ನಗಳೆಲ್ಲವೂ ನಿಷ್ಫಲಗೊಂಡು ಅಕ್ಕನ ಷರತ್ತುಗಳನ್ನು ಮುರಿಯತೊಡಗುತ್ತಾನೆ.
೧. ಮೊದಲನೆಯದಾಗಿ ಅಕ್ಕ ಇಷ್ಟಲಿಂಗಪೂಜೆಯಲ್ಲಿ ನಿರತಳಾಗಿರಬೇಕಾದರೆ ಧ್ಯಾನಭಂಗ ಮಾಡುತ್ತಾನೆ.
೨. ಎರಡನೆಯದಾಗಿ ಅರಮನೆಗೆ ಬಂದ ಸದ್ಗುರುಗಳಿಗೆ ಅಪಮಾನ ಮಾಡುತ್ತಾನೆ
೩. ಮೂರನೆಯದಾಗಿ ಶಿವಭಕ್ತನಾಗಲು ನಿರಾಕರಿಸುತ್ತಾನೆ.
ರಾಜ ಷರತ್ತುಗಳನ್ನು ಉಲ್ಲಂಘಿಸಿದಾಗ ಅಕ್ಕ ಅರಮನೆಯಿಂದ ಹೊರಟು ನಿಂತಾಗ ಕೌಶಿಕ ಸೀರೆಯ ಸೆರಗು ಹಿಡಿಯುತ್ತಾನೆ. ಆಗ ಅಕ್ಕ
ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ
ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಮದ ಚಿಂತೆ
ಒಲ್ಲೆ ಹೋಗು, ಸೆರಗ ಬಿಡು ಮರುಳೆ
ಎನಗೆ ಎಮ್ಮ ಚೆನ್ನಮಲ್ಲಿಕಾರ್ಜುನದೇವರು
ಒಲಿವರೊ ಒಲಿಯರೊ ಎಂಬ ಚಿಂತೆ
ಅಕ್ಕ ಆತನ ಕಾಮ ಜ್ವರ ಇಳಿಸಿ ‘ಚೆನ್ನಮಲ್ಲಿಕಾರ್ಜುನನ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಗಳ ಹಂಗೇಕೋ ಮರುಳೇ’ ಎಂದು ವೈರಾಗ್ಯದ ಸಂಕೇತವಾಗಿ ಕಂಬಳಿ ಹೊದ್ದು ದಟ್ಟಾರಣ್ಯದ ಮಾರ್ಗವಾಗಿ ಕಲ್ಯಾಣದ ಕಡೆ ಪಯಣ ಬೆಳೆಸುತ್ತಾಳೆ.
ಬೀದರ್ ಜಿಲ್ಲೆಯ ಕಲ್ಯಾಣವನ್ನು ಪ್ರವೇಶಿಸಲು ಅಕ್ಕ ‘ಬಂದವರ ಓಣಿ’ ಗೆ ಬರುತ್ತಾಳೆ. ಅಲ್ಲಮಪ್ರಭು ಮತ್ತು ಬಸವಣ್ಣ ಆಪ್ತಾಲೋಚನೆ ಮಾಡಿ ಅಕ್ಕನನ್ನು ಪರೀಕ್ಷಿಸಲು ಕಿನ್ನರಿ ಬೊಮ್ಮಯ್ಯನನ್ನು ಕಳಿಸುತ್ತಾರೆ. ಕಿನ್ನರಿ ಬೊಮ್ಮಯ್ಯ ಕೇಳಿದ ಪ್ರಶ್ನೆಗೆ ಅಕ್ಕ ತಕ್ಕ ಉತ್ತರ ನೀಡಿದಾಗ ಅಕ್ಕ ತನು, ಮನ, ಪ್ರಾಣ ಗುಣಗಳನ್ನು ಗೆದ್ದು ಮುಂದೆ ಹೋಗಿರುವುದನ್ನು ಅರಿತು ಬೆರಗಾಗಿ ನಾನು ಹುಲಿ ನೆಕ್ಕಿ ಬದುಕಿದೆನು ಎಂದು ಹೇಳಿ ಆಕೆಯನ್ನು ಸ್ತುತಿಸಿ ಕ್ಷಮೆ ಕೋರಿ ಶರಣಾರ್ಥಿಗಳನ್ನು ಸಮರ್ಪಿಸುತ್ತಾನೆ. ಆಗ ಅಕ್ಕ
ಎನ್ನಂತೆ ಪುಣ್ಯಗೈದವರುಂಟೆ
ಎನ್ನಂತೆ ಭಾಗ್ಯಗೈದವರುಂಟೆ
ಕಿನ್ನರನಂತಪ್ಪ ಸೋದರನೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನೆಗೆ
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ
ಎಂದು ಉದ್ಘರಿಸಿ ತದನಂತರ ಅಕ್ಕ ಬಸವಣ್ಣನವರ ಮಹಾಮನೆ(ಅರಿವಿನ ಮನೆ)ಯನ್ನು ಪ್ರವೇಶಿಸಿ ವಿಶ್ವಗುರುವಿನ ಸ್ಥಾನದಲ್ಲಿ ಪ್ರಕಾಶಿಸುತ್ತಿದ್ದ ಬಸವಣ್ಣನವರನ್ನು ಕಂಡ ಕೂಡಲೇ
ದೇವಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯಾ ನಿಮಗೂ ಎನಗೂ
ನಿಮ್ಮ ಶರಣರಿಗೂ ಬಸವಣ್ಣನೇ ದೇವರು
ನಾನು ಸಂಗನ ಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು ಎಂದು ಹೇಳಿ ಬಸವಣ್ಣನವರಿಗೆ ಕೃತಜ್ಞತಾಪೂರಿತ ಭಕ್ತಿ ಭಾವನೆಯಿಂದ ನಮಸ್ಕರಿಸಿ ನಂತರ ಅನುಭವಮಂಟಪದ ಕಡೆಗೆ ಹೊರಡುತ್ತಾಳೆ.
ಅನುಭವಮಂಟಪ ಜ್ಞಾನ ಪಾಂಡಿತ್ಯಗಳಿಂದ ಕೂಡಿದ ಪಂಡಿತರ ವಾದದ ಸಂತೆಯಾಗಿರದೆ ಸಜೀವ ಸಾಧಕರ ಪ್ರಯೋಗ ಕ್ಷೇತ್ರವಾಗಿ, ಸದುವಿನಯದ ಸಾಧಕರ ಸೇವಾಮಂದಿರವಾಗಿ, ಕಾಯಕಜೀವಿಗಳ ಕರುಣದ ಕೂಟವಾಗಿ, ಮಹಾಜ್ಞಾನಿಗಳ ತತ್ವಸಮ್ಮೇಳನವಾಗಿತ್ತು. ಅದರ ಅಧ್ಯಕ್ಷರಾದ ಅಲ್ಲಮಪ್ರಭುಗಳು ಶೂನ್ಯಸಿಂಹಾಸನದಲ್ಲಿ ಆಸೀನರಾಗಿದ್ದಾರೆ. ಅಕ್ಕ ಪಕ್ಕ ಸಚೇತನಾ ಶಕ್ತಿ ಬಸವಣ್ಣ, ಚಿನ್ಮಯಜ್ಞಾನಿ ಚನ್ನಬಸವಣ್ಣ, ಶರಣ ಶರಣೆಯರು ವಿಶಾಲವಾದ ಭವ್ಯಮಂಟಪದಲ್ಲಿ ಭಕ್ತಿಭಾವದಿಂದ ಕುಳಿತಿದ್ದಾರೆ. ಅಕ್ಕ ಅನುಭವಮಂಟಪ ಪ್ರವೇಶಿಸಿ ಅಲ್ಲಮಪ್ರಭುಗಳಿಗೆ ಶರಣಾರ್ಥಿಗಳನ್ನು ಸಲ್ಲಿಸಿದಾಗ ಅಲ್ಲಮರು
ಉದಮದದ ಯೌವನವನೊಳಕೊಂಡ ಸತಿ ನೀನು ಇತ್ತಲೇಕೆ ಬಂದೆಯವ್ವ?
ಸತಿಯೆಂದರೆ ಮುನಿವರು ನಮ್ಮ ಶರಣರು
ನಿನ್ನ ಪತಿಯ ಕುರುಹ ಹೇಳಿದರೆ ಬಂದು ಕುಳ್ಳಿರು ಅಲ್ಲದಡೆ ತೊಲಗು ತಾಯೆ
ನಮ್ಮ ಗುಹೇಶ್ವರನ ಶರಣರಲ್ಲಿ ಸನ್ನಿಹಿತವ ಬಯಸುವರೆ
ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವ
ಹೀಗೆ ಪ್ರಶ್ನಿಸಿದಾಗ ಅಕ್ಕ ಅನುಭಾವದ ಉತ್ತುಂಗದ ವಚನಗಳಲ್ಲಿಯೇ ಉತ್ತರ ನೀಡುತ್ತಾಳೆ.
ಹರನೆ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ
ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದಡೆ
ಶಶಿಧರನ ಹತ್ತಿರಕೆ ಕಳುಹಿಸಿದರೆಮ್ಮವರು
ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು
ಎಂದಾಗ ಅಲ್ಲಮಪ್ರಭು ನಿನ್ನ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಖೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತಿಧರ್ಮವನ್ನು ನಮ್ಮ ಶರಣರು ಮೆಚ್ಚಲಾರರು ಎಂದಾಗ ಅಕ್ಕ
ಗುರುವೆ ತೆತ್ತಿಗನಾದ, ಲಿಂಗವೆ ಮದುವಣಿಗನಾದ ನಾನೆ ಮದುವಳಿಗೆಯಾದೆನು ಈ ಭುವನವೆಲ್ಲವರಿಯಲು ಅಸಂಖ್ಯಾತರೆನಗೆ ತಾಯಿತಂದೆಗಳು ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಮಿಕ್ಕಿನ ಲೋಕದವರೆನಗೆ ಸಂಬAಧವಿಲ್ಲಯ್ಯಾ ಪ್ರಭುವೆ.
ಎಂದು ಹೇಳಿ ಅಕ್ಕ ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವಕೃಪೆಯಂತೆ ಬಂದಿತು ಎಂದು ಹೇಳಿ ಅಲ್ಲಮಪ್ರಭು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಅನುಭಾವಿಕ ನಿಲುವಿನಲ್ಲಿ ವಚನಗಳ ಮುಖಾಂತರವೇ ಉತ್ತರ ಕೊಟ್ಟಳು. ಇದರಿಂದ ಅಕ್ಕನಿಗೆ ದಾರ್ಶನಿಕ ದಿಗ್ವಿಜಯ ಆಯಿತು. ಅನುಭವ ಮಂಟಪ ಉಸಿರು ಕಟ್ಟಿದ ಹಾಗೆ ಸ್ತಬ್ಧವಾಯಿತು. ನಿಶ್ಶಬ್ದವಾಯಿತು. ಎಲ್ಲಾ ಶರಣರು ಅಕ್ಕನ ದಿಟ್ಟ ನುಡಿಗಳಿಗೆ ತಲೆದೂಗಿದರು. ಎಲ್ಲರಿಂದ ಮೆಚ್ಚುಗೆಯ ಸಿರಿನುಡಿಗಳ ಸುರಿಮಳೆಯಾಯಿತು. ಆಗ ಅಲ್ಲಮರು ಮಹಾದೇವಿಯನ್ನು ಅಕ್ಕ ಎಂದು ಸಂಬೋಧಿಸಿ “ನೀನು ವಿಶ್ವಕುಲದ ಸ್ತ್ರೀ ಜ್ಯೋತಿ, ದಿಟ್ಟ ಹೆಜ್ಜೆ ಧೀರ ನುಡಿಯ ತಾಯಿ, ವಿನಯ ವಿಶ್ವಾಸಗಳ ರತ್ನಗಣಿ” ಎಂದು ಕೊಂಡಾಡುವರು. ಅಕ್ಕನ ಪಾಂಡಿತ್ಯಕ್ಕೆ ಅನುಭವಮಂಟಪದಲ್ಲಿ ಎಲ್ಲರೂ ತಲೆದೂಗಿದರು.
ಅಕ್ಕ ನಾಲ್ಕೈದು ವರ್ಷಗಳು ಮಾತ್ರ ಕಲ್ಯಾಣದಲ್ಲಿ ಇದ್ದರೂ ಅವ್ವ ನೀಲವ್ವನ ಮೋಹದ ಮಗಳಾಗಿ, ಅಪ್ಪ ಬಸವಣ್ಣರ ಸುಚಿತ್ತದ ಪುತ್ಥಳಿಯಾಗಿ, ನಿಷ್ಕಳಂಕ ಸದ್ಗುರು ಪ್ರಭುದೇವರ ಸತ್ಯದ ಸೊಸೆಯಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳಾಗಿ, ಚೆನ್ನಮಲ್ಲಿಕಾರ್ಜುನನ ಅರ್ಧಾಂಗಿಯಾಗಿ ಎಲ್ಲಾ ಶರಣ ಶರಣೆಯರ ಮೆಚ್ಚುಗೆಗೆ ಪಾತ್ರವಾದಳು. ನಂತರ ಅಕ್ಕ ಕಲ್ಯಾಣದಲ್ಲಿ ಕೆಲವು ದಿನ ಕಳೆದು ಅಲ್ಲಮಪ್ರಭುಗಳನ್ನು ಸಾಧನೆಯ ಸ್ಥಳದ ಬಗ್ಗೆ ಕೇಳಿದಾಗ ಅವರು
ನೀನು ನಾನು ಎಂಬ ಉಭಯಸಂಗವಳಿದು
ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ
ತುಟ್ಟತುದಿಯ ಮೆಟ್ಟಿ ನೋಡಲು
ಬಟ್ಟಬಯಲು ಕಾಣಬಹುದು ನೋಡಾ !
ಆ ಬಯಲ ಬೆರಸುವಡೆ ತ್ರಿಕೂಟ
ಗಿರಿಯೊಳಗೊಂದು ಕದಳಿಯುಂಟು ನೋಡಾ !
ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ!
ನಡೆ ಅಲ್ಲಿಗೆ ತಾಯೆ ಗುಹೇಶ್ವರ ಲಿಂಗದಲ್ಲಿ
ಪರಮಪದವಿ ನಿನಗೆ ಸಯವಪ್ಪುದು ನೋಡಾ
ಎಂದು ಹೇಳುವರು. ಅಕ್ಕನ ಕಿವಿಗೆ ಶ್ರೀಶೈಲ, ಕದಳಿ, ತ್ರಿಕೂಟ ಎಂಬ ಶಬ್ದಗಳು ತಾಕಿದಾಗ ರೋಮಾಂಚಿತಳಾದಳು. ಅಕ್ಕ ಚಿಕ್ಕಂದಿನಿAದ ಕಾಣುತ್ತಿದ್ದ ಕನಸೇ ಶ್ರೀಶೈಲ. ತ್ರಿಕೂಟ ಗಿರಿಯೊಳಗೊಂದು ಕಾಣಬಾರದ ಕದಳಿ. ಆಹಾ ಅಲ್ಲಿಗೆ ಹೋಗಲೇ ಬೇಕು. ತಡಮಾಡಕೂಡದು. ಕದಳಿಯ ಕರೆ ತ್ವರೆ ತ್ವರೆ. ಅನುಭವ ಮಂಟಪದಲ್ಲಿ ನಿರಾಶೆಯ ನೆರಳು. ಅಕ್ಕನನ್ನು ತಡೆದು ನಿಲ್ಲಿಸುರ್ಯಾರು? ಅಲ್ಲಮರೇ ಅನುಮತಿ ನೀಡಿದಾಗ. ಅದೊಂದು ಹೃದಯಸ್ಪರ್ಶಿಯಾದ ಸನ್ನಿವೇಶ. ಅಕ್ಕ ಶರಣೆಯರ ಸಂತೈಸಿ, ಶರಣರಿಗೆ ಶರಣು ಸಮರ್ಪಿಸಿ ಅನುಮತಿ ಪಡೆಯುತ್ತಾಳೆ. ಅಕ್ಕ ಕೆಲವೇ ವರ್ಷ ಕಲ್ಯಾಣದಲ್ಲಿದ್ದರೂ ಎಲ್ಲರಿಗೂ ತುಂಬಾ ಹತ್ತಿರದವಳಾಗಿಬಿಟ್ಟಿದ್ದರು. ಎಲ್ಲರ ಕಣ್ಣಲ್ಲೂ ನೀರು, ಕೆನ್ನೆ ತೊಯ್ದಿವೆ. ಅಗಲಿಕೆಯ ನೋವು, ಅನುಭಾವ ಜ್ಯೋತಿ ಅಗಲುವುದು ಹೇಗೆ? ಅನುಭವ ಮಂಟಪದ ಮಣಿದೀಪವಾಗಿ ಬೆಳಗಿದ ಅಕ್ಕನನ್ನು ಅಗಲುವುದು ಹೇಗೆ? ಮಹಾದೇವಿಯಕ್ಕನಿಗೂ ಕಲ್ಯಾಣದ ಶರಣರ ಬಿಟ್ಟು ಹೋಗುವಾಗ ವೇದನೆ ಉಂಟಾಯಿತು. ಆದರೂ ಹೊರಡಬೇಕು. ಕದಳಿಯ ಕರೆ ಎಳೆಯುತ್ತಲಿದೆ. ಸೆಳೆಯುತ್ತಲಿದೆ. ಅಕ್ಕ ಮೌನ ಮುರಿದು ವಾಣಿಯ ವೀಣೆಯಂತೆ ನುಡಿದಳು. ಹೊರಡುವಾಗ
ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ
ಬೆಳೆದೆನು ಅಸಂಖ್ಯಾತರ ಕರುಣದೊಳಗೆ
ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ
ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ
ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ
ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ
ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ಮಂಡೆಗೆ
ಹೂವ ತಹೆನಲ್ಲದೆ ಹುಲ್ಲ ತಾರೆನು
ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಜಯಂಗೈವುದು, ಶರಣಾರ್ಥಿ
ಎಂದು ಹೇಳಿ ಒಂದೊAದೇ ಭಾರವಾದ ಹೆಜ್ಜೆ ಇಡುತ್ತಿದ್ದಾಳೆ. ಅಲ್ಲಿರುವ ಶರಣರಿಗೆ ಮರಳಿ ಹೊರಡಲು ಯಾರಿಗೂ ಚೈತನ್ಯವಿಲ್ಲ. ಕಾಲು ಕೀಳುವ ಮನಸ್ಸಿಲ್ಲದೆ ನಿರ್ಜೀವ ವಸ್ತುಗಳಂತೆ ನಿಂತಲ್ಲಿಯೇ ನಿಂತುಬಿಟ್ಟಿದ್ದಾರೆ. ಅಕ್ಕ ಒಂದೊಂದೇ ಭಾರವಾದ ಹೆಜ್ಜೆ ಇಡುತ್ತಿದ್ದಾಳೆ. ನಿಂತವರೆಲ್ಲಾ ನಿಟ್ಟುಸಿರು ಬಿಟ್ಟು ಅಕ್ಕ ಕಾಣುವವರೆಗೂ ಹುಬ್ಬುಗೈ ಹಚ್ಚಿ ನೋಡುತ್ತಾ ನಿಂತಿದ್ದಾರೆ. ಅಕ್ಕ ಕಾಣದಾದ ಮೇಲೆ ನಿಂತಲ್ಲಿಯೇ ಕುಸಿದು ಕುಳಿತರು. ಕಲ್ಯಾಣದಲ್ಲಿ ನೀರವ ಮೌನ. ಅಕ್ಕ ಕಲ್ಯಾಣದಿಂದ ಕದಳಿಯೆಡೆಗೆ ಹೊರಡುವಾಗ ಹಸಿವು, ತೃಷೆ, ನಿದ್ರೆಗಳು ಕಾಣಿಸಿಕೊಂಡಾಗ
ಹಸಿವೇ ನೀನು ನಿಲ್ಲು ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು
ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ
ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.
ಎಂದು ಉದ್ಘಾರ ಮಾಡುತ್ತಾ ಕರ್ನಾಟಕದ ಕಲ್ಯಾಣ ಬಿಟ್ಟು ಆಂದ್ರದ ಶ್ರೀಶೈಲ ಶಿಖರದ ಹತ್ತಿರದ ಆತ್ಮಕೂರಿಗೆ ತಲುಪುತ್ತಾಳೆ. ಅಲ್ಲಿ ಸುತ್ತಮುತ್ತಲ ಬೆಟ್ಟಗಳ ಸಾಲಿನ ಹಚ್ಚ ಹಸಿರು, ಗಿಡ ಬಳ್ಳಿ ಕಂಡು ಅಕ್ಕನ ಆತ್ಮ ಆನಂದಭರಿತವಾಯಿತು.
ವನವೆಲ್ಲಾ ನೀನೆ ವನದೊಳಗಣ ದೇವತರುವೆಲ್ಲಾ ನೀನೆ
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ
ಚೆನ್ನಮಲ್ಲಿಕಾರ್ಜುನ ಸರ್ವಾಂಗಭರಿತನಾಗಿ
ಎನಗೇಕೆ ಮುಖತೋರೆ
ಎಂದು ಹೇಳುತ್ತಾ ಅಣುರೇಣು ತೃಣಕಾಷ್ಠಗಳಲ್ಲೂ ತುಂಬಿರುವ ಚೆನ್ನಮಲ್ಲಿಕಾರ್ಜುನನ ಚೈತನ್ಯಕ್ಕೆ ಅಕ್ಕ ಮಾರುಹೋದಳು. ಮುಂದೆ ಭವ್ಯವಾದ ಬೆಟ್ಟದ ಸಾಲುಗಳನ್ನು ಏರುತ್ತಾ ಭೀಕರ ಕೊಳ್ಳಗಳನ್ನಿಳಿಯುತ್ತಾ ಚೆನ್ನಮಲ್ಲಿಕಾರ್ಜುನನ ನಾಮಸ್ಮರಣೆ ಮಾಡುತ್ತಾ ಸಾಗಿದಳು.
ಮೂಲದ್ವಾರದ ಬೇರಮೆಟ್ಟಿ, ಭೂಮಂಡಲವನ್ನೇರಿದೆ
ಆಚಾರದ ಬೇರಹಿಡಿದು ಐಕ್ಯದ ತುದಿಯನೇರಿದೆ
ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ
ಎಂದು ಹೇಳುತ್ತಾ ಸಾಗುತ್ತಾಳೆ. ಬಿಸಿಲಿಗೆ ದೇಹ ಬಾಡಿದರೂ ಮುಖ ಮುದುಡಿದರೂ ಸ್ವಲ್ಪವೂ ಕದಲದೆ ನಿಸರ್ಗ ಪ್ರೇಮಿಯಾದ ಅಕ್ಕ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊAಡು ಪರಮಾತ್ಮನ ಸೃಷ್ಟಿಯನ್ನು ಹೊಗಳುತ್ತಾ ಸಾಗುತ್ತಿರುವಾಗ ಅಂತಿಮವಾಗಿ ಕದಳಿಯ ವನವನ್ನು ಕಂಡಳು.
ಕದಳಿ ಎಂಬುದು ತನು, ಕದಳಿ ಎಂಬುದು ಮನ
ಕದಳಿ ಎಂಬುದು ವಿಷಯಂಗಳು
ಕದಳಿ ಎಂಬುದು ಭವಘೋರಾರಣ್ಯ
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವ ಗೆದ್ದು ಬಂದ ಮಗಳೆಂದು
ಕರುಣದಿ ತೆಗೆದು ಬಿಗಿದಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು.
ಎಂದು ಉದ್ಘರಿಸುತ್ತಿದ್ದಂತೆ ಅಕ್ಕನಿಗೆ ಕರಣಂಗಳೆಲ್ಲವೂ ಕಳೆಯೇರಿದವು. ಅಂತಿಮವಾಗಿ ಅಕ್ಕ ಚೆನ್ನಮಲ್ಲಿಕಾರ್ಜುನನಲ್ಲಿ ಇಂಬುಗೊಳ್ಳಲು ಹಂಬಲಿಸಿ
ಲಿಂಗವೆನ್ನೆ ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ
ಆಯಿತೆನ್ನೆ ಆಗದೆನ್ನೆ, ನೀನೆನ್ನೆ ನಾನೆನ್ನೆ, ಚೆನ್ನಮಲ್ಲಿಕಾರ್ಜುನಯ್ಯಾ
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ
ಎಂದು ಉದ್ಘರಿಸುತ್ತಿರುವಾಗ ಅಕ್ಕ ಘನ ಲಿಂಗೈಕ್ಯವಾಗಿ ಮಾತು ಮೌನವಾಗಿ, ಶಬ್ದಮುಗ್ದಳಾಗುತ್ತಾಳೆ. ಅಕ್ಕಮಹಾದೇವಿಯ ಅಂಗ ಅಳಿದು ಲಿಂಗದೊಳಗೆ ಕೂಡಿಕೊಂಡಾಗ ಹಾಲಿನಲ್ಲಿ ಹಾಲು ಸೇರಿ ಒಂದಾದAತೆ, ಲಿಂಗದೊಳಗೆ ಸಮರಸವಾದಳು. ಕೊನೆಗೂ ತಾನೊಲಿದ ಸಾವಿಲ್ಲದ ಚೆಲುವನನ್ನೇ ಕೂಡಿ ಕೇಡಿಲ್ಲದ ಪದವಿಯನ್ನು ಪಡೆದು ಕದಳಿ ಜ್ಯೋತಿಯಲ್ಲಿ ಜ್ಯೋತಿಯಾಗಿ ಪರಂಜ್ಯೋತಿಯಾದಳು. ಚಿಜ್ಯೋತಿಯಾದಳು.
ಅಕ್ಕನ ೪೩೨ ವಚನಗಳು ದೊರೆತಿದ್ದು, ವಚನಗಳಲ್ಲದೇ ಯೋಗಾಂಗತ್ರಿವಿಧಿ, ಸ್ವರವಚನ, ಸೃಷ್ಟಿಯವಚನ, ಕಾಲಜ್ಞಾನ ವಚನಗಳೆಂಬ ಲಘು ಕೃತಿಗಳನ್ನು ಬರೆದಿದ್ದಾರೆ. ಅಕ್ಕನ ಅಂತರAಗದ ದರ್ಶನವನ್ನು ಅವರ ವಚನಗಳ ಮೂಲಕ ಮಾಡಬಹುದು.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆAತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಸಾಧನೆಗೆ ತೊಡಗಿದ ವ್ಯಕ್ತಿಗಳು ಲೋಕದ ಸ್ತುತಿ ನಿಂದೆಗಳಿಗೆ ಗುರಿಯಾಗಬೇಕಾಗುತ್ತದೆ. ಲೋಕದಲ್ಲಿ ಜನರ ಹೊಗಳಿಕೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಅದೊಂದು ಸಹಜ ಪ್ರಕ್ರಿಯೆ ಎಂದು ಭಾವಿಸಿ ಸಮಾಧಾನಚಿತ್ತದಿಂದ ಎದುರಿಸಲು ಈ ವಚನ ಪ್ರತಿಯೊಬ್ಬರಿಗೂ ಆತ್ಮಸ್ಥೆöÊರ್ಯ ತುಂಬುತ್ತದೆ. ನಾಮದಲ್ಲಿ ಹೆಂಗೂಸೆAಬ ಹೆಸರಾದಡೇನು ಭಾವಿಸಲು ಗಂಡುರೂಪ ಎಂಬAತೆ ವ್ಯಕ್ತಿತ್ವವನ್ನು ರೂಪಿಸಿಕೊಂಡ ಅಕ್ಕನ ಧೀಃಶಕ್ತಿ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರು ರಚಿಸಿದ ವಚನಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲದೇ ವಿಶ್ವ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಕಾರಣವಾಗಿವೆ.
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್
#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬
ಮೊ. ೯೯೦೧೧೩೭೯೪೮
vachanakumaraswamy@gmail.com