ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿಸಿದ ಶಿವಯೋಗಿ ಸಿದ್ಧರಾಮೇಶ್ವರ
ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ
ವಚಿಸಿ ಅನುಭವಿಯಾದವ ಪಂಡಿತನಯ್ಯಾ
ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ
ಅವಿದ್ಯೆಯೆಂಬುದು ಸರ್ವರಲ್ಲಿ ವಶ
ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ
ಮಹಾಪಂಡಿತ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.
ಪಾಂಡಿತ್ಯಕ್ಕಿಂತ ಅನುಭಾವಕ್ಕೆ ಮತ್ತು ಹೃದಯಶುದ್ಧಿಗೆ ಹೆಚ್ಚು ಮಹತ್ವ ನೀಡಿದ ಸಿದ್ಧರಾಮೇಶ್ವರರ ವಚನ ನಮ್ಮ ನಡಾವಳಿಗಳನ್ನು ತಿದ್ದಿಕೊಳ್ಳಲು ಒರೆಗಲ್ಲಾಗಿದೆ. ಒಂದು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿ ಪರಿವರ್ತಿಸುವುದರ ಮೂಲಕ ಕೇವಲ ಕನಸುಗಾರನಾಗಿರದೆ ಕರ್ತವ್ಯಶಾಲಿಯಾಗಿ ತನ್ನ ಆದರ್ಶಗಳನ್ನು ವಾಸ್ತವವಾಗಿಸಿದ ಸಿದ್ಧರಾಮೇಶ್ವರರು ಶರಣ ದಂಪತಿಗಳಾದ ಮೊರಡಿಯ ಮುದ್ದುಗೌಡ ಮತ್ತು ಸುಗ್ಗವ್ವೆ ಎಂಬ ದಂಪತಿಗಳ ಸುಪುತ್ರರಾಗಿ ಸೊನ್ನಲಿಗೆಯಲ್ಲಿ ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಜನಿಸಿದರು. ಬಾಲ್ಯದಲ್ಲಿ ತಂದೆ ತಾಯಿ ಇವರಿಗೆ ಧೂಳಿಮಾಕಾಳ ಎಂದು ಹೆಸರಿಟ್ಟರು. ದನ ಕಾಯುವ ಮುಗ್ಧ ಹುಡುಗ ಆದರ್ಶ ಶಿವಯೋಗಿಯಾದುದು ನಮಗೆ ಪವಾಡಸದೃಶದ ರೀತಿ ಗೋಚರವಾಗುತ್ತದೆ.
ಸಿದ್ಧರಾಮೇಶ್ವರರ ಜನ್ಮಸ್ಥಳದ ಬಗ್ಗೆ ಸ್ವಲ್ಪ ಗೊಂದಲವಿದೆ. ಮಹಾರಾಷ್ಟ್ರದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ಜಿಲ್ಲಾ ಕೇಂದ್ರವಾದ ಸೊಲ್ಲಾಪುರವೇ ಸಿದ್ಧರಾಮೇಶ್ವರರ ಜನ್ಮಸ್ಥಳ ಎಂದು ಕರೆಯಲಾಗುತ್ತಿದೆ. ಆದರೆ ಬೆಲ್ದಾಳ ಶರಣರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಸೊನ್ನಲಿಗೆ ಸಿದ್ಧರಾಮೇಶ್ವರರ ಜನ್ಮಸ್ಥಳ ಎಂದು ಅನೇಕ ಆಧಾರಗಳಿಂದ ವಾದಿಸುತ್ತಾರೆ. ಆದರೆ ಚಿದಾನಂದಮೂರ್ತಿರವರು ಇದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿರುತ್ತಾರೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿ ಕೂಡಾ ಸೊಲ್ಲಾಪುರ ಎಂಬ ಗ್ರಾಮವಿದೆ. ಮೂರು ಕಡೆ ಸಿದ್ಧರಾಮೇಶ್ವರರ ದೇವಾಲಯ ಮತ್ತು ಕೆರೆಗಳಿರುವುದನ್ನು ಕಾಣಬಹುದು.
ಸಿದ್ಧರಾಮೇಶ್ವರರ ಬದುಕು ಮತ್ತು ವ್ಯಕ್ತಿತ್ವವನ್ನು ತಿಳಿಯಲು ಅವರು ಬರೆದಿರುವ ವಚನಗಳೇ ಮೂಲ ಆಕರವಾದರೂ ಅವರ ಬದುಕಿನ ಎಲ್ಲಾ ಸಂಗತಿಗಳನ್ನು ವಚನಗಳಿಂದ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಶರಣರ ವಚನಗಳು ಅಂದಂದಿನ ಅನುಭವ ಮತ್ತು ಅನುಭಾವಗಳಿಗೆ ವಚನಕಾರರ ಮನಸ್ಸು ಹೇಗೆ ಸ್ಪಂದಿಸಿತು ಎಂಬುದಕ್ಕೆ ಅಕ್ಷರ ಮಾಧ್ಯಮದ ಮೂಲಕ ತಿಳಿಯಪಡಿಸುತ್ತದೆ. ಈ ಇತಿಮಿತಿಯಿಂದ ಯಾವುದೇ ಶರಣರ ಸಮಗ್ರ ಬದುಕಿನ ವಿವರಗಳನ್ನು ಅವರು ಬರೆದಿರುವ ವಚನಗಳಿಂದ ಗುರುತಿಸಲಾಗದು ಎಂದು ಡಾ. ಎಸ್. ವಿದ್ಯಾಶಂಕರರವರು ಹೇಳಿರುವುದು ಸರಿಯಾಗಿದೆ.
ಸಿದ್ಧರಾಮೇಶ್ವರರ ಜೀವನ ಚರಿತ್ರೆಯನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲ ಹಂತ ಸೊನ್ನಲಿಗೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದುದು. ಎರಡನೇ ಹಂತ ಕಲ್ಯಾಣಕ್ಕೆ ಬಂದು ಶರಣರ ಜೊತೆ ಸೇರಿಕೊಂಡು ತಾನು ಹಿಂದೆ ಮಾಡಿದ ಲೌಕಿಕ, ಸಾಮಾಜಿಕ ಕಾರ್ಯಗಳ ಬಗೆಗೆ ಪಶ್ಚತ್ತಾಪವನ್ನು ಹೊಂದಿದುದು. ಮೊದಲನೆಯ ಹಂತ ಲೋಕೋಪಕಾರಿಯಾಗಿ, ಸರ್ವಜೀವ ದಯಾಪಾರಿಯಾಗಿದ್ದರೆ, ಎರಡನೇ ಹಂತ ಲೋಕವನ್ನು ನಿರಾಕರಿಸಿ ಅನುಭಾವವನ್ನು ಸಂಪಾದಿಸುವ ಕಡೆ ಲಕ್ಷ್ಯವಿರಿಸುವಂತಹದ್ದು.
“ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು. ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು” ಎನ್ನುತ್ತಾ ಸಿದ್ಧರಾಮೇಶ್ವರರು ತಾವೇ ಸ್ವತಃ ದುಡಿಯುತ್ತಾ, ತಮ್ಮ ಶಿಷ್ಯರನ್ನು ದುಡಿಸುತ್ತಾ ಸೊಲ್ಲಾಪುರದಲ್ಲಿ ಕೆರೆ, ತೊರೆ ಮತ್ತು ದೇಗುಲಗಳನ್ನು ನಿರ್ಮಾಣ ಮಾಡತೊಡಗಿದರು. ಕೆರೆ, ತೊರೆ, ದೇಗುಲಂಗಳ ಕಡೆಯಿಂದ ನಿಮ್ಮ ಕಂಡೆ ಎಂಬ ಸಿದ್ಧರಾಮೇಶ್ವರರ ಮಾತಿನಲ್ಲಿ ಲೋಕಕಲ್ಯಾಣದ ಸಂಕಲ್ಪವನ್ನು ಕಾಣಬಹುದು. ತ್ರಿಪುರಾಂತಕ ಕೆರೆಯ ನಿರ್ಮಾಣದ ಮೂಲಕ ಸಕಲ ಜೀವಾವಳಿಯ ಬಾಯಾರಿಕೆಯನ್ನು, ತೊರೆಯ ನಿರ್ಮಾಣದ ಮೂಲಕ ಜನರ ಹಸಿವನ್ನು ಮತ್ತು ದೇವಾಲಯದ ನಿರ್ಮಾಣದ ಮೂಲಕ ಜನರ ಮನಸ್ಸಿನಲ್ಲಿ ಭಕ್ತಿಯ ಬೀಜ ಬಿತ್ತಬಹುದು ಎಂಬುದು ಅವರ ಅಭಿಲಾಷೆಯಾಗಿತ್ತು. ಲೋಕದ ಜನರ ಕಲ್ಯಾಣ ಕಾರ್ಯದಲ್ಲಿ ನಿರತರಾಗಿದ್ದ ಸಿದ್ಧರಾಮೇಶ್ವರರು ಜನರಿಗೆ ಯಾವ ರೀತಿ ಅನಿವಾರ್ಯವಾಗಿದ್ದರು ಎಂದರೆ ಯಾರಾದರೂ ಹಾವು ಕಡಿದು ಸತ್ತರೆ, ಬೆಂಕಿಯಲ್ಲಿ ಸಿಕ್ಕಿ ಪ್ರಾಣ ಬಿಟ್ಟರೆ, ಯಾವುದಾದರೂ ಕಾಯಿಲೆಯಿಂದ ಜೀವ ಹೋದರೆ ಅವರನ್ನು ಹೊತ್ತುಕೊಂಡು ಬಂದು ಸಿದ್ಧರಾಮೇಶ್ವರರ ಮನೆಯ ಬಾಗಿಲಲ್ಲಿ ಬಿಟ್ಟು ಹೋಗುತ್ತಿದ್ದರು. ಅವರಿಗೆಲ್ಲಾ ಸಿದ್ಧರಾಮೇಶ್ವರರೇ ಸದ್ಗತಿ ಕಾಣಿಸುತ್ತಿದ್ದರು ಎಂದು ಸಿದ್ಧರಾಮೇಶ್ವರ ಚಾರಿತ್ರದಲ್ಲಿ ಉಲ್ಲೇಖವಾಗಿದೆ. ಹೀಗೆ ಸಿದ್ಧರಾಮೇಶ್ವರರು ಜನಸಾಮಾನ್ಯರ ನಡುವೆ ಅಸಾಮಾನ್ಯರಾಗಿ ಬೆಳೆಯುತ್ತಾ ಕಾಯಕ ಮತ್ತು ಸ್ಥಾವರಲಿಂಗಪೂಜೆಯಲ್ಲಿ ನಿರತರಾಗಿದ್ದರು.
ಜ್ಞಾನ ಭಾಸ್ಕರರಾದ ಅಲ್ಲಮಪ್ರಭುಗಳು ಬಳ್ಳಿಗಾವೆಯಿಂದ ಹೊರಟು ಬನವಾಸಿಯನ್ನು ದಾಟಿ ಕಲ್ಯಾಣಕ್ಕೆ ಹೋಗುವ ಮಾರ್ಗದುದ್ದಕ್ಕೂ ಭೇಟಿಯಾದ ಶರಣರ ದಾರಿಯನ್ನು ನಿಚ್ಚಳಗೊಳಿಸಿ ಸೊನ್ನಲಿಗೆಗೆ ಬರುತ್ತಾರೆ. ಕೆರೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ, ಸಿದ್ಧರಾಮೇಶ್ವರರ ಶಿಷ್ಯರನ್ನು ಅಲ್ಲಮರು ಕೆಣಕಿ ‘ಒಡ್ಡರಾಮ’ ಎಂದು ಗೇಲಿ ಮಾಡುತ್ತಾರೆ. ಇದರಿಂದ ಸಿದ್ಧರಾಮೇಶ್ವರರಿಗೆ ಕ್ರೋಧಾಗ್ನಿ ಉಂಟಾದಾಗ ಅಲ್ಲಮಪ್ರಭುಗಳು ಶಾಂತಗೊಳಿಸಿ ಹೀಗೆ ಹೇಳುತ್ತಾರೆ.
ಅನ್ನವನಿಕ್ಕಿ ನನ್ನಿಯ ನುಡಿದು
ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಜವು ಸಾಧ್ಯವಾಗದು,
ಗುಹೇಶ್ವರನನರಿಯದ ಶರಣಂಗೆ ಆವ ಫಲವೂ ಇಲ್ಲ.
ಅಲ್ಲಮಪ್ರಭುಗಳ ಈ ವಚನದಿಂದ ಸಿದ್ಧರಾಮೇಶ್ವರರ ಮನ ತೊಯ್ದಾಡಲಾರಂಭಿಸುತ್ತದೆ. ಜನರ ಸಂತೆಯಲ್ಲಿಯೇ ಮುಳುಗಿ, ಲೌಕಿಕ ಬಂಧನಗಳಲ್ಲಿ ಸಿಲಿಕಿದ್ದ ಸಿದ್ಧರಾಮೇಶ್ವರರ ದೃಷ್ಟಿಯನ್ನು ಮತ್ತೊಂದು ಕಡೆ ಹೊರಳಿಸುತ್ತಾರೆ.
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ
ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ
ಪರಮಾನಂದವೆಂಬ ಜಲವ ತುಂಬಿ
ಕೆರೆಯ ಕಟ್ಟಬಲ್ಲವರನಾರನೂ ಕಾಣೆ
ನಾನು ಕಟ್ಟಿದ ಕೆರೆಯು ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ.
ಅಲ್ಲಮರ ಈ ವಚನ ಸಿದ್ಧರಾಮೇಶ್ವರರನ್ನು ಮತ್ತಷ್ಟು ಚಿಂತನೆಗೆ ಹಚ್ಚುತ್ತದೆ.
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು
ಬಿತ್ತಿದೆನಯ್ಯಾ ಬ್ರಹ್ಮಬೀಜವ. ಅಖಂಡಮಂಡಲವೆಂಬ ಬಾವಿ
ಪವನವೆ ರಾಟಾಳ ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
ಅಲ್ಲಮಪ್ರಭು ಈ ವಚನದ ಮೂಲಕ ತಾವು ನಿರ್ಮಿಸಿದ ಆಧ್ಯಾತ್ಮಿಕ ತೋಟದ ಪರಿಚಯ ಮಾಡಿಕೊಡುತ್ತಾರೆ. ಸಿದ್ಧರಾಮೇಶ್ವರರನ್ನು ತಮ್ಮ ಜೊತೆ ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಹೊಸ ಪ್ರಪಂಚವನ್ನು ಪರಿಚಯಿಸಿದರು. ಕಲ್ಯಾಣದ ಶರಣರ ಸಂಪರ್ಕದಿಂದ ಸ್ಥಾವರ ಪೂಜೆಗಳಲ್ಲಿ ಮುಳುಗಿದ್ದ ತಮ್ಮ ಬದುಕನ್ನು ಸಾಂಕೇತಿಕ ರೂಪಕ್ಕಿಳಿಸಿ ಜಂಗಮದ ಮಹತ್ವ ಅರಿಯುತ್ತಾರೆ. ಚೆನ್ನಬಸವಣ್ಣನವರ ಜ್ಞಾನಕ್ಕೆ ತಲೆದೂಗಿ ಅವರಿಂದ ಇಷ್ಟಲಿಂಗದೀಕ್ಷೆ ಪಡೆಯುತ್ತಾರೆ. ಬಸವಾದಿ ಪ್ರಮಥರ ಸಹವಾಸದಲ್ಲಿ ಅನುಭವಮಂಟಪದ ಚರ್ಚೆಗಳಲ್ಲಿ, ಮಹಾಮನೆಯ ಕಾಯಕದಲ್ಲಿ ನಿರತರಾಗುತ್ತಾರೆ. ಶರಣರ ಅನುಭವ ಮಂಟಪದ ಅನುಭಾವದ ಸತ್ಯದ ಸಂಬಂಧದಿಂದಾಗಿ ವಚನಗಳನ್ನು ರಚಿಸುತ್ತಾ ಹೋಗುತ್ತಾರೆ. ಸಿದ್ಧರಾಮೇಶ್ವರರ ೧೯೬೬ ವಚನಗಳು ದೊರೆತಿವೆ.
ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯಾ
ಹಾಡುವುದೊಂದೇ ವಚನ, ನೋಡುವುದೊಂದೇ ವಚನ
ವಿಷಯ ಬಿಟ್ಟು, ನಿರ್ವಿಷಯನಾಗುವುದೊಂದೆ
ವಚನ ಕಪಿಲಸಿದ್ಧಮಲ್ಲೇಶನಲ್ಲಿ.
ಈ ವಚನ ಇವರು ಅರವತ್ತೆಂಟು ಸಾವಿರ ವಚನಗಳನ್ನು ರಚಿಸಿರಬಹುದೇ ಎಂಬ ಸಂಶೋಧನೆಗೆ ಇಂಬು ನೀಡುತ್ತದೆ. ಇವರು ವಚನಗಳ ಜೊತೆಗೆ ನಾಲ್ಕು ತ್ರಿವಿಧಿಗಳನ್ನು ರಚಿಸಿರುವುದು ಕಂಡುಬರುತ್ತದೆ. ಅವುಗಳೆಂದರೆ ೧. ಬಸವಸ್ತೋತ್ರ ತ್ರಿವಿಧಿ ೨. ಮಿಶ್ರಸ್ತೋತ್ರ ತ್ರಿವಿಧಿ ೩. ಸಂಕೀರ್ಣ ತ್ರಿವಿಧಿ ೪. ಅಷ್ಟಾವರಣ ತ್ರಿವಿಧಿ. ಇವು ಬಸವಾದಿ ಶರಣರನ್ನು ಕುರಿತು ಭಾವ ತುಂಬಿ ಬರೆದ ರಚನೆಗಳಾಗಿವೆ.
ಸೊನ್ನಲಿಗೆಯಲ್ಲಿ ಧೂಳಿಮಾಕಾಳನಾಗಿ ಜನಿಸಿ, ಶ್ರೀಶೈಲದ ಮಲ್ಲಯ್ಯನ ಮಾರ್ಗದರ್ಶನದಲ್ಲಿ ಸಿದ್ಧರಾಮನಾಗಿ, ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿಸಿ, ಅಲ್ಲಮಪ್ರಭುಗಳಿಂದ ಅರಿವಿನ ಕಣ್ಣು ತೆರೆದು ಕಲ್ಯಾಣ ಪ್ರವೇಶಿಸಿ ಆಧ್ಯಾತ್ಮದ ಹಾದಿ ಹಿಡಿದು ಬದುಕಿನಲ್ಲಿ ಹೊಸ ತಿರುವನ್ನು ಪಡೆದು ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣ ಉಳವಿಗೆಯ ಕಡೆ ಪಯಣ ಬೆಳೆಸಿದಾಗ ಅನುಭವಮಂಟಪದಲ್ಲಿ ಕೆಲ ಕಾಲ ಅಧ್ಯಕ್ಷರಾಗಿ ಮತ್ತೆ ಸೊನ್ನಲಿಗೆಗೆ ಹಿಂದಿರುಗಿ ತಾವೇ ನಿರ್ಮಿಸಿದ ಗೋಡೆಯಲ್ಲಿ ಬಯಲಾಗುತ್ತಾರೆ. ಇವರನ್ನು ಕುರಿತು ಸೊಡ್ಡಳ ಬಾಚರಸರು “ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ” ಎಂದು ಹೊಗಳಿರುವುದು ಅರ್ಥಪೂರ್ಣವಾಗಿದೆ.
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್
#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬
ಮೊ. ೯೯೦೧೧೩೭೯೪೮
vachanakumaraswamy@gmail.com


No comments:
Post a Comment