*ಶರಣರ ಕ್ಷೇತ್ರಗಳ ದರ್ಶನದಿಂದ ಸಕಾರಾತ್ಮಕ ಆಲೋಚನೆಗಳು ವೃದ್ಧಿ*
ಕೊಳ್ಳೇಗಾಲ : ಶರಣರ ಕ್ಷೇತ್ರಗಳ ದರ್ಶನದಿಂದ ಸಕಾರಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಕೊಳ್ಳೇಗಾಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಕದಳಿ ವೇದಿಕೆ, ಅಕ್ಕನ ಬಳಗ ಮತ್ತು ಶರಣು ವಿಶ್ವವಚನ ಫೌಂಡೇಷನ್ ತಾಲ್ಲೂಕು ಘಟಕಗಳ ಸಹಯೋಗದೊಂದಿಗೆ ನಡೆದ ಅನುಭವ ಮಂಟಪ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಚನಗಳು ಕಲ್ಪನೆಯಿಂದ ರಚಿತವಾಗದೆ ಶರಣರ ಅನುಭಾವದ ನುಡಿಗಳಾಗಿರುವುದರಿಂದ ಅಂತಹ ದಿವ್ಯ ವ್ಯಕ್ತಿತ್ವ ಹೊಂದಿದ ಶರಣರು ತಿರುಗಾಡಿದ ಸ್ಥಳಗಳಾದ ಬಸವಕಲ್ಯಾಣ, ಕೂಡಲಸಂಗಮ, ಇಂಗಳೇಶ್ವರ,. ಉಳವಿ, ಉಡುತಡಿ, ಬಳ್ಳಿಗಾವೆ, ಕದಳಿ ಮುಂತಾದ ಸ್ಥಳಗಳನ್ನು ಕನ್ನಡಿಗರಾದವರು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕು ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ನಾಟಕ ಉದ್ಘಾಟಿಸಿ ಮಾತನಾಡಿ ಶರಣರ ನಾಟಕಗಳನ್ನು ಅಭಿನಯಿಸುವುದರಿಂದ ಅವರ ವ್ಯಕ್ತಿತ್ವ ನಮ್ಮಲ್ಲಿ ಅಳವಡಿಕೆಯಾಗಿ ಸಚ್ಛಾರಿತ್ರ್ಯ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ನಾಟಕಗಳು ದೃಶ್ಯ ಮತ್ತು ಶ್ರವ್ಯ ಮಾಧ್ಯಮವಾಗಿರುವುದರಿಂದ ಶರಣರ ಸಂದೇಶಗಳನ್ನು ಸುಲಭವಾಗಿ ಅರ್ಥೈಸಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲ್ಲೂಕು ಅಧ್ಯಕ್ಷ ಮಹಾದೇವಪ್ರಸಾದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ ಸದಾಶಿವಮೂರ್ತಿ, ಕಾರ್ಯದರ್ಶಿ ನಾಗವೇಣಿ ನಾಗಣ್ಣ ಉಪಸ್ಥಿತರಿದ್ದರು.

No comments:
Post a Comment