ಮೈಸೂರು: ವಚನಗಳು ಮಕ್ಕಳಲ್ಲಿ ಪ್ರಾಮಾಣಿಕತೆ ಮೈಗೂಡಿಸಲು ಸಹಾಯಕವಾಗುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಎನ್.ಗಂಗಾಧರಪ್ಪ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಬಸವರಾಜ್ ಅಡಿವೆಯ್ಯ ಹಿರೇಮಥ್ ದತ್ತಿಯ ಅಂಗವಾಗಿ ಮೈಸೂರು ಜಯನಗರ ಛಾಯಾದೇವಿ ಅನಾಥಾಶ್ರಮದಲ್ಲಿ ಆಯೋಜಿಸಿದ್ದ ಅನಾಥಾಶ್ರಮದೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂದಿನ ಶರಣರ ವಿಚಾರಧಾರೆ ಆಗಿನ ಸಮಾಜಕ್ಕೆ ಮಾತ್ರವಲ್ಲದೇ ಎಂದೆಂದಿಗೂ ಎಲ್ಲರಿಗೂ ಮಾರ್ಗದರ್ಶಕವಾಗುವಷ್ಟು ವ್ಯಾಪಕವಾದ ಶಕ್ತಿಯನ್ನು ಪಡೆದಿದೆ. ಏಕೆಂದರೆ ವಚನಗಳು ಅಂಧಶ್ರದ್ಧೆಯನ್ನು ಹೊಂದಿರದೆ ಜೀವನದ ಹೋರಾಟಕ್ಕೆ ಚಿರಂತನವಾದ ಉತ್ತರವನ್ನು ಕೊಟ್ಟಿವೆ. ತಮಗೆ ಸತ್ಯವೆನಿಸಿದ್ದನ್ನು ಯಾವ ದಾಕ್ಷಿಣ್ಯವೂ ಇಲ್ಲದೇ ಪ್ರತಿಪಾದಿಸಿದ ಶರಣರ ವಚನಗಳನ್ನು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ವಿವಿಧ ಚಟುವಟಿಕೆಗಳ ಮುಖಾಂತರ ಶರಣು ವಿಶ್ವವಚನ ಫೌಂಡೇಷನ್ ಬಿತ್ತುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ನಂತರ ಮಾತನಾಡಿದ ಅನಿಲ್‍ಕುಮಾರ್ ವಾಜಂತ್ರಿ ಮಾತನಾಡಿ ಶರಣರು ವ್ಯಕ್ತಿಯ ಅಂತರಂಗದ ಶುದ್ಧಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಆಡಂಬರದ ಭಕ್ತಿಯನ್ನು ಕಟುವಾಗಿ ಖಂಡಿಸಿದರು. ಆದುದರಿಂದ ನಾವು ಅಂತರಂಗದ ಸಾಧನೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ನಮ್ಮ ದೇಹದಲ್ಲಿರುವ ಅರಿಷಡ್ವರ್ಗಗಳನ್ನು ಕಿತ್ತು ಅಲ್ಲಿ ಶಿವನನ್ನು ಸ್ಥಾಪಿಸಿದರೆ ಅದೇ ಪವಿತ್ರ ಕ್ಷೇತ್ರವಾಗಿ ಪರಿಣಮಿಸುತ್ತದೆ. ನಾವು ದೇಹದ ಮೇಲಿನ ಮೋಹಕ್ಕೆ ಒಳಗಾಗದೆ ಅದನ್ನು ಸತ್ ಸಾಧನೆಯ ಮಾರ್ಗಕ್ಕೆ ತಿರುಗಿಸಿ, ತನು ಶುಚಿಯ ಜೊತೆಗೆ ಮನಶುಚಿಗೆ ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ವಚನ ಚೂಡಾಮಣಿ ಎಲ್ಲಾ ಮಕ್ಕಳಿಗೆ ವಚನ ಹೇಳಿಕೊಟ್ಟರು. ನಂತರ ಅವರಿಗೆ ವಚನಪುಸ್ತಕ ಮತ್ತು ವಸ್ತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಜಿಲ್ಲಾಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಸಾಹಿತಿ ನಗರ್ಲೆ ಶಿವಕುಮಾರ, ಅನಾಥಾಶ್ರಮದ ವ್ಯವಸ್ಥಾಪಕ ಶಿವರುದ್ರಪ್ಪ, ಬಿ.ಎಂ.ಟಿ.ಸಿ ನಿರ್ವಾಹಕ ಮಹದೇವಪ್ರಸಾದ್, ಡಾ.ಪ್ರಸನ್ನಕುಮಾರ್, ಬೆಮೆಲ್ ಕಂಪಲಪ್ಪ, ಶೋಭ, ವೀರಪ್ಪಾಜಿ, ಮುತ್ತಮ್ಮ, ವಚನ, ಗೋಮತಿ ಉಪಸ್ಥಿತರಿದ್ದರು.

No comments:
Post a Comment