ದಿನಕ್ಕೊಂದು ಕಥೆ
ಸಾಮಾನ್ಯರ ಗತಿ ಏನು ?
ಜಮದಗ್ನಿಯು ಒಬ್ಬ ದೊಡ್ಡ ಋಷಿ. ಆತನ ಸತಿಯು ರೇಣುಕಾದೇವಿ. ಪರಶುರಾಮ ಮೊದಲು ಮಾಡಿ ಆತನಿಗೆ ನಾಲ್ಕು ಮಕ್ಕಳು. ಆಶ್ರಮದಲ್ಲಿ ಋಷಿಯ ಜೀವನ ಸುಂದರವಾಗಿ ಸಾಗಿತ್ತು. ಒಂದು ದಿನ ಜಮದಗ್ನಿಯು ಆಶ್ರಮದಲ್ಲಿ ಇರಲಿಲ್ಲ. ಅದೇ ದಿನ ಕಾರ್ತ್ಯವೀರ್ಯಾರ್ಜುನ ಋಷಿ ಜಮದಗ್ನಿಯ ಆಶ್ರಮಕ್ಕೆ ಬಂದ. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದು, ಉಪಚರಿಸುವುದು ಆಶ್ರಮ ಧರ್ಮ. ಜಮದಗ್ನಿಯ ಸತಿ-ಸುತರು ಹಣ್ಣು ಹಂಪಲವನ್ನಿತ್ತು ಅತಿಥಿಯನ್ನು ಸತ್ಕರಿಸಿದರು. ಸಂತಸದಿಂದ ಅವರ ಆತಿಥ್ಯವನ್ನು ಸ್ವೀಕರಿಸಿದ ಕಾರ್ತ್ಯವೀರ್ಯಾರ್ಜುನನು ಹೊರಟು ನಿಂತ. ಹೋಗುವಾಗ ಆಶ್ರಮದ ಆವರಣದಲ್ಲಿ ಒಂದು ಸುಂದರ ಆಕಳಕರು ಎದುರಾಯಿತು. ಅದರಿಂದ ಆಕರ್ಷಿತನಾದ ಕಾರ್ತವೀರ್ಯಾರ್ಜುನ ಋಷಿಯು ಆ ಕರುವನ್ನು ತನ್ನ ಆಶ್ರಮಕ್ಕೆ ಕೊಂಡೊಯ್ದ . ಆದರೆ ಈ ವಿಷಯವನ್ನು ಪರಶುರಾಮನಿಗಾಗಲೀ ಅವರ ತಾಯಿಗಾಗಲೀ ತಿಳಿಸಲು ಕಾರ್ತವೀರ್ಯಾರ್ಜುನರಿಗೆ ಸಾಧ್ಯವಾಗಲಿಲ್ಲ.
ಸ್ವಲ್ಪ ಸಮಯದ ನಂತರ ಕರು ಇಲ್ಲದ್ದನ್ನು ಕಂಡು ಅದರ ತಾಯಿ ಒಂದೇ ಸವನೇ ಕೂಗಿ ಗೋಳಿಡಲು ತೊಡಗಿತು. ಅಷ್ಟರಲ್ಲಿ ಆಗಮಿಸಿದ ಜಮದಗ್ನಿ ಋಷಿಗೆ ವಿಷಯವೆಲ್ಲ ತಿಳಿಯಿತು. ತಕ್ಷಣ ಕೋಪಾವಿಷ್ಟನಾದ ಜಮದಗ್ನಿಯು ಕಾರ್ತವೀರ್ಯಾರ್ಜುನನ ಆಶ್ರಮಕ್ಕೆ ಹೋಗಿ ಅವನ ಕೈಗಳನ್ನು ಕತ್ತರಿಸಿ ಪ್ರಾಣ ತೆಗೆದ. ಇದರಿಂದ ಕಾರ್ತ್ಯವೀರ್ಯಾರ್ಜುನನ ಮಕ್ಕಳ ಹೃದಯದಲ್ಲಿ ದ್ವೇಷದ ಕಹಿ ಹೊಳೆ ಹರಿದಾಡಿತು. ಅವರು ಪರುಶುರಾಮನು ಇಲ್ಲದ ಸಮಯದಲ್ಲಿ ಹೋಗಿ ಜಮದಗ್ನಿಯನ್ನು ಕೊಂದು ಹಾಕಿದರು. ಇಷ್ಟಕ್ಕೆ ಈ ಕಹಿ ಹೊಳೆಯ ಕಥೆ ಮುಗಿಯಲಿಲ್ಲ. ಮುಂದೆ ಪರುಶುರಾಮನು ಕಹಿ ಕಾರಿಕೊಂಡರೆ ಅದು ವಿಷಸಾಗರವೇ ಆಯಿತು. ಪರಶುರಾಮನು 21 ಸಲ ಭೂಮಂಡಲವನ್ನು ಸುತ್ತಿ ಯಾರಲ್ಲಿ ಕ್ಷತ್ರಿಯ ರಕ್ತ ಹರಿಯುತ್ತಿತ್ತೋ ಅವರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ. ಕೊನೆಗೆ ಪರುಶುರಾಮನು ಶ್ರೀ ರಾಮಚಂದ್ರನಿಂದ ಸೋಲಿಸಲ್ಪಡುವವರೆಗೆ ವಿಷಸಾಗರ ಬತ್ತಲಿಲ್ಲ. ವಿಷ್ಣುವಿನ ಅಂಶವೇ ಆದ ಪರುಶರಾಮನ ಕಥೆಯೇ ಹೀಗಾದರೆ ಇನ್ನುಳಿದ ಸಾಮಾನ್ಯರ ಗತಿ ಏನು ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
ದಿನಕ್ಕೊಂದು ಕಥೆ
ಸಾಮಾನ್ಯರ ಗತಿ ಏನು ?
ಜಮದಗ್ನಿಯು ಒಬ್ಬ ದೊಡ್ಡ ಋಷಿ. ಆತನ ಸತಿಯು ರೇಣುಕಾದೇವಿ. ಪರಶುರಾಮ ಮೊದಲು ಮಾಡಿ ಆತನಿಗೆ ನಾಲ್ಕು ಮಕ್ಕಳು. ಆಶ್ರಮದಲ್ಲಿ ಋಷಿಯ ಜೀವನ ಸುಂದರವಾಗಿ ಸಾಗಿತ್ತು. ಒಂದು ದಿನ ಜಮದಗ್ನಿಯು ಆಶ್ರಮದಲ್ಲಿ ಇರಲಿಲ್ಲ. ಅದೇ ದಿನ ಕಾರ್ತ್ಯವೀರ್ಯಾರ್ಜುನ ಋಷಿ ಜಮದಗ್ನಿಯ ಆಶ್ರಮಕ್ಕೆ ಬಂದ. ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದು, ಉಪಚರಿಸುವುದು ಆಶ್ರಮ ಧರ್ಮ. ಜಮದಗ್ನಿಯ ಸತಿ-ಸುತರು ಹಣ್ಣು ಹಂಪಲವನ್ನಿತ್ತು ಅತಿಥಿಯನ್ನು ಸತ್ಕರಿಸಿದರು. ಸಂತಸದಿಂದ ಅವರ ಆತಿಥ್ಯವನ್ನು ಸ್ವೀಕರಿಸಿದ ಕಾರ್ತ್ಯವೀರ್ಯಾರ್ಜುನನು ಹೊರಟು ನಿಂತ. ಹೋಗುವಾಗ ಆಶ್ರಮದ ಆವರಣದಲ್ಲಿ ಒಂದು ಸುಂದರ ಆಕಳಕರು ಎದುರಾಯಿತು. ಅದರಿಂದ ಆಕರ್ಷಿತನಾದ ಕಾರ್ತವೀರ್ಯಾರ್ಜುನ ಋಷಿಯು ಆ ಕರುವನ್ನು ತನ್ನ ಆಶ್ರಮಕ್ಕೆ ಕೊಂಡೊಯ್ದ . ಆದರೆ ಈ ವಿಷಯವನ್ನು ಪರಶುರಾಮನಿಗಾಗಲೀ ಅವರ ತಾಯಿಗಾಗಲೀ ತಿಳಿಸಲು ಕಾರ್ತವೀರ್ಯಾರ್ಜುನರಿಗೆ ಸಾಧ್ಯವಾಗಲಿಲ್ಲ.
ಸ್ವಲ್ಪ ಸಮಯದ ನಂತರ ಕರು ಇಲ್ಲದ್ದನ್ನು ಕಂಡು ಅದರ ತಾಯಿ ಒಂದೇ ಸವನೇ ಕೂಗಿ ಗೋಳಿಡಲು ತೊಡಗಿತು. ಅಷ್ಟರಲ್ಲಿ ಆಗಮಿಸಿದ ಜಮದಗ್ನಿ ಋಷಿಗೆ ವಿಷಯವೆಲ್ಲ ತಿಳಿಯಿತು. ತಕ್ಷಣ ಕೋಪಾವಿಷ್ಟನಾದ ಜಮದಗ್ನಿಯು ಕಾರ್ತವೀರ್ಯಾರ್ಜುನನ ಆಶ್ರಮಕ್ಕೆ ಹೋಗಿ ಅವನ ಕೈಗಳನ್ನು ಕತ್ತರಿಸಿ ಪ್ರಾಣ ತೆಗೆದ. ಇದರಿಂದ ಕಾರ್ತ್ಯವೀರ್ಯಾರ್ಜುನನ ಮಕ್ಕಳ ಹೃದಯದಲ್ಲಿ ದ್ವೇಷದ ಕಹಿ ಹೊಳೆ ಹರಿದಾಡಿತು. ಅವರು ಪರುಶುರಾಮನು ಇಲ್ಲದ ಸಮಯದಲ್ಲಿ ಹೋಗಿ ಜಮದಗ್ನಿಯನ್ನು ಕೊಂದು ಹಾಕಿದರು. ಇಷ್ಟಕ್ಕೆ ಈ ಕಹಿ ಹೊಳೆಯ ಕಥೆ ಮುಗಿಯಲಿಲ್ಲ. ಮುಂದೆ ಪರುಶುರಾಮನು ಕಹಿ ಕಾರಿಕೊಂಡರೆ ಅದು ವಿಷಸಾಗರವೇ ಆಯಿತು. ಪರಶುರಾಮನು 21 ಸಲ ಭೂಮಂಡಲವನ್ನು ಸುತ್ತಿ ಯಾರಲ್ಲಿ ಕ್ಷತ್ರಿಯ ರಕ್ತ ಹರಿಯುತ್ತಿತ್ತೋ ಅವರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ. ಕೊನೆಗೆ ಪರುಶುರಾಮನು ಶ್ರೀ ರಾಮಚಂದ್ರನಿಂದ ಸೋಲಿಸಲ್ಪಡುವವರೆಗೆ ವಿಷಸಾಗರ ಬತ್ತಲಿಲ್ಲ. ವಿಷ್ಣುವಿನ ಅಂಶವೇ ಆದ ಪರುಶರಾಮನ ಕಥೆಯೇ ಹೀಗಾದರೆ ಇನ್ನುಳಿದ ಸಾಮಾನ್ಯರ ಗತಿ ಏನು ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಮಹಾತ್ಮರ ಲೋಕಕಾರುಣ್ಯ
ಸಂತ ನಾಮದೇವರು ಮಹಾರಾಷ್ಟ್ರದಲ್ಲಿ ಆಗಿ ಹೋದ ಒಬ್ಬ ಮಹಾಸಂತರು. ಅವರು ಪಾಂಡುರಂಗನ ಅನನ್ಯ ಭಕ್ತರಾಗಿದ್ದರು. ಪಂಡರಪುರದ ಪಾಂಡುರಂಗನಿಗೆ ಸ್ವತಃ ತಮ್ಮ ಕೈಯಿಂದ ಊಟ ಮಾಡಿಸುತ್ತಿದ್ದರೆಂಬ ಪ್ರತೀತಿ ಇದೆ. ಎಲ್ಲ ಜೀವರಾಶಿಗಳಲ್ಲೂ ಪಾಂಡುರಂಗನನ್ನೇ ಕಾಣುತ್ತಿದ್ದರು.
ಒಮ್ಮೆ ನಾಮದೇವರು ಕಾಲಡಿಗೆಯಲ್ಲಿ ಪಂಢರಾಪುರಕ್ಕೆ ಹೊರಟಿದ್ದರು. ದಾರಿಯಲ್ಲಿ ಉಣ್ಣುವುದಕ್ಕೆಂದು ಕೆಲವು ಚಪಾತಿಗಳನ್ನು ಹಾಗೂ ಸಲ್ಪ ತುಪ್ಪವನ್ನು ತೆಗೆದುಕೊಂಡರು. ಮಧ್ಯಾಹ್ನದ ವರೆಗೆ ನಡೆದು ನಡೆದು ಸುಸ್ತಾದ ನಾಮದೇವರು ವಿಶ್ರಾಂತಿಗಾಗಿ ಒಂದು ಮರದ ನೆರಳಿಗೆ ಹೋದರು. ಪಕ್ಕದಲ್ಲಿ ಬುತ್ತಿಯ ಗಂಟನಿಟ್ಟುಕೊಂಡು ಮರಕ್ಕೆ ಒರಗಿಕೊಂಡು ವಿಶ್ರಾಂತಿಯನ್ನು ಪಡೆಯುತ್ತಿದಾಗ ಒಂದು ನಾಯಿಯು ಬಂದು ಅವರ ಬುತ್ತಿಯ ಗಂಟನ್ನು ಎತ್ತಿಕೊಂಡು ಓಡತೊಡಗಿತು. ಆಗ ನಾಮದೇವರಿಗೆ ಎಚ್ಚರವಾಯಿತು. ನಾಯಿ ತಮ್ಮ ಬುತ್ತಿಯ ಗಂಟನು ಎತ್ತಿಕೊಂಡು ಹೋದುದಕ್ಕೆ ಹಸಿದಿದ್ದ ನಾಮದೇವರಿಗೆ ಸ್ವಲ್ಪವೂ ಕೋಪವುಂಟಾಗಲಿಲ್ಲ. ಬದಲಾಗಿ ಅದು ತುಪ್ಪವನ್ನು ಅಲ್ಲೇ ಬಿಟ್ಟು ಹೋದುದಕ್ಕೆ ಅವರಿಗೆ ಆತಂಕವುಂಟಾಯಿತು. ಆದ್ದರಿಂದ ಅವರು ತುಪ್ಪದ ಭರಣಿಯನ್ನು ತೆಗೆದುಕೊಂಡು ನಾಯಿಯನ್ನು ಬೆನ್ನಟ್ಟಿದರು. ಬುತ್ತಿಯ ಗಂಟನ್ನು ಕಸಿದು ಕೊಳ್ಳಲು ಅವರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿದ ನಾಯಿ ಇನ್ನಷ್ಟು ವೇಗವಾಗಿ ಓಡತೊಡಗಿತು. ಅದನ್ನು ಹಿಡಿಯಲೇಬೇಕೆಂಬ ಹಟದಿಂದ ನಾಮದೇವರು ಕೂಡ ವೇಗವಾಗಿ ಓಡತೊಡಗಿದರು. ಮುಂದೆ ನಾಯಿ ಹಿಂದೆ ನಾಮದೇವರು ನೋಡುವವರಿಗೆ ಅದೊಂದು ಮೋಜಿನ ದೃಶ್ಯವಾಗಿತ್ತು. ಕೊನೆಗೂ ನಾಮದೇವರು ನಾಯಿಯನ್ನು ಹಿಡಿದು ತುಪ್ಪದ ಜೊತೆಗೆ ಅದಕ್ಕೆ ಚಪಾತಿಯನ್ನು ತಿನ್ನಿಸಿದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಕೆಲಸ ಕಲಿಯಲು ಬದುಕಿನ ಕೊನೆಯವರೆಗೂ ಕಾಯಬೇಕೇ?
ಕೆಲಸಕ್ಕೂ ಬದುಕಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆಯಲ್ಲವೇ? ಇದಿಲ್ಲದೆ ಅದಿಲ್ಲ! ಅದಿಲ್ಲದೆ ಇದಿಲ್ಲ. ಹಾಗಾದರೆ ಕೆಲಸ ಕಲಿಯಬೇಕಾದದ್ದು ಯಾವಾಗ? ಅದನ್ನು ತೋರಿಸುವ ಚೀನಾದ ಜನಪದ ಕತೆಯೊಂದು ಇಲ್ಲಿದೆ. (ಭಾರತೀಯರಾದ ನಾವೂ ಓದಬಹುದಾದ ಕತೆ!) ಅಲ್ಲೊಬ್ಬ ಶ್ರೀಮಂತ ಜಮೀನುದಾರರಿದ್ದರು. ಸ್ವಶ್ರಮದಿಂದ ಸಿರಿವಂತರಾಗಿದ್ದವರು. ಐವತ್ತು ವರ್ಷ ವಯಸ್ಸಾಗಿದ್ದ ಅವರಿಗೆ ಮೂವತ್ತು ವರ್ಷ ವಯಸ್ಸಿನ ಮಗನಿದ್ದ. ಒಬ್ಬನೇ ಮಗ, ವಂಶೋದ್ಧಾರಕ ಎಂಬಿತ್ಯಾದಿ ಕಾರಣಗಳಿಂದ ಅವನನ್ನು ಬಹಳ ಮುದ್ದಿನಿಂದ ಬೆಳೆಸಿದ್ದರು. ಅವನು ತಿಂದುಂಡು, ಆಟವಾಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆಯುತ್ತಿದ್ದ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಏಕೆಂದರೆ ಅಪ್ಪ ಅವನಿಗೆ ಕೆಲಸ ಮಾಡುವುದನ್ನು ಕಲಿಸಿ ಕೊಟ್ಟಿರಲಿಲ್ಲ. ಇನ್ನೂ ಸಮಯವಿದೆ ಎಂದುಕೊಂಡು ಸುಮ್ಮನಿದ್ದರು. ಅವನೂ ಸುಮ್ಮನಿದ್ದ. ಏನೂ ಕಲಿಯಲಿಲ್ಲ.
ಒಮ್ಮೆ ಜ್ಯೋತಿಷಿಯೊಬ್ಬರು ಅವರ ಮನೆಗೆ ಬಂದರು. ತಂದೆ-ಮಕ್ಕಳ ಕೈಗಳನ್ನು ಕೂಲಂಕಷವಾಗಿ ನೋಡಿದರು. ನಂತರ ‘ಜಮೀನುದಾರರೇ, ನಿಮಗೀಗ ಐವತ್ತು ವರ್ಷ ವಯಸ್ಸು. ನೀವು ಇನ್ನೂ ಮೂವತ್ತು ವರ್ಷ ಬದುಕುತ್ತೀರಿ. ನಿಮ್ಮ ಮಗನು ಇನ್ನೂ ಮೂವತ್ತೆರಡು ವರ್ಷಗಳ ಕಾಲ ಬದುಕುತ್ತಾನೆ’ ಎಂದು ಭವಿಷ್ಯ ನುಡಿದರು. ಜಮೀನುದಾರರು ತಾವು ಇನ್ನೂ ಮೂವತ್ತು ವರ್ಷ ಬದುಕುವ ಭರವಸೆ ಸಿಕ್ಕಿದ್ದರಿಂದ ಸಂತಸಗೊಂಡರು. ಆದರೆ ಅವರ ಮಗ ಗಟ್ಟಿಯಾಗಿ ಅಳಲಾರಂಭಿಸಿದ. ಅಪ್ಪ ಗಾಬರಿಗೊಂಡು ಅವನ ಅಳುವಿಗೆ ಕಾರಣ ಕೇಳಿದಾಗ, ಆತ ‘ನೀವು ಇನ್ನು ಮೂವತ್ತು ವರ್ಷಕ್ಕೆ ಸತ್ತು ಹೋಗುತ್ತೀರಿ. ನಾನು ಮೂವತ್ತೆರಡು ವರ್ಷ ಬದುಕಿರುತ್ತೇನೆ. ಅಂದರೆ ನೀವು ಸತ್ತ ನಂತರದ ಎರಡು ವರ್ಷಗಳು ನನ್ನನ್ನು ನೋಡಿಕೊಳ್ಳುವವರು ಯಾರು?’ ಎಂದು ಬಿಕ್ಕಳಿಸಿ ಅಳತೊಡಗಿದ.
ಜ್ಯೋತಿಷಿಯು ‘ಇನ್ನೂ ಮೂವತ್ತು ವರ್ಷಗಳ ಕಾಲ ನಿಮ್ಮಪ್ಪ ಬದುಕಿರುತ್ತಾರೆ. ಅಲ್ಲಿಯವರೆಗೂ ನೀನು ನಿಶ್ಚಿಂತೆಯಾಗಿರಬಹುದು. ಆನಂತರ ನೋಡಿಕೊಳ್ಳೋಣ’ ಎಂದು ಹೇಳಿದರೂ ಆತ ಅಳು ನಿಲ್ಲಿಸಲಿಲ್ಲ. ಆಗ ಜಮೀನುದಾರರು ಮಗನ ತಲೆ ನೇವರಿಸುತ್ತಾ ‘ಮಗು, ನಿನಗೆ ಐವತ್ತೊಂಬತ್ತು ವರ್ಷ ವಯಸ್ಸಾದಾಗ ಅಂದರೆ ನಾನು ಸಾಯುವುದಕ್ಕೆ ಒಂದು ವರ್ಷ ಮುಂಚೆ ನಿನಗೆ ವ್ಯವಸಾಯ ಮಾಡುವುದನ್ನೂ, ಜಮೀನುದಾರಿಕೆಯ ಕೆಲಸವನ್ನೂ ಹೇಳಿಕೊಡುತ್ತೇನೆ. ನೀನು ಅದನ್ನು ಕಲಿತರೆ, ನಾನು ಸತ್ತ ಮೇಲೂ ಎರಡು ವರ್ಷಗಳ ಕಾಲ ನಿಶ್ಚಿಂತೆಯಾಗಿ ಬದುಕಬಹುದು. ಚಿಂತಿಸಬೇಡ’ ಎಂದು ಸಮಾಧಾನ ಹೇಳಿದರು. ಆತ ಅಳುವುದನ್ನು ನಿಲ್ಲಿಸಿ ನಿರುಮ್ಮಳನಾಗಿ ಕುಳಿತ.
ಆಗ ಜ್ಯೋತಿಷಿಯು ‘ಸ್ವಾಮಿ, ನೀವು ಅವನಿಗೆ ಕೆಲಸ ಕಲಿಸಲು ಬದುಕಿನ ಕೊನೆಯ ವರ್ಷದವರೆಗೂ ಕಾಯಬೇಕೆ? ಐವತ್ತೊಂಬತ್ತು ವರ್ಷ ವಯಸ್ಸಾದಾಗ ವ್ಯವಸಾಯವನ್ನೂ, ಜಮೀನುದಾರಿಕೆಯನ್ನೂ ಹೇಳಿಕೊಟ್ಟು ಆತನ ಕೊನೆಯ ಎರಡು ವರ್ಷಗಳು ನಿಶ್ಚಿಂತೆಯಿಂದ ಬದುಕುವಂತೆ ಮಾಡುವುದರ ಬದಲು ಅದನ್ನು ಅವನಿಗೆ ಇಂದೇ ಹೇಳಿಕೊಟ್ಟರೆ ಇನ್ನೂ ಮೂವತ್ತೆರಡು ವರ್ಷಗಳ ಕಾಲವೂ ಆತ ನಿಶ್ಚಿಂತೆಯಾಗಿ ಬದುಕುವಂತೆ ಮಾಡಬಹುದಲ್ಲವೇ?’ ಎಂದು ಹೇಳಿದಾಗ, ಅಪ್ಪ-ಮಗ ಇಬ್ಬರಿಗೂ ಮಿಂಚು ಹೊಳೆದಂತಾಯಿತು. ಅವರಿಬ್ಬರೂ ಒಮ್ಮೆಗೇ ‘ಅಯ್ಯೋ! ಇದರ ಬಗ್ಗೆ ನಾವು ಮೊದಲೇ ಏಕೆ ಚಿಂತಿಸಲಿಲ್ಲ?’ ಎಂದು ಉದ್ಘಾರ ತೆಗೆದರು. ಅಂದಿನಿಂದ ಅಪ್ಪ-ಮಕ್ಕಳ ದೃಷ್ಟಿಕೋನ ಬದಲಾಯಿತು. ಬದುಕೂ ಬದಲಾಯಿತು.
ಬಹುತೇಕ ಅಪ್ಪ-ಅಮ್ಮಂದಿರು ಮಾಡುವುದು ಇದನ್ನೇ ಅಲ್ಲವೇ? ಮಕ್ಕಳನ್ನು ಮುದ್ದು ಮಾಡುವುದೂ, ನಾವು ಬಾಲ್ಯದಲ್ಲಿ ಕಷ್ಟಪಟ್ಟೆವು, ಈಗ ಅವರೇಕೆ ಕಷ್ಟಪಡಬೇಕು, ಅವರು ಕಷ್ಟಪಟ್ಟರೆ ಎಲ್ಲಿ ಬಾಡಿಹೋಗುತ್ತಾರೋ ಎನ್ನುವ ಆಲೋಚನೆಗಳು ಚೀನಾದ ಅಪ್ಪಂದಿರಲ್ಲೇ ಅಲ್ಲ, ಎಲ್ಲಾ ದೇಶದ ಅಪ್ಪಂದಿರಲ್ಲೂ ಇರಬಹುದು. ವಿದ್ಯೆ ಕಲಿಯಲು, ಕೆಲಸ ಮಾಡುವುದನ್ನು ಕಲಿಯಲು ಅವಸರ ಏಕೆ? ಅಪ್ಪ ಮಾಡಿಟ್ಟದ್ದೇ ಬೇಕಾದಷ್ಟಿದೆಯಲ್ಲಾ ಎನ್ನುವ ಆಲೋಚನೆಯುಳ್ಳ ಮಕ್ಕಳು ಎಲ್ಲ ದೇಶದಲ್ಲೂ ಇರಬಹುದು. ಕೆಲಸ ಕಲಿಯದೇ, ಗಳಿಸುವುದನ್ನು ಕಲಿಯದೇ, ಕೂತು ಉಂಡರೆ ಕೊಪ್ಪರಿಗೆ ಹಣವೂ ಸಾಕಾಗುವುದಿಲ್ಲ ಎನ್ನುವುದನ್ನು ಮಕ್ಕಳೂ ಅರಿಯಬೇಕು. ಅವರ ಅಪ್ಪಂದಿರೂ ಅರಿಯಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಆತ್ಮವಿಶ್ವಾಸಕ್ಕೂ, ಅಹಂಕಾರಕ್ಕೂ ವ್ಯತ್ಯಾಸವೇನು?
ಎಂದಿನಂತೆ ಪ್ರಶ್ನೆಗಳ ಸರಮಾಲೆಯನ್ನು ತಲೆಯಲ್ಲಿರಿಸಿಕೊಂಡೇ ಶಿಷ್ಯ ಗುರುಗಳ ಮುಂದೆ ಹಾಜರಾದ. ‘ಗುರುಗಳೇ ಆತ್ಮವಿಶ್ವಾಸಕ್ಕೂ, ಅಹಂಕಾರಕ್ಕೂ ವ್ಯತ್ಯಾಸವಿದೆಯೇ?’ ಎಂದು ಕೇಳಿದ.
‘ಹೌದು, ಎರಡರ ಮಧ್ಯೆ ಕೂದಲೆಳೆಯಷ್ಟೇ ವ್ಯತ್ಯಾಸವಿದೆ’ ಎಂದರು ಗುರುಗಳು.
‘ಇನ್ನೂ ಸ್ವಲ್ಪ ಬಿಡಿಸಿ ಅರ್ಥವಾಗುವಂತೆ ಹೇಳುವಿರಾ?’ ಶಿಷ್ಯ ಕೇಳಿಕೊಂಡ.
‘ಆಯ್ತು ಹೇಳುತ್ತೇನೆ ಕೇಳು. ‘ಈ ಕೆಲಸವನ್ನು ನಾನು ಮಾಡಬಲ್ಲೆ’ ಎಂದುಕೊಳ್ಳುವುದು ಆತ್ಮವಿಶ್ವಾಸ. ‘ಈ ಕೆಲಸವನ್ನು ನಾನು ಮಾತ್ರ ಮಾಡಬಲ್ಲೆ’ ಎಂದು ಬೀಗುವುದು ಅಹಂಕಾರ’ ಎಂದರು ಗುರುಗಳು.
‘ಗುರುಗಳೇ ಮನುಷ್ಯನ ನಿಜ ಸಾಮರ್ಥ್ಯವನ್ನು, ಆಸೆ-ಆಕಾಂಕ್ಷೆಗಳನ್ನು ತಡೆದು ನಿಲ್ಲಿಸುತ್ತಿರುವುದು ಯಾವುದು?’ ಎರಡನೆ ಪ್ರಶ್ನೆಯನ್ನು ಗುರುಗಳ ಮುಂದೆ ಒಗೆದು ಸುಮ್ಮನೆ ನಿಂತ ಶಿಷ್ಯ.
‘ಈ ಪ್ರಶ್ನೆ ತುಂಬಾ ಚೆನ್ನಾಗಿದೆ. ‘ಅಯ್ಯೋ ನೋಡಿದವರು ಏನಂದುಕೊಳ್ತಾರೆ?’ ಎಂದು ಜನ ಭಾವಿಸುತ್ತಾರಲ್ಲ ಅದುವೇ ಮನುಷ್ಯನ ಸಾಮರ್ಥ್ಯವನ್ನು ಮಣ್ಣುಪಾಲು ಮಾಡುತ್ತಿರುವುದು’.
‘ಅರ್ಥವಾಗಲಿಲ್ಲ ಗುರುಗಳೇ!’ ‘ಒಂದು ಉದಾಹರಣೆ ಕೊಡುತ್ತೇನೆ ಕೇಳು. ನೀನು ಸಂಶೋಧನೆ ಮಾಡಬೇಕು ಎಂದುಕೊಂಡಿದ್ದೀಯ. ಆ ಸಾಮರ್ಥ್ಯವೂ ನಿನ್ನಲ್ಲಿದೆ. ಆದರೆ ನೀನು ‘ಅಯ್ಯೋ ನೋಡಿದವರು ಏನಂತಾರೆ? ಒಂದು ವೇಳೆ ನಾನು ಸೋತು ಬಿಟ್ಟರೆ ಜನ ನನ್ನನ್ನು ನೋಡಿ ನಗುತ್ತಾರೇನೋ’ ಎಂದೆಲ್ಲಾ ಯೋಚಿಸಲು ಶುರು ಮಾಡುತ್ತೀಯ. ಆಗ ನೀನು ಕೆಲಸ ಶುರು ಮಾಡುವ ಮೊದಲೇ ಅರ್ಧ ಸೋತಂತೆ.
ಪಕ್ಕದಮನೆಯವರು ಏನಂತಾರೆ, ನೆಂಟರಿಷ್ಟರು ಏನಂತಾರೆ, ಅವರು ಏನಂತಾರೆ, ಇವರು ಏನಂತಾರೆ… ಎಂದೆಲ್ಲಾ ಯೋಚಿಸುವ ಅಗತ್ಯವಿದೆಯೇ? ನಮಗೆ ಯಾರು ಅತ್ಯಂತ ಆಪ್ತರೋ, ನಮ್ಮ ನಿರ್ಧಾರದಿಂದ ಯಾರಿಗೆ ಪರಿಣಾಮವಾಗುತ್ತದೋ ಅವರ ಅಭಿಪ್ರಾಯ ಪಡೆದುಕೊಂಡರೆ ಸಾಕು ತಾನೇ? ಇಡೀ ಜಗತ್ತಿನ ಅಭಿಪ್ರಾಯ ನಮಗೇಕೆ ಬೇಕು, ನಾವು ಮಾಡುವುದನ್ನು ಜಗತ್ತೇಕೆ ಒಪ್ಪಿಕೊಳ್ಳಬೇಕು? ಇಡೀ ಜಗತ್ತನ್ನು ಮೆಚ್ಚಿಸಬೇಕು ಎಂದು ಹೊರಡುವ ನಮ್ಮ ಮಂಕುಬುದ್ಧಿಯೇ ನಮ್ಮ ಶಕ್ತಿಯನ್ನು ಕುಗ್ಗಿಸುತ್ತಿರುವುದು’ ಎಂದರು ಗುರುಗಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಭ್ರಷ್ಟಾಚಾರದಲ್ಲಿ ನಾವೇ ನಂಬರ್ ಒನ್
ಮಿಲ್ಕ್ ಬ್ರೆಡ್ಡಿನಲ್ಲಿ ಮಿಲ್ಕ್ ಅಂದರೆ ಹಾಲು ಇರಬೇಕಲ್ಲವೇ? ಅದರಲ್ಲಿ ಬ್ಲಡ್ ಏಕಿದೆ ಎಂಬ ಪ್ರಶ್ನೆಗೆ ಉತ್ತರ ಕೊಡುವ ಕುತೂಹಲಕಾರಿ ಕತೆಯೊಂದು ಇಲ್ಲಿದೆ. ಒಬ್ಬ ಸಂತರು ಪಾದಯಾತ್ರೆ ಮಾಡುತ್ತಾ ಇದ್ದರು. ಆ ಊರಿಗೆ ಬರುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗಿತ್ತು. ಒಂದು ಗುಡಿಸಿಲಿನ ಮುಂದೆ ನಿಂತು ಏನಾದರೂ ತಿನ್ನಲು ಕೊಡುತ್ತೀರಾ? ಎಂದು ಕೇಳಿಕೊಂಡರು. ಗುಡಿಸಿಲಿನಾತ ನಾವು ಬಡವರು. ನಮ್ಮ ಬಳಿ ಒಣಗಿದ ಬ್ರೆಡ್ಡು ಬಿಟ್ಟರೆ ಮತ್ತೇನೂ ಇಲ್ಲ. ಆದರೆ ಅದನ್ನೂ ನಾವು ನಿಮಗೆ ಕೊಡುವಂತಿಲ್ಲ ಎನ್ನುತ್ತಾ ಮುಜುಗರ ಪಟ್ಟುಕೊಂಡರು. ಸಂತರು ನಿಮ್ಮಲ್ಲಿ ಒಣಗಿದ ಬ್ರೆಡ್ಡಿನ ತುಂಡುಗಳಿದ್ದರೆ, ಅದನ್ನೇಕೆ ಕೊಡುವಂತಿಲ್ಲ? ಎಂದರು.
ಗುಡಿಸಿಲಿನಾತ ಸ್ವಾಮಿ, ನಮ್ಮೂರಿಗೆ ಬರುವ ಯಾತ್ರಿಗಳೆಲ್ಲ ನಮ್ಮೂರಿನ ಪಾಳ್ಳೇಗಾರರ ಧರ್ಮಶಾಲೆಗೇ ಊಟಕ್ಕೆ ಹೋಗಬೇಕೆಂಬ ನಿಯಮವಿದೆ. ಅವರು ಬೇರೆಲ್ಲಿಯೂ ಊಟ ಮಾಡುವಂತಿಲ್ಲ. ಅವರಿಗೆ ಊಟ ಕೊಟ್ಟರೆ ಊರಿನವರಿಗೆ ಶಿಕ್ಷೆ ಕಾದಿಟ್ಟ ಬುತ್ತಿ ಎಂದರು. ಸಂತರು ದೇಶದಲ್ಲೆಲ್ಲೂ ಇರದ ಇಂತಹ ನಿಯಮವನ್ನು ನಿಮ್ಮೂರಿನ ಪಾಳ್ಳೇಗಾರರು ಏಕೆ ಮಾಡಿದ್ದಾರೆ? ಎಂದು ಕೇಳಿದರು. ಗುಡಿಸಿಲಿನಾತ ಅತ್ತಿತ್ತ ನೋಡಿ ಪಿಸುಮಾತಿನಲ್ಲಿ ಸ್ವಾಮಿ ನಮ್ಮೂರಿನ ಪಾಳ್ಳೇಗಾರ ಬಹಳ ಕ್ರೂರಿ. ಜನರ ಮೇಲೆ ಇಲ್ಲಸಲ್ಲದ ಕರಗಳನ್ನೆಲ್ಲ ಹೇರಿದ್ದಾರೆ. ನಿಷ್ಕರುಣೆಯಿಂದ ವಸೂಲಿ ಮಾಡುತ್ತಾರೆ. ಬಡವರನ್ನಂತೂ ಬಹಳ ಪೀಡಿಸುತ್ತಾರೆ. ಅವರೆಲ್ಲರ ಶಾಪ ಆತನ ಮೇಲಿದೆ. ಆದರೆ ಆತನಿಗೆ ಯಾರೋ ಅತಿಥಿ ಸತ್ಕಾರದಿಂದ ಪಾಪಗಳು ಪರಿಹಾರವಾಗುತ್ತದೆಂದು ಹೇಳಿದ್ದಾರಂತೆ. ಆದ್ದರಿಂದ ಅತಿಥಿಗಳನ್ನು ಒತ್ತಾಯದಿಂದ ತನ್ನ ಧರ್ಮಶಾಲೆಗೆ ಆತಿಥ್ಯ ಸ್ವೀಕರಿಸಲು ಕರೆದೊಯ್ಯುತ್ತಾನೆ. ನೀವು ಅಲ್ಲಿಗೆ ಹೋಗುವುದೇ ಒಳ್ಳೆಯದು ಎಂದರು.
ಸಂತರು ಕೊಂಚ ಯೋಚಿಸಿದರು. ಧರ್ಮಶಾಲೆಯ ಕಡೆ ನಡೆದರು. ಪಾಳ್ಳೇಗಾರರು ಅಲ್ಲಿಯೇ ನಿಂತಿದ್ದರು. ಸಂತರನ್ನು ದರ್ಪದಿಂದ ಭಕ್ಷ್ಯ-ಭೋಜ್ಯಗಳು ಸಿದ್ಧವಾಗಿದೆ. ನಿಮಗೆಷ್ಟು ಬೇಕೋ ಅಷ್ಟು ತಿನ್ನಿ. ಹೋಗುವಾಗ ನನಗೆ ಆಶೀರ್ವಾದ ಮಾಡಲು ಮರೆಯಬೇಡಿ. ಮರೆತರೆ ಕಾಲು ಮುರಿಯುತ್ತೇನೆ ಎಂದರು. ಸಂತರು, ಭಕ್ಷ್ಯ-ಭೋಜ್ಯಗಳನ್ನೆಲ್ಲ ನೋಡಿದ ನಂತರ ಪಾಳ್ಳೇಗಾರರಿಗೆ ನನಗೆ ಭಕ್ಷ್ಯ-ಭೋಜ್ಯಗಳು ಬೇಡ. ಒಂದು ತುಂಡು ಬ್ರೆಡ್ಡು ಸಾಕು ಎಂದರು. ಪಾಳ್ಳೇಗಾರರು ಸಂತರನ್ನು ಉದಾಸೀನದಿಂದ ನೋಡಿ, ಒಂದು ತುಂಡು ಬ್ರೆಡ್ಡನ್ನು ಅವರತ್ತ ಎಸೆದರು. ಸಂತರು ಅದನ್ನು ಕೈಯ್ಯಲ್ಲಿ ಹಿಡಿದು ನನಗೇಕೋ ಇದನ್ನು ತಿನ್ನಲು ಮನಸ್ಸಾಗುತ್ತಿಲ್ಲ. ಇದರಲ್ಲಿ ತಿನ್ನಬಾರ ದಂತಹದ್ದೇನೋ ಇದೆ ಅನಿಸುತ್ತಿದೆ.
ನೀವು ನನಗೊಂದು ಉಪಕಾರ ಮಾಡಿ. ನಿಮ್ಮೂರಿನ ಹೊರಗಡೆ ಬಡವರ ಗುಡಿಸಲಿದೆ. ಅಲ್ಲಿಂದ ಒಂದು ತುಂಡು ಬ್ರೆಡ್ಡನ್ನು ತರಿಸಿ ಎಂದರು. ಪಾಳ್ಳೇಗಾರರು ಅಲ್ಲಿಂದ ಬ್ರೆಡ್ ತರಿಸಿ ಅದನ್ನು ಸಂತರಿಗೆ ಕೊಟ್ಟರು. ಸಂತರು ಪಾಳ್ಳೇಗಾರರ ಬ್ರೆಡ್ಡನ್ನು ಹಿಂಡಿದಾಗ ಅದರಿಂದ ರಕ್ತ ಹೊರಬಂತು. ಆದರೆ ಗುಡಿಸಲಿನವರ ಬ್ರೆಡ್ಡನ್ನು ಹಿಂಡಿದಾಗ ಅದರಿಂದ ಹಾಲು ಹೊರಬಂದಿತು. ಅದನ್ನು ಪಾಳ್ಳೇಗಾರರಿಗೆ ತೋರಿಸಿದ ಸಂತರು ನೀವು ನೀಡುವ ಭೋಜನ ಬಡವರನ್ನು ಕಾಡಿಸಿ ಪೀಡಿಸಿ ಸಂಪಾದಿಸಿದ ಹಣದ್ದು. ಅದರಲ್ಲಿ ಬಡವರ ಗೋಳು ತುಂಬಿದೆ. ಅದನ್ನು ಹಿಂಡಿದರೆ ರಕ್ತ ಬರುತ್ತದೆ. ಆದರೆ ದುಡಿದು ಗಳಿಸುವ ಗುಡಿಸಲಿನವರ ಬ್ರೆಡ್ಡನ್ನು ಹಿಂಡಿದರೆ ಹಾಲು ಬರುತ್ತದೆ ಎಂದರು. ಸಂತರ ಮಾತುಗಳಿಂದ ಪಾಳ್ಳೇಗಾರರು ಚಿಂತಾಕ್ರಾಂತರಾದರು. ಆನಂತರ ಸಂತರ ಕಾಲಿಗೆರಗಿ ತನ್ನ ಪದ್ಧತಿಗಳನ್ನು ಬದಲಾಯಿಸಿಕೊಳ್ಳುವುದಾಗಿ ಭರವಸೆಯಿತ್ತರು.
ಕತೆಯಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ, ಸರಳ ತತ್ತ್ವವೊಂದಿದೆ. ಪರರನ್ನು ಪೀಡಿಸಿ ಗಳಿಸಿದ ಹಣದಲ್ಲಿ ಅತಿಥಿ ಸತ್ಕಾರ ಮಾಡಿದರೆ, ನಮ್ಮ ಪಾಪ ಪರಿಹಾರವಾಗುವುದಿಲ್ಲ. ಒಳ್ಳೆಯ ಹೆಸರೂ ಬರುವುದಿಲ್ಲ, ಬಹುಶಃ ಪಾಪ ಇನ್ನೂ ಹೆಚ್ಚಾಗುತ್ತದೆಂಬ ತತ್ತ್ವವಿದೆಯಲ್ಲವೇ? ಈಗೊಂದು ಮಾತು! ನಾವೂ ಯಾರಿಗಾದರೂ ಮಿಲ್ಕ್ ಬ್ರೆಡ್ಡನ್ನು ದಾನವಾಗಿ ಕೊಟ್ಟರೆ, ನಾವು ದಾನ ಮಾಡುವ ಬ್ರೆಡ್ಡನ್ನು ಹಿಂಡಿದರೆ, ಅದರಿಂದ ಹೊರಹೊಮ್ಮುವುದು ಮಿಲ್ಕ್ ತಾನೇ? ಬ್ಲಡ್ ಅಲ್ಲ ತಾನೆ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಉದ್ಯೋಗಕ್ಕಿಂತ ಪ್ರೀತಿ, ಸಹನೆ ದೊಡ್ಡವು
ರಾತ್ರಿ ಒಬ್ಬ ಬಡಿಗನ ಅಂಗಡಿಯಲ್ಲಿ ಒಂದು ಹಾವು ಬಂತು. ಅದು ಕತ್ತಲೆಯಲ್ಲಿ ಹರಿದಾಡುತ್ತಿದಂತೆ ಗರಗಸದ ಹತ್ತಿರ ಸುಳಿಯಿತು, ಗರಗಸದ ಮೊನಚಾದ ಒಂದು ಹಲ್ಲಿಗೆ ಅದರ ಬಾಲ ತಗುಲಿ ಸ್ವಲ್ಪ ಗಾಯವಾಯಿತು. ತಕ್ಷಣವೇ ಅದು ತಿರುಗಿ ಗರಗಸವನ್ನು ಕಡಿಯಲು ಪ್ರಯತ್ನಿಸಿತ್ತು. ಅದರಿಂದ ಹಾವಿನ ಬಾಯಿಗೆ ಗಾಯವಾಯಿತು. ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೇ, ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು. ಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಅದು ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು. ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿ ಬಿಗಿಯಾಗಿಸಿತು. ಆದರೇ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು. ಗರಗಸಕ್ಕೇನೂ ಆಗಲಿಲ್ಲ, ಗಾಯದಿಂದ ಅತಿಯಾದ ರಕ್ತಸ್ರಾವವಾಗಿ ಹಾವು ಸತ್ತೇಹೋಯಿತು.
ನೀತಿ :-- ಹೀಗೆ ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಗೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿ ಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೇ ಶಿಕ್ಷಿಸಿಕೊಂಡಿರುತ್ತೇವೆ. ನಮಗೇನೆಹಾನಿಯಾಗಿರುತ್ತದೆ. ಕೆಲ ಅಹಿತಕರ ಘಟನೆಗಳನ್ನು, ಕೆಲವು ನಮಗಾಗದ ವ್ಯಕ್ತಿಗಳನ್ನು ಅವರ ಕಟು ಮಾತುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು. ನಮಗಾದ ಕ್ಷಣಿಕ ನೋವಿನಿಂದ ನಾವು ತಪ್ಪು ಹೆಜ್ಜೆ ಇಟ್ಟು ಪರಿತಪಿಸುವಂತೆ ಆಗಬಾರದು. ದ್ವೇಷ, ಉದ್ವೇಗಕ್ಕಿಂತ ಪ್ರೀತಿ ಸಹನೆ ದೊಡ್ಡವು..
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಅರಿವಿಲ್ಲದಂತೆಯೇ ಚರಿತ್ರಾರ್ಹರಾದವರು, ಅರಿವಾಗದಂತೆ ಮರೆಯಾದವರು
ಅತ್ಯದ್ಭುತವಾದ, ಜಗತ್ತಿನ ಚರಿತ್ರೆಯಲ್ಲಿ ಅಭೂತ ಪೂರ್ವವಾದ ಘಟನೆ! ಅಂಥ ಚರಿತ್ರಾರ್ಹ ಘಟನೆಯಲ್ಲಿ ಅರಿವಿಲ್ಲದಂತೆ ಭಾಗಿಯಾದ, ಆನಂತರ ಅರಿವಾಗದಂತೆ ಮರೆಯಾದ ಒಬ್ಬರ ನಿಜಜೀವನದ ಘಟನೆ!
ಆತ ಸೇನೆಯಲ್ಲಿ ಒಬ್ಬ ಯುದ್ಧವಿಮಾನ ಚಾಲಕ. ಸೇನೆಯ ನೂರಾರು ವಿಮಾನ ಚಾಲಕರಲ್ಲಿ ಆತನೂ ಒಬ್ಬ. ಎರಡನೆಯ ಮಹಾಯುದ್ಧದ ಸಮಯ. ಒಂದು ಮುಂಜಾನೆ ಆತ ಕೆಲಸಕ್ಕೆ ಹಾಜರಾದಾಗ, ಮೇಲಧಿಕಾರಿಗಳು ಆತನಿಗೆ ‘ಇಂದು ನಿನಗೆ ಜವಾಬ್ದಾರಿಯುತವಾದ ಕೆಲಸ ವಹಿಸಲಾಗುತ್ತಿದೆ. ಈ ಭೂಪಟದಲ್ಲಿ ಗುರುತು ಮಾಡಿರುವ ಹಾದಿಯಲ್ಲೇ ವಿಮಾನ ಚಲಾಯಿಸಿಕೊಂಡು ಹೋಗು. ನಿನ್ನ ಆಸನದ ಎಡಭಾಗದಲ್ಲಿ ಆರು ಬಟನ್ನುಗಳಿವೆ.
ಇಲ್ಲಿ ಗುರುತು ಮಾಡಿರುವ ಊರಿನ ಮೇಲೆ ಹೋಗುವಾಗ, ಎರಡೆರೆಡು ನಿಮಿಷಗಳ ಅಂತರದಲ್ಲಿ ಒಂದೊಂದಾಗಿ ಬಟನ್ನುಗಳನ್ನು ಒತ್ತಬೇಕು. ಹಾಗೆ ಒತ್ತಿಯಾದ ನಂತರ ಕೆಳಕ್ಕೆ ಬಗ್ಗಿ ನೋಡಬೇಡ. ಹಿಂತಿರುಗಿಯೂ ನೋಡಬೇಡ. ವಿಮಾನ ಚಲಾಯಿಸಿಕೊಂಡು ವೈಮಾನಿಕ ನೆಲೆಗೆ ಹಿಂತಿರುಗಿ ಬಾ’ಎಂದು ಹೇಳಿ ಕಳುಹಿಸಿದರು.
ಆತ ಅದರಂತೆಯೇ ಮಾಡಿದರು. ವೈಮಾನಿಕ ನೆಲೆಗೆ ಹಿಂತಿರುಗಿದಾಗ ಆತನಿಗೆ ‘ನಿನ್ನ ಇಂದಿನ ಕೆಲಸ ಮುಗಿಯಿತು. ನೀನು ಹೋಗಿ ವಿಶ್ರಾಂತಿ ಪಡೆಯಬಹುದು’ಎಂದು ಹೇಳಿ ಕಳುಹಿಸಲಾಯಿತು. ಆಗಿನ ಕಾಲದಲ್ಲಿ ಈಗಿನಂತೆ ದೂರದರ್ಶನಗಳು, ದೂರಸಂಪರ್ಕ ಸಲಕರಣೆಗಳು ಇರಲಿಲ್ಲ. ಆತ ಕ್ಯಾಂಪಿಗೆ ಹೋಗಿ ನಿರಾಳವಾಗಿ ನಿದ್ರಿಸಿದ. ಮರುದಿನ ಆತ ಕಚೇರಿಗೆ ಬಂದಾಗ, ಕಚೇರಿಯಲ್ಲಿ ಉದ್ರಿಕ್ತ ವಾತಾವರಣ. ಎಲ್ಲರೂ ಏನೋ ಮಹತ್ತರವಾದುದನ್ನು ಸಾಧಿಸಿರುವಂತೆ ಮಾತನಾಡಿಕೊಳ್ಳುತ್ತಿದ್ದರು.
ಆತನನ್ನು ಸೇನೆಯ ಮುಖ್ಯಸ್ಥರು ಕರೆದು ಅಭಿನಂದಿಸಿದರು. ಆತನಿಗೆ ವೃತ್ತಿಯಲ್ಲಿ ಮುಂಬಡ್ತಿ ಹಾಗು ಸಂಬಳದಲ್ಲೂ ಹೆಚ್ಚಳವಾಗಿರುವ ಶುಭ ಸಮಾಚಾರ ತಿಳಿಸಿದರು. ಆಶ್ಚರ್ಯದಿಂದಲೇ ಅದನ್ನು ಸ್ವೀಕರಿಸಿದ ಆತ ಹೊರಕ್ಕೆ ಬಂದು ತನ್ನ ಸಹೋದ್ಯೋಗಿಗಳೊಡನೆ ವಿಷಯವೇನೆಂದು ವಿಚಾರಿಸಿದರು. ಆಗ ಆತನಿಗೆ ತಿಳಿದು ಬಂದ ವಿವರಗಳು ಹೀಗಿದ್ದವು.
ಹಿಂದಿನ ದಿನ ಆತನನ್ನು ಜಪಾನಿನ ಹಿರೋಶಿಮಾ ನಗರದ ಮೇಲೆ ಆಟಮ್ ಬಾಂಬ್ ಹಾಕಲು ನಿಯೋಜಿಸಲಾಗಿತ್ತು. ಆತ ಆರು ಬಟನುಗಳನ್ನು ಒತ್ತಿದಾಗ, ವಿಮಾನದಿಂದ ಹಿರೋಶಿಮಾ ನಗರದ ಮೇಲೆ ಆಟಮ್ ಬಾಂಬುಗಳು ಸಿಡಿದಿದ್ದವು. ಕಣ್ಮುಚ್ಚಿ ತೆಗೆಯುವುದರೊಳಗಾಗಿ ಸಾವಿರಾರು ಜನ ಸಾವಿಗೀಡಾಗಿದ್ದರು. ಅಂದರೆ ಸಾವಿರಾರು ಜನರ ಸಾವಿಗೆ ಆತನ ಕಾರ್ಯಾಚರಣೆ ಕಾರಣವಾಗಿತ್ತು.
ಇದನ್ನು ಕೇಳಿದ ತಕ್ಷಣ ಆತ ‘ಅಷ್ಟೊಂದು ಮುಗ್ಧರ ಸಾವಿಗೆ ನಾನು ಕಾರಣನಾದೆನೇ? ವೃತ್ತಿಯಲ್ಲಿ ಮುಂಬಡ್ತಿ ಮತ್ತು ಸಂಬಳದ ಹೆಚ್ಚಳ ಪಡೆದದ್ದು ಮುಗ್ಧರ ಮಾರಣಹೋಮದಿಂದಾಗಿಯೇ? ಯುದ್ಧದಲ್ಲಿ ಎಂದೂ
ನೇರವಾಗಿ ಭಾಗವಹಿಸದ, ತಮ್ಮ ಪಾಡಿಗೆ ತಾವು ತಂತಮ್ಮ ಗ್ರಾಮಗಳಲ್ಲಿ ವ್ಯವಸಾಯ ಮಾಡಿಕೊಂಡೋ, ಕೂಲಿ-ನಾಲಿ ಮಾಡಿಕೊಂಡೋ, ಬಾಳಿ ಬದುಕುತ್ತಿದ್ದ ಜನರನ್ನು ನಾನು ಕೊಂದುಹಾಕಿದ್ದೇನೆ’ಎಂಬೆಲ್ಲ ಯೋಚನೆಗಳು ಆತನ ಮನಸ್ಸಿನಲ್ಲಿ ಸುಳಿದುಹೋದವು. ಆತನ ಸಂಭ್ರಮ ಸಡಗರ ಜರ್ರೆಂದು ಇಳಿದುಹೋಯಿತು. ಆತ ತೀವ್ರವಾದ ಖಿನ್ನತೆಗೆ ಒಳಗಾದರು. ಅಸ್ವಸ್ಥರಾದರು. ಆಸ್ಪತ್ರೆಗೆ ಸೇರಿಸಲ್ಪಟ್ಟರು.
ಅಲ್ಲಿಯೂ ಮಾರಣಹೋಮದ ಬಗ್ಗೆಯೇ ಕನವರಿಸುತ್ತಿದ್ದರು. ವರ್ಷಗಟ್ಟಲೆ ಚಿಕಿತ್ಸೆ ಪಡೆದರು.
ಆತ ಮನಸ್ಸು ಮಾಡಿದ್ದರೆ ಸೇನೆಯಲ್ಲಿ ಇನ್ನೂ ಮೇಲಿನ ಹುದ್ದೆ ಅಲಂಕರಿಸಬಹುದಿತ್ತು. ಸವಲತ್ತುಗಳನ್ನೆಲ್ಲಾ ಪಡೆಯಬಹುದಿತ್ತು. ವಿಲಾಸಭರಿತ ಜೀವನ ನಡೆಸಬಹುದಾಗಿತ್ತು. ಆದರೆ ಸಾವಿರಾರು ಜನರ ಸಾವಿಗೆ ಕಾರಣನಾದೆನೆಂಬ ಪಾಪಪ್ರಜ್ಞೆ ಆತನನ್ನು ಕಾಡುತ್ತಿತ್ತು. ಆನಂತರ ಆತ ಯಾವುದೋ ಸಣ್ಣದೊಂದು ಆಸ್ಪತ್ರೆಯಲ್ಲಿ ಶುಶ್ರೂಷಕನಾಗಿ ಕೆಲಸ ಮಾಡುತ್ತಾ ಬದುಕನ್ನು ಸವೆಸಿದರಂತೆ. ಜಗತ್ತಿನ ಚರಿತ್ರೆಯ ಪುಟಗಳಲ್ಲಿ ತನ್ನ ಹೆಸರನ್ನು ಸೇರಿಸಿಕೊಳ್ಳಬಹುದಾದ ಕೆಲಸವನ್ನು ಮಾಡಿದ್ದ ಆತ ಅನಾಮಧೇಯನಾಗಿ ಬದುಕಿನ ಕೊನೆಯ ಉಸಿರೆಳೆದರಂತೆ! ಆತ ಸತ್ತ ಸುದ್ದಿ ಯಾವ ಪತ್ರಿಕೆಯಲ್ಲೂ ಪ್ರಕಟವಾಗಲಿಲ್ಲವಂತೆ!
ಅಸಾಮಾನ್ಯ ಕೆಲಸವನ್ನು ಮಾಡಿದ ಶ್ರೀಸಾಮಾನ್ಯನೊಬ್ಬನ ನಿಜಜೀವನದ ಈ ಘಟನೆಯನ್ನು ಓದಿದರೆ ನಮಗೂ ಕರಳು ಕಿವುಚಿದಂತೆ ಅನಿಸುತ್ತದಲ್ಲವೇ? ವೃತ್ತಿಯಲ್ಲಿ ಮುಂಬಡ್ತಿ, ಸಂಬಳದಲ್ಲಿ ಹೆಚ್ಚಳ ಸಿಗದಿದ್ದರೂ ಚಿಂತೆಯಿಲ್ಲ ಅನಿಸುತ್ತದಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ನಾನು ದಿವಾನನಲ್ಲ! ನೀನು ಗುಮಾಸ್ತನಲ್ಲ!
ಕುತೂಹಲಕಾರಿಯಾದ ನಿಜಜೀವನದ ಪ್ರಸಂಗವೊಂದು ಇಲ್ಲಿದೆ. ಮೈಸೂರು ದಿವಾನರಾಗಿದ್ದ, ಆಧುನಿಕ ಮೈಸೂರಿನ ನಿರ್ಮಾಪಕ (ಬಿಲ್ಡರ್ ಆಫ್ ಮಾಡರ್ನ್ ಮೈಸೂರು) ಎಂದೇ ಹೆಸರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಬದುಕಿನಲ್ಲಿ ನಡೆದ ಪ್ರಸಂಗ. ಅವರ ಬದುಕಿನ ಅನೇಕ ಪ್ರಸಂಗಗಳು ದಂತಕತೆಗಳಂತೆ ಹೇಳಲ್ಪಡುತ್ತವೆ. ಅವರು ವಿದ್ಯಾರ್ಥಿಯಾಗಿದ್ದಾಗ ಬೀದಿ ದೀಪದ ಬೆಳಕಿನಲ್ಲಿ ಓದುತ್ತಿದ್ದುದು, ದಿವಾನರಾಗಿದ್ದಾಗ ಸರಕಾರದ ಕೆಲಸ ಮಾಡುವಾಗ ಸರಕಾರದವರು ಕೊಡುತ್ತಿದ್ದ ಮೇಣದ ಬತ್ತಿ ಬೆಳಕಿನಲ್ಲಿ ಕೆಲಸ ಮಾಡಿ, ಸ್ವಂತ ಕೆಲಸ ಮಾಡಿಕೊಳ್ಳುವಾಗ ಸ್ವಂತ ಹಣದಲ್ಲಿ ಖರೀದಿಸಿದ ಮೇಣದ ಬತ್ತಿ ಉಪಯೋಗಿಸುತ್ತಿದ್ದುದ್ದು ಮುಂತಾದ ಪ್ರಸಂಗಗಳು ಎಲ್ಲರಿಗೂ ಗೊತ್ತಿವೆ. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದೆ ಇರಬಹುದಾದ ಹೃದಯಸ್ಪರ್ಶಿ ಪ್ರಸಂಗವೊಂದು ಇಲ್ಲಿದೆ.
ಸರ್.ಎಂ. ವಿಶ್ವೇಶ್ವರಯ್ಯನವರು ಆಗಿನ ಮೈಸೂರು ರಾಜ್ಯದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದ ಬಳಿಯ ಮುದ್ದೇನಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದವರು. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸಕ್ಕೆ ಚಿಕ್ಕಬಳ್ಳಾಪುರಕ್ಕೆ ಬಂದರು. ಅಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಓದಿದರು. ಆಗ ಅವರು ಆರ್ಥಿಕವಾಗಿ ಅನುಕೂಲಸ್ಥರೇನಲ್ಲ. ಆದರೆ ಓದಿನಲ್ಲಿ ಅವರು ಬಹಳ ಮುಂದುವರಿದವರಾಗಿದ್ದರು. ಮುಂದೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು, ನಂತರ ಪುಣೆಗೂ ಹೋಗಿ ಓದಿ ಎಂಜಿನಿಯರ್ ಆದರು. ಆಗಿನ ಮುಂಬೈ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ವೃತ್ತಿಯಲ್ಲಿ ಬಹಳ ಒಳ್ಳೆಯ ಹೆಸರು ಗಳಿಸಿದರು. ಹುದ್ದೆಗಳಲ್ಲಿ ಮೇಲಕ್ಕೇರುತ್ತಾ ಹೋದರು. ಹೈದರಾಬಾದನ್ನು ಕಾಡುತ್ತಿದ್ದ ಪ್ರವಾಹದ ಸಮಸ್ಯೆಯನ್ನು ತಮ್ಮ ತಾಂತ್ರಿಕ ಜ್ಞಾನದಿಂದ ನಿವಾರಣೆ ಮಾಡಿದರು. ಪುಣೆ, ವಿಶಾಖಪಟ್ಟಣ, ಬಿಹಾರ್ಗಳಲ್ಲೂ ಅಪ್ರತಿಮ ಸೇವೆ ಸಲ್ಲಿಸಿದರು. ಆನಂತರ ಮೈಸೂರು ಮಹಾರಾಜರಿಂದ ರಾಜ್ಯದ ದಿವಾನರಾಗಿ ನೇಮಿಸಲ್ಪಟ್ಟರು.
ಅವರು ತಮ್ಮ ತಾಂತ್ರಿಕ ಪ್ರತಿಭೆಯಿಂದಾಗಿ ಭಾರತೀಯರಿಂದಲೂ, ಬ್ರಿಟಿಷರಿಂದಲೂ ಗೌರವಿಸಲ್ಪಡುತ್ತಿದ್ದರು. ಮೈಸೂರು ದಿವಾನರಾಗಿದ್ದ ಅವರು ಒಮ್ಮೆ ಕಾರ್ಯನಿಮಿತ್ತ ಬ್ರಿಟಿಷ್ ಸರಕಾರದ ವೈಸ್ರಾಯರ ಭೇಟಿಗಾಗಿ ದಿಲ್ಲಿಗೆ ಹೋಗಿದ್ದರಂತೆ. ಅದೇ ಕಚೇರಿಯಲ್ಲಿ ಗುಮಾಸ್ತರಾಗಿದ್ದವರು ಒಬ್ಬರು ವಿಶ್ವೇಶ್ವರಯ್ಯನವರನ್ನು ಗುರುತಿಸಿ ಮಾತನಾಡಿಸಿದರು. ಅವರು ವಿಶ್ವೇಶ್ವರಯ್ಯನವರ ಶಾಲಾ ದಿನಗಳ ಸಹಪಾಠಿಯಂತೆ. ತಾವು ಒಬ್ಬ ಸಾಮಾನ್ಯ ಗುಮಾಸ್ತರಾಗಿದ್ದರೂ, ತಮ್ಮ ಸಹಪಾಠಿ ದಿವಾನರಂಥ ದೊಡ್ಡ ಹುದ್ದೆ ಅಲಂಕರಿಸಿರುವುದನ್ನು ಕಂಡು ಅವರಿಗೆ ಬಹಳ ಸಂತೋಷವಾಯಿತಂತೆ. ಇಬ್ಬರೂ ಕೊಂಚ ಹೊತ್ತು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದರು.
ಆಗ ಗುಮಾಸ್ತರು ತಮ್ಮ ಮನೆಗೆ ರಾತ್ರಿಯ ಊಟಕ್ಕೆ ಬರುವಂತೆ ದಿವಾನರನ್ನು ಆಹ್ವಾನಿಸಿದರು. ದಿವಾನರು ಬರಲು ಒಪ್ಪಿಕೊಂಡರು. ಆದರೆ ಗುಮಾಸ್ತರು ಇದ್ದದ್ದು ಸರಕಾರದ ಸಣ್ಣ ಕ್ವಾರ್ಟರ್ಸಿನಲ್ಲಿ. ಸಣ್ಣ ಮನೆಯಲ್ಲಿ ದಿವಾನರನ್ನು ಹೇಗೆ ಸತ್ಕರಿಸುವುದೆಂಬ ಹೆದರಿಕೆ ಶುರುವಾಯಿತು. ಅವರು ತಕ್ಷಣ ದಿವಾನರ ಕಾರ್ಯದರ್ಶಿಯನ್ನು ಭೇಟಿಯಾಗಿ ತಮ್ಮ ಆತಂಕ ಹೇಳಿಕೊಂಡರು. ಕಾರ್ಯದರ್ಶಿಗಳು ದಿವಾನರೊಂದಿಗೆ ಮಾತನಾಡಿಕೊಂಡು ಬಂದು ಗುಮಾಸ್ತರಿಗೆ ‘ನಿಮ್ಮ ಆತಂಕವನ್ನು ದಿವಾನರಿಗೆ ಹೇಳಿದೆ. ಅವರು ನನ್ನನ್ನು ದಿವಾನರಂತೆ ನೋಡದೆ ತಮ್ಮ ಹಳೆಯ ಶಾಲೆಯ ಸಹಪಾಠಿಯನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಹಾಗೆ ನೋಡಿಕೊಂಡರೆ ಸಾಕೆಂದರು’ ಎಂದಾಗ, ಗುಮಾಸ್ತರಿಗೆ ನಿರಾಳವಾಯಿತು.
ಅಂದು ಸಂಜೆ ದಿವಾನರು ಗುಮಾಸ್ತರ ಸಣ್ಣ ಮನೆಗೆ ಬಂದರು. ಮನೆಯೊಳಕ್ಕೆ ಬಂದ ತಕ್ಷಣ ಅವರು ನೋಡಿ, ‘ನಾನೀಗ ದಿವಾನನಲ್ಲ! ನೀವು ಗುಮಾಸ್ತರೂ ಅಲ್ಲ! ನಾವಿಬ್ಬರೂ ಶಾಲಾ ಸಹಪಾಠಿಗಳು ಅಷ್ಟೇ’ ಎಂದು ಹೇಳುತ್ತಾ ದಿವಾನಗಿರಿಯ ಯಾವ ಗತ್ತೂ ತೋರದೆ ಅವರೊಟ್ಟಿಗೆ ಸರಳವಾಗಿ ಕುಳಿತರು. ಅವರ ಆತಿಥ್ಯ ಸವಿದರು. ಹೊರಡುವಾಗ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿ ಹೊರಟರು. ಗುಮಾಸ್ತರಿಗೆ ಜನ್ಮ ಸಾರ್ಥಕವಾದಂಥ ಭಾವನೆ! ಅಧಿಕಾರ ಬಂದಾಗ ಒಂಟೆಯಂತೆ ತಲೆಯೆತ್ತಿ ತಿರುಗುವ ಜನರನ್ನೇ ಕಾಣುವ ನಮಗೆ, ಸರ್ ಎಂ.ವಿ.ಯವರ ಸರಳತೆ ಅನುಕರಣೀಯವಲ್ಲವೇ? ನಾವೇ ಅಲ್ಲಿ ಇದ್ದಿದ್ದರೆ, ನಾನು ದಿವಾನನಲ್ಲ! ನೀನು ಗುಮಾಸ್ತನಲ್ಲ! ಎಂದು ಖಂಡಿತವಾಗಿಯೂ ಹೇಳುತ್ತಿದ್ದೆವಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಹಂಚಿಕೊಂಡು ತಿನ್ನೋಣ.
ರೈತನೊಬ್ಬ ಪ್ರತಿವರ್ಷ ಮಾವಿನ ಫಸಲು ಬಂದಾಗ ಒಳ್ಳೊಳ್ಳೆಯ ಹಣ್ಣುಗಳನ್ನು ಆರಿಸಿ ಒಂದೆಡೆ ಇಟ್ಟು, ಸಂಬಂಧಿಕರು ಹಾಗೂ ಸುತ್ತಮುತ್ತಲ ಜನರಿಗೆ ಪುಕ್ಕಟೆಯಾಗಿ ತಿನ್ನಲು ಕೊಡುತ್ತಿದ್ದ. ಉಳಿದ ಹಣ್ಣುಗಳನ್ನು ಮಾರಾಟಕ್ಕೆಂದು ಪೇಟೆಗೆ ಕಳುಹಿಸುತ್ತಿದ್ದ. ಅವನ ಮಕ್ಕಳೂ ಈ ಪರಿಪಾಠ ಮುಂದುವರಿಸಿದರಾದರೂ, ಒಳ್ಳೆಯ ಹಣ್ಣುಗಳನ್ನೇನೂ ಬೇರ್ಪಡಿಸುತ್ತಿರಲಿಲ್ಲ; ಎಲ್ಲ ತರಹದ ಹಣ್ಣುಗಳೂ ಅದರಲ್ಲಿ ಇರುತ್ತಿದ್ದವು. ಕಾಲಾನಂತರದಲ್ಲಿ, ರೈತನ ಮೊಮ್ಮಕ್ಕಳಿಗೆ ಒಂದು ಆಲೋಚನೆ ಬಂತು. ‘ಒಳ್ಳೆಯ ಹಣ್ಣುಗಳನ್ನು ಇಲ್ಲಿಯ ಜನರಿಗೆ ತಿನ್ನಿಸಿದರೆ ಪ್ರಯೋಜನವಿಲ್ಲ, ಅವನ್ನು ಪೇಟೆಯಲ್ಲಿ ಮಾರಿದರೆ ಹೆಚ್ಚು ದುಡ್ಡು ಬರುತ್ತದೆ. ಆದರೂ ಅಜ್ಜನ ಪರಿಪಾಠವನ್ನು ಮುಂದುವರಿಸೋಣ’ ಎಂದು ಲೆಕ್ಕಿಸಿ ಕಳಪೆ ಹಣ್ಣುಗಳನ್ನು ಸುತ್ತಲಿನವರಿಗೆ ತಿನ್ನಲು ಕೊಟ್ಟು ಒಳ್ಳೆಯ ಹಣ್ಣುಗಳನ್ನು ಮಾರಾಟಕ್ಕೆ ಕಳುಹಿಸತೊಡಗಿದರು. ಕೆಲ ವರ್ಷಗಳಾದ ನಂತರ, ಬರುಬರುತ್ತ ಮಾವಿನಮರದಲ್ಲಿ ಒಳ್ಳೆಯ ಹಣ್ಣು ಬರುವುದೇ ನಿಂತುಹೋಗಿ, ಹುಳಿ ಅಥವಾ ಸಾಧಾರಣ ಹಣ್ಣುಗಳು ದಕ್ಕತೊಡಗಿ, ಇಂಥ ಹಣ್ಣುಗಳನ್ನು ಯಾರೂ ಕೊಳ್ಳದಾದರು. ಇದು ರೈತನ ಮೊಮ್ಮಕ್ಕಳನ್ನು ಚಿಂತೆಗಿಡುಮಾಡಿತು.
ಸಮಸ್ಯೆಗೆ ಪರಿಹಾರ ಸಿಗದೆ ಮೊಮ್ಮಕ್ಕಳು ಚಡಪಡಿಸುತ್ತಿರುವಾಗ ಸಂತರೊಬ್ಬರು ಎದುರಾದರು. ‘ನಮ್ಮ ಹಿರಿಯರ ಹಾಗೆ ನಾವೂ ಗಿಡಗಳಿಗೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿದ್ದೇವೆ. ಆದರೂ ಒಳ್ಳೆಯ ಹಣ್ಣುಗಳೇಕೆ ಸಿಗುತ್ತಿಲ್ಲ?’ ಎಂದು ಸಂತರನ್ನು ಅವರು ಕೇಳಿದರು. ವಿಷಯವನ್ನು ಕೂಲಂಕಷ ಅರಿತ ಸಂತರು, ‘ನೀವು ನಿಮ್ಮಜ್ಜನ ಹಾಗೆ ಉದಾರಿಗಳಾಗಿಲ್ಲ. ಆತ ಉದಾರಿಯಷ್ಟೇ ಅಲ್ಲದೆ ಚಾಣಾಕ್ಷನೂ ಆಗಿದ್ದ; ನೆಂಟರು, ಊರ ಜನರೆಲ್ಲ ತಿಂದ ಒಳ್ಳೆಯ ಹಣ್ಣುಗಳ ಗೊರಟೆ ಸಂಗ್ರಹಿಸಿ ಹೊಲದಲ್ಲಿ ನೆಟ್ಟು ಹೊಸಸಸಿ ತಯಾರಾಗಿಸುತ್ತಿದ್ದ. ಅವೇ ಬೆಳೆದು ಉತ್ತಮ ಫಲ ಕೊಡುತ್ತಿದ್ದವು. ಈಗ ಅಂಥ ಗೊರಟೆಗಳೇ ನಿಮ್ಮ ಹೊಲ ಬಿಟ್ಟು ಹೊರಗೆಹೋದ ಮೇಲೆ ಹೊಸದಾಗಿ ಬರುವ ಹಣ್ಣುಗಳು ಕಳಪೆಯಾಗಿರದೇ ಇನ್ನೇನಾದೀತು?’ ಎಂದರು. ಮೊಮ್ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಐಹಿಕ ಸಂಪತ್ತಿಗಾಗಿ ಆಂತರಿಕ ಸಮೃದ್ಧಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಹಣ ಗಳಿಸುವ ಯಂತ್ರಗಳಾಗಿ, ಇಷ್ಟಮಿತ್ರರು, ಪರಿವಾರದವರೊಡನೆ ಬೆರೆತು ತಿನ್ನುವದರಲ್ಲಿಯ ಸುಖವನ್ನು ಮರೆತಿದ್ದೇವೆ. ಸುತ್ತಲಿನವರನ್ನು ಆದರಿಸುವುದೇ ಸಿರಿವಂತಿಕೆಯ ಲಕ್ಷಣ. ಅದಕ್ಕೆ ಬೇಕಾದ ಔದಾರ್ಯ ನಮ್ಮಲ್ಲಿರಬೇಕು. ಅದೇ ನಮ್ಮ ಐಶ್ವರ್ಯವನ್ನು ಬೆಳೆಸಿ ಮುಂದುವರಿಸಿಕೊಂಡು ಹೋಗುವ ದಾರಿ ಎಂಬುದನ್ನು ಮರೆಯದಿರೋಣ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಶ್ರದ್ಧೆ
ಚಿಕ್ಕವರಾದರೇನು ದೊಡ್ಡವರಾದರೇನು ಶ್ರದ್ದೆ ಉಳ್ಳವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು, ಶ್ರದ್ಧೆಯಿಲ್ಲದವರು ಎಂಥವರಿದ್ದರೂ ಏನನ್ನೂ ಸಾಧಿಸಲಾರರು. ಸಿದ್ಧಿಯ ಶ್ರೀಗಿರಿಯತ್ತ ನಮ್ಮನ್ನು ಕೈಹಿಡಿದು ಮುನ್ನಡೆಸುವುದೇ
ಒಂದು ಭದ್ರವಾದ ಕೋಟೆಯ ಗೋಡೆ ಇತ್ತು. ಅದರಲ್ಲಿ ಆಲದ ಮರದ ಒಂದು ಚಿಕ್ಕ ಬೀಜ ಬಂದು ಬಿದ್ದಿತು. ಕೋಟೆ ಗೋಡೆಯು ದರ್ಪದಿಂದ ಕೇಳಿತು. ಇಲ್ಲಿ ಮಣ್ಣಿಲ್ಲ, ನೀರಿಲ್ಲ ನೀನು ಹೇಗೆ ಬೆಳೆಯುತ್ತಿ? “ನೋಡುತ್ತಿರು ನಾನು ಹೇಗೆ ಬೆಳೆಯುತ್ತೇನೆ” ಎಂದಿತು ಬೀಜ. ಅಷ್ಟರಲ್ಲಿ ಮಳೆ ಬಿದ್ದಿತು. ಅಷ್ಟು ಹಸಿ ಸಾಕಾಗಿತ್ತು. ಅದು ಬೇರು ಬಿಟ್ಟಿತು. ಬಿಗಿ ಹಿಡಿಯಿತು. ನಿಧಾನವಾಗಿ ಗಾಳಿ ಧೂಳ ಬಳಸಿಕೊಂಡು ಮೊಳಕೆಯೊಡೆಯಿತು. ದಿನಗಳು ಉರುಳಿದವು. ಋತುಗಳು ಸರಿದವು. ಬೇರು ಬಲಿಷ್ಠವಾಯಿತು. ಕೋಟೆಗೋಡೆ ಸಡಿಲಾಯಿತು. ಚಿಕ್ಕ ಬೀಜದ ಶ್ರದ್ಧೆಗೆ ಭದ್ರವಾದ ಕೋಟೆಗೋಡೆಯು ನಡುಗಿ ಹೋಯಿತ್ತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಅಹಂಕಾರ
ಒಂದು ಕಾಲದಲ್ಲಿ ಯುರೋಪಿನಲ್ಲಿ ಅರಿಸ್ಟಾಟಲ್ ಮೊದಲು ಮಾಡಿ ಎಲ್ಲ ಜನರು "ಸೂರ್ಯನೇ ಭೂಮಿಯ ಸುತ್ತ ತಿರುಗುತ್ತಾನೆ" ಎಂದು ನಂಬಿದ್ದರು. ಮಹಾವಿಜ್ಞಾನಿ ಗೆಲಿಲಿಯೋ ಬಂದು "ಸೂರ್ಯನು ಭೂಮಿಯ ಸುತ್ತ ತಿರುಗುವುದಿಲ್ಲ. ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದೆ" ..... ಎಂದು ಹೇಳಿದ. ಆದರೆ "ಸೂರ್ಯನೇ ಭೂಮಿಯ ಸುತ್ತ ತಿರುಗುತ್ತಾನೆ" ಎಂದು ಹೇಳಿಕೆ ಕೊಡಲು ಗೆಲಿಲಿಯೋನಿಗೆ ಜನರು ಒತ್ತಾಯಿಸಿದರು. ಇಲ್ಲದಿದ್ದರೆ ನಿನ್ನ ಪ್ರಾಣಕ್ಕೆ ಅಪಾಯ'' ಎಂದು ಬೆದರಿಕೆ ಹಾಕಿದರು. “ಅಜ್ಞಾನಿಗಳ ಕೂಡ ಹೋರಾಡುವುದೇಕೆ ?'' ಎಂದು ಗೆಲಿಲಿಯೋ ಅವರು ಹೇಳಿದಂತೆ “ಭೂಮಿಯು ಸೂರ್ಯನ ಸುತ್ತ ತಿರುಗುವುದಿಲ್ಲ.” ಎಂದು ಹೇಳಿಕೆ ಕೊಟ್ಟ. ಆದರೆ ನಾನೇನು ಮಾಡಲಿ ? ಭೂಮಿಯು ಇನ್ನೂ ತಿರುಗುತ್ತಲೇ ಇದೆ ಎಂದು ಗೆಲಿಲಿಯೋ ನಂತರ ಉದ್ಧರಿಸಿದ! ದುರಹಂಕಾರಿಗಳಿಗೆ ಅಜ್ಞಾನವೇ ಗತಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಜಿಹ್ವಾಚಾಪಲ್ಯ
ಒಮ್ಮೆ ದಕ್ಷಬ್ರಹ್ಮನು ಯಜ್ಞವನ್ನು ಏರ್ಪಡಿಸಿದ್ದ. ಹಿರಿಯ ಅಳಿಯನಾದ ಶಿವನನ್ನು ಹೊರತುಪಡಿಸಿ ಎಲ್ಲರಿಗೂ ಆಮಂತ್ರಣ ಕೊಟ್ಟಿದ್ದ. ಇದರಿಂದ ಕುಪಿತನಾದ ಶಿವನು ಮಾವನ ಯಜ್ಞವನ್ನು ನಾಶ ಮಾಡಲು ಸಿದ್ಧನಾದ. ಅದನ್ನು ಎದುರಿಸಲು ದಕ್ಷಬ್ರಹ್ಮನೂ ಕದನ ಹೂಡಲು ಯೋಜಿಸಿದ. ಈ ವಿರಸ ಮುಂದುವರೆಯಬಾರದೆಂದು ಪಾರ್ವತಿಯು ತನ್ನ ತಂದೆ ದಕ್ಷಬ್ರಹ್ಮನ ಮನವೊಲಿಸಿ ಶಿವನಿಗೆ ಆಮಂತ್ರಣ ಕೊಡಿಸುವಂತೆ ಮಾಡಲು ಮಗ ಗಣಪತಿಯನ್ನು ಕಳುಹಿಸಿದಳು. ತಾಯಿಯ ಆಜ್ಞೆಯಂತೆ ಗಣಪತಿಯು ಅಜ್ಜನಾದ ದಕ್ಷಬ್ರಹ್ಮನ ಬಳಿಗೆ ಹೋದ. ಯಜ್ಞಕ್ಕೆ ಬರುವ ಅತಿಥಿಗಳಿಗಾಗಿ ಅಲ್ಲಿ ಸಕಲ ಭಕ್ಷ್ಯ ಭೋಜ್ಯಗಳನ್ನು ಸಿದ್ಧಪಡಿಸಿಟ್ಟಿದ್ದರು. ಆ ಪಂಚಪಕ್ವಾನ್ನದ ಅಡಿಗೆಯನ್ನು ನೋಡುತ್ತಲೇ ಭೋಜನ (ಮೋದಕ) ಪ್ರಿಯನಾದ ಗಣಪತಿಯು ತಾನು ಬಂದ ಉದ್ದೇಶವನ್ನೇ ಮರೆತು ಬಿಟ್ಟಿದ್ದ. ದೇವತೆಗಳೇ ಹೀಗೆ ಜಿಹ್ವಾಚಾಪಲ್ಯಕ್ಕೆ ಒಳಗಾದರೆ ಮಾನವರ ಪಾಡೇನು ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಶ್ರೇಯಸ್ಸು ಯಾರಿಗೆ ?
ನಾವು ಜೀವನದಲ್ಲಿ ಗಳಿಸುವ ಸಿರಿ, ಸಂಪದ, ಸ್ಥಾನ-ಮಾನ, ಪದವಿ, ಪ್ರಶಸ್ತಿ ಮುಖ್ಯವಲ್ಲ. ಆದರೆ ಅವುಗಳನ್ನು ಗಳಿಸಲು ಅನುಸರಿಸಿದ ಮಾರ್ಗವು ಮುಖ್ಯವಾದುದು. ಆ ಮಾರ್ಗವು ಸತ್ಯ ಶುದ್ಧವಾಗಿದ್ದರೆ ನಮ್ಮ ಗಳಿಕೆಗೆ ಬೆಲೆ ಬರುತ್ತದೆ ಇಲ್ಲದಿದ್ದರೆ ಇಲ್ಲ.
ಒಬ್ಬ ಶಾಲಾ ಬಾಲಕ ಎಂದೂ ಪಾಠ ಪ್ರವಚನ ಸರಿಯಾಗಿ ಕೇಳಿದವನಲ್ಲ, ಓದಿದವನಲ್ಲ. ಪರೀಕ್ಷೆಯಲ್ಲಿ ಹಿಂದಿನವರು ಮುಂದಿನವರು ಬರೆದುದನ್ನು ನೋಡಿ ಬರೆದು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಊರೆಲ್ಲ ಸಿಹಿ ಹಂಚುತ್ತಿದ್ದ, ಹೆಮ್ಮೆ ಪಡುತ್ತಿದ್ದ. ನಂತರ ಶಾಲಾ ಗುರುಗಳಿಗೂ ಸಿಹಿ ಕೊಡಲು ಹೋದ. ಆತನ ಪ್ರಗತಿಯನ್ನೆಲ್ಲ ಚೆನ್ನಾಗಿ ಬಲ್ಲ ಗುರುಗಳು ಹೇಳಿದರು “ಈ ಶ್ರೇಯಸ್ಸು ನಿನಗಲ್ಲ, ಪರೀಕ್ಷೆಯಲ್ಲಿ ನಿನ್ನ ಹಿಂದೆ ಮುಂದೆ ಕುಳಿತ ಗೆಳೆಯರಿಗೆ" ಗುರುಗಳ ಮಾತನ್ನು ಕೇಳುತ್ತಲೇ ಬಾಲಕ ನಾಚಿ ನೀರಾದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಜಡಸಿರಿ
ಚೀನಾ ದೇಶದ ಸಂತ ಲಾವೋತ್ಸೆ ನಾವಿನಲ್ಲಿ ಕುಳಿತು ನದಿ ದಾಟುತ್ತಿದ್ದ. ಅದೇ ನಾವಿನಲ್ಲಿ ಒಬ್ಬ ಸಿರಿವಂತನಿದ್ದ. ಸಂತನನ್ನು ಕಂಡು ವಂದಿಸಿ ಚಿನ್ನದ ಸರವನ್ನು ಕಾಣಿಕೆಯಾಗಿ ಕೊಟ್ಟ. ತಕ್ಷಣ ಸಂತ ಆ ಸರವನ್ನು ನದಿಗೆ ಎಸೆದ. ಸಿರಿವಂತನು ನೀರಿಗಿಳಿದು ಅದನ್ನು ತಂದ. ಸಂತರೆ ಇದು ಚಿನ್ನದ ಸರ. ಇದರ ಬೆಲೆ ಎಷ್ಟು ನಿಮಗೆ ಗೊತ್ತೇ ? ಎಂದು ಕೇಳಿದ. ಸಂತ ಲಾವೋತ್ಸನಿಗೆ, ಅದರ ಬೆಲೆ ನಿನ್ನನ್ನು ನೀರಿಗೆ ಜಿಗಿಸುವಷ್ಟು. ಈ ನದಿಯು ಸಾವಿರಾರು ಬಣ್ಣ ಬಣ್ಣದ ಮೀನುಗಳಿಗೆ, ಮೊಸಳೆಗಳಿಗೆ, ಅಸಂಖ್ಯ ಜಲಚರ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದೆ. ಈ ಜೀವಂತ ಸಿರಿಯ ಎದುರು ನಿನ್ನ ಈ ನಿರ್ಜೀವ ಚಿನ್ನದ ಸರಕ್ಕೆ ಏನು ಬೆಲೆ ? ಸಂತರ ಈ ನುಡಿಗಳ ಕೇಳಿದಾಗ ಸಿರಿವಂತನ ಕಣ್ಣು ತೆರೆಯಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ವಿವೇಕ ಜ್ಯೋತಿ
ಓರ್ವ ವಿದ್ವಾಂಸನಿದ್ದ. ಆತನಿಗೆ ಎಂಭತ್ತರ ವಯಸ್ಸು. ಜೀವನದ ತುಂಬ ಶಾಸ್ತ್ರಗ್ರಂಥಗಳ ಅಧ್ಯಯನ, ಅಧ್ಯಾಪನ. ನೂರಾರು ಜನ ಶಿಷ್ಯರ ಬಳಗ, ಒಂದು ದಿನ ಆ ವಿದ್ವಾಂಸನು ಮರಣದ ಶಯ್ಕೆಯಲ್ಲಿ ಮಲಗಿದ್ದ. ಸುತ್ತೆಲ್ಲ ಶಿಷ್ಯರು ನೆರೆದಿದ್ದರು. ಎಲ್ಲರ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಗುರುಗಳ ಕಣ್ಣಿನಿಂದಲೂ ಒಂದು ಹನಿ ನೀರು ಉದುರಿತು. ಶಿಷ್ಯರು ಕೇಳಿದರು. ಗುರುಗಳೇ, ತಮ್ಮ ಕಣ್ಣಿನಿಂದೇಕೆ ನೀರು ?' ಗುರುಗಳು ಹೇಳಿದರು ಈ ಕೊನೆಯ ಕ್ಷಣದಲ್ಲಿ ನನ್ನ ಮಗ ಇರಬೇಕಾಗಿತ್ತು' ತಕ್ಷಣ ಶಿಷ್ಯರು ಹೇಳಿದರು ಗುರುಗಳೇ, ತಾವು ಸತ್ಯದರ್ಶಿಗಳು, ಬ್ರಹ್ಮಸತ್ಯ ಜಗನ್ಮಿಥ್ಯ ಎಂಬುದನ್ನು ಅರಿತು ಆಚರಿಸಿ ಅನುಭವಿಸಿದ ಶ್ರೇಷ್ಠ ಸಂತರು ತಾವು ದುಃಖಿಸುವುದು ಸರಿಯಲ್ಲ. ಶಿಷ್ಯರ ಈ ನುಡಿಗಳ ಕೇಳುತ್ತಲೇ ಗುರುಗಳು ಎಚ್ಚೆತ್ತರು. ಮೋಹದ ಮುಸುಕು ಕರಗಿತು. ಗುರುಗಳು ನಗುನಗುತ್ತಲೇ ಬ್ರಹ್ಮಲೀನರಾದರು. ಇದುವೆ ವಿವೇಕ ಜ್ಯೋತಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಅದಮ್ಯ ಉತ್ಸಾಹ
ತೇನಸಿಂಗನು ಉತ್ಸಾಹಿ ಬಾಲಕ, ದನಗಾಯಿ ಹಿಮದ-ಬೆಟ್ಟಗಳ ಮಧ್ಯದ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಿದ್ದನು. ದಿನ ಬೆಳಗಾದರೆ ಜಗತ್ತಿನ ಅತ್ಯುನ್ನತ ಪರ್ವತ ಎವರೆಸ್ಟ್ ಶಿಖರದ ದರ್ಶನ ಆಗುತ್ತಿತ್ತು. ಒಂದು ದಿನ ಅವನು ತಾಯಿಗೆ ಕೇಳಿದ ''ಈ ಶಿಖರವನ್ನು ಯಾರಾದರೂ ಹತ್ತಿರುವರೇನಮ್ಮ??” ತಾಯಿ ಹೇಳಿದಳು ಇಲ್ಲ ಮಗು, ಇದೂವರೆಗೆ ಜಗತ್ತಿನಲ್ಲಿ ಯಾರೂ ಅದನ್ನು ಹತ್ತಿಲ್ಲ. ಹತ್ತುವ ಪ್ರಯತ್ನವನ್ನೂ ಮಾಡಿಲ್ಲ. ಅದೇ ದಿನ ತೇನಸಿಂಗನು ಶಿಖರವನ್ನು ಹತ್ತುವ ನಿರ್ಣಯ ಮಾಡಿದ. ಅದೆಂಥ ನಿರ್ಣಯವದು! ಕುಳಿತರೆ ನಿಂತರೆ ಅದರದೆ ಕನಸು! ಅದೆಷ್ಟು ಬಾರಿ ಆತ ಕನಸಿನಲ್ಲಿ ಆ ಶಿಖರವನ್ನು ಏರಿ ಇಳಿದನೋ ಇಳಿದು ಏರಿದನೋ? ಸದಾ ಮನಸಿನಲ್ಲಿ ಅದರದೇ ಚಿಂತನೆ. ಅದೇನು ಸಾಮಾನ್ಯ ಶಿಖರವಲ್ಲ. ಆ ಶಿಖರವನ್ನು ಏರುವಾಗ ಯಾವುದೇ ಕ್ಷಣವೂ ಜೀವನದ ಕೊನೆಯ ಕ್ಷಣವಾಗಬಹುದು. ಆದರೆ ಆತ ಅಷ್ಟೇ ಛಲದಿಂದ, ಉತ್ಸಾಹದಿಂದ, ಪ್ರೇಮದಿಂದ ನಿರಂತರ ಪ್ರಯತ್ನಿಸಿದ. ಅದ್ಭುತ ಸಾಧನೆಯದು. ಶಿಖರವನ್ನೇರುವ ಕನಸು ಆತನ ಮೈಮನವನುಂಡು ಪ್ರಾಣಕ್ಕೆ ಪ್ರಾಣ ವಾಯಿತು. ಒಂದು ದಿನ ಆತನ ಕನಸು ನನಸಾಯಿತು. ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಪ್ರಥಮ ವ್ಯಕ್ತಿಯಾದ. ಆತನದು ಅದಮ್ಯ ಉತ್ಸಾಹ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಸಂಬಳ ಕಡಿಮೆ ಮಾಡಿ
ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಮಂತ್ರಿಯಾಗಿದ್ದ ಸಮಯ, ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು "ಅಪ್ಪ ನನಗೆ ಒಂದು ಬೈಕ್ ಕೊಡಿಸಿ" ಅಂತ ಕೇಳಿದನು. ಆಗ ಶಾಸ್ತ್ರಿಯವರು ಹೇಳಿದ್ದು ಏನು ಗೊತ್ತಾ? “ಮಗನೇ ಜನರು ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದೀವಿ. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಹತ್ತಿರ ಇಲ್ಲ" ಎಂದರು. ಆಗ ಬೇಜಾರು ಮಾಡಿಕೊಂಡ ಮಗ ತನ್ನ ತಾಯಿಗೆ ಆ ವಿಷಯವನ್ನು ತಿಳಿಸಿದನು. ಆಗ ತಾಯಿ ತನ್ನಲ್ಲಿರುವ ಹಣದಿಂದ ಒಂದು ಬೈಕ್ ಕೊಡಿಸಿದರು. ಈ ವಿಚಾರವನ್ನು ಕಂಡು ಶಾಸ್ತ್ರಿಯವರಿಗೆ ಅಚ್ಚರಿಯಾಗಿ ತಮ್ಮ ಪತ್ನಿಗೆ ಕೇಳಿದರು. "ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು?" ಎಂದು ಕೇಳಿದರು. ಆಗ ಶಾಸ್ತ್ರಿಯವರ ಪತ್ನಿ "ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ" ಎಂದು ಹೇಳಿದರು. ಮರುದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು. "ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿಮೆ ಮಾಡಿ" ಎಂದು ಪತ್ರದಲ್ಲಿ ತಿಳಿಸಿದರು.
ನೀತಿ :-- ಇಂತಹ ವ್ಯಕ್ತಿಗಳು ಈಗ ಇದ್ದರೆ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇನ್ನೂ ಹೆಚ್ಚಾಗುತ್ತಿತ್ತು. ಇಂಥವರ ಮಾರ್ಗದರ್ಶನ ನಮ್ಮ ದೇಶದ ವ್ಯಕ್ತಿಗಳಿಗೆ ಸಿಗುವಂತಾಗಲಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಹಣಕ್ಕಿಂತ ಗುಣ ಮಿಗಿಲು
ಇಬ್ಬರು ಗೆಳೆಯರಿದ್ದರು. ಅವರ ಕೆಲಸ ಒಳ್ಳೆಯ ಸುಂದರವಾದ ಮಡಿಕೆಗಳನ್ನು ಮಾಡುವುದು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಕುಂಬಾರರು ಎಂದು ಹೆಸರು ಮಾಡಿದ್ದರು, ಮಡಿಕೆಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಿದ್ದರು.
ಒಂದು ಸಂತೆಯಲ್ಲಿ ಮಡಕೆ ಮಾರುತ್ತಿರುವಾಗ ಆ ಹಳ್ಳಿಯ ಜಮೀನುದಾರ "ನನ್ನ ಮನಸ್ಸಿಗೆ ಸುಂದರವಾಗಿ ಕಾಣುವಂತೆ ಯಾರು ಒಳ್ಳೆಯ ಮಡಿಕೆಗಳನ್ನು ಮಾಡಿಕೊಂಡು ಬರುತ್ತಾರೋ ಅವರಿಗೆ ನಿಮ್ಮ ತೂಕದಷ್ಟು ಹಣವನ್ನು ಕೊಡುತ್ತೇನೆ" ಎಂದು ಹೇಳಿ ಹೋದನು.
ಗೆಳೆಯರಿಬ್ಬರು ಬಡವರು. ಆದರೆ, ಒಬ್ಬ ಹಿರಿಯ ಮಡಿಕೆ ಮಾಡುವಲ್ಲಿ ಕಿರಿಯನಿಗಿಂತ ಸ್ವಲ್ಪ ನುರಿತವನಾಗಿದ್ದ. ಒಳ್ಳೆಯ ಸುಂದರವಾದ ಮಡಿಕೆಗಳನ್ನು ಮಾಡುತ್ತಿದ್ದ, ಆದರೆ ಕಿರಿಯವನು ಸುಂದರವಾಗಿ ಮಾಡುತ್ತಿದ್ದರೂ ಅವನು ಮಾಡಿದ ಮಡಕೆಯ ಮೇಲೆ ಸುಂದರವಾದ ವಿನ್ಯಾಸ ಇರಲಿಲ್ಲ. ಇದರಿಂದ ತನಗೆ ಆ ಬಹುಮಾನದ ಹಣ ತಪ್ಪುತ್ತದೆ, ತನ್ನ ಗೆಳೆಯನಿಗೆ ಸಿಗುತ್ತದೆ ಎಂದು ದುರಾಸೆಯನ್ನು ವ್ಯಕ್ತಪಡಿಸಿದೆ. “ಹೇಗಾದರೂ ಮಾಡಿ ಗೆಳೆಯನ ಮಡಿಕೆಯಲ್ಲಿ ಒಂದು ರಂಧ್ರವನ್ನು ಕೊರೆದು ಬಿಟ್ಟರೆ ಆ ಜಮೀನುದಾರ ನನಗೆ ಹಣವನ್ನು ಕೊಡುತ್ತಾನೆ" ಎಂದು ಕಿರಿಯವ ಯೋಚಿಸಿದ, ಅಂದು ಮಧ್ಯರಾತ್ರಿ ರಂಧ್ರ ಕೊರೆಯಲು ಎದ್ದ ಗೆಳೆಯ ತಯಾರು ಮಾಡಿದ ಸುಂದರವಾದ ಮಡಿಕೆಯನ್ನು ನೋಡಿದಾಗ ಮನಸ್ಸು ಬರಲಿಲ್ಲ. ಆದರೆ ಹಣದ ಆಸೆಯಿಂದ ಮಡಕೆಯನ್ನು ಎತ್ತಿಕೊಂಡಾಗ ಆಶ್ಚರ್ಯವಾಯಿತು ಕಿರಿಯ ಕುಂಬಾರನಿಗೆ ಅಲ್ಲಿದ್ದ ಪ್ರತಿಯೊಂದು ಮಡಕೆಯಲ್ಲೂ ಮೊದಲೇ ರಂಧ್ರವಿತ್ತು.
ಅಷ್ಟರಲ್ಲಿ ಗೆಳೆಯನಾದ ಹಿರಿಯ ಕುಂಬಾರ ಎದುರಿಗೆ ಬಂದು “ನಾಳೆ ನಿನ್ನ ಮಡಕೆಗಳನ್ನು ತೆಗೆದುಕೊಂಡು ಹೋಗು, ನನ್ನ ಮಡಕೆಯಲ್ಲಿ ಲೋಪವಿದೆ ಎಂದು ನಾನೇ ಹೇಳುತ್ತೇನೆ. ಆಗ ಬಹುಮಾನದ ಹಣವೆಲ್ಲ ನಿನಗೆ ಸಿಗುತ್ತಿದೆ. ಎಲ್ಲ ಹಣ ನೀನೆ ತೆಗೆದುಕೋ ನನಗೆ ಹಣ ಬೇಡ. ದುಡಿಯಲು ಶಕ್ತಿ ಇದೆ. ಸುಂದರವಾದ ಮಡಿಕೆಗಳನ್ನು ಮಾಡಲು, ಯೋಚಿಸಲು ಯುಕ್ತಿ ಇದೆ. ಅಷ್ಟು ಸಾಕು ನನಗೆ, ಈಗ ಮಲಗು, ಮುಂಜಾನೆ ಬೇಗ ಜಮೀನುದಾರನ ಮನೆಗೆ ಹೋಗಬೇಕು" ಎಂದ.
ಕಿರಿಯ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು, "ಕ್ಷಮಿಸು ಗೆಳೆಯ ಹಣದ ವ್ಯಾಮೋಹದಿಂದ ನಾನು ದುರ್ಬುದ್ಧಿಯವನಾದೆ, ಹಣಕ್ಕಿಂತ ಮಿಗಿಲಾದದ್ದು ಗುಣ ಆ ಗುಣ ನಿನಲ್ಲಿ ಇದೆ. ಶಕ್ತಿಯ ಜೊತೆ ಯುಕ್ತಿಯೊಂದಿದ್ದರೆ ನಾನು ಶ್ರೀಮಂತನಾಗಬಹುದು, ಏನು ಬೇಕಾದರೂ ಸಾಧಿಸಬಹುದು ಎಂದು ನೀನು ನನಗೆ ಹೇಳಿಕೊಟ್ಟೆ" ಎಂದು ತನ್ನ ಗೆಳೆಯನ ಕ್ಷಮೆ ಕೇಳಿದನು.
ನೀತಿ: ಶಕ್ತಿ-ಯುಕ್ತಿಯಿದ್ದರೆ ಹಣ ಮತ್ತು ಅಂತಸ್ತು ತಾನಾಗಿಯೇ ಬರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಗೋಡೆ ಬಿದ್ದಿದ್ದೇಕೆ?
ರಾಜನ ಆಸ್ಥಾನದಲ್ಲಿ ನ್ಯಾಯ ತೀರ್ಮಾನ ನಡೆದಿತ್ತು. ಆನಂದಪ್ಪ ತನಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದ. ಆನಂದಪ್ಪ ಕುರಿಗಳನ್ನು ಸಾಕಿಕೊಂಡಿದ್ದ. ಅದರ ಜೊತೆಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರುತ್ತಿದ್ದ. ನಿನಗಾದ ಅನ್ಯಾಯವೇನು? ಎಂದು ರಾಜ ಕೇಳಿದ. ಆನಂದಪ್ಪ "ಪ್ರಭು, ನನ್ನ ಪಕ್ಕದ ಮನೆಯಲ್ಲಿರುವ ಜಿಪುಣ ಮನುಷ್ಯ ಅವನ ಮನೆಯ ಗೋಡೆಯನ್ನು ರಿಪೇರಿ ಮಾಡಿಸಿರಲಿಲ್ಲ. ನಿನ್ನೆ ಆ ಗೋಡೆ ಕುಸಿದು ಬಿದ್ದು ಅದರಡಿ ಸಿಲುಕಿ ನನ್ನ ಮುದ್ದು ಕುರಿ ಅಸುನೀಗಿದೆ. ಅದು ಬೆಲೆಬಾಳುವ ಕುರಿಯಾಗಿತ್ತು. ನನಗೆ ಅದರ ಹಣವನ್ನು ಕೊಡಿಸಬೇಕು. ರಾಜ, ಮಂತ್ರಿಯನ್ನು ನೋಡಿದ. ಮಂತ್ರಿ "ಈ ಪ್ರಕರಣವನ್ನು ನಾಳೆಗೆ ಮುಂದೂಡೋಣ. ನನಗೆ ದಣಿವಾಗಿದೆ" ಎಂದ.
ಮಂತ್ರಿಗೆ ಸ್ವಲ್ಪ ಕಾಲಾವಕಾಶ ಬೇಕಿತ್ತು. ಹೀಗಾಗಿ ರಾಜನಲ್ಲಿ ದಣಿವಾಗಿದೆ ಎಂದು ಸುಳ್ಳು ಹೇಳಿದ್ದ. ಮಂತ್ರಿ ಆ ಆನಂದಪ್ಪನ ಹಿನ್ನೆಲೆಯನ್ನು ತಿಳಿದುಕೊಂಡನು. ಅವನು ಅನೇಕ ಮೋಸ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಿಳಿದು ಬಂತು. ಆದರೆ ಒಂದು ಸಲವೂ ಶಿಕ್ಷೆಯಾಗಿರಲಿಲ್ಲ. ಆ ಕುರಿಗಾಹಿ ತುಂಬಾ ಬುದ್ಧಿವಂತನಾಗಿದ್ದ. ವಾದ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಕಾನೂನನ್ನು ಬಳಸಿಕೊಂಡೇ ತನಗೆ ಅನುಕೂಲವಾಗುವ ಹಾಗೆ ವಾದ ಮಂಡಿಸುತ್ತಿದ್ದ. ಹೀಗಾಗಿಯೇ ಒಂದು ಸಲವೂ ಸಿಕ್ಕಿಬಿದ್ದಿರಲಿಲ್ಲ ಎಂದು ಗೊತ್ತಾಯಿತು. ಅಷ್ಟೇ ಅಲ್ಲ, ಅವನ ಕುರಿ ಸತ್ತಿದ್ದು ಗೋಡೆ ಬಿದ್ದು ಅಲ್ಲ, ರೋಗದಿಂದ ಎಂಬ ಸತ್ಯವೂ ಅಕ್ಕಪಕ್ಕದವರಿಂದ ಮಂತ್ರಿಗೆ ತಿಳಿಯಿತು.
ಮಾರನೇ ದಿನ ವಿಚಾರಣೆ ಶುರುವಾಯಿತು. ಮಂತ್ರಿ ಕುರಿಗಾಹಿಯ ಪಕ್ಕದಮನೆಯವನನ್ನು ಹಣ ನೀಡಲು ಆಜ್ಞಾಪಿಸಿದ. ಅವನು ಗೋಗರೆಯುತ್ತಾ "ಸ್ವಾಮಿ, ಗೋಡೆ ಬಿದ್ದಿದ್ದಕ್ಕೆ ಕಾರಣ ನಾನಲ್ಲ, ಗಾರೆಯವನು" ಎಂದ. ಗಾರೆಯವನನ್ನು ಕರೆಸಲಾಯಿತು. ಅವನು "ಸ್ವಾಮಿ, ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಸಿಮೆಂಟ್ ಕಲಸುವವನು ಸರಿಯಾಗಿ ಮಿಶ್ರಣ ಮಾಡಿಲ್ಲ" ಎಂದ. ಸಿಮೆಂಟ್ ಕಲಸಿದವನನ್ನು ಕರೆಸಲಾಯಿತು. ಅವನು "ತಷ್ಟೆಲ್ಲಾ ಸಿಮೆಂಟಿನದ್ದು. ಅದು ಕಲಬೆರಕೆಯ ಸಿಮೆಂಟಾಗಿರಬಹುದು" ಎಂದನು.
ಸಿಮೆಂಟ್ ತಂದವನನ್ನು ಕೇಳಿದಾಗ, ಅವನು ಅದನ್ನು ತಂದಿದ್ದು ಆನಂದಪ್ಪನ ಅಂಗಡಿಯಿಂದಲೇ ಎಂದುಬಿಟ್ಟ. ಅಲ್ಲಿಗೆ ಆನಂದಪ್ಪನ ಕುತಂತ್ರ ಅವನಿಗೇ ತಿರುಗುಬಾಣವಾಗಿತ್ತು. ಕಳಪೆ ಗುಣಮಟ್ಟದ ಸಿಮೆಂಟ್ ಮಾರಿದ್ದಕ್ಕೆ ಆನಂದಪ್ಪನೇ ಪರಿಹಾರ ನೀಡಬೇಕು ಎಂದು ಮಂತ್ರಿ ಆಜ್ಞಾಪಿಸಿದ. ಸಭಾಸದರು, ಪ್ರಜೆಗಳೆಲ್ಲರೂ ಚಪ್ಪಾಳೆ ತಟ್ಟಿದರು. ಮಂತ್ರಿಯ ಬುದ್ದಿವಂತಿಕೆಗೆ ಎಲ್ಲರೂ ತಲೆದೂಗಿದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
ದಿನಕ್ಕೊಂದು ಕಥೆ
ಅಂತರಂಗ-ಬಹಿರಂಗ ಶುದ್ಧಿ
ದೇವರ ಸಾಕ್ಷಾತ್ಕಾರಕ್ಕೆ ನಮ್ಮ ಭಾರತೀಯ ಪರಂಪರೆಯು ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿರುವುದು ನಮ್ಮ ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಇದುವೇ ಮಾನವನ ಪರಮ ಗುರಿಯಂದು ನಂಬಿದ್ದಾರೆ. ಇದೇ ಪರಂಪರೆಯಲ್ಲಿ ಬಂದಿರುವ ನಮ್ಮ ಶಿವಶರಣರು ದೇವರ ಒಲಿಮೆಗೆ ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ಕೊಟ್ಟಿದ್ದಾರೆ. ಅದಕ್ಕೆಂತಲೇ ಬಸವೇಶ್ವರರು ಈ ವಚನ ಹೇಳಿರಬಹುದು.
ಕಳಬೇಡ ಕೊಲಬೇಡ ಹುಸಿಯನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನಬಣ್ಣಿಸಬೇಡ ಇದುರು ಹಳಿಯಲುಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವರನೊಲೊಸುವ ಪರಿ.
ಪ್ರಸ್ತುತ ವಚನದಲ್ಲಿ ಮಾನವನ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಪರಮತ್ಮನ ಒಲುಮೆಸಾಧ್ಯ ಅದನ್ನು ಇಲ್ಲಿರುವ ಸಪ್ತಸೂತ್ರಗಳ ಮೂಲಕ ಸಾಧಿಸಿಕೊಳ್ಳಬೇಕು. ಎನ್ನುವುದೇ ಶರಣರ ಆಶಯ. ಅವರೇ ಇನ್ನೊಂದು ವಚನದಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಲ್ಲದೆ ಹಲವು ವರ್ಷ ತಪಸ್ಸು ಮಾಡಿದರೆ ಹುತ್ತವ ಬಡಿದು ಹಾವನ್ನು ಸಾಯಿಸಿದಂತೆ ಎಂದು ಭೋದಿಸಿದ್ದಾರೆ. ಆ ವಚನ ಹೀಗಿದೆ-
ಹುತ್ತವ ಬಡಿದೊಡೆ ಹಾವು ಸಾಯಬಲ್ಲದೆ ಅಯ್ಯಾ ಅಘೋರ ತಪವ ಮಾಡಿದಡೇನು? ಅಂತರAಗ ಆತ್ಮ ಶುದ್ಧವಿಲ್ಲದರ ಎಂತು ಮೆಚ್ಚುವನಯ್ಯಾ ಕೂಡಲಸಂಗಮದೇವಾ.
ಅಂದರೆ ಶರೀರದೊಳಗಿರುವ ಕಾಮಕ್ರೋಧಾದಿಗಳೆಂಬ ಹಾವುಗಳಿಗೆ ಮನೆಮಾಡಿ ಕೊಟ್ಟು, ಹಲವಾರು ವರ್ಷ ತಪಸ್ಸು ಮಾಡುವುದರಿಂದ ಪ್ರಯೋಜನವಾಗುದಿಲ್ಲ. ಅವುಗಳು ಅಂತರಂಗದಲ್ಲಿ ಇಟ್ಟುಕೊಂಡು ದೇವರನ್ನು ಪೂಜಿಸುತ್ತೇನೆ, ಧ್ಯನಿಸುತ್ತೇನೆ ಎಂದರೆ ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲ ಎನ್ನುವರು ಬಸವಣ್ಣನವರು. ಅದು ಹಾವನ್ನು ಒಳಗಿಟ್ಟು ಹುತ್ತಕ್ಕೆ ಬಡಿದಂತೆ ಎಂದು ಟಿಕಿಸಿದ್ದಾರೆ. ಆದುರಿಂದಲೇ “ಮನ ಏವ ಕಾರಣಂ ಬಂಧ ಮೋಕ್ಷಯೋಃ” ಎಂದು ಅನುಭಾವಿಗಳು ಹೇಳಿದ್ದಾರೆ. ಅಂದರೆ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹದು ಎಂಬ ಅರ್ಥ ಈ ವಾಕ್ಯದಲ್ಲಿ ಅಡಕವಾಗಿದೆ. ಅದಕ್ಕೊಂದು ಒಂದು ಉತ್ತಮ ಉದಾಹಣೆ ನೋಡಬಹುದು. ನಾನು ಬಹಳ ಹಿಂದೆ ಕೇಳಿದ ಕಥೆಯಿದು-
ಒಮ್ಮೆ ಇಬ್ಬರು ಸ್ನೇಹಿತರು ಜೊತೆಗೂಡಿ ದಾರಿಯಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ ಒಂದು ಸುಂದರ ಮಂದಿರ. ಅಲ್ಲಿ ಶಿವಸಂಕೀರ್ತನೆ ನಡಿತಾಯಿತ್ತು. ಅದನ್ನು ಕಂಡ ಆ ಇಬ್ಬರಲ್ಲಿ ಒಬ್ಬ ತನ್ನ ಸ್ನೇಹಿತನಿಗೆ, ನಡಿಯೊ ಹೋಗೊಣ ಶಿವಸಂಕೀರ್ತನೆ ನಡೆಯುತ್ತದೆ ಕೇಳೊಣ, ಪ್ರವಚನ ಮುಗಿದ ನಂತರ ಪ್ರಸಾದ ಸಿಗುವುದು, ಎಂದು ಕರೆದವನ ಮಾತು ಕೇಳದ ಆ ಗೆಳೆಯ ಎಲ್ಲಿದಪ್ಪ ಪುರಾಣ ಇಂದು ಹೊಸ ಪಿಚ್ಚರ ಬಿಡುಗಡೆಯಾಗಿದೆ. ಅದನ್ನು ನೋಡಲು ಟೀಕೆಟಿಗೆ ಕ್ಯೂ ನಿಲ್ಲಬೇಕು. ನನಗೆ ಆಗಲ್ಲ. ಬೇಕಾದರೆ ನೀನು ಹೋಗು ಎಂದು ಕಳಿಸಿದನು. ಇಬ್ಬರು ಸ್ನೇಹಿತರು ಒಂದೊAದು ಕಡೆಗೆ ಹೋದರು. ಮಂದಿರದಲ್ಲಿ ಶಿವಸಂಕೀರ್ತನ ಕೇಳಲು ಕುಳಿತವನು ತನ್ನ ಗೆಳೆಯನ ಜೊತೆಗೆ ಫಿಲ್ಮ ನೋಡಿ ಎಂಜಾಯ ಮಾಡಬಹುದಿತ್ತು ಎಂದು ಮನದಲ್ಲಿ ಪ್ರವಚನ ಕೇಳದೆ ಅದನ್ನೇ ಮತ್ತೆ ಮತ್ತೆ ಮೇಲಕು ಹಾಕತೋಡಗಿದನು. ಆದರೆ ಫಿಲ್ಮ ನೋಡನು ಹೋದ ಗೆಳೆಯ ತನ್ನ ಗೆಳೆಯನ ಜೊತೆಗೆ ಶಿವಶಂಕೀರ್ತನ ಕೇಳಿ ಪ್ರಸಾದ ತಿಂದಿದ್ದರೆ ಸ್ವಲ್ಪವಾದರೂ ಪುಣ್ಯ ಸಿಗುತಿತ್ತು ಎಂದು ಫಿಲ್ಮ ನೋಡದೆ ಚಿಂತಿಸತೋಡಗಿದ. ಹೀಗೆ ಇಬ್ಬರು ತದ್ವಿರುದ್ಧವಾಗಿ ವಿಚಾರ ಮಾಡಿದರು. ಮರುದಿವಸ ಇಬ್ಬರು ಒಟ್ಟಿಗೆ ಸೇರಿದಾಗ ಒಬ್ಬರಿಗೊಬ್ಬರು ಇವನು ನಿನ್ನೆ ಪ್ರವಚದಲ್ಲಿ ಏನು ಹೇಳಿದರು? ಪ್ರಸಾದ ಏನು ಕೊಟ್ಟರು? ಎಂದು ಕೇಳಿದರೆ, ಅವನು ನಿನ್ನೆ ಯಾವ ಫಿಲ್ಮ ನೊಡಿದಿಯಾ? ಚನ್ನಗಿತ್ತಾ? ಎಂದು ಕೇಳುವನು. ಆದರೆ ಅವರಿಬ್ಬರು ತಾವು ಮಾಡಿದ ಕಾರ್ಯದಲ್ಲಿ ಅವರಿರಲಿಲ್ಲ. ಅದಕ್ಕೆ ಉತ್ತರವು ಒಬ್ಬರಿಗೊಬ್ಬರು ಸರಿಯಾಗಿ ಹೇಳಿಕೊಳ್ಳದೆ ಸಮಾದಾನಕ್ಕಾಗಿ ತಿಳಿದಷ್ಟು ಹೇಳಿಕೊಂಡರು ಕಾಲಾನಂತರಲ್ಲಿ ಇಬ್ಬರು ದೈವಾಧೀನವಾದಾಗ ಫಿಲ್ಮ ನೋಡಿದವನು ಸ್ವರ್ಗದಲ್ಲಿ, ಪ್ರವಚನ ಕೇಳಿದವನು ನರಕದಲ್ಲಿ ಇದ್ದರು. ಹೀಗೆಕೆ ಎಂದು ಇವರಿಬ್ಬರು ಅಲ್ಲಿ ಧೂತರಿಗೆ ನಾವಿಬ್ಬರು ಒಳ್ಳೆಯ ಸ್ನೇಹಿತರು, ಯಾವಾಗಲೂ ಕೂಡಿಯೇ ಇರುತಿದ್ದೇವೆ ಇಲ್ಲಿ ಏಕೆ ದೂರ ಮಾಡಿದ್ದಿರಿ ಎಂದು ಕೇಳಿದಾಗ, ಅವರು ನೀನು ಪ್ರವಚನದಲ್ಲಿ ಕುಳಿತರೂ ಫಿಲ್ಮ ಬಗ್ಗೆ ಚಿಂತೆ ಮಡಿದ್ದಿಯಾ, ಹಾಗೂ ನೀನು ಫಿಲ್ಮ ನೋಡುತ್ತ ಇದ್ದರೂ ಪ್ರವಚನ ಬಗ್ಗೆ ಚಿಂತನೆ ಮಾಡಿದ್ದಿಯಾ ಅದಕ್ಕಾಗಿ ನಿಮಗೆ ಈ ಗತಿ ಲಭೀಸಿದೆ ಎಂದು ತಳಿ ಹೇಳಿದ್ದರು. ಆದುದರಿಂದ ಈ ಉದಾಹರಣೆಯಿಂದ ತಿಳಿಯುವುದು ಎನೆಂದರೆ, ನಾವು ಮಾಡುವ ಕಾರ್ಯದಲ್ಲಿ ಸಂಪೂರ್ಣವಾದ ಮನಸ್ಸಿರಬೇಕು ಅದಕ್ಕೆ ತಕ್ಕ ಪ್ರತಿಫಲ ಸಿಗುವುದು. ಅಂತರಂಗ ಮತ್ತು ಬಹಿರಂಗ ಶುದ್ಧಿಗಾಗಿ ಇದೊಂದು ಸಾಧನವಾಗಿದೆ. ಈ ಸಾಧನೆಯ ಜೊತೆಗೆ ಬಸವಣ್ಣನವರ ಈ ಮೇಲಿನ ವಚನವನ್ನು ಪಾಲಿಸಿದಾಗ ಸಂಪೂರ್ಣವಾಗಿ ಭಗವಂತನ ಕರುಣೆಯಾಗಿ ಅವನ ಒಲುಮೆಯಿಂದ ಸಾಧಕ ತನ್ನ ಗುರಿ ಸೇರುವನು. ಎನ್ನುವುದೇ ಎಲ್ಲ ಮಹಾತ್ಮರ ಕಳಕಳಿಯಾಗಿದೆ. ಅದನ್ನು ಪಾಲಿಸಿದರೆ ಅವರ ಋಣ ತೀರಿಸಿದಂತೆ ಆಗುತ್ತದೆ. ಅದಕ್ಕಾಗಿ ತಾವೆಲ್ಲ ಒಟ್ಟಾಗಿ, ಒಂದೇ ಮನಸ್ಸಿನಿಂದ ಬೇಧ ಭಾವವಿಲ್ಲದೆ ಸಾಮಾಜಿಕ, ಧಾರ್ಮಿಕ, ಮೊದಲಾದ ಸ್ಥಾನಗಳಲ್ಲಿ ಶ್ರಮಿಸಿ ಅದಕ್ಕೆ ಉತ್ತಮ ಪ್ರತಿಫಲ ಪಡೆಯಿರಿ. ಇದು ಕೇವಲ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಮಾತ್ರ ಎನ್ನುವುದನ್ನು ಸದಾ ನೆನಪಿಡಿ.
ಡಾ. ಈಶ್ವರಾನಂದ ಸ್ವಾಮೀಜಿ.
ಮೊ – 9341137882.
ಮೇಲ್ – sssms2012@gmail.com.