Thursday, March 7, 2024

ಶರಣ ಧರ್ಮ ಗೃಹಸ್ಥ ಧರ್ಮ

 

 

ಧಾರವಾಡ: ಶರಣ ಧರ್ಮವು ಸಂನ್ಯಾಸಕ್ಕಿಂತ ಗೃಹಸ್ಥ ಜೀವನಕ್ಕೆ ಮಹತ್ವ ನೀಡಿತು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಧಾರವಾಡ ನಗರದ ಬಳಿಯ ಕ್ಯಾರಕೊಪ್ಪದ ಬಸವಾನುಗೃಹದ ಸ್ವಸ್ಥ ಮಂಟಪದಲ್ಲಿ ಹಂದ್ರಾಳ ಮತ್ತು ಕಲಶೆಟ್ಟಿ ಪರಿವಾರದ ವತಿಯಿಂದ ರಚನಾ ಮತ್ತು ರಿಷಿಕೇಶರವರ ವಿವಾಹ ಕಲ್ಯಾಣ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಸಮರಸದಿಂದ ಸ್ವಸ್ಥ ಮತ್ತು ಸಾರ್ಥಕ ದಾಂಪತ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ವಿವಾಹವೆಂಬುದು ಎರಡು ದೇಹಗಳ ಸಂಬಂಧವಲ್ಲ, ಎರಡು ಹೃದಯಗಳ ಸಮ್ಮಿಲನವೆಂದು ಭಾವಿಸಿ ಒಬ್ಬರನ್ನೊಬ್ಬರು ಅರಿತುಕೊಂಡು ಬಾಳಬೇಕು. ಇಬ್ಬರೂ ತಾವು ಸಮಾನರು ಎಂಬ ಭಾವ ಚಿಗುರೊಡೆಯಬೇಕು. ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ ಎಂಬ ಮನೋಭಾವ ತಾಳಿ ಸಾರ್ಥಕ ಜೀವನ ನಡೆಸಬೇಕು. ಒಮ್ಮೆ ಇಬ್ಬರು ಸಾಧಕ ಯುವಕರಲ್ಲಿ ಸಂಸಾರ ಹಾಗೂ ಸನ್ಯಾಸ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬ ವಿಷಯದಲ್ಲಿ ವಾದ ವಿವಾದ ನಡೆಯುತ್ತದೆ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ ಶರಣ ಜೇಡರ ದಾಸಿಮಯ್ಯನಲ್ಲಿಗೆ ಬರುತ್ತಾರೆ. ಅವರಿಗೆ ಆದರಾತಿಥ್ಯ ಮಾಡಿ ಕೂಡಿಸಿದ ದಾಸಯ್ಯನು ಎಳೆ ಬಿಸಿಲಲ್ಲಿ ಕುಳಿತು ಕಾಯಕ ನಿರತನಾಗಿ ದುಗ್ಗಳೆಗೆ ದೀಪ ಹಚ್ಚಿ ತರಲು ಹೇಳುತ್ತಾನೆ. ದುಗ್ಗಳೆ ದೀಪ ಹಚ್ಚಿ ತಂದು ಮುಂದಿಡುತ್ತಾಳೆ. ತಲೆಗೆ ಹೊದ್ದುಕೊಳ್ಳಲು ವಸ್ತ್ರ ತೆಗೆದುಕೊಡಲು ಹೇಳುತ್ತಾನೆ.  ವಸ್ತ್ರವನ್ನು  ತಂದು ಅವನ ತಲೆಯ ಮೇಲಿರಿಸುತ್ತಾಳೆ. ಕುಡಿಯಲು ತಂದಿಟ್ಟ ತಂಗಳು ಅಂಬಲಿ ಬಾಯಿ ಸುಟ್ಟಿತು ಆರಿಸಿಕೊಡು ಎಂದು ಹೇಳಲು  ಅಂಬಲಿಗೆ ಗಾಳಿ ಹಾಕುತ್ತಾಳೆ. ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿದ್ದರೆ ಸನ್ಯಾಸ ಲೇಸು ಎಂದು ಹೇಳುತ್ತಾರೆ. ಹೀಗೆ ಶರಣ ದರ್ಮವು ಗೃಹಸ್ಥಾಶ್ರಮಕ್ಕೆ ಹೆಚ್ಚು ಒಲವು ತೋರಿತು ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಪರಶಿವನನ್ನು ಎಡಬಿಡದೆ ನೆನೆಯುವವನಿಗೆ ಶುಭದಿನ ಅಶುಭದಿನ ಎಂಬುದಿಲ್ಲ. ದೋಷ ದುರಿತ ಎಂಬುದಿಲ್ಲ. ಲಿಂಗಪೂಜೆಗೆ ಮುಹೂರ್ತವೂ ಇಲ್ಲ. ವಿಘ್ನವೂ ಇಲ್ಲ. ಶಿವಧ್ಯಾನಕ್ಕೆ ಎಲ್ಲಾ ಕಾಲವೂ ಸುಲಗ್ನವೇ ಭವಕರ್ಮ ಆತನಿಗೆ ತಾಗುವುದಿಲ್ಲ. ಅನ್ಯಾಯದ ಗರ್ಭ ಸೀಳಿಕೊಂಡು ಜನ್ಮ ತಾಳಿ ಎಲ್ಲಾ ರೀತಿಯ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯ ಜ್ಯೋತಿ ಬೆಳಗಿಸಿ ಜಗಜ್ಯೋತಿಯಾದ ಬಸವಣ್ಣನವರು ಮತ್ತು ಇತರ ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಂತೆ ಜೀವನ ನಡೆಸಿದರೆ ಸಾರ್ಥಕ ದಾಂಪತ್ಯ ನಡೆಸಬಹುದು ಎಂದರು. ನಂತರ ಧಾರವಾಡದ ಯೋಗಚಾರ್ಯರಾದ ಶ್ರೀ ಹನುಮಂತರಾವ್ ಟಕ್ಕಳಕಿ, ನಾದಯೋಗಾಶ್ರಮದ ಮಾತೃಶ್ರೀ ಸರಸ್ವತಿ ಮ ಮನ್ನಣ್ಣಿ, ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ, ಪ್ರಭುನಂದಯ್ಯ ಬಿ ಕೋಟೂರ ಅವರು ದಾಂಪತ್ಯ ಜೀವನ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಬಸವಾನಂದಸ್ವಾಮೀಜಿ, ಶ್ರೀ ಮಹಂತೇಶ ಸಜ್ಜನ ಸ್ವಾಮೀಜಿ, ಶ್ರೀ ಮುದಗಲ್ ಮಹಾಂತ ದೇವರು, ಸ್ವರೂಪಾನಂದ ಭಾರತಿ ಸ್ವಾಮೀಜಿ, ಶ್ರೀ ಶಿವಶಂಕ್ರಯ್ಯ ಬೆಳ್ಳಿಗಟ್ಟಿ ಸ್ವಾಮೀಜಿ,  ಬೆಂಗಳೂರಿನ ಭಾರತ ಸೇವಾದಳದ ಉಪದಳಪತಿ ಕಾಶೀನಾಥ ಹಂದ್ರಾಳ, ಶಾಂತಪ್ಪ ರೇವಪ್ಪ ಕಲಶೆಟ್ಟಿ ಉಪಸ್ಥಿತರಿದ್ದರು.

No comments:

Post a Comment