Wednesday, May 1, 2024

ಸಿದ್ಧಗಂಗೆ

 *"ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು".* 


*ಲೇಖಕರು-ಎಚ್. ಎಸ್. ಸಿದ್ಧಗಂಗಪ್ಪ.*



*ಸಿದ್ದಗಂಗೆಯೆಂದರೆ ಶರಣರು, ಸಂತರು, ದಾರ್ಶನಿಕರು ಶಿವಯೋಗಾನುಷ್ಠಾನ ಮಾಡಿದ ಪುಣ್ಯಭೂಮಿ. ಸಿದ್ದಗಂಗೆಯೆಂದರೆ ಗಂಗಾಮಾತೆ ನೆಲೆಸಿದ ಆವಾಸಸ್ಥಾನ.*

 

*ಸಿದ್ದಗಂಗೆಯೆಂದರೆ ಶ್ರೀ ಸಿದ್ಧಲಿಂಗೇಶ್ವರರು ತಪೋನುಷ್ಠಾನ ಮಾಡಿ ಪವಾಡ ಮೆರೆದ ಪುಣ್ಯಕ್ಷೇತ್ರ.*


*ಸಿದ್ದಗಂಗೆಯೆಂದರೆ ನಿಸರ್ಗ ಸೌಂದರ್ಯದ ತಾಣ.*


 *ಸಿದ್ದಗಂಗೆಯೆಂದರೆ ತ್ಯಾಗ, ಸೇವೆ, ಕರುಣೆ, ದಯೆ, ವಾತ್ಸಲ್ಯ, ಪ್ರೀತಿ, ಮಾನವೀಯ ಮೌಲ್ಯಗಳು ಅನುಷ್ಠಾನಗೊಳ್ಳುತ್ತಿರುವ ಸೇವಾ ಕ್ಷೇತ್ರ.*


 *ಸಿದ್ದಗಂಗೆಯೆಂದರೆ ಸರ್ವಧರ್ಮ ಸಮನ್ವಯದ ಸುಕ್ಷೇತ್ರ.*


 *ಸಿದ್ದಗಂಗೆಯೆಂದರೆ ಬಡವರು, ದೀನ ದಲಿತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಮ್ಮಟ.*


*ಸಿದ್ದಗಂಗೆಯೆಂದರೆ ಬಸವಣ್ಣನವರು ರೂಪಿಸಿದ ದಾಸೋಹದ ಮಹಾಮನೆ.*


 *ಸಿದ್ದಗಂಗೆಯೆಂದರೆ ತ್ರಿವಿಧ ದಾಸೋಹದ ಮಹಾಸಂಗಮ,*


 *ಸಿದ್ದಗಂಗೆಯೆಂದರೆ ನೊಂದವರಿಗೆ ಶಾಂತಿ, ನೆಮ್ಮದಿ ನೀಡುವ ತಾಣ.* 


*ಸಿದ್ದಗಂಗೆಯೆಂದರೆ ನಡೆದಾಡುವ ದೇವರು ನಿತ್ಯ ದರ್ಶನ ನೀಡುವ ಪುಣ್ಯಕ್ಷೇತ್ರ,*


 *ಸಿದ್ದಗಂಗೆಯೆಂದರೆ ಬಸವಾದಿ ಶರಣರು ಬಿತ್ತಿದ ಆದರ್ಶ ಮೌಲ್ಯಗಳನ್ನು ಬಿತ್ತಿ ಬೆಳೆಯುತ್ತಿರುವ ಕರ್ಮಭೂಮಿ.*


 *ಸಿದ್ದಗಂಗೆಯೆಂದರೆ ರೈತರ ಬಗ್ಗೆ ಕಾಳಜಿ.*


 *ಸಿದ್ದಗಂಗೆಯೆಂದರೆ ಅತಿಥಿ ಸತ್ಕಾರದ ಮಹಾಮನೆ.* 


*ಸಿದ್ದಗಂಗೆಯೆಂದರೆ ಎಲ್ಲಿಯೋ ಅನಾಥವಾಗಿ ಬಿದ್ದ ಕಲ್ಲುಗಳನ್ನು ಕಡೆದು ಸುಂದರಮೂರ್ತಿಗಳನ್ನಾಗಿ ಮಾಡಿ ಲೋಕಪೂಜ್ಯವಾಗುವಂತೆ ಮಾಡುವ ಶಿಲ್ಪಕಲಾ ಕೇಂದ್ರ,*


ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸಿದ್ಧಗಂಗಾ ಕ್ಷೇತ್ರದ ಬಗೆಗೆ  *“In Siddaganga, one ob serves several gangas flowing. There is the ganga of Kayaka, the ganga of knowledge, the ganga of under. standing and also the ganga of compassion”*  ಎಂದಿದ್ದಾರೆ.


*"ಸಿದ್ದಗಂಗಾ ಕ್ಷೇತ್ರದಲ್ಲಿ ಅನೇಕ ಗಂಗಾ ನದಿಗಳು ಹರಿಯುತ್ತಿರುವುದನ್ನು ಯಾರಾದರೂ ಕಾಣಬಹುದು. ಆ ನದಿಗಳೆಂದರೆ ಕಾಯಕಗಂಗಾ, ಚಿಂತನಗಂಗಾ ಮತ್ತು ಕಾರುಣ್ಯ ಗಂಗಾ" ಎಂದಿದ್ದಾರೆ.*

ಈ ಮಾತುಗಳು ಶ್ರೀ ಸಿದ್ಧಗಂಗಾ ಕ್ಷೇತ್ರದ ಬಗೆಗಷ್ಟೇ ಅಲ್ಲದೆ *"ತ್ರಿವಿಧ ದಾಸೋಹಿ, ಮಹಾತಪಸ್ವಿ, ಮಾನವೀಯ ಮೌಲ್ಯಗಳ ಸಾಕಾರಮೂರ್ತಿ, ಪದ್ಮಭೂಷಣ, ಕರ್ನಾಟಕ ರತ್ನ, ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರನ್ನು ಕುರಿತಂತೆಯೂ ಹೇಳಬೇಕಾದುದ್ದನ್ನೆಲ್ಲ ಹೇಳುತ್ತದೆ."*


ಹಿರಿಯ ಜಾನಪದ ವಿದ್ವಾಂಸರಾದ ಡಾ. ಗೊ.ರು. ಚನ್ನಬಸಪ್ಪನವರು ಪರಮಪೂಜ್ಯರನ್ನು ಕುರಿತು ಬರೆದಿರುವ ಕವನ ಪೂಜ್ಯರ ಶಿವಘನವ್ಯಕ್ತಿತ್ವಕ್ಕೆ ಅರ್ಪಿಸಿದ ನುಡಿಪುಷ್ಪಗಳು.


*ಅತ್ತ ಹೆತ್ತ ತಾಯಿ ಯಾರೋ ನಮಗೆ ತಿಳಿಯದು. ಇತ್ತಲಂತೂ ಹೊತ್ತ ತಾಯಿ ಪೂಜ್ಯ ಸಿದ್ದಗಂಗಾ ಶ್ರೀಗಳು.*


*ಅತ್ತ ಈ ಮಕ್ಕಳನ್ನು ಯಾವ ತೊಟ್ಟಲಿಲ್ಲಿಟ್ಟು ತೂಗಿದರೋ ತಿಳಿಯದು.ಇತ್ತ ಮಾತ್ರ ಆ ಮಕ್ಕಳಿಗೆಲ್ಲ ಸಿದ್ದಗಂಗಾ ಬೆಟ್ಟದ ತಪ್ಪಲೇ ತೊಟ್ಟಿಲು,*


*ಅಲ್ಲಿ ಹೆತ್ತ ತಾಯಿ ಯಾವ ತುತ್ತು ಉಣಸಿದರೋ ನಮಗೆ ತಿಳಿಯದು. ಇತ್ತ ಮಾತ್ರ ಪೂಜ್ಯರು ಬದುಕಿನ ತುತ್ತನ್ನೇ ಉಣಿಸಿದ್ದಾರೆ.*


*ಅಲ್ಲಿ ತಮ್ಮ ಮಕ್ಕಳನ್ನು ಹೇಗೆ ನೋಡಿಕೊಂಡರೋ ತಿಳಿಯದು. ಇಲ್ಲಿ ಮಾತ್ರ ಪೂಜ್ಯರು ತಮ್ಮ ಕಾರುಣ್ಯದ ರಕ್ಷೆ ಒದಗಿಸಿದ್ದಾರೆ.*


*ಅತ್ತ ಹೆತ್ತವರಿಗೆ ತಮ್ಮ ಮಕ್ಕಳೇ ಭಾರವಾಗಿರಬಹುದು. ಇತ್ತ ಸಾವಿರ ಸಾವಿರ ಮಕ್ಕಳಿದ್ದರೂ ಪೂಜ್ಯರಿಗೆ ಭಾರವೆನಿಸಿಲ್ಲ.*


*ಅತ್ತ ಹೆತ್ತವರಿಗೆ ಬಾಳೆಲ್ಲ ಸಾಕಾಗಿ ಜೀವಿಸುವುದೆ ಶಿಕ್ಷೆ. ಇತ್ತ ಮಕ್ಕಳ ಬಾಳಿಗೊಂದು ಬೆಳಕು ತೋರುವ ರಕ್ಷೆ !*


ಅವರ ಒಂದೊಂದು ಸಾಲುಗಳೂ ಅರ್ಥಪೂರ್ಣವಾಗಿವೆ.


*ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲೋಕಸಹಿತರೂ ಹೌದು, ಲೋಕ ನಿರ್ಲಿಪ್ತರೂ ಹೌದು. ಅವರದು ಬುದ್ಧನ ಪ್ರಬುದ್ಧತೆ, ಏಸುಕ್ರಿಸ್ತನ ಲೇಸಿನ ಬಯಕೆ, ಮಹಾವೀರನ ಅಹಿಂಸೆ, ಪೈಗಂಬರನ ಪ್ರವಾದಿತ್ವ, ಪರಮಹಂಸರ ಪ್ರಸನ್ನತೆ, ವಿವೇಕಾನಂದರ ವಿಚಾರ ವಿವೇಕ, ಕಬೀರನ ಜೀವ ಕಳಕಳಿ, ಅರವಿಂದರ ಆಧ್ಯಾತ್ಮದ ಅರಿವು, ರಮಣ ಮಹರ್ಷಿಯ ರಾಜಯೋಗ, ಎಂತಲೇ ಪರಮಪೂಜ್ಯ ಶ್ರೀಗಳವರಂತಹ ಲೋಕದಾರ್ಶನಿಕರ ಕಣ್ಣೆದುರಿಗೆ ನಾವು ಇದ್ದೇವೆಂಬುದೇ ಒಂದು ಪುಣ್ಯಯೋಗ, ದಿನನಿತ್ಯ ಅವರ ನಾಮಸ್ಮರಣೆ ನಮಗೆ ಶ್ರೀರಕ್ಷೆ. ಅಂದಂದಿನ ನಾವು ಮಾಡುವ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತವೆ.*

No comments:

Post a Comment