Friday, June 4, 2021

ವಚನ ತಾತ್ಪರ್ಯ ೧

 *ದಿನಕ್ಕೊಂದು ವಚನ ಅನುಸಂಧಾನ*

---------------------------------------------

ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ,

ಮತ್ತಾರ ಹಿತಕ್ಕಲ್ಲ ನೋಡಯ್ಯಾ.


ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ,

ಮತ್ತಾರ ಹಿತಕ್ಕಲ್ಲ ನೋಡಯ್ಯಾ,


ತನ್ನ ಬಿಟ್ಟನ್ಯಹಿತವ ನೋಡಿದಡೆ,

ಕೂಡಿಕೊಂಬ ನಮ್ಮ ಕಪಿಲಸಿದ್ಧಮಲ್ಲಯ್ಯನವರ.

**

                     *ಸಿದ್ಧರಾಮೇಶ್ವರ*

---------------------------------------------

    *ವಚನ #ಅನುಸಂಧಾನ*


ಶರಣರ ವಚನದ ಪರಿಭಾಷೆಯೇ ಬೇರೆ ರೀತಿಯ ದು. ಅದನ್ನವರು ರೂಢಿಯಲ್ಲಿರುವ ಪದ ಪದಗ ಳನ್ನು ಪದಾರ್ಥಗಳ ಸಹಿತ ಬಳಸಿರುವಂತೆ ಕಂಡ ರೂ ಕೂಡಾ , ಶರಣರು; ಪದ ಹಾಗೂ ಪದಾರ್ಥ ವನ್ನು ಕೆಡಿಸದೇ ತಮ್ಮ ಕಾಯಕಲ್ಪದಿಂದ ಅರಿತು ಕಟ್ಟಿಕೊಟ್ಟ ಅನುಭಾವದ ಅನೂಹ್ಯವಾದ ಅರ್ಥ ಗರ್ಭಿತ ಅಮೃತದ ಅಮರ ಪಾತ್ರೆಯೇ ವಚನದ  ಪರಿಭಾಷೆಯು. ಭಾಷೆಯ ಈ ಸೂಕ್ಷ್ಮವನ್ನು ಇಲ್ಲಿ ಸರಿಯಾಗಿ ಪರಿಭಾವಿಸಿ ಗ್ರಹಿಸಿಕೊಂಡರೆ ಮಾತ್ರ ವಚನದ ನಿಜದ ನೆಲೆಯ ಆಶಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದನ್ನು ಈಗ ಇಲ್ಲಿ ಗಮನದಲ್ಲಿಟ್ಟುಕೊಂಡು ಸಿದ್ಧರಾಮೇಶ್ವರರ ಈ ಮೇಲಿನ ಪ್ರಸ್ತುತ ವಚನದ ಅನುಸಂಧಾನವ ಮಾಡಿ ನೋಡೋಣ.


*ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ,* *ಮತ್ತಾರ ಹಿತಕ್ಕಲ್ಲ #ನೋಡಯ್ಯಾ.*


ವಚನದ ಈ ಸಾಲುಗಳನ್ನು ಸಹಜವಾಗಿ ಓದಿದರೆ  ಒಂದರ್ಥವು ಮನದಲ್ಲಿ ಮೂಡುತ್ತದೆ. ಅದೆಂದರೆ ಇಲ್ಲಿ ಸಾಮಾನ್ಯವಾಗಿ ಜನ ತಮ್ಮ ಹಿತಕ್ಕಾಗಿಯೇ

ಮಾಡುವರಲ್ಲದೆ ಅನ್ಯರ ಹಿತಕ್ಕೆ ಮಾಡರು ಎಂಬ ಅರ್ಥ ಮನದಲ್ಲಿ ಮೂಡುತ್ತದೆ. ಆದರೆ ವಚನದ ನಿಜಾಶಯ ಇದಲ್ಲ. ಅದೇನಂದರೆ, ಈ ವಚನವು ಲೋಕದ ಜನರ ನಡೆಯನ್ನು ಉದ್ದೇಶಿಸಿ ಮಾತ ನಾಡಿದ ಹಾಗೆ ತೋರುತ್ತದೇನೋ ಖರೆ, ಆದರೆ ಅದು ಭಕ್ತಿಪಥದ ಶಿವಯೋಗ ಸಾಧಕರ ಕುರಿತು ಮಾತನಾಡುತ್ತಿದೆ ಎಂಬುದನ್ನಿಲ್ಲಿ ಪರಿಗ್ರಹಿಸಿದರೆ ಮಾತ್ರ ಅದರ ನಿಜಾರ್ಥದ ನೆಲೆಯತ್ತ ಸಾಗಲು ಸಾಧ್ಯವಾಗುತ್ತದೆ. ಭಕ್ತಿ ಸಾಧಕರು ಇಷ್ಟಲಿಂಗದ ಸಾಧನೆಯನ್ನು ತಮ್ಮ ಹಿತಕ್ಕಾಗಿ ಮಾಡುವರು 'ಮತ್ತಾರ ಹಿತಕ್ಕಲ್ಲ' ಎನ್ನುವಲ್ಲಿ ಆ ಅನುಭಾವಿಕ ಅರ್ಥವಡಗಿದೆ. ಅದೆಂದರೆ; ಇಲ್ಲಿ, 'ಮತ್ತಾರ' ಎನ್ನುವುದು 'ಷಟಸ್ಥಳ'ವನ್ನ ನಿರ್ದೇಶಿಸಿ ಹೇಳಿದೆ. ಷಟಸ್ಥಳದ ಆ ಆರುಸ್ಥಳಗಳ (ಜಾಗ್ರತೆ) ಹಿತಕ್ಕಾಗಿ ಇಷ್ಟಲಿಂಗದ ಶಿವಯೋಗ ಸಾಧನೆ ಮಾಡಿದಾಗ ಮಾತ್ರ ಮುಂದಿನ ಹಂತದ ಆಧ್ಯಾತ್ಮಿಕ ನೆಲೆಯ ಅನುಭಾವಿಕ ಮಾರ್ಗ ಸುಗಮವಾಗಿರುತ್ತದೆಂಬ

ಕಳಕಳಿ ಈ ಕುದಿತಲ್ಲಿ ಇಂಬಿಟ್ಟುಕೊಂಡಿದೆ. ವಚನದ ಮುಂದಿನ ಸಾಲನ್ನು ನೋಡೋಣ.


*ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ*,

*ಮತ್ತಾರ ಹಿತಕ್ಕಲ್ಲ #ನೋಡಯ್ಯಾ*,


ಹೀಗೆ ಸುದೀರ್ಘವಾಗಿ ಶಿವಯೋಗವನ್ನು ಇಷ್ಟ ಲಿಂಗದ ನಿರೀಕ್ಷೆ ಮಾಡಿ ನೋಡಿದರೆ ಅದು ತಮ್ಮ ಹಿತಕ್ಕಲ್ಲದೆ, 'ಮತ್ತಾರ' ಹಿತಕ್ಕಲ್ಲ ನೋಡಯ್ಯಾ, ಎನ್ನುವಲ್ಲಿಯೂ ಷಟಸ್ಥಳದ ಆ ಆರುಸ್ಥಳಗಳ ಜಾಗ್ರತೆಯ ನಿಜಹಿತ ಸಾಧನೆಗಲ್ಲ ಎಂಬುದನ್ನಿಲ್ಲಿ ಶಿವಯೋಗಿ ಸಿದ್ಧರಾಮರು ಎತ್ತಿ ತೋರಿಸುತ್ತಾರೆ. ಇಷ್ಟಲಿಂಗದ ಶಿವಯೋಗ ಸಾಧನೆಯನ್ನ ಲೌಕಿಕ ಜನರಿಗೆ ತೋರಿಸಿ ಖುಷಿ ಪಡುವಂತೆ ಮಾಡದೇ ಷಟಸ್ಥಳಗಳ ಜಾಗೃತಿ ಹಿತದೃಷ್ಟಿಯಿಂದ ಮಾಡ ಬೇಕೆಂಬುದೇ ಶರಣ ತತ್ವದ ನಿಜಾಶಯವಾಗಿದೆ. ಈ ಕಾಳಜಿ ವಚನದ ಈ ಭಾಗದಲ್ಲಿ ಇಂಬಿಟ್ಟಿದೆ

ಮ. ಮುಂದಿನ ಸಾಲು ಏನು ಹೇಳಿವೆ ನೋಡೋಣ.


*ತನ್ನ ಬಿಟ್ಟನ್ಯಹಿತವ ನೋಡಿದಡೆ,*

*ಕೂಡಿಕೊಂಬ ನಮ್ಮ #ಕಪಿಲಸಿದ್ಧಮಲ್ಲಯ್ಯನವರ.*


ಶರಣ ತತ್ವದ ಸಾಧನೆಗೆ ಇಷ್ಟಲಿಂಗದ ಅನುಷ್ಠಾನ ಮಾಡುವ ಸಾಧಕ ತನ್ನಬಿಟ್ಟು ಅಂದರೆ ತನ್ನಲ್ಲಿನ ಅಹಂಭಾವ ಬಿಟ್ಟು ತನ್ಮಯತೆಯಿಂದ ಅನ್ಯಹಿತ ವಾದ ಷಟಸ್ಥಳಗಳ ಕಂಡು ಕೂಡಿಕೊಂಡದ್ದೇ ಖರೆ ಆದಲ್ಲಿ ಅಂಥವರಲ್ಲಿ 'ಕೂಡಿಕೊಂಬ' ನಮ್ಮ ಕಪಿಲಸಿದ್ಧ ಮಲ್ಲಯ್ಯನೆಂದು ಸಿದ್ದರಾಮೇಶ್ವರರು ಪ್ರಸ್ತುತ ಈ ಷಟಸ್ಥಲ ವಚನದ ಮೂಲಕವಾಗಿ, ನಿಜವಾದ ಇಷ್ಟಲಿಂಗ ಪೂಜೆಯ ಶಿವಯೋಗವು ಬರೀ ತೋರಿಕೆಗೆ ಇರದೇ, ಅಂತರಂಗದಲ್ಲಿರುವ ಷಟಸ್ಥಳಗಳ ಜಾಗೃತಿಯ ಹಿತಾನುಷ್ಠಾನ ಬಯಸಿ ಮಾಡುವ ಇಷ್ಟಲಿಂಗದ ನಿಜವಾದ ಪೂಜೆಯ ಶಿವಯೋಗವು ಮಾತ್ರ ಶಿವಸಾಕ್ಷಾತ್ಕರದ ಸುಖವ ಖಂಡಿತಾ ಒದಗಿಸಿ ಕೊಡಬಲ್ಲದೆಂದು ಪ್ರಸ್ತುತ ಈ ಷಟಸ್ಥಲದ ವಚನ ಇಲ್ಲಿ ಸಾರಿ ಸಾರಿ ಹೇಳುತ್ತದೆ.

                                **

ಅಳಗುಂಡಿ ಅಂದಾನಯ್ಯ

...................

No comments:

Post a Comment