*ವಿಶ್ವಗುರು ಬಸವ ಪ್ರಾರ್ಥನೆ*
ಮಾಡು ಮನವೆ ಬಸವ ಸ್ಮರಣೆ
ಹರಿವುದಾಗಲೆ ಬವಣೆಯು
ತಪ್ಪನೆಣಿಸದೆ ಒಪ್ಪಿಕೊಳ್ಳುವ
ಅಪ್ಪ ಬಸವನ ಕರುಣೆಯು.
ಸ್ವರ್ಗ ನರಕದ ಪಾಪ ಪುಣ್ಯದ
ಹಂಗ ಹರಿದ ಲಿಂಗನು.
ಕಾಯಕವೇ ಕೈಲಾಸವೆನ್ನುತ
ದುಡಿಮೆ ಮಂತ್ರವ ನುಡಿದನು.
ಕೀಳು ಕುಲದ ಕಷ್ಟ ಕಳೆಯಲು
ಇಷ್ಟಲಿಂಗವ ಕರುಣಿಸಿ
ಮನುಜರೆಲ್ಲರು ಒಂದೆ ಎಂಬ
ಸಮತೆ ತತ್ವವ ಬೋಧಿಸಿ.
ತಂದೆ ಬಸವ ತಾಯಿ ಬಸವ
ಬಂಧು ಬಳಗವು ಬಸವನು
ವಚನ ಹೇಳಿ ಅರಿವು
ತೋರಿದ ವಿಶ್ವಗುರುವೇ ಬಸವನು.
ಸುಖವೆ ಇರಲಿ ದುಃಖ ಬರಲಿ
ಬಸವ ಬಸವ ಎನ್ನು ನೀ
ಬಸವ ನಾಮವ ನೆನೆಯುತಾ ಗುರು
ಬಸವನಲ್ಲಿ ಒಂದಾಗು ನೀ.
ರಚನೆ : ಶ್ರೀ ಶಿವಾನಂದಸ್ವಾಮೀಜಿ, ಆಡಿಹಂದಿಗುಂದ
ಜಯ ಮಂಗಳ ಗುರುವೇ
ಶುಭ ಮಂಗಳ ಪ್ರಭುವೇ
ಮಹಾಮಂಗಳ ಶಿವನೇ
ಜಗದಗುರುವೆ ನೀ ಅಲ್ಲಮಪ್ರಭುವೇ !!೧!!
ನೀನೇ ಶಿವನಾಗಿ ಬಂದೇ ಈ ಧರೆಗೆ
ಶಿವ ಭಕ್ತರ ಹೃದಯವನು ಬೆಳಗಿದ ಬೆಳಗೆ
ಅನುಭಾವದಡುಗೆಯನು ಉಣಿಸಿದೆ ಎಲ್ಲರಿಗೆ
ಕಲ್ಲು ಹೃದಯದಲ್ಲಿ ಪ್ರೇಮ ಬರಿಸಿದೆ !!೧!!
ಬಸವಣ್ಣನ ಭಕ್ತಿಗೇ ನೀ ಒಲಿದು ಬಂದೆ.
ಚೆನ್ನಬಸವನ ಜ್ಞಾನ ನೀ ನೋಡಿ ನಿಂದೆ.
ಮಡಿವಾಳ ಮಾಚಯ್ಯನ ನೀನಪ್ಪಿಕೊಂಡೆ.
ಕಿನ್ನರ ಬೊಮ್ಮಯ್ಯನ ನೀ ಮೆಚ್ಚಿಕೊಂಡೆ !!೨!!
ಆಯ್ದಕ್ಕಿ ಮಾರಯ್ಯನ ನೀನೆಚ್ಚರಗೊಳಿಸಿದೆ.
ಅಂಬಿಗರ ಚೌಡಯ್ಯನ ಕಂಡು ನೀನಹುದೆಂದೆ.
ಮುಕ್ತಾಯಿ ಅಕ್ಕಳ ದುಃಖವನು ಪರಿಹರಿಸಿದೆ.
ಗೋರಕ್ಷನ ಗರ್ವವನು ನೀ ಮುರಿದು ಸಲಹಿದೆ !!೩!!
ಬಸವಾದಿ ಪ್ರಮಥರನು ಮುನ್ನಡೆಸಿದ ಮಹಾದೇವ.
ಮಹಾದೇವಿಯಕ್ಕಂಗೆ ಒಲಿದ ಆಧ್ಯಾತ್ಮದೇವ.
ಸಿದ್ಧರಾಮಯ್ಯನ ತಿದ್ದಿ ಸಲಹಿದೆ ನೀನು.
ಸಕಲ ಶರಣ ಶರಣೆಯರ ಹೃದಯಜಂಗಮ. !!೪!!
ಶ್ರೀ ಮಲ್ಲಿಕಾರ್ಜುನಸ್ವಾಮಿಗಳು
ಜನವಾಡ, ಅಥಣಿ ತಾ.
*ಸಂಗ್ರಹ*
*ಶರಣು ವಿಶ್ವವಚನ ಫೌಂಡೇಷನ್, ಮೈಸೂರು*
No comments:
Post a Comment