ಶತಮಾನ ಕನ್ನಡ ಇತಿಹಾಸದ ಬೆಳಕಿನ ಸಂಪುಟ ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾ. ಮಧುರಖಂಡಿ ಹುನ್ನೂರ ಬಸವಜ್ಞಾನ ಗುರುಕುಲದ ಶರಣಶ್ರೀ ಡಾ. ಈಶ್ವರ ಮಂಟೂರ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹನ್ನೆರಡನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣರ ಲಕ್ಷಣಗಳು ಎಂಬ ವಿಷಯ ಕುರಿತು ಪ್ರವಚನ ನೀಡಿ ಮಾತನಾಡಿದ ಅವರು ಎಚ್ಚರದ ನಡೆ ನುಡಿ ಉಳ್ಳವರೇ ಶರಣರು, ಕಾಯ, ವಾಚ, ಮನಸ್ಸು ಎಂಬ ತ್ರಿಕರಣಶುದ್ಧ ಚಾರಿತ್ರ್ಯ ರೂಪಿಸಿಕೊಂಡು ಸತ್ಯದ ಅನ್ವೇಷಕರಾಗಿ ಕನ್ನಡ ನಾಡಿಗೆ ಸಂಸ್ಕಾರದ ಬೀಜ ಬಿತ್ತಿ ವಚನಗಳನ್ನು ಕಾಣಿಕೆಯಾಗಿ ನೀಡಿದರು. ಕಾಯಕ ಕೈಲಾಸವಾಗಬೇಕಾದರೆ ಕಾಯ ಕೈಲಾಸವಾಗಬೇಕು. ಕಾಯದಲ್ಲಿರುವ ಅಂಗಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಹಾಗೂ ಇತ್ಯಾದಿ ಅಂಗಗಳು ಸದ್ಭಾವನೆಯ ಕಡೆ ಮಾತ್ರ ಮುಖ ಮಾಡಬೇಕು. ಶರಣರಂತೆ ಸರಳ, ಶುದ್ಧ ಮನಸ್ಸನ್ನು ಹೊಂದಲು ಪ್ರಯತ್ನಿಸಬೇಕು. ವಿಶ್ವವೇ ನನ್ನದೆಂಬ ವಿಶಾಲವಾದ ಹೃದಯವೇ ವಿಶ್ವವಚನ ಸಂಸ್ಥೆಯಾಗಿದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ ಕರ್ನಾಟಕದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಹತ್ತು ಹಲವು ದೃಷ್ಟಿಯಲ್ಲಿ ಪರ್ವಕಾಲ. ಬಸವಣ್ಣನವರ ಮುಖಂಡತ್ವದಲ್ಲಿ ಮನುಕುಲದ ಉದ್ಧಾರಕ್ಕಾಗಿ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನ ನಡೆದು ಬದುಕಿನ ಮೌಲ್ಯಗಳನ್ನು ಬಸವಾದಿ ಶರಣರು ಗುರುತಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಿದರು. ಶರಣರು ಸಾಹಿತ್ಯ ಕ್ಷೇತ್ರದಲ್ಲಿ ಬಹುಶ್ರುತರು, ಶಬ್ದ ಅವರ ಸಂಪತ್ತು, ಅರ್ಥ ಅವರ ಅನುಭೋಗ, ಸಾರಸ್ವತ ದುಡಿಮೆ ಮತ್ತು ಜೀವನ ನಿರ್ವಹಣೆಯ ದುಡಿಮೆ ಎರಡರಲ್ಲೂ ತಪಸ್ಸು ಆಚರಿಸಿ ಬಹು ಪರಿಶ್ರಮದ ಫಲದಿಂದ ವಚನಗಳನ್ನು ರಚಿಸಿದರು ಎಂದರು. ಕಾರ್ಯಕ್ರಮದಲ್ಲಿ ಮಾತೆ ಜಯದೇವಿತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ, ವಿ. ಲಿಂಗಣ್ಣ, ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ನಂದೀಶ್ವರ್ ನಂದು, ಉಮಾದೇವಿ ಮಹದೇವಸ್ವಾಮಿ, ಶೈಲ ಸಿದ್ದರಾಮಪ್ಪ, ಎಚ್. ಕೆ. ಚನ್ನಪ್ಪ, ಸುಮಂಗಳ ಆರ್, ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ಮೊರಬದ ಮಲ್ಲಿಕಾರ್ಜುನ, ವಿಜಯಕುಮಾರ ವಾಜಂತ್ರಿ, ನಾಗಪ್ಪ ಗೋಗಿ, ಪೂರ್ಣಿಮಾ, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಮಾರುತೇಶ್, ಮಲ್ಲಿಕಾರ್ಜುನಸ್ವಾಮಿ, ಜಯಾನಂದ ಟೋಪುಗೋಳ, ದೀಪ ತೊಲಗಿ, ಭಾಗ್ಯ ತೆಗ್ಗಳ್ಳಿ, ಉಪಸ್ಥಿತರಿದ್ದರು.

No comments:
Post a Comment