Saturday, March 2, 2019

ನುಡಿ ನಮನ ಸಂಗ್ರಹ ಭಾಗ 2




ನುಡಿ ನಮನ ಸಂಗ್ರಹ ಭಾಗ 2


51.

ನಡೆದಾಡುವ ದೇವರು - ಸಿದ್ದಗಂಗಾ ಶ್ರೀಗಳ ಕುರಿತು ನನ್ನ ತೊದಲು ನುಡಿಗಳು..


ಶಿಕ್ಷಣದ ಮೋಹಿ - ನಿತ್ಯವೂ ದಾಸೋಹಿ

ಸ್ಫಟಿಕದ ಚಾರಿತ್ರ್ಯ - ಉತ್ತುಂಗದ ಮಾಣಿಕ್ಯ

ಬಾಗಿದ ಬೆನ್ನು - ನಮ್ಮ ಎಲ್ಲರ ಹೊನ್ನು

ಕಾಯಕ ಯೋಗಿ - ಇಹಸುಖ ವಿರಾಗಿ

ನಾಡಿನ ಚಿಂತಕರು - ನಡೆದಾಡುವ ದೇವರು

ಸಿದ್ಧಗಂಗೆಯ ಋಷಿ - ನಮ್ಮ ಈ ಶತಾಯುಷಿ

ಈ ಶಿವ ಸಂತನಿಗೆ ಶರಣು - ಸಾವಿರದ ಶರಣು!

ಶಿವೈಕ್ಯ ಶರಣನಿಗೆ ಸಾವಿರದ ಶರಣು!!



ನನ್ನ ಪರಿಚಯ: ಸಂತೋಷ ಪಾರಶೆಟ್ಟಿ,

ಊರು: ಐನಾಪುರ, ಬೆಳಗಾವಿ.

.......................

52.

ನಾ ಕಂಡಂತೆ ನಡೆದಾಡುವ ದೇವರು...


ದೇವರ ಬಗ್ಗೆ ಎಲ್ಲರೂ ಕೇಳಿದ್ದಾರೆ, ದೇವರ ಮಹಿಮೆಯನ್ನು ನೋಡಿದ್ದಾರೆ. ಆದರೆ ಸಿದ್ದಗಂಗಾ ಎಂಬ ಪುಣ್ಯ ಭೂಮಿಯಲ್ಲಿ ಲಕ್ಷಾಂತರ ಬಡ ವಿಧ್ಯಾರ್ಥಿಗಳಿಗೆ ಉಚಿತ ಆಹಾರ, ವಸತಿ, ಶಿಕ್ಷಣವನ್ನು ನೀಡುತ್ತಿರುವ ಕಾಯಕ ಯೋಗಿ, ಶತಾಯುಷಿ, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ  ಕಾಯಕ ಅಪಾರ. ಯಾವುದೇ ಭಾಗದಿಂದ ಒಂದು ಜೊತೆ ಬಟ್ಟೆಯನ್ನು ತಂದರೆ ಸಾಕು ಅವರು ಯಾವ ಧರ್ಮ, ಯಾವ ಜಾತಿ, ಯಾವ ಕುಲ ಎಂಬ ಭೇದವಿಲ್ಲದೆ ಮಠಕ್ಕೆ ಸೇರಿಸಿಕೊಳ್ಳುತ್ತಾರೆ. ನಂತರ ಆ ಮಗುವಿನ ಎಲ್ಲಾ ಜವಾಬ್ದಾರಿಗಳನ್ನು ಅವರೇ ಹೊತ್ತು ಅವನನ್ನು ದೇಶದ ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುತ್ತಾರೆ. ಶ್ರೀಮಠದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ವಿಧ್ಯಾರ್ಥಿಗಳಿಗೆ ಮೂರು ಹೊತ್ತು ಆಹಾರ ನೀಡಲಾಗುತ್ತೆ. ಪ್ರತಿದಿನ ಬೆಳಿಗ್ಗೆ ಸಂಜೆ ಆರು ಗಂಟೆಗೆ ಮಠದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಆ ಸಮಯದಲ್ಲಿ ನಡೆದಾಡುವ ದೇವರ ದರ್ಶನವಾಗುತ್ತದೆ ಮತ್ತು ಅವರಿಂದ ಪ್ರವಚನ ಕೇಳುವ ಭಾಗ್ಯ ದೊರಕುತ್ತದೆ. ಅದರ ಜೊತೆಗೆ ಮಕ್ಕಳಲ್ಲದೆ ಮಕ್ಕಳಿಂದ ಬೇಡವಾದ ಹಲವು ಹಿರಿಯ ಜೀವಗಳು ಯಾರೇ ಬಂದರೂ ಅವರಿಗಾಗಿ ಎಲ್ಲಾ ವ್ಯವಸ್ಥೆಯು ಮಠದಲ್ಲಿದೆ. ಹಬ್ಬ ಹರಿದಿನಗಳು ಬಂದರೆ ಮಠಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಸಕಲ ಸೌಲಭ್ಯಗಳನ್ನು ಶ್ರೀಮಠ ಒದಗಿಸುತ್ತದೆ. ಇಂತಹ ಪುಣ್ಯಭೂಮಿಯಲ್ಲಿ ನನಗೆ ವಿಧ್ಯಾಭ್ಯಾಸ ದೊರಕಿಸಿದ ನಡೆದಾಡುವ ದೇವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏


ಸತೀಶ್ 

ಕಟ್ಚೆಮನುಗನಹಳ್ಳಿ....
.................

53.

ಪ್ರಿಯ ಅಜ್ಜಯ್ಯ

ನೀನಲ್ಲವೇ ಅಂಬೇಡ್ಕರ್ ವಾದಿ ?


ಪ್ರಿಯ ಅಜ್ಜಯ್ಯ,

ನಿನ್ನದೇ ವಯಸ್ಸಿನ

ನನ್ನ ಮುತ್ತಜ್ಜ

ಯುವಕನಾಗಿದ್ದ

ಕಾಲದಲ್ಲಿ

ನೀನು ನಮ್ಮೂರಿಗೆ

ಬಂದಿದ್ದೆಯಂತೆ

ಊರ ಗೌಡರ ಬಳಿ

ಧವಸ ಧಾನ್ಯ ಬೇಡಲು

ಆಗ ನನ್ನ ಮುತ್ತಜ್ಜ

ಪಾದಮುಟ್ಟಿ

ನಮಿಸಿದಾಗ,

ಆತನ ಕಿವಿಯಲ್ಲಿ

ನೀ ಉಸುರಿದೆಯಂತೆ -

ನಿನ್ನಂತೆ ಮಕ್ಕಳು

ಬಡಗಿಯಾಗುವುದು ಬೇಡ

ಅವರನ್ನು ಓದಲು

ಮಠಕ್ಕೆ ಕಳುಹಿಸು ಎಂದು!

ನೀವಲ್ಲವೇ ಸಮಾಜವಾದಿ ?


ಮೂಡಲ ಸೀಮೆಯ ಮಠಕ್ಕೆ

ಕಳುಹಿಸಲು ಆತನಿಗೆಲ್ಲಿಯ ಶಕ್ತಿ ?

ಗೌಡರಿಗೆ ಇನಿತೂ ಗೊತ್ತಾಗದಂತೆ

ನೀ ಮುತ್ತಜ್ಜನಲ್ಲಿ  ಬಿತ್ತಿದ್ದ

ಶಿಕ್ಷಣದ ಬೀಜ

ಮೊಳಕೆಯಾಗಲೇ ಇಲ್ಲ

ಕನಸು ಕಾಣುತಲೇ  ನಿರ್ಗಮಿಸಿದ !

ಮುಂದೆ, ಎರಡನೇ ಬಾರಿ

ನೀ  ಮತ್ತೆ ನನ್ನೂರಿಗೆ ಬಂದೆ

ಈ ಬಾರಿ ನನ್ನಜ್ಜನದು ಪಾದಪೂಜೆ

ಮಳೆ ಬೆಳೆಯ  ಮಾತಿನ ನಡುವೆಯೇ

ನೀ ಮತ್ತೆ ಪಿಸುಗುಟ್ಟಿದೆಯಂತೆ -

ನಿಮ್ಮಪ್ಪ ನಿನ್ನನ್ನು ಓದಿಸಲಿಲ್ಲ

ನೀನಾದರೂ ಮಕ್ಕಳನ್ನು

ಮಠಕ್ಕೆ ಕಳುಹಿಸಿ

ಓದೇ ಬಿಡುಗಡೆಯ ಹಾದಿ

ಎಂದೆಯಂತೆ.. !

ನೀನಲ್ಲವೇ ಅಂಬೇಡ್ಕರ್ ವಾದಿ ?


ಅನ್ನ ಆಶ್ರಯ ಅರಿವು  ನೀಡಿದ

ತ್ರಿ ದಾಸೋಹಿ ನೀನು

ನಿನ್ನದೇ ಮಠ ಪರಂಪರೆ

ಅನುಸರಿಸುತಿರುವ

ಸಿರಿಗೆರೆ, ಸುತ್ತೂರು ಮಠದ

ದಾರಿಯಲ್ಲಿ ಬೆಳಕು ಕಂಡವರು

ನಾವು .

ಅದೊಂದು ದಿನ ಮತ್ತೆ

ನನ್ನೂರಿಗೆ ಬಂದಿದ್ದೆ

ನನ್ನಪ್ಪನನು

ಹರಸಿ ಆಶೀರ್ವದಿಸಿ

ಸಮಾಜಕ್ಕಾಗಿ, ದೇಶಕ್ಕಾಗಿ

ಆತನ ಮುಂದೆಯೇ

ಜೋಳಿಗೆ ಒಡ್ಡಿದ್ದೆ

ಬೇಡುವ ಕೈಗಳನು

ನೀಡುವ ಕೈಗಳಾಗಿಸಿದ

ನೀನಲ್ಲವೇ ನಿಜದ  ಕರುಣಾಳು



ಚೀ ಜ ರಾಜೀವ, ಪತ್ರಕರ್ತರು, ಮೈಸೂರು


............

54.

ಲಿಂಗೈಕ್ಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಅವರ ೮೮ ವರ್ಷಗಳ ಆಧ್ಯಾತ್ಮಿಕ ಸಾಮಾಜಿಕ ಸಾರ್ಥಕ ಸೇವೆಗಳನ್ನು ಗುರುತಿಸದೆ ಅವರಿಗೆ ಭಾರತ ರತ್ನ ಪ್ರಶಸ್ತಿಯು ದಕ್ಕದೇ ಹೋದುದಕ್ಕೆ ದುಃಖ ವೆನಿಸುತ್ತದೆ, ಇಂತಹ ಕಾರ್ಯಗಳಲ್ಲಿ ಪ್ರಸಕ್ತದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿ೦ದ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ದೊರಕದಂತಾಗಿದೆ. ಶ್ರೀಗಳು ತಮ್ಮ  ಜೀವಿತಾವಧಿಯಲ್ಲಿ ಪ್ರಶಸ್ತಿ ಪುರಸ್ಕಾರಗಳ ಹಿನ್ನೆಲೆಯಲ್ಲಿ ಸಮಾಜ ಕಾರ್ಯಗಳನ್ನು ಕೈಗೊಂಡಿಲ್ಲ, ಕಾರಣ ಅವರು ಪ್ರಶಸ್ತಿ-ಪುರಸ್ಕಾರಗಳನ್ನು ಮೀರಿ ಬೆಳೆದವರು. ಅವರೊಬ್ಬ "ನಿಷ್ಕಾಮ ಕರ್ಮಿ", ಜನರ ಮನಸ್ಸಿನಲ್ಲಿ ಅವರಿಂದ ಸಹಾಯ ಪಡೆದುಕೊಂಡ ಕೊನೆಯ ಜೀವ ಇರುವವರೆಗೂ ಅವರೆಂದೂ ಆ ಮನಸ್ಸಿನವರಿಗೆ "ಅನರ್ಘ್ಯ ರತ್ನ"ವೇ. ಅವರ ಜೀವನ ಕ್ರಮವು ಇಂದಿನ ಜನ ಮಾನಸದಲ್ಲಿ ಬೌದ್ಧಿಕ ಚಿಂತನೆ, ನಿಸ್ವಾರ್ಥ ಸೇವೆ, ಸೇವಾಮನೋಭಾವ ಇವೆಲ್ಲವೂ ಕೇವಲ ನಿಘಂಟಿನಲ್ಲಿ ಮಾತ್ರ ನೋಡಲು ಸಿಗುತ್ತಿರುವ ಪರಿಸ್ಥಿತಿಯಲ್ಲಿ ಮತ್ತು ಹಾದಿ ತಪ್ಪಿರುವ ಹಂತದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳ ಜೀವನ ಕ್ರಮವು ಎಲ್ಲರಿಗೂ ಮಾದರಿಯಾಗಿ ನಿಲ್ಲುವಂತಹುದು ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚಿಸಿ ಅವರಿಗೆ ಮರಣೋತ್ತರ ಭಾರತರತ್ನವನ್ನು ಪ್ರದಾನಿಸಿ ಆ ಗೌರವದ ಶ್ರೇಷ್ಠತೆಯನ್ನು ಈಗಲೂ ಸಹ ಮೆರೆಯಬಹುದಾಗಿದೆ.
ಸಮಾಜದ ಪ್ರಸ್ತುತ ಬೇಕು ಬೇಡಗಳನ್ನು ಸಮರ್ಥವಾಗಿ ಸಕಾಲಿಕವಾಗಿ ಸತತ 111 ಸಂವತ್ಸರಗಳ ಕಾಲ ಪೂರೈಸಿ ಪಿತಾಮಹ ಭೀಷ್ಮನಂತೆ ಇಚ್ಛಾಮರಣಿ ಎನಿಸಿದ ಶ್ರೀ ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದದ್ದು ನಿಜಕ್ಕೂ ಸಮಾಜಕ್ಕೆ ತುಂಬಲಾರದ ನಷ್ಟ, ಮತ್ತೊಮ್ಮೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹುಟ್ಟಿ ಬನ್ನಿ, ನಿಮ್ಮಿಂದ ಆಗಬೇಕಾದ ಸಮಾಜ ಮುಖಿ ಕೆಲಸಗಳು ಸಾಕಷ್ಟಿವೆ.

ಸ್ವಾರ್ಥ ಪರಾರ್ಥಗಳ ಗ್ರಾಂಥಿಕ ಶಬ್ದಾರ್ಥಃ ಗಳನ್ನು ಮೀರಿ ಸಮಾಜ ಉದ್ಧಾರ ಕಾರ್ಯಗಳನ್ನು ಕೈಗೊಂಡವರು ಡಾಕ್ಟರ್ ಶ್ರೀ ಶಿವಕುಮಾರ ಸ್ವಾಮೀಜಿಗಳು. ಅವರ ನಿರ್ಗಮಿತ ಸ್ಥಾನ ತುಂಬುವುದು ಕಷ್ಟಸಾಧ್ಯವೇ ಸರಿ ಎನಿಸುತ್ತದೆ. ಸಾರ್ವಜನಿಕರ ದತ್ತಿ ದಾನಗಳ ವಿವೇಚನಾತ್ಮಕ ಸದ್ಬಳಕೆ ವಿಚಾರದಲ್ಲಿ ಸ್ವಾಮೀಜಿಗಳ ನಿಲುವು ಅದ್ವಿತೀಯ ಹಾಗೂ ಆದರಣೀಯ. ಸಮಾಜದ ಎಲ್ಲ ವರ್ಗಗಳ ದೀನ, ದಲಿತ, ಬಡವ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಸಿದ್ದಗಂಗಾ ಶ್ರೀಗಳವರು ಅಹರ್ನಿಶಿ 88 ವರ್ಷಗಳ ಕಾಲ ಅವಿರತವಾಗಿ ದುಡಿದಿದ್ದಾರೆ. ಮರಣೋತ್ತರವಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದರಿಂದ ಆ ಪ್ರಶಸ್ತಿಯ ಹಿರಿಮೆ ಗರಿಮೆಗಳು ಇನ್ನೂ ಹೆಚ್ಚುತ್ತವೆ. ಎಲ್ಲಕ್ಕಿಂತಲೂ ಹೆಚ್ಚಿನದಾಗಿ ಅವರ ಆಂತರಿಕ ಅಭಿಪ್ರಾಯಗಳ ಅನುಷ್ಟಾನ ಆಗಬೇಕಿದೆ.

ನಾಗರಾಜ್. ವೈ. ಎಂ

............................

55.
Hi
Firstly I appreciate your work and ambition. And tang here under my experience and opinions and also I request you to publish it as possible 💐

ನನ್ನ ಹೆಸರು
ಮಹದೇವಸ್ವಾಮಿ. ಹೆಚ್. ಎಸ್.
ವಿಳಾಸ: ಹೆಗ್ಗವಾಡಿಪುರ ಗ್ರಾಮ, ಸಂತೇಮರಹಳ್ಳಿ ಅಂಚೆ, ಚಾಮರಾಜನಗರ ತಾಲ್ಲೋಕು.

ನಾನು ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದು ವಕೀಲನಾಗಿರುತ್ತೇನೆ

ನಾನು ನನ್ನ ಅನುಭವದಲ್ಲಿ ಶ್ರೀಗಳ ದಿವ್ಯ ಶಕ್ತಿಯ ನಿಜವಾದ ಮತ್ತು ಅದ್ಬುತದ ಬಗ್ಗೆ ಅನಿಸಿಕೆಯನ್ನು ಹಂಚಿಕೊಳ್ಳಲು ಇಚ್ಚಿಸಿ ಈ ಅಂಕಣವನ್ನು ಬರೆಯುತ್ತಿದ್ದೇನೆ

ನನ್ನದು ಅಂತರ್ಜಾತಿ ವಿವಾಹ, ನಾನು ಲಿಂಗಾಯಿತ ಜಾತಿಗೆ ಸೇರಿದವನಾಗಿದ್ದು ನನ್ನ ಧರ್ಮಪತ್ನಿಯು ಒಕ್ಕಲಿಗ ಜಾತಿಗೆ ಸೇರಿದವರಾಗಿರುತ್ತಾರೆ, ಆದರೂ ನನ್ನ ಧರ್ಮಪತ್ನಿ ಚಿಕ್ಕ ಮಗುವಾಗಿರುವಾಗಿನ ದಿನದಿಂದಲೂ ಮಾಂಸಾಹಾರವನ್ನು ತಿನ್ನಲು ಇಷ್ಟಪಡದೇ ಅವರ ಮನೆಯವರು ನೆಂಟರು, ಬಂಧು ಬಳಗದವರಿಂದ ಲಿಂಗಾಯಿತ ಎಂಬ ಅಡ್ಡ ಹೆಸರನ್ನು ಪಡೆದವಳಾಗಿದ್ದಳು, ಸರಿ ಹೀಗಿರುವಾಗ ನಾನು ಮೈಸೂರಿನಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಧರ್ಮಪತ್ನಿಯೂ ಸಹ ವಕೀಲ ವೃತ್ತಿಯನ್ನೇ ಮಾಡುತ್ತಿದ್ದ ಕಾರಣ ಅವರೂ ಸಹ ನನ್ನ ಸಹೋದ್ಯೊಗಿಯಾಗಿ ಕೆಲಸವನ್ನು ಮಾಡುತ್ತಿದ್ದು ಇಬ್ಬರಲ್ಲಿಯೂ ಪ್ರೇಮಾಂಕುರವಾಗಿ ಅದು ವಿವಾಹವಾಗುವ ಸಮಯದವರೆಗೆ ಬಂತು ನನಗೆ ಅವಾಗ ನನ್ನ ಧರ್ಮಪತ್ನಿ ಸಹಮತದ ಮೇರೆಗೆ ಲಿಂಗಾಯಿತ ಜಾತಿಯ ಪದ್ದತಿಯನ್ನು ಸ್ವೀಕಾರ ಮಾಡಿ ನಂತರ ವಿವಾಹ ಕಾರ್ಯವನ್ನ ಮಾಡುವುದು ಎಂದು ತೀರ್ಮಾನ ಮಾಡಿಕೊಂಡೆವು ಆ ಸಮಯದಲ್ಲಿ ನನಗೆ ದೀಕ್ಷೇಯನ್ನು ಸಿದ್ದಗಂಗಾ ಶ್ರೀಗಳ ಬಳಿಯಲ್ಲಿಯೇ ತೆಗೆದುಕೊಂಡು ನಂತರ ವಿವಾಹವನ್ನ ಮಾಡಿಕೊಳ್ಳೋಣ ಎಂಬ ತೀರ್ಮಾನಕ್ಕೆ ಬಂದಿದ್ದೆವು ಆದರೆ ನನ್ನ ಹೆಂಡತಿಯ ಮನೆಯವರನ್ನೂ ಸಹ ಕರೆದುಕೊಂಡು ಬಂದರೆ ಮಾತ್ರ ಲಿಂಗಧಾರಣೆ ಮಾಡುತ್ತೇವೆ ಎಂಬ ಮಠದವರ ಮಾತು ಕೇಳಿದೆ, ಹೆಂಡತಿಯ ಮನೆಯವರ ವಿರೋಧವಿದ್ದ ಕಾರಣ ಅವರನ್ನೂ ಕರೆದುಕೊಂಡು ಮಠಕ್ಕೆ ಹೇಗುವುದು ಕಷ್ಟವಾಯಿತು, ನಾನು ದೇವರೇ ಏನು ಮಾಡುವುದು ಎಂದು ತುಂಭಾ ಯೋಚಿಸುತ್ತಾ ನಾನು ಆ ರಾತ್ರಿ ಮಲಗಿದ್ದೇ, ಆ ದಿನ ರಾತ್ರಿ ಶ್ರೀ. ಶಿವಕುಮಾರಸ್ವಾಮಿಗಳು ನನಗೆ ಕನಸಿನಲ್ಲಿ ಪ್ರತ್ಯಕ್ಷವಾಗಿ ಬೆನ್ನು ಸವರಿ ಆರ್ಶೀರ್ವಾದ ಮಾಡಿ ನನ್ನ ಸ್ನೇಹಿತರೇನೋ ಎನ್ನುವ ತರ ನನ್ನ ಜೊತೆ ನಡೆದು ಬಂದು ನಿನಗಮ ಹತ್ತಿರವಿರುವ ನಂಜನಗೂಡಿನಲ್ಲೇ ಕಾರ್ರ್ಯ ನೆರವೇರಿಸಿಕೋ ನನ್ನ ಆಶೀರ್ವಾದ ನಿನಗೆ ಇದೆ ದೈರ್ಯ ಕಳೆದುಕೊಳ್ಳಬೇಡ ಎಂದು ಹೇಳಿದರು, ಅಬ್ಬಾ ಇದನ್ನು ಬರೆಯುವಾಗಲೂ ಅವರು ನನ್ನ ಹಿಂದೆಯೇ ನಿಂತಿರುವಂತೆ ಭಾಶವಾಗುತ್ತಿದೆ.

ನಾನು ಶ್ರೀಗಳ ಭಕ್ತ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.

ಸದಾ ಅವರ ನೆರಲಿನಲ್ಲಿ ನಾನು ಇರಬೇಕು ಎಂದು ಭಯಸಿ ನಾನು ಅವರ ಭಾವಚಿತ್ರವನ್ನು ನನ್ನ ಕಛೇರಿಯಲ್ಲಿ ಇಟ್ಟು ದಿನಾ ಪೂಜಿಸುತ್ತಿದ್ದೇನೆ.

ಶ್ರೀಗಳು ನನಗೆ ಸಾಕ್ಷಾತ್ ಬಸವಣ್ಣನವರೇ ಅನ್ನಿಸುತ್ತದೆ, ಮತ್ತು ಅವರ ಮುಂದೆ ನಾನು ಅವರ ಧರುಶನಕ್ಕೆ ನಿಂತಾಗ ಭಯವಾಗುತ್ತದೆ. ಮತ್ತು ಪುನೀತನಾದ ಮನಸ್ಸು ಆಗುತ್ತದೆ.

ಮತ್ತು

ಮತ್ತೊಂದು ಪ್ರಸಂಗವೆಂದರೇ, ನನಗೆ ರಾಘವೇಂದ್ರಸ್ವಾಮಿಯವರನ್ನು ಬಿಟ್ಟರೇ ಶ್ರೀಗಳೇ ನನ್ನ ಗುರುಗಳು ಎಂದು ಸ್ವೀಕಾರ ಮಾಡಿದ್ದೇನೆ ನನಗೆ ಬೇರೆ ಯಾರನ್ನೂ ಗುರುಗಳು ಎಂದು ಭಾವಿಸುವುದು ಕಷ್ಟ, ಆದರೇ ನನ್ನ ಸ್ನೇಹಿತರು ಒಬ್ಬರು ಸಾಹಿಬಾಬಾ ರ ಸನ್ನಧಾನಕ್ಕೆ ನನ್ನನ್ನು ಒಮ್ಮೆ ಕರೆದುಕೊಂಡು ಹೋಗಿದ್ದರು ನಾನು ಅಲ್ಲಿ ಇವರನ್ನೂ ನನ್ನ ಗುರುಗಳು ಎಂದು ಸ್ವೀಕರಿಸಲೇ ಎಂದು ಮನಸ್ಸಿನಲ್ಲಿ ಅಂದುಕೊಂಡೇ, ಆದರೇ ಅದೇ ದಿನ ನನ್ನ ಕನಸಿನಲ್ಲಿ ಬಂದ ಗುರುಗಳು ಮತ್ತೇ ನನ್ನ ಸ್ನೇಹಿತರಂತೆ, ಹಿತೈಷಿಯಂತೆ ಕಾಣಿಸಿಕೊಂಡು ನನಗೆ ಎಚ್ಚರಿಸಿ ನಾನು ನಿನ್ನ ಜೊತೆ ಇದ್ದೇನೆ ಎಲ್ಲಾ ಒಳ್ಳೆಯದಾಗುತ್ತದೆ, ಪ್ರಸಾಧ ಮಾಡು ಹೋಗು ಇಲ್ಲಿಗಿಂತ ನಿನಗೆ ಬೇರೆಯಲ್ಲೂ ಏನೂ ಸಿಗುವುದಿಲ್ಲ ಎಂದ ಎಚ್ಚರಿಕೆಯನ್ನು ನೀಡಿದ ಹಾಗೆ ನನ್ನ ಜೊತೆ ಮಾತಾಡಿದ ಅನುಭವವಾಯಿತು.

ಅರಿವೇ ಗುರು, ಶರಣು ಶರಣಾರ್ತಿಗಳು
ವಂದನೆಗಳೊಂದಿಗೆ

ಮಹದೇವಸ್ವಾಮಿ. ಹೆಚ್. ಎಸ್.
ವಕೀಲರು
.............

56.

೧೨ನೇ ಶತಮಾನದಲ್ಲಿ ನಡೆದ ಕಾಯಕ ದಾಸೋಹಕ್ಕೆ ವಿಶ್ವಗುರು ಬಸವಣ್ಣನವರು ಮಾದರಿಯಾದರೆ,
೨0ನೇ ಶತಮಾನದಲ್ಲಿ ಕಂಡದ್ದು  ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜೀವಿತದಲ್ಲಿ ಮಾತ್ರ....
 ಆದ್ದರಿಂದಲೆ ಸ್ವಾಮೀಜಿಯವರನ್ನು ೨೦ನೇ ಶತಮಾನದಲ್ಲಿ ಜನಿಸಿದ ದ್ವೀತಿಯ ಬಸವಣ್ಣ ಎಂದರೆ ತಪ್ಪಾಗಲಾರದು..
.
ಮಲ್ಲನಗೌಡ ಸದೇಪ್ಪಗೌಡ ಪಾಟೀಲ್
 ( ಗದ್ದಿಕರವಿನಕೊಪ್ಪ ತಾ.ಬೈಲಹೊಂಗಲ ಜಿ.ಬೆಳಗಾವಿ )

@@@@@

57.


@@@@@

58.
ಮಾನ್ಯರೇ,


ನಾನು ಸಿದ್ಧಗಂಗಾ ಶ್ರೀಗಳನ್ನು ಒಮ್ಮೆ ಭೇಟಿಯಾಗಿದ್ದೆ. ಅವರು ವರಾಂಡದಲ್ಲಿ ಕುಳಿತಿದ್ದರು. ಅವರು ಒಬ್ಬ ಸರಳ ವ್ಯಕ್ತಿ. ಯಾರು ಬೇಕಾದರೂ ಅವರನ್ನು ಭೇಟಿಯಾಗಬಹುದಿತ್ತು. ಇನ್ನೊಮ್ಮೆ ಅವರನ್ನು ಕಾರ್ಯಕ್ರಮವೊಂದರಲ್ಲಿ ನೋಡಿದ್ದೆ. ಅವರು ಮಿತಾ ಆಹಾರಿಯಾಗಿದ್ದುದಲ್ಲದೇ ಅತಿ ಕಡಿಮೆ ಸಮಯ ನಿದ್ರಿಸುತ್ತಿದ್ದರು. ಸಾವಿರಾರು ಬಡ ಮಕ್ಕಳಿಗೆ ಅನ್ನ ವಿದ್ಯೆ ನೀಡುತ್ತಿದ್ದರು.

Gnaneshwara Taredakuppe

@@@@@

59.
ಯುಗದ ದಿವ್ಯ ಜ್ಯೋತಿಗೆ ಭಕುತಿಯ ಅರ್ಪಣೆ
          
ವೀರಾಪುರದ ಸುಪುತ್ರ
ಸಿದ್ಧಗಂಗೆಯ ವರಪುತ್ರ
ಶ್ರೀ ಉದ್ದಾನ ಶಿವಯೋಗಿಗಳ ಆತ್ಮದ ಕೂಸು.
ಕಾವಿಗೆ ದೇವರ ರೂಪ ಕೊಟ್ಟ
ಭಕ್ತ ಸಾಗರದ ಚಿರಂಜೀವಿ.
ಅನ್ನ, ಅಕ್ಷರ, ಜ್ಞಾನವಿತ್ತ ಶಿಕ್ಷಣ ನಿಧಿ,
ಜಗದ ಮೊದಲ ತ್ರಿವಿಧ ದಾಸೋಹಿಗೆ
ಭಕುತಿಯ ಅರ್ಪಣೆ.

ಅರಿವಿನ ಗುರು,
ಕಾರುಣ್ಯದ ತಂದೆ,
ಸರಳತೆಯ ಜೀವ:
ಬಡಮಕ್ಕಳ ಪೊರೆದ ದೈವ.
ಸಮಾನತೆಯ ಪ್ರತಿರೂಪ:
ಮನೆ-ಮನ ಬೆಳಗಿದ ದೀಪ.
ಸಾಹಿತ್ಯದ ಸ್ನೇಹಿ, ಬಡವರ ಮೋಹಿ.
ಕಾಯಕದ ಮಹಾಯೋಗಿ,
ಯುಗದ ದಿವ್ಯ ಜ್ಯೋತಿಗೆ
ಭಕುತಿಯ ಅರ್ಪಣೆ.


ಡಾ. ಬಿ. ಆರ್. ಕೃಷ್ಣಕುಮಾರ್
ಬಿಸಲವಾಡಿ ಗ್ರಾಮ ಮತ್ತು ಅಂಚೆ
ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ- 571313
@@@@

60.

          ಓಂ ಶ್ರೀ ಗುರು ಬಸವ ಲಿಂಗಾಯ ನಮಃ                                          ದೇವರು ಎಂದರೆ ದೇಹದಲ್ಲಿರುವ ಶಕ್ತಿಯನ್ನು ವರವಾಗಿ ಪರಿವರ್ತಿಸಿ ರುದ್ರನನ್ನು ಕೈಲಾಸದಿಂದ ದರೆಗಿಳಿಸಿದವರು.                      ಹೋಮ ಮಾಡಲಿಲ್ಲ ಹವನ ಮಾಡಲಿಲ್ಲ ಮಂತ್ರ ಪಠಿಸಲಿಲ್ಲ ತಂತ್ರ ಮಾಡಲಿಲ್ಲ ವಾಸ್ತು ಕಥೆ ಹೇಳಲಿಲ್ಲ ಜ್ಯೋತಿಷ್ಯದ ಬುರುಡೆ ಬಿಡಲಿಲ್ಲ ಡೋಂಗಿ ಪವಾಡದಿಂದ ದೇವರಾಗಲಿಲ್ಲ  ಜ್ಞಾನವೇ ಯಜ್ಞವೆಂದರು ಅನ್ನವೇ ದೇವರೆಂದರು ವಿದ್ಯೆಯೇ ಮಂತ್ರವೆಂದರು ಅವರ ಬದುಕೇ ಪವಾಡ ವನ್ನಾಗಿಸಿದರು ನಮ್ಮ ಸಿದ್ದ ಗಂಗಾ ಕ್ಷೇತ್ರದ ನಡೆದಾಡುವ ದೇವರು.
ಆಹಾರ, ಅಕ್ಷರ ಹಾಗು ಆಶ್ರಯವೆಂಬ ತ್ರಿ ವಿಧ ದಾಸೋಹದ ಮಹತ್ವವನ್ನು  ಜಗತ್ತಿಗೆ ಸಾರಿದ ದಾರ್ಶನಿಕರು ಹಾಗು ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯ ವೈಕರಿಗಳ ಮೂಲಕ ಸೇವಾ ಕಾಶಿಯಾಗಿ ಶ್ರೀ ಸಿದ್ದ ಗಂಗಾ ಮಠವನ್ನು ಪರಿವರ್ತಿಸಿದ ಮಹಾ ತಪಸ್ವಿ  ನಮ್ಮ ಶ್ರೀ ಶಿವಕುಮಾರ ಸ್ವಾಮೀಜಿಯವರು.
ವಿರಕ್ತ ಮಠದ ಪರಂಪರೆಗೆ  ಚ್ಯುತಿಬರದ ಹಾಗೆ  ಕಾಯಕದ ಮೂಲಕ ಜಗತ್ತಿಗೆ ಸೇವಾ ತತ್ಪರತೆಯನ್ನು  ಸಾರಿದ ಕೆಲವೇ ಕೆಲವು ವಿಶ್ವ ವಂದಿತ ಸ್ವಾಮಿಜಿಗಳಲ್ಲಿ ಮುಂಚೂಣಿಯಲ್ಲಿ ಸಾಗಿ ಇತರರಿಗೆ ದಾರಿ ದೀಪವಾದವರು.
ದಿನಾಂಕ 01-04-1907 ರಲ್ಲಿ ಮಾಗಡಿ ತಾಲೂಕಿನಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ  ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯರಾದ ಸ್ವಾಮೀಜಿ ಅತ್ಯಂತ ದೀರ್ಘ ಕಾಲ ಸಿದ್ದ ಗಂಗಾ ಮಠವನ್ನು ಮುನ್ನೆಡಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ವನ್ನು ಉಣಬಡಿಸಿ ಅವರನ್ನು ಸಜ್ಜನರನ್ನಗಿಸಿ  ರೂಪಿಸಿದ ಕೀರ್ತಿ ಸ್ವಾಮೀಜಿಗಳಿಗೆ ಸಲ್ಲುತ್ತದೆ.
ಶ್ರೀ ಮಠವನ್ನು   ಸುಮಾರು 88 ವರ್ಷಗಳು ಕಾಯಕ ದಾಸೋಹದ ಮೂಲಕ ಪ್ರತಿಯೊಬ್ಬರ ಮನ ಮನೆಗಳಲ್ಲಿ ನೆಲೆಸಿ ಸರಳ ಸಜ್ಜನಿಕೆಯ ಛಾಪನ್ನು ಬಿಟ್ಟು ಶ್ರೀಗಳು ದಿನಾಂಕ 21ನೇ ಜನವರಿ 2019 ರಂದು ಬೆಳಗ್ಗೆ 11:44 ಗಂಟೆಗೆ ಅಪಾರ ಭಕ್ತ ವೃಂದವನ್ನು ಅನಾಥರನ್ನಾಗಿಸಿ ತಮ್ಮ 111 ನೇ ವಯಸ್ಸಿಗೆ  ಭೂಲೋಕದಿಂದ ಕೈಲಾಸದೆಡೆಗೆ ಪ್ರಯಾಣ ಬೆಳೆಸಿದರು.
ಶ್ರೀ ಗಳ ದಿವ್ಯಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು.                                                                     

            ಶ್ರೀಕಂಠ ಮೂರ್ತಿ,  ಮೈಸೂರು.   
@@@@@

61.
@@@@

62.
“ಕಾಯಕದ ಕೈಲಾಸಾದಿಪತಿಗೆ ನುಡಿ ನಮನ”
ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿ ನಮ್ಮ ಇತ್ತೀಚಿನ ಯುವ ಜನಾಂಗಕ್ಕೆ ಪ್ರೇರಣಾ ಶಕ್ತಿ. ಗುರುಗಳ ಕಾಯಕ ನಿಷ್ಠೆ ಹಾಗೂ ಜೀವನ ಪದ್ಧತಿ ನಮ್ಮೆಲ್ಲರಿಗೆ “ಕಾಯಕದ ಕೈಲಾಸಾಧಿಪತಿ” ಎಂದು ಹೇಳಬಹುದು. ಅವರು ತ್ರಿಕಾಲ ಪೂಜೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಅತಿ ಅಚ್ಚುಕಟ್ಟಾಗಿ ಕಾಯಕವನ್ನು ನಿರ್ವಹಿಸುವ ಜಗದ್ದುರುಗಳಾಗಿದ್ದರು. ಜಗಜ್ಯೋತಿ ಬಸವಣ್ಣನವರನ್ನು  ಆದರ್ಶವಾಗಿ ಇಟ್ಟುಕೊಂಡು ತಮ್ಮ ಇಡೀ ಜೀವನವನ್ನು ತ್ರಿವಿಧ ಅನ್ನ ದಾಸೋಹ, ತ್ರಿಕಾಲ ಪೂಜೆ ಹಾಗು ಶಿಕ್ಷಣಕ್ಕಾಗಿ ಮುಡುಪಾಗಿಟ್ಟರು.

ಸಮಾಜದಲ್ಲಿ ಬಡತನ ಮತ್ತು ಅನಕ್ಷರತೆಯನ್ನು ತೊಲಗಿಸುವುದರಲ್ಲಿ ಇವರ ಸಾಧನೆ ಮಹತ್ವದ್ದಾಗಿದೆ. ಬಡ ಮಕ್ಕಳಿಗೆ ತಮ್ಮ ಮಠದಲ್ಲಿ ವಸತಿ ಮತ್ತು ಅನ್ನ ದಾಸೋಹವನ್ನು ನೀಡಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡುವುದರ ಜೊತೆಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಅವರನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.

ನನಗೆ ಗುರುಗಳನ್ನು ನೋಡುವ ಭಾಗ್ಯ ಸಿಗಲಿಲ್ಲ. ಅದು ನನಗೆ ತುಂಬಾ ದುಃಖದ ವಿಷಯ. ಆದರೂ ಅವರ ಆದರ್ಶ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಜಂಗಮ ಶ್ರೇಷ್ಠ            ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳಿಗೆ ನನ್ನ ಒಂದು ಪುಟ್ಟ ನಮನ………………

ಶ್ರೀಮತಿ ಕೆ. ಶಾರದ
ಸಂಗೀತ ಶಿಕ್ಷಕಿ
ಮು.ದೇ.ಮಾ.ವ.ಶಾಲೆ.ವಲ್ಲಭಾಪುರ

ಹಗರಿಬೊಮ್ಮನಹಳ್ಳಿ (ತಾ), ಬಳ್ಳಾರಿ (ಜಿ)

@@@@

63.

       “ಕಾಯಕ ಸಂಕಲ್ಪ ಭೂಷಣ”
     “ಕಾಯಕವೇ ಕೈಲಾಸ” ಎಂಬ ಬಸವಣ್ಣರ ನುಡಿಗೆ ಅನ್ವರ್ಥವಾಗಿ ನಿಲ್ಲುವ ಮಹಾಕಾಯಕಯೋಗಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು.  ಉದ್ಭಾನ ಶಿವಯೋಗಿಗಳ ಗರಡಿಯಲ್ಲಿ ಆಧ್ಯಾತ್ಮದ ಹೂರಣ ಬಡಿಸಿಕೊಂಡು ಮೇರುಪರ್ವತವಾಗಿ ಬೆಳೆದು ನಿಂತವರು ನಮ್ಮ ಶ್ರೀಗಳು. 

ಸುಮಾರು ಎರಡು ಬಾರಿ ಅವರ ದರ್ಶನ ಪಡೆದ ಪುಣ್ಯವಂತ ನಾನು. ಮಠದಲ್ಲಿ ಓದಿದ ಅನೇಕ ಶಿಷÀ್ಯರ ಸ್ನೇಹಸಂಪಾದಿಸಿದ ನನಗೆ ಅತೀ ಆಶ್ಚರ್ಯವಾಗುತ್ತಿದ್ದ ವಿಷಯವೇನೆಂದರೆ ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಡ ಮಕ್ಕಳು  ಅತೀ ಹೆಚ್ಚು ಜೀವನ ಕಟ್ಟಿಕೊಂಡಿದ್ದು ಈ ಮಠದಿಂದಲೇ!

ಡೆಪ್ಯುಟಿ ಚನ್ನಬಸಪ್ಪನವರು  ದೇವಸ್ಥಾನಗಳಲ್ಲಿ ಪ್ರಸಾದವೇಕೆ? ಆ ಹಣದಲ್ಲಿ ಶಾಲೆ ತೆರೆಯೋಣ ಎಂದು ಜೀವನ ತಪಸ್ಸು ಮಾಡಿದರೆ. ಶ್ರೀಗಳು ಜೋಳಿಗೆ ಹಿಡಿದು ಪ್ರಸಾದ ಸೃಷ್ಟಿಸಿ ಶಿಕ್ಷಣ ಸೇವೆÉಯಲ್ಲಿ ಮಹಾ ತಪಸ್ಸು ಮಾಡಿದವರು ಅವರ ಕಾಯಕ ನಿಷ್ಠೆಗೆ  ಅವರೇ ಸಾಟಿ. ಶ್ರೀಗಳು ಎಂ.ಬಿ.ಬಿ.ಎಸ್. ನಂತಹÀ ಹಣದ ಖಜಾನೆಯನ್ನೇ ಸೃಷ್ಟಿಸುವ ಶಿಕ್ಷಣ ಸಂಸ್ಥೆಗಳಿಗೆ ಮನಸ್ಸು ನೀಡದೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಅರಿವನ್ನರಿತು, ಕೇವಲ ವ್ಯಕ್ತಿತ್ವ ರೂಪಿಸುವ, ಮಕ್ಕಳಲ್ಲಿ ಸಂಸ್ಕøತಿಯನ್ನರಳಿಸುವ ಕಾಯಕ ತಪಸ್ಸು ಮಾಡಿದವರು. ಎಂದಿಗೂ ಹಣ, ಕೀರ್ತಿಯನ್ನು ಅವರು ಅಪೇಕ್ಷಿಸಲಿಲ್ಲ ಶಿವಯೋಗದಲ್ಲಿ ತಲ್ಲೀನರಾಗುತ್ತಿದ್ದ ಅವರು ಭಾರತÀದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಸೃಜಿಸಿ ಸಮಾಜದ  ಸಾಮಾಜಿಕ ಜವಾಬ್ದಾರಿ ಹೇಗಿರಬೇಕೆಂದು ಜಗತ್ತಿಗೇ ನುಡಿದಂತೆ ನಡೆಯಬೇಕೆಂದು ತಮ್ಮ  ಕೆಲಸದ ಮೂಲಕ ತೋರಿದವರು.

   ಪ್ರಾಯಶಃ “ಭಾರತರತ್ನ”ಕ್ಕೆ “ವಿಶ್ವರತ್ನ”ವನ್ನು ಅಲಂಕರಿಸುವ ಅದೃಷ್ಟವಿಲ್ಲವೆಂದೇ ನಾನು ಭಾವಿಸುತ್ತೇನೆ. ಅವರೆಂದೆಂದಿಗೂ “ವಿಶ್ವಗುರು” ಮತ್ತು ಕಾಯಕದಲ್ಲಿಯೇ ಶಿವನನ್ನು ಒಲಿಸಿಕೊಂಡವರು. “ಗುರುವೇ ನಿಮಗೆ ನೀವೇಗುರು”

ವಂದೇ ಗುರುವರ್ಯ

ಸಕ್ರಿಹಳ್ಳಿ ಕೊಟ್ರೇಶ
ಅಧ್ಯಕ್ಷರು ವಿಕಾಸ ಟ್ರಸ್ಟ್ (ರಿ)
ಹಗರಿಬೊಮ್ಮನಹಳ್ಳಿ
@@@@@@@

64.

ಕರುಣಾಳು

ಸೃಷ್ಟಿ ಎಂಬುದು ಪರಮ ಸತ್ಯದ ಸ್ವರೂಪ. ಪಾವಿತ್ರ್ಯತೆ ಮತ್ತು ಅಹಿಂಸೆ ಅದರ ಸೌಂದರ್ಯ. ಇದನ್ನು ಕವಿ ವರ್ಣಿಸಲು ಸಾಧ್ಯವಾದರೂ, ಅನುಭವಿಸಲಾರ. ಅಂತಹ ತ್ರಿಕರಣ ಶುದ್ಧಿಗಳ ಪಾರಮ್ಯವನ್ನು ಆಲಂಗಿಸಿದವರು ಕರ್ಮಯೋಗಿಗಳು ಮಾತ್ರ. ಜೀವನ ಪ್ರೀತಿ ಮತ್ತು ಜೀವವಿಕಾಸದ ಪ್ರಾಯೋಗಿಕ ಸಿದ್ಧಾಂತವನ್ನು ನಿರೂಪಿಸಿಕೊಂಡು, ಅದರ ಸಹಜ ಹಾದಿಗಳಲ್ಲಿ ಮಾನವ ಜಗತ್ತನ್ನು ನಿರ್ಮಿಸಲು ಕಾಷಾಯವಸನಧಾರಿಯಾದವರು. ಪರಿಪೂರ್ಣತೆಗಾಗಿ ಪ್ರಮಾಣಿಕ ಪ್ರಯತ್ನವನ್ನು ಸವೆದವರು. ಅಂತಹ ಶರಣ ಪರಂಪರೆಯೊಂದು ಭಾರತೀಯ ನೆಲದಲ್ಲಿ ಕಾಲದ ಸಂದರ್ಭದಲ್ಲಿ ಘಮಿಸಿದೆ. ಋಜು ವಿಶ್ವಾಸ,(ನ್ಯಾಯವಾದ ನಂಬಿಕೆ) ಋಜು ಜ್ಞಾನ,(ಸರಿಯಾದ ಜ್ಞಾನ) ಋಜುಕಾರ್ಯ(ಉತ್ತಮ ನಡತೆ) ಗಳೆಂಬ ತ್ರಿರತ್ನಗಳನ್ನು ಭೋದಿಸಿ ಜೈನಯತಿ ಮಹಾವೀರನಾದ. ಪ್ರೀತಿ, ಕರುಣೆ, ಸಹಾನುಭೂತಿಗಳನ್ನು ಉದ್ಧರಿಸಿದ ಸಿದ್ಧಾರ್ಥ ಬುದ್ಧನಾದ. ಚಿತ್ ಸ್ವರೂಪದ ಅಂತಃಕರಣ ಶುದ್ಧಿಯಿಂದ ಬಸವಣ್ಣ ಮಹಾ ಶರಣನಾದ.  ಹೀಗೆ ಸಮಾಜೋ ಸಾಂಸ್ಕøತಿಕ ಜೀವಜಗತ್ತಿನ ಉದ್ಧಾರಕ್ಕಾಗಿ ಇಂತಹ ಸೀಮಾಪುರುಷರ ಹುಟ್ಟು, ಕ್ರಾಂತಿಕಾರಿ ಬದಲಾವಣೆಗಳನ್ನೇ ಮಾಡಿದೆ. 
‘ಯಾವ ನಿಜವಾದ ಸಾಧಕರ ಜೀವನವನ್ನವಲೋಕಿಸಿದರೂ ಕಾಣುವುದಿಷ್ಟು; ಅವರು ಹುಟ್ಟುತ್ತಲೇ ಪರಿಪೂರ್ಣರಲ್ಲ; ಬೆಳೆಯುತ್ತಾ ಪರಿಪೂರ್ಣತೆಗಾಗಿ ಶ್ರಮಿಸುತ್ತಾ ಮುನ್ನೆಡೆಯುವ ವೀರರು. ಲೌಕಿಕ ಸಂಕಟಗಳ ಮಾಲೆಯ ಮೇಲೆ ನಗುಮುಖದಿಂದ, ದಿವ್ಯ ಶ್ರದ್ಧೆಯಿಂದ, ಉಳಿದವರೆಡೆಗೆ ಪರಮ ಅನುಕಂಪದಿಂದ ಅವರ ಯಾತ್ರೆ ಸಾಗುತ್ತದೆ. ಈ ಎಲ್ಲಾ ನಿಶಿತಧಾರೆಯ ಮೇಲೆ ನಡೆದು ಮಾನವ ಕಲ್ಯಾಣಕ್ಕೆ ತಮ್ಮ ಸಮಸ್ತವನ್ನೂ ಧಾರೆ ಎರೆದು ಶಿವನ ಬೆಳಕಿನಲ್ಲಿ ನಿಂತ ಧೀರರಿವರು’. ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರ ಈ ಮಾತಿನಲ್ಲಿ ಅಂತಹ ವೀರತ್ವದ ಸಾಧನೆಗೆ ಶಿವೇಚ್ಛಾರೂಪಿಯಾದ ಶಕ್ತಿಯಾಗಿ ನಿಲ್ಲುವ ಸಮಕಾಲೀನ ಶರಣ; ಶಿವಮುಖ ಯೋಗದೃಷ್ಟಿ, ಸತ್ಯವ್ರತಧಾರಿ, ಪ್ರಕೃತಿಯ ಪ್ರಚ್ಛಂಡಶಕ್ತಿಯ ಪ್ರತಿನಿಧಿ, ಸಿದ್ಧಿಯ ಮುಂಬೆಳಗು ಹೀಗೆ ಹಲವು ಗುಣಗಳಲ್ಲಿ ಕರಗಿಹೋಗುವ ಮೌಲ್ಯದ್ರಾವಕ, ಸಿದ್ಧಿಪುರುಷ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು. ಮಹಾವೀರ, ಬುದ್ಧ, ಬಸವಣ್ಣ ರೆಂಬ ತ್ರಿರತ್ನ ಪ್ರಭಾಮಂದಿರದ ಒಳಗೆ, ತಮ್ಮ ಅಸ್ತಿತ್ವದ ಬೇರುಗಳನ್ನು ಸಾವರಿಸಿ ನಿಂತು, ಪ್ರೀತಿಯಿಂದ ಅನ್ನವನ್ನು, ಕರುಣೆಯಿಂದ ಅಕ್ಷರವನ್ನು, ಸಹಾನುಭೂತಿಯಿಂದ ನೆರಳನ್ನೂ ನೀಡುತ್ತಾ, ಗುರು ಕಾಣ್ಕೆಯ ತ್ರಿವಿಧದಾಸೋಹ ಪರಂಪರೆಯನ್ನು ಧೀನರ ಉದ್ಧಾರಕ್ಕಾಗಿ ಬಳಸಿದ ಆಧುನಿಕ ಮಹಾಶರಣ.
‘ನಾವು ಮುಕ್ತರಾಗಿದ್ದಾಗ ಮಾತ್ರವೇ ಇತರರನ್ನು ಮುಕ್ತಿಗೊಳಿಸಬಹುದು’ ಎಂದು ಶ್ರೀ ಅರವಿಂದರು ಹೇಳಿದಂತೆ ಸಾಕಾರಗೊಂಡವರು. ಅದೇ ಮಾದರಿಯಲ್ಲಿ ಸದಾ ಮುಕ್ತರಾಗಿಯೇ ಕ್ರಿಯಾಶೀಲರಾಗಿರುತ್ತಿದ್ದ ಶ್ರೀಗಳು ಯಾವ ಲವಲೇಶಕ್ಕೂ ಗೌಪ್ಯತೆಯನ್ನು ಕಾಯ್ದುಕೊಂಡವರಾಗಿರಲಿಲ್ಲ. ಎಲ್ಲವೂ ಶಿವಮಯವೆಂದೇ ಭಾವಿಸಿದ್ದ ಅವರಲ್ಲಿ ಅಲ್ಲಮಪ್ರಭುವಿನಷ್ಟು ಬಯಲುಶುದ್ಧಿಯನ್ನು, ವಿದ್ಯಾವಂತ, ಪ್ರಾಮಾಣಿಕ, ಮಾನವಪ್ರೇಮಿಯ ಪೂರ್ಣಮನುಷ್ಯರನ್ನು ದರ್ಶಿಸಬಹುದು. ಕಾಯಕವನ್ನೇ ಪೂರ್ಣತತ್ವದ ವ್ಯಕ್ತಿತ್ವವನ್ನಾಗಿಸಿಕೊಂಡಿದ್ದ ಶ್ರೀಗಳಲ್ಲಿ ಸತ್ಯಶುದ್ಧಿ ಮತ್ತು ಅಹಿಂಸಾ ಶುದ್ಧತ್ವದ ಗಾಂಧಿಯನ್ನೂ, ಸರ್ವ ಸಮಾನತೆಯ ಆಶಯವನ್ನು ಹೊಂದಿದ್ದ ಅಂಬೇಡ್ಕರರನ್ನೂ ಪತ್ರಕ್ಷವಾಗಿಯೇ ಕಾಣಲು ಸಾಧ್ಯವಿದೆ. ಈ ಎಲ್ಲಾ ವ್ಯಕ್ತಿತ್ವಗಳಿಂದ ಶ್ರೀಗಳು ಭವ್ಯ ಭಾರತದ ಸಾಂಸ್ಕøತಿಕ ಚರಿತ್ರೆಯಲ್ಲಿ ಮನುಕುಲದ ಬೆಳಕಾಗಿ ಸದಾ ಕಾಲ ಬೆಳಗುತ್ತಾರೆ. 
ಆದರದಿಂದಲೇ ಮನುಜಮತವನ್ನು, ನಡೆದ ದಾರಿಯಲ್ಲಿ ವಿಶ್ವಪಥವನ್ನು ಸೃಷ್ಟಿಸಿದ, ಮೌನಕಾವ್ಯದ ಈ ಕೃತಿ ಜಗತ್ತಿಗೆ ಕಂಡದ್ದು ವಿಶ್ವಮಾನವನಾಗಿ. ಮೊಹಮ್ಮದ್ ಪೈಗಂಬರ್ ಅವರು ಹೇಳುವಂತೆ ‘ಯಾರಿಗೂ ಹಾನಿಮಾಡದೆ, ಮಾನವಕುಲಕ್ಕೆ ಸದಾ ಒಳ್ಳೆಯದನ್ನು ಬಯಸುವವನೆ ಮನುಷ್ಯರಲ್ಲಿ ಶ್ರೇಷ್ಠನಾದವನು’. ಶ್ರೀಗಳು ಮನುಷ್ಯಶ್ರೇಷ್ಠರು. ನಮ್ಮೊಡನಿದ್ದು ನಮ್ಮಂತಾಗದೆ, ನಮ್ಮಂಥವರನ್ನೂ ಅವರಂಥಾಗಲು ಪ್ರೇರೇಪಿಸಿ ಹೊರಟ ಒಂದು ದಿವ್ಯಪ್ರಭೆ. 
‘ಎನ್ನಂತರಂಗ ನೀವಯ್ಯ, ಎನ್ನ ಬಹಿರಂಗ ನೀವಯ್ಯ, ಎನ್ನರಿವು ನೀವಯ್ಯ, ಎನ್ನ ಭಕ್ತಿ ನೀವಯ್ಯ, ಎನ್ನ ಮುಕ್ತಿ ನೀವಯ್ಯ’. ಎಂದು ಶರಣ ಬಸವಣ್ಣ ನಾಡಿದ ಮಾತು ಶ್ರೀಗಳ ಎದೆಯದನಿಯನ್ನು ಶತಾಯುಷ್ಯದವರೆಗೆ ಪೋಷಿಸಿದೆ. ನನ್ನಂಥವರ ಜ್ಞಾನದಾಹದ ಒಡಲಿಗೆ ಅಕ್ಷಯವಾಗಿ, ಶ್ರೀಮಂತಗೊಳಿಸುವ ಈ ಧೀಶಕ್ತಿ ಸೃಷ್ಟಿಯ ಮಹಾದ್ಯೂಹ ರಚನೆಯಲ್ಲಿ ಚಿರಾಯು. ಶ್ರೀಗಳನ್ನು ನೆನೆಯುವ ಮನ ಒಂದು ಚರಿತ್ರೆಯನ್ನು, ವೈವಿಧ್ಯತೆಯ ಹಲವು ಸಂಸ್ಕøತಿಗಳನ್ನು ಧ್ಯಾನಿಸುತ್ತಲೇ ವಿಜೃಂಭಿಸುತ್ತದೆ.

ಸತೀಶ. ಆರ್
 ಸಂಶೋಧನಾ ವಿದ್ಯಾರ್ಥಿ, 
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು 

 @@@@@

65.


ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜೀವನ ಕಥನ

'ನಡೆದಾಡುವ  ದೇವರು' ಎಂದೇ ಪ್ರಖ್ಯಾತಿಯಾದ ನಮ್ಮ ಸದ್ಗುರುಗಳಾದ ಸಿದ್ಧಗಂಗ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಬದುಕು ಅವಿಸ್ಮರಣೀಯ. ತಮ್ಮ 111 ವಸಂತಗಳನ್ನು ಜನಕ್ಕೆ ಬಹು ಉಪಯುಕ್ತವಾಗಿ ಸವಿಸಿ ಲಂಗೈಕ್ಯರಾದ ಮಹಾನ್ ಗುರುಗಳಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಯವರ ನಿಸ್ವಾಥ9 ಸೇವೆಯನ್ನು ನಾವು ಸ್ಮರಿಸಬೇಕು. 1907 ಏಪ್ರಿಲ್ 1 ರಂದು ಪಟೇಲ್ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗಳಿಗೆ ಹುಟ್ಟಿದ ಶಿವಕುಮಾರ ಸ್ವಾಮಿಯವರು ಲಿಂಗಾಯಿತ ಮತಸ್ಥರಾಗಿದ್ದರೂ ಸಹ ಯಾವ ಜಾತಿ ಮತ ಬೇಧವಿಲ್ಲದೆ ಮಕ್ಕಳನ್ನು ಪೋಷಿಸಿದ ಮಹಾನ್ ಮಾನವತಾವಾದಿ. 1930ರಲ್ಲಿ ಸಿದ್ಧಗಂಗೆಯ ಮಠವನ್ನು ಸೇರಿದ ಇವರಿ 1941ರಲ್ಲಿ ಮಠಕ್ಕೆ ಮುಖ್ಯಸ್ಥರಾದರು. ಹಾಗೆ ಮಕ್ಕಳ ವಿದ್ಯಾಜ9ನೆಗಾಗಿ ಸಿದ್ಧಗಂಗ ವಿದ್ಯ ಸಂಸ್ಥೆಯನ್ನು ಸ್ಥಾಪಿಸಿದರು. ವಿದ್ಯಾಥಿ9ಗಳ ಉದರ ಪೋಷಣೆಗೆ 24 ತಾಸು ಅನ್ನದಾಸೋಹವನ್ನು ಏಪ9ಡಿಸಿದ್ದರು. ಇಂತಹ ಕೊಡುಗೈ ದಾನಿ ಸಿದ್ಧಗಂಗೆಯ ಶ್ರೀಗಳನ್ನು ಅಭಿನವ ಬಸವಣ್ಣ, ಕಾಯಕ ಯೋಗಿ,ತ್ರಿವಿಧ ದಾಸೋಹಿ ಎಂದು ಕರೆಯಲ್ಪಡುತ್ತಿತ್ತು.ಇಂತಹ ಮಹಾನ್ ಚೇತನಕ್ಕೆ ಭಾರತ ಸಕಾ9ರವು 'ಪದ್ಮ ವಿಭೂಷಣ' ಪ್ರಶಸ್ಥಿ ಕೊಟ್ಟು ಗೌರವಿಸಿದೆ. ಹಾಗೆ 2007ರಲ್ಲಿ ಕನಾ9ಟಕ ಸಕಾ9ರವು 'ಕನಾ9ಟಕ ರತ್ನ' ಪ್ರಶಸ್ಥಿ ಕೊಟ್ಟು ಸನ್ಮಾನಿಸಿದೆ. ತಮ್ಮ 111 ವಸಂತಗಳನ್ನು ಬಹು ಶಸ್ತಿನಿಂದ ಪೂರಕವಾಗಿ ಜನಾನುರಾಗಿಯಾಗಿ ಜೀವನ ಸವಸಿ ಜನವರಿ 21 2019 ರಂದು ಲಿಂಗೈಕ್ಯರಾದ ಇವರಿಗೆ ಭಾರತ ಸಕಾ9ರ 'ಭಾರತ ರತ್ನ' ವನ್ನು ದಯಪಾಲಿಸಬೇಕೆಂದು ನಮ್ಮೆಲ್ಲ ಕೋರಿಕೆ.
      ಗುರುಭ್ಯೋ ನಮ:

 ಆರತಿ ರಘುವೀರ್

@@@@

66.


@@@@


67.

ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರು ನಮ್ಮೆಲ್ಲರ ನಡೆದಾಡುವ ದೇವರು ಕಾಯಕಯೋಗಿ, ತ್ರಿವಿಧ ದಾಸೋಹಿ ಅಭಿನವ ಬಸವಣ್ಣ ಎಂಬ ಅನೇಕ ಹೆಸರುಗಳಿಂದ ಕರೆಯುವ ನಮ್ಮೆಲ್ಲರ ದೇವರು ಅವರ ಬಗ್ಗೆ ಎಷ್ಟು ಮಾತನಾಡಿದರು ಪದಗಳೇ ಸಿಗುವುದಿಲ್ಲ. ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡಲು ಬಹಳ ಚಿಕ್ಕವಳು ನಾನು ಆದರೂ ಅವರಿಗೆ ಒಂದೆರೆಡು ನುಡಿನವiನವನ್ನು ಅರ್ಪಿಸಿ ನನ್ನ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದಿರುವೆ. ನಮ್ಮೆಲ್ಲರ ಪ್ರೀತಿಯ ಗೌರವಾನ್ವಿತ ಸ್ವಾಮೀಜಿಯವರನ್ನು ನಾನು ಬುದ್ದಿ ಎಂದು ಕರೆಯುತ್ತಿದ್ದೆ. ಇವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಬಹಳ ಅಪಾರ. ಇವರು ಶತಾಯುಷಿಗಳಾಗಿದ್ದು, ಅವರು 111 ವರುಷ ಬದುಕಿ ಅವರ ನಿಸ್ವಾರ್ಥ ಸೇವೆಯು ನಮ್ಮೆಲ್ಲರ ಬಾಳಿನ ಬೆಳಕಾಗಿದೆ. ಇವರಿಗೆ ಕರ್ನಾಟಕ ರತ್ನ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಸರ್ಕಾರ ಗೌರವಿಸಿದೆ. ಆದರೆ ಅವರಿಗೆ ಅವರ ಜೀವತಾವಧಿಯಲ್ಲೆ ಭಾರತ ರತ್ನ ಪ್ರಶಸ್ತಿ ನೀಡಬೇಕಾಗಿತ್ತು. ಅದು ನಮ್ಮ ಆಸೆಯಾಗಿತ್ತು. ಇವರು ನಮ್ಮ ನಾಡಿಗಾಗಿ 80 ವರುಷಗಳ ಕಾಲ ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ನಿಸ್ವಾರ್ಥತೆಯಿಂದ ಜಾತಿ ಭೇದವನ್ನು ತೊಡೆದು ಹಾಕಿ ಬಡತನದಲ್ಲಿರುವ ಮಕ್ಕಳಿಗೆ ತ್ರಿವಿಧ ದಾಸೋಹದ ವ್ಯವಸ್ಥೆಯನ್ನು ಮಾಡಲು ಮನೆ-ಮನೆಗೆ ಹೋಗಿ ಭಿಕ್ಷೆ ಬೇಡಿ ಅದರಲ್ಲಿ ಬಂದ ದವಸ-ದಾನ್ಯ, ಧನ-ಕನಕಗಳನ್ನು ಮಠದಲ್ಲಿನ ಮಕ್ಕಳಿಗಾಗಿ ಬಳಸುತ್ತಾ ಲಕ್ಷಾಂತರ ಜನರ ಜೀವನಕ್ಕೆ ದಾರಿದೀಪವಾಗಿದ್ದಾರೆ.
ನಾವು ಸದಾ ಕ್ರಿಯಾಶೀಲರಾಗಿರಬೇಕೆಂದು, ಅಹಂಕಾರವನ್ನು ಬಿಟ್ಟು ಜಾತಿ ಭೇದವನ್ನು ಮರೆತು ಒಗ್ಗಟ್ಟಿನಿಂದ ಬಾಳ್ವೆ ನಡೆಸಬೇಕೆಂಬುದು ಅವರ ಆಸೆ. ಅದರಂತೆ ಅವರು ತೋರಿಸಿದ ದಾರಿಯಲ್ಲಿ ನಡೆಯುವುದೇ ನಮ್ಮೆಲ್ಲರ ಕರ್ತವ್ಯವಾಗಬೇಕು. ಇದರಿಂದ ನಮ್ಮ ದೇಶವು ಒಗ್ಗಟ್ಟಿನಿಂದ ಸಮೃದ್ಧಿಯ ಕಡೆ ಸಾಗಲು ನೆರವಾಗುತ್ತದೆ. ಇಂತಹ ಮಹಾನ್ ವ್ಯಕ್ತಿಯ ನಡುವೆ ಇದ್ದ ನಾವೇ ಧನ್ಯರು. ಇಂತಹ ದೇವರಿಗೆ ನನ್ನ ಕೋಟಿ-ಕೋಟಿ ನಮನಗಳು.

ನಡೆದಾಡುವ ದೇವರು

“ ನಡೆದಾಡುವ ದೇವರು ನೋಡಿರಣ್ಣ
ನೋಡುತ ಹಾಡಿ ಹೊಗಳಿರಣ್ಣ
ಹಸಿದು ಬಂದವರ ಹಸಿವನು ನೀಗಿಸುವ
ಬಡವರ ಬಂಧು ಕೇಳಿರಣ್ಣ. ||

“ ಬೆಳೆಯುವ ಪೈರಿಗೆ ವಿದ್ಯೆಯ ನೀಡುತ
ಧರ್ಮೆವೆಂಬೊ ಹಾದಿಯಲಿ ನಡೆಯುತ
ಧೀನ ದುರ್ಬಲರ ಕಣ್ಣು ನೋಡಿರಣ್ಣ
ಕಲಿಯುಗದ ದೇವರು ಕೇಳಿರಣ್ಣ” ||

“ ನದಿಯ ದಡದಲ್ಲಿ ಸೃಷ್ಠಿಸಿದ ಉಪ್ಪು ಮುತ್ತು
ಉಪ್ಪು ಕರಗಿತಣ್ಣ ಮುತ್ತು ಅರಳಿತಣ್ಣ
ಅರಳಿದ ಮುತ್ತು ನಡೆದಾಡುವ ದೇವರ
ಪಾದಕ್ಕೆ ಸೇರಲಣ್ಣ” ||

“ ವಿದ್ಯೆಯನ್ನು ಕಲಿಸಿದ ಗುರುವು ಹೌದು
ತುತ್ತು ಹಾಕಿದ ಕೈಯು ಹೌದು
ಕಲಿಯುಗದ ಕರುಣಾಮಯಿ ಹೌದಣ್ಣ
ಕಲಿಯುಗದ ಕಲ್ಕಿಯು ಹೌದಣ್ಣ” ||

Sumangala R Assistant teacher JSS High School, Udayagiri, Mysuru


@@@@@@

68.

ಶ್ರೀ ಗುರುಭ್ಯೋ ನಮ:

111 ವರ್ಷಗಳ ಕಾಲ ಬದುಕಿದ್ದ ಕಾಯಕ ತಪಸ್ವಿ ಸಿದ್ಧಗಂಗಾ ಶ್ರೀಗಳ ಜೀವನ ಸಾಧನೆಯು ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಾದ್ಯಂತ ಅಪಾರ ಗೌರವಾದರಗಳಿಗೆ ಪಾತ್ರವಾಗಿದೆ. ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು ಇವು:
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ 1907 ಏಪ್ರಿಲ್ 1ರಂದು ಹೊನ್ನೆಗೌಡ ಹಾಗು ಗೌರಮ್ಮನವರ ಪುತ್ರÀನಾಗಿ ಜನಿಸಿದರು.
120 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.
ದೇವಭಾಷೆಯಾದ ಸಂಸ್ಕøತ ಶಿಕ್ಷಣದ ಜೊತೆಗೆ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣಕ್ಕೂ ಆದ್ಯತೆ ನೀಡಿದರು ಹಾಗೂ ಶ್ರೀಗಳು ಕನ್ನಡ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ.
ಅನ್ನದಾನ ಮತ್ತು ವಿದ್ಯಾದಾನ ಇವರ ಮುಖ್ಯ ಗುರಿ. ಹಸಿವುಮುಕ್ತ ಸಮಾಜದೊಂದಿಗೆ ಜ್ಞಾನ ಸಂಪಾದನೆ ಇವರ ಧ್ಯೇಯ.
ಇಡೀ ಜಗತ್ತಿನಲ್ಲಿ ಶಾಂತಿಯನ್ನು ಬಿತ್ತುವ, ಮಕ್ಕಳಿಗೆ ತಮ್ಮ ಜೀವನದಲ್ಲಿ ಅವಶ್ಯಕವಾಗಿ ಬೇಕಾಗಿರುವ ಆಹಾರ, ಆಶ್ರಯ ಹಾಗೂ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಸಾಮಥ್ರ್ಯವನ್ನು  ಹೊಂದಿದ್ದರು. ಶತಾಯುಷಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದವೇ ನಮ್ಮ ಜೀವನದ ಚೈತನ್ಯ ಚಿಲುಮೆಯಾಗಿದೆ. ಅವರ ಆಶೀರ್ವಾದವು ಬಿಲ್ವಾಷ್ಟಕದಲ್ಲಿ ಹೇಳಿರುವ ಈ ಶ್ಲೋಕದ ತಾತ್ಪರ್ಯಕ್ಕೆ ಹೇಳಿಮಾಡಿಸಿದಂತೆ ಇದೆ.
दर्शनं बिल्ववृक्षस्य स्पर्शनं पापनाशनम्
अघोरपापसंहारं बिल्वपत्रं शिवार्पणं

ಹೇಗೆ ಬಿಲ್ವವೃಕ್ಷದ ದರ್ಶನ ಅಥವಾ ಸ್ಪರ್ಶ ಮಾತ್ರದಿಂದ ಸಕಲ ಪಾಪಗಳು ನಾಶವಾಗುವುದೋ ಹಾಗೆ ಸಿದ್ಧಗಂಗಾ ಶ್ರೀಗಳ ದರ್ಶನದಿಂದ ಪಾಪವು ದೂರವಾಗಿ ಅವರ ಪಾದ ಸ್ಪರ್ಶದಿಂದ ಆಶೀರ್ವಾದ ರೂಪಾವಾಗಿ ನಮ್ಮಲ್ಲಿ ಚೈತನ್ಯ ಶಕ್ತಿಯು ಹೊಮ್ಮುವುದರಲ್ಲಿ ಸಂಶಯವಿಲ್ಲ.
ಆ ದಿವ್ಯ ಚೇತನಶಕ್ತಿಗೆ, ತ್ರಿವಿಧ ದಾಸೋಹಿಗೆ, ಶಾಂತ ಮೂರ್ತಿಗೆ, ನಡೆದಾಡುವ ದೇವರಿಗೆ, ತಪಃಶಕ್ತಿಗೆ, ಕಲಿಯುಗ ದೈವಗೆ ಇದೋ ನನ್ನ ಭಕ್ತಿ ಪೂರ್ವಕ ತೊದಲ ನುಡಿನಮನಗಳು.
ಭಕ್ತಿಪೂರ್ವಕ ವಂದನೆಗಳೊಂದಿಗೆ,

ಇಂದಿರಾ.ಎನ್
ಎಸ್.ಡಿ.ಎ.
ಜೆ.ಎಸ್.ಎಸ್. ಮೆಡಿಕಲ್ ಕಾಲೇಜು,
ಮೈಸೂರು
ದಿನಾಂಕ : 01/03/2019.
ಸ್ಥಳ    : ಮೈಸೂರು


@@@@@@

69.

ಕಬಿರಾ ಸೋ ಈ ಪೀರ್ ಹೈ ಜೋಜಾನೈ ಪರಪೀರ್ ಜೋ ಪರ ಪೀರ್ ನ ಜಾನ ಈ ಸೋಕಾ ಫಿರ್ ಬೇ ಪೀರ್...

ಯಾರು ಇತರರ ವೇದನೆಯನ್ನು ಅರಿಯಬಲ್ಲರೋ ಅವರೇ ಗುರು. ಯಾರು ಇತರರ ವೇದನೆಯನ್ನು ಅರಿಯಲಾರನೋ ಅವನು ಅಧರ್ಮಿ.ಸಂವೇದನಾರಹಿತನಾದ  ವ್ಯಕ್ತಿ.
ಈ ಹಿನ್ನೆಲೆಯಲ್ಲಿ  ಸಿದ್ಧಗಂಗೆಯೂ ಸ್ವಾರ್ಥರಹಿತ ಜನಸೇವಕರ ಅನುಕಂಪದಲ್ಲಿ ತೊಯ್ದ ಪವಿತ್ರವಾದ ತಾಣ . ಈ ತಾಣವನ್ನು ಜಾಜ್ವಲ್ಯಮಾನವಾಗಿ ಬೆಳಗಿಸಿದವರು ಸಿದ್ಧಗಂಗೆ ಶ್ರೀ ಶಿವಕುಮಾರ ಮಹಾಸ್ವಾಮಿಗಳು.
  - ಡಾ.ಕಾವ್ಯಶ್ರೀ ಜಿ.
ಅಧ್ಯಕ್ಷರು
ಶರಣು ವಿಶ್ವವಚನ ಫೌಂಡೇಷನ್‌, ದಾವಣಗೆರೆ ಜಿಲ್ಲೆ
@@@@@@

70.

ಸಿದ್ದಗಂಗಾ ಶ್ರೀ ಶ್ರೀ. ಶಿವಕುಮಾರ ಸ್ವಾಮಿಗಳು ಇಡೀ ದೇಶದಲ್ಲಿ ಅದ್ವಿತೀಯ ಎನಿಸಿದ್ದು ಹಲವಾರು ಕಾರಣಗಳಿಗಾಗಿ. ಶಿಕ್ಷಣ, ಧರ್ಮ ಕಾರ್ಯ, ಪೂಜಾ ಕೈಂಕರ್ಯ, ಜಾತಿ ಭೇದವಿಲ್ಲದ ವ್ಯವಸ್ಥೆ, ಅವರ ವಾತ್ಸಲ್ಯಮಯ ಗುಣ ಇತ್ಯಾದಿ. ಇವೆಲ್ಲವನ್ನು ಮೀರಿ ಗಮನ ಸೆಳೆಯುವುದು ದಾಸೋಹ ವ್ಯವಸ್ಥೆ. ನೂರು ವಿದ್ಯಾರ್ಥಿಗಳ ಹಾಸ್ಟೆಲ್ ನಡೆಸುವುದೇ ದುಸ್ತರವೆನಿಸಿರುವಾಗ ಹತ್ತು ಸಾವಿರದಷ್ಟು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ನಡೆಸಿಕೊಂಡು ಬಂದಿರುವುದೇ ಈ ಅದ್ವೀಯತೆಗೆ ಕಳಸಪ್ರಾಯ. ನಮ್ಮದು ಜಾತ್ಯತೀತ ಮಠ ಎಂದು ಅವರು ಬೇರೆಯವರ ಕೈಲಿ ಭಾಷಣ ಮಾಡಿಸಲಿಲ್ಲ, ಬರೆಸಲಿಲ್ಲ. ಸುಮ್ಮನೆ ಮಾಡಿ ತೋರಿಸಿದರು.
- ಡಾ.  ಪಿ. ನಾಗಭೂಷಣಗೌಡ
ಕಾರ್ಯದರ್ಶಿ
ದಾವಣಗೆರೆ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್‌

@@@@@

80.
🙏ಮೌಲ್ಯಗಳ ಗಣಿ ಸಿದ್ಧಗಂಗೆ🙏

ಮಾನವೀಯ ಮೌಲ್ಯಗಳ ಗಣಿ ನಮ್ಮ ಸಿದ್ಧಗಂಗಾ ಮಠ. ಅದಕ್ಕೆ ಒಡೆಯರಾಗಿದ್ದವರು ನಮ್ಮ ಪೂಜ್ಯ ಸಿದ್ದಗಂಗಾ ಶ್ರೀಗಳು.

ನಾ ಹೇಳುತ್ತಿರುವುದು ನನ್ನ ಸ್ವಂತ ಅನುಭವದ ನುಡಿಗಳು
ನಾನು ಶ್ರೀಮಠದಲ್ಲಿ ಅಭ್ಯಾಸ ಮಾಡಿದವಳು. ಮಠಕ್ಕೆ ವಿದ್ಯಾಭ್ಯಾಸಕ್ಕೆ ಎಂದು ಬಂದ ಒಂದು ಮಗು ಸಂಸ್ಕಾರಯುತ ವ್ಯಕ್ತಿಯಾಗಿ  ರೂಪುಗೊಂಡು ಮನೆ, ಸಮಾಜ, ಹಾಗೂ ದೇಶದ ಸಂಪತ್ತಾಗಿ ರೂಪುಗೊಳ್ಳುತ್ತದೆ. ಕಾರಣ ಶ್ರೀಮಠದಲ್ಲಿ ಎರಡು ಅಂಶಗಳನ್ನು ನಾವು ಕಲಿತಿದ್ದೇವೆ ಅವು ಕಾಯಕ ಮತ್ತು ದಾಸೋಹ ಅಂದರೆ ದುಡಿಮೆ ಮಾಡಬೇಕು. ದುಡಿದು ಬಂದ ಪ್ರತಿಫಲವನ್ನು ಹಂಚಿ ತಿನ್ನಬೇಕು ಇದೇ ದಾಸೋಹ. ಮಠಕ್ಕೆ ಬರಿಗೈಯಲ್ಲಿ ಸೇರಿದ ಮಗು ವಿದ್ಯೆ, ಕಾಯಕ, ಮಾನವೀಯತೆ, ಜಾತ್ಯಾತೀತತೆ ಮುಂತಾದ ಮೌಲ್ಯಗಳನ್ನು ರೂಡಿಸಿಕೊಂಡು ಪರಿಪೂರ್ಣ ವ್ಯಕ್ತಿಯಾಗಿ ಹೊರಬರುತ್ತದೆ‌. ಈ ಗುಣಗಳನ್ನು ಯಾರೂ ಕೂಡಾ ಕದಿಯಲು ಸಾಧ್ಯವಿಲ್ಲ. ಇಂತಹ ತತ್ವವನ್ನು ಕಲಿಸಿದ ಶ್ರೀಗಳನ್ನು ಪಡೆದ ನಾವು ಧನ್ಯರು.

ಮಧುಮತಿ ಶ್ರೀಧರ್
ಹುಳಿಯಾರು 
ಚಿಕ್ಕನಾಯಕನಹಳ್ಳಿ ತಾಲ್ಲೂಕು
ತುಮಕೂರು ಜಿಲ್ಲೆ
@@@@@@

81.
ಭಾರತ ದೇಶದಲ್ಲಿಯೇ,ಕಾವಿ ತೊಟ್ಟ ಅನೇಕ ಸ್ವಾಮಿಗಳಾದವರು ಹಲವರು,ಜಾತಿ,ಮತ,ಲಿಂಗ ಭೇದವಿಲ್ಲದೇ ಶಿಕ್ಷಣ,ಅರಿವು,ಧಮ೯, ಅನ್ನ ನೀಡಿದ ತ್ರಿವಿಧ ದಾಸೋಹಿಗಳು,ಜೊತೆಗೆ ಸಾವಿರಾರು ಶರಣರನ್ನ,ಸಾಹಿತಿ,ಕವಿ,ಕಲಾವಿದರನ್ನ,ರಾಜಕಾರಣಿಗಳನ್ನ,ಪ್ರಾಧ್ಯಾಪಕರನ್ನ,ಸೃಷ್ಠಿಸಿದ ಅಪರೂಪದ ಆಡದೇ ಮಾಡಿ ತೋರಿಸಿದ ಕಲ್ಪ ವೃಕ್ಷ ಸಿದ್ಧ ಗಂಗಾ ಶ್ರೀಗಳು----     

 ಡಾ.ಜಯದೇವಿ ಗಾಯಕವಾಡ 
ಸದಸ್ಯರು,ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.ಹುಮನಾಬಾದ
@@@@@@@

82.

ತಮ್ಮ ವೇದನೆಯಲ್ಲಿ ತೊಳಲಾಡದೇ ವ್ಯಕ್ತಿ-ವ್ಯಷ್ಟಿ ಮುಖ್ಯವಲ್ಲ,ಸಮಷ್ಟಿ ಸವಾಜವೇ ಮುಖ್ಯವೆಂದು ಬಾಳಿ ಬೆಳಗಿ ಅರಿವಿನ ಜ್ಯೋತಿ ಹಚ್ಚಿದ ಸಿದ್ಧಗಂಗಾ ಶ್ರೀಗಳ ಕಾಯ೯ ಸ್ವಾಥ೯ರಹಿತ ಸಮಾಜಕ್ಕೆ ಹಚ್ಚಿಟ್ಟ ಹಣತೆ-------
ಡಾ.ವಿಜಯಕುಮಾರ ಬಿ.ಬೀಳಗಿ
 ಉಪನ್ಯಾಸಕರು ಪಾಲಿ ಅಧ್ಯಯನ ಸಂಸ್ಥೆ.ಗುಲಬಗಾ೯ ವಿಶ್ವ ವಿದ್ಯಾಲಯ ಕಲಬುರಗಿ@@@@@@@

83.

ನಾ ಕಂಡ ಅದ್ಭುತ ಶಿವಯೋಗಿಗಳಲ್ಲಿ ಸಿದ್ಧಗಂಗಾ ಶ್ರೀಗಳು ಒಬ್ಬರು. ಅವರು ೧೧೧ ವಷ೯ಗಳ ಕಾಲ ಬಾಳಿ ಬೆಳಗಿದ್ದು ಅವರ ನಿಮ೯ಲ ಮನಸ್ಸು ಎತ್ತಿ ತೊರುತ್ತದೆ.ಸಾತ್ವಿಕ,ಸರಳ, ಸಜ್ಜನಿಕೆಯ,ಮಹಾಸ್ವಾಮಿಗಳು ನಡೆದಾಡುವ ದೇವರೆಂದರೆ ಸಿದ್ಧಗಂಗಾ ಶ್ರೀಗಳು ಮಾತ್ರ.ಮಕ್ಕಳಲ್ಲಿ ದೇವರನ್ನು ಕಂಡ ಮಹಾತ್ಮ,ಅವರಲ್ಲಿ ನಾನು ದೇವರನ್ನು ಕಾಣುತ್ತೇನೆ
 ಪ್ರೊ.ನಾಗೇಂದ್ ವಿ.ಢೋಲೆ 
ತಾಲೂಕಾಧ್ಯಕ್ಷರು ಶರಣು ವಿಶ್ವ ವಚನ ಫೌಂಡೇಷನ್ ಬಸವಕಲ್ಯಾಣ
@@@@@


84.
ಸಿದ್ಧಗಂಗೆಯ ಶ್ರೀಗಳು ಜಗತ್ತಿನ ಶ್ರೇಷ್ಠ ಶರಣ ಸಂತ ಪಂಥದ ಮೇರು ಪವ೯.ಜಗದ ನೋವ ಕಂಡ ತಳಮಳದಲಿ ಬುದ್ಧರಾಗಿ,ಶಾಂತಿ ತೋರಿದವರು,ಸಾಮಾಜಿಕ,ಧಾಮಿ೯ಕ, ಶೈಕ್ಷಣಿಕ,ದಾಸೋಹದಲ್ಲಿ ಸಮತೆಯ ಹೆಜ್ಜೆಇಟ್ಟ ಬಸವ ಮಾಗಿ೯ಗಳು,ಪವಿತ್ರ ಸುಕ್ಷೇತ್ರದಲಿ ಅನಾಥ, ಜಾತ್ಯಾತೀತವಾಗಿ ಹದಿನೈದು ಸಾವಿರ ಮಕ್ಕಳಿಗೆ ಆಶ್ರಯ ನೀಡಿದವರು ತ್ರಿವಿಧ ದಾಸೋಹಿಗಳು ಡಾ.ಶಿವಕುಮಾರ ಸ್ವಾಮೀಜಿಗಳು--------
  ಡಾ.ಗವಿಸಿದ್ಧಪ್ಪ ಪಾಟೀಲ 
ಜಿಲ್ಲಾಧ್ಯಕ್ಷರು ಶರಣು ವಿಶ್ವ ವಚನ ಫೌಂಡೇಷನ್ ಬೀದರ
@@@@@

85.

ನೀನೊಬ್ಬನೇ

ಸ್ವತಂತ್ರ ಪೂರ್ವದಲೇ
ಒಂದೆರಡಲ್ಲ ನೂರಾರಲ್ಲ
ಅಸಂಖ್ಯ ದೀನದುರ್ಬಲರಿಂಗೆ
ಅಶನ-ವಸನ-ಅಕ್ಕರವನಿತ್ತ
ವ್ಯಕ್ತಿ ನೀವೊಬ್ಬರೇ ಸಿದ್ದಗಂಗಾಶ್ರೀ

ಬಳಿ ಬಂದೆಲ್ಲರಿಗೂ ಸಂಸ್ಕಾರವಿತ್ತ
ಬಸವಾನುಯಾಯಿ ನೀನೇ ಗುರು
ತಂದೆ ತಾಯಿಯೂ ನೀವೇ
ನನ್ನ ಗುಡಿಯ ಮೂರುತಿ
ನೀವೇ ಕಣಾ ಸಿದ್ಧಗಂಗಾಶ್ರೀ

ಡಾ.ಎಚ್ ಟಿ ಶೈಲಜ
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು
ಜೆ ಎಸ್ ಎಸ್ ಕಾಲೇಜು
ಮೈಸೂರು

@@@@

86.
🙏ಸಂಸ್ಕಾರ ಆಗರ🙏

ನಮ್ಮ ಶ್ರೀಗಳು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ಇಲ್ಲಿ ಹೇಳಲು ಇಚ್ಛಿಸುತ್ತೇನೆ. ಯಾರೂ ಸೇಂದಿ ಹಾಗೂ ಹೊಗೆಯನ್ನು ಕುಡಿಯಬೇಡಿ, ನಿಮ್ಮ ಸಂಸಾರ ಮತ್ತು ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಿ, ಗುರು ಹಿರಿಯರಿಗೆ ಗೌರವ ಕೊಟ್ಟು ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ನಡೆಯಿರಿ, ನಿಮ್ಮ ನೆರೆಹೊರೆಯವರ ಜೊತೆ ಬಾಂಧವ್ಯ ಇಟ್ಟುಕೊಳ್ಳಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ, ಪ್ರಚಾರ ಪ್ರಿಯರಾಗಬೇಡಿ ಎಂದು ಹೇಳುತ್ತಿದ್ದುದು ಈಗಲೂ ನನ್ನ ಕಣ್ಣ ಮುಂದೆ ಇದೆ. ಗುರುಗಳ ಮಾರ್ಗದರ್ಶನದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ನಮನ.  ಗುರುಭ್ಯೋ ನಮಃ.

ಜಿ. ಬಸವೇಶ ಪಾಳ್ಯ
ಕೊಳ್ಳೇಗಾಲ ತಾಲೂಕು

@@@@

87.

ಮಕ್ಕಳಲ್ಲಿ ದೇವರ ಕಂಡ   ಶಿಕ್ಷಣ, ದಾಸೋಹ,ಧಮ೯ದ  ನೆಲೆಯಲ್ಲಿ ಸಾಮಾಜೋಧಾಮಿ೯ಕ ಮೌನ ಕ್ರಾಂತಿ ಮಾಡಿ,        ಮಾಡಿಯೂ ಮಾಡದಂತೆ  ಇದ್ದು ಇಲ್ಲದಂತೆ ಮಾಡಿ     ಶಿವಕೈರಾದ ಸಿದ್ಧಗಂಗಾ ಶ್ರೀಗಳ ಕಾಯ೯ ಇಂದು ಬೆಳಕಾಗಿ ನಿಂತಿದೆ

 ಡಾ.ರೂತಾ ಪ್ರಭುರಾವ್   
 ತಾಲ್ಲೂಕು ಅಧ್ಯಕ್ಷರು ಶರಣು ವಿಶ್ವ ವಚನ ಫೌಂಡೇಷನ್ ಹುಮನಾಬಾದ

@@@@@

88.
ನಾ ಕಂಡಂತೆ ಶ್ರೀಗಳು

ಶ್ರೀಗಳು ಜಾತ್ಯಾತೀತವಾಗಿ ಶಿಕ್ಷಣ, ದಾಸೋಹ ನೀಡಿ ಕಲಿಯುಗದಲ್ಲಿ ನಡೆದಾಡುವ ಬಸವಣ್ಣನವರಾಗಿ ಜನ್ಮ ಎತ್ತಿ ಬಂದವರು ಶ್ರೀ ಶಿವಕುಮಾರರು. ಇಂತಹ ಮಹಾನುಭಾವರನ್ನು ನಾನು ಆರು ಸಲ ದರ್ಶನ ಪಡೆದು ಒಂದು ಸಲ ಶ್ರೀಗಳೊಂದಿಗೆ ಇಷ್ಟಲಿಂಗ ಪೂಜೆ ಮಾಡಿದ್ದು ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಬಹುದಾದ ಕ್ಷಣ. ಒಮ್ಮೆ ಕೆ ಆರ್ ನಗರ ತಾಲ್ಲೂಕು ಮಳಲಿ ಗ್ರಾಮದಲ್ಲಿ ಬಸವಣ್ಣನವರ ನಾಟಕ ಸಮಾರಂಭದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಅವರ ಜೊತೆ ಮಾತನಾಡಿದ್ದು ನಾನು ಯಾವಾಗಲೂ ಮರೆಯಲಾಗದ ಸಂದರ್ಭವಾಗಿದೆ. ಅಂತಹ ಶ್ರೀಗಳು ಬದುಕಿದ ಕಾಲಘಟ್ಟದಲ್ಲಿ ಜೀವಿಸಿದ ನಾವೇ ಧನ್ಯರು.

ಮಹದೇವಪ್ಪ
ತಾಲ್ಲೂಕು ಅಧ್ಯಕ್ಷರು
ಶರಣು ವಿಶ್ವವಚನ ಫೌಂಡೇಷನ್
ಪಿರಿಯಾಪಟ್ಟಣ
@@@@@@@

89.
ಓಂ ಶ್ರೀಗುರು ಬಸವ ಲಿಂಗಾಯ ನಮಃ 

 ನಾವು ಕಾನದ ದೇವರನ್ನು ಮೂರೇ ಅಕ್ಷರಗಳಲ್ಲಿ (ಅಕ್ಷರ ವಸತಿ ದಾಸೋಹ ) ಹುಡುಕಿಕೊಟ್ಟ ನಮ್ಮ  ವಿಶ್ವರತ್ನ  🌏

ನಾವೆಲ್ಲರೂ ನಮಗೆ ತಿಳಿಯದಂತೆ ಜಗತ್ತಿನ ಗುಡಿ ಗುಂಡಾರಗಳನ್ನು ಸುತ್ತಿ, ಕಲ್ಲು ದೇವರಿಗೆ ಕೈಮುಗಿಯುತ್ತಾ , ಮೂಢ ನಂಬಿಕೆಗಳನ್ನು ನಂಬಿ ನಮ್ಮಲ್ಲಿರುವ ಹಣವನ್ನು ,ನಮ್ಮ ಸಮಯವನ್ನು ದೇವರನ್ನು ಹುಡುಕಲು ಕಳೆದಿದ್ದೆ ಆಯ್ತು .

ಆದರೆ ಒಂದು ವಿಶ್ವರತ್ನ ಮರದ ಮರೆಯಲ್ಲಿ ದೇವರನ್ನು ಕಾಣುವ ಸುಲಭ ಮಾರ್ಗವನ್ನು ಮೂರು ಅಕ್ಷರಗಳಲ್ಲಿ ಕಂಡು ಹಿಡಿದು ಅದನ್ನು ಕರ್ನಾಟಕದ ತುಮಕೂರಿನ ಸಿದ್ದಗಂಗಾ ಮಠದಿಂದ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸಲ್ಲಬೇಕಾಗಿದ್ದು ನಮ್ಮೆಲ್ಲರ ಪ್ರೀತಿಯ ವಿಶ್ವರತ್ನ
🙏🏻ಶ್ರೀ ಶಿವಕುಮಾರ ಸ್ವಾಮಿಗಳಿಗೆ🙏🏻.

ಇಂಥ ಒಂದು ಮಹಾನ್ ವ್ಯಕ್ತಿತ್ವದ ಸ್ವಾಮಿಗಳಾದ ಇವರು ಯಾರಿಗೂ ಕೆಟ್ಟದ್ದನ್ನು ಬಯಸದೇ ಪ್ರೀತಿಯಿಂದ ವಿದ್ಯೆ ದಾಸೋಹ ವಸತಿಯನ್ನು ಕಲ್ಪಿಸುವುದರ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಮಾರ್ಗದರ್ಶಕರಾಗಿ ೧೧೨ ವರ್ಷ ಸರಳ ಜೀವನವನ್ನು ನಡೆಸುತ್ತಾ ದೇಶದ ಅಭಿವೃದ್ಧಿಯಲ್ಲಿ ಕೂಡ ಇವರ ಪಾತ್ರ ಮಹತ್ವದ್ದಾಗಿದೆ.

ನನಗೆ ಮತ್ತು ನನ್ನ ದೇಶದ  ಜನತೆ ನಮ್ಮ ಕರ್ನಾಟಕದ ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದವಿರಲಿ ಎಂದು ಆ ಮೂರು ಅಕ್ಷರದ ದೇವರನ್ನು ನಾನು ಕೇಳಿಕೊಳ್ಳುತ್ತೇನೆ.

ನನ್ನ ಪ್ರೀತಿಯ ಬಂಧುಗಳೇ ಈಗಲಾದರೂ ಎದ್ದೇಳಿ ನಮ್ಮ ಗುರುಗಳು ಕಲಿಸಿದ ಮೂರು ಅಕ್ಷರಗಳನ್ನು  (ಅಕ್ಷರ ವಸತಿ ದಾಸೋಹ ) ಪಾಲಿಸುವ ಕೆಲಸವನ್ನು ಮಾಡೋಣ.ಮೂಢನಂಬಿಕೆಯನ್ನು ತೊಳೆದು ಹಾಕಿ, ಗುಡಿ ಗುಂಡಾರಗಳಿಗೆ ಸುತ್ತುವ ಬದಲು , ಕಲ್ಲು ದೇವರಿಗೆ ಕೈ ಮುಗಿಯುವ ಬದಲು ,ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವ ಬದಲು ನಾವೆಲ್ಲರೂ ಒಂದಾಗಿ ಶರಣ ಸಂಸ್ಕೃತಿಯನ್ನು  ವಚನ ಸಾಹಿತ್ಯದಂತೆ ಪ್ರತಿಯೊಬ್ಬರಿಗೂ ಕೂಡ ತಿಳಿಸಿ ಕೊಡುವ  ಜವಾಬ್ದಾರಿ ನಮ್ಮ ಮೇಲೆ ಇದೆ. ಇದೇ ನಾವುಗಳು ನಮ್ಮ  ದೇವರಿಗೆ ಸಲ್ಲಿಸುವ ನಮನ.

ನಮ್ಮ ಜೀವನದಲ್ಲಿ ೧೧೨ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ದೇವರಿಗೆ ನಮನವನ್ನು ಸಲ್ಲಿಸಬೇಕಾಗಿದೆ .

ನಮ್ಮ ಬದುಕಿನಲ್ಲಿ ಈಗಲಾದರೂ ಅಕ್ಷರ ವಸತಿ ದಾಸೋಹ ಮಾಡುತ್ತಾ ಒಬ್ಬರಿಗೊಬ್ಬರು ಪ್ರೀತಿ ಪಾತ್ರರಾಗಿ ಶರಣ ಸಂಸ್ಕೃತಿಯನ್ನು ಬೆಳೆಸುತ್ತಾ ಮುಂದೆ ಸಾಗೋಣ.
💐 ಶ್ರೀಗಳೇ ನಿಮ್ಮನ್ನು ಕಳೆದುಕೊಂಡು ನಾವುಗಳು ಬಡವರಾಗಿದ್ದೇವೆ ಆದರೆ ನೀವು ತಿಳಿಸಿಕೊಟ್ಟ ಮೂರು ಅಕ್ಷರಗಳಿಂದ ನಾವು ಜೀವನದ ಸಾರ್ಥಕತೆಯನ್ನು ತಿಳಿದುಕೊಂಡಿದ್ದೇವೆ ನಿಮಗೆ ನನ್ನದೊಂದು ಶರಣು ಶರಣಾರ್ಥಿ.

ಅನಿಲಕುಮಾರ  ವಾಜ೦ತ್ರಿ 
ಜಿಲ್ಲಾ ಅಧ್ಯಕ್ಷರು ಮೈಸೂರು 
🌏ಶರಣು ವಿಶ್ವವಚನ ಫೌಂಡೇಶನ್ 🌏

@@@@@@

90.
ಧರ್ಮದೆಡೆ ನಡೆಯನ್ನು ತೋರಿದ ಶ್ರೀಗಳ ಮೇಲಿನ ಭಕ್ತಿ.

    ಹನ್ನೆರಡನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಈ ಶತಮಾನ ಕಂಡ ತೇಜೋ ಪುರುಷ ಶ್ರೀ ಸಿದ್ದಗಂಗಾ ಶ್ರೀಗಳಿಗೆ ೧೦೮ನೇ ವರ್ಷದ ಸಂದರ್ಭದಲ್ಲಿ ನನ್ನ ಜೀವಮಾನ ನೆನಪಿನಲ್ಲಿರುವಂತಹ ಕಾಣಿಕೆಯನ್ನು ನೀಡುವ ಹಂಬಲ ನನ್ನಲ್ಲಿತ್ತು, ಆಡಂಬರದ ಆಚರಣೆಗಿಂತ ಶ್ರೀಗಳ ಕಾಯಕದ ಯಾವುದಾದರೊಂದು ಕಣವನ್ನು ನನ್ನ ಬದುಕಿನುದ್ದಕ್ಕೂ ಜೀವಂತವಾಗಿಡುವ ಹಂಬಲ, ಅವರ ಮೇಲಿರುವ ಅಪಾರ ಭಕ್ತಿಗೆ ಪೂರಕವಾಗಿ ಕಾಯಕದ ಶಾಶ್ವತ ಸಂಕಲ್ಪವನ್ನು ತೊಟ್ಟು, ಎನ್ನ ಆರಾಧ್ಯ ದೈವ ತ್ರಿವಿಧ ದಾಸೋಹಿ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಾದದೊಂದಿಗೆ ನಾನು ಸ್ವಾಮೀಜಿಯವರ ಜನ್ಮದಿನದ ಕಾಣಿಕೆ ಸಮರ್ಪಣೆ ಹಾಗೂ ಅದರ ನೆರಳಿನ ರಕ್ಷಣೆ ಮಾಡುವ ದೃಢಸಂಕಲ್ಪವನ್ನು, ಶ್ರೀಗಳ ೧೦೮ನೇ ಜನ್ಮದಿನ ನನ್ನನ್ನು ಕ್ರಿಯಾಶೀಲನನ್ನಾಗಿ ಮಾಡಿತು. ಎಲ್ಲಾ ಭಕ್ತರು ನೀಡುವ ಕಾಣಿಕೆಗಿಂತ ವಿಶಿಷ್ಟವಾದ ಆಲೋಚನೆ ಮಾಡಿದ ಮನಸ್ಸು, ಧನ,ದವಸ ಧಾನ್ಯಗಳನ್ನು,ನೀಡಿ ಭಕ್ತರು ತಮ್ಮಭಕ್ತಿಯನ್ನು ಸಮರ್ಪಿಸುತ್ತಾರೆ.  ಆದರೆ " ಗುರುವಿಗೆ ಗುಲಾಮನಾಗುವ ತನಕ ದೊರೆಯದಯ್ಯ ಮುಕುತಿ" ಎಂಬ ನುಡಿಯಂತೆ, ನಾನು ನನ್ನ ಗುರುವಿಗೆ ವಿಶಿಷ್ಟ ಭಕ್ತಿ ಸಮರ್ಪಣೆ, ಬಯಕೆಯು ನನ್ನನ್ನು 12ನೆಯ ಶತಮಾನದ ಶರಣ ಹರಳಯ್ಯ ದಂಪತಿಗಳನ್ನು ನೆನೆಯುವಂತೆ ಮಾಡಿತು,  ತನ್ನ ತೊಡೆಯ ಚರ್ಮ ವನ್ನೆ ಕಿತ್ತು ಬಸವಣ್ಣನವರಿಗೆ ಪಾದರಕ್ಷೆಯನ್ನು ಮಾಡಿಕೊಟ್ಟಿದ್ದ ಹರಳಯ್ಯ ದಂಪತಿಗಳು ಆದರ್ಶ ಶರಣ ತತ್ವಕ್ಕೆ ಬೆಳಕು ತುಂಬಿತು.  ಎನ್ನೊಡಯನಲ್ಲಿರು ಭಕ್ತಿಯ ರಕ್ಷೆಯನ್ನು ಕ್ರಿಯಾತ್ಮಕವಾಗಿಡುವ ಮಹದಾಸೆಯಿಂದ,  ಬಸವಣ್ಣನವರ ಜನ್ಮ ಸ್ಥಳ ಬಸವನ ಬಾಗೇವಾಡಿಯಿಂದ ಸುಮಾರು 464 ಕಿಲೋಮೀಟರ್ ಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ,ತುಮಕೂರಿನ  ಸಿದ್ದಗಂಗಾ ಮಠದ ವರೆಗೂ ಪಾದುಕೆಗಳನ್ನು ತಲೆ ಮೇಲೆ ಹೊತ್ತು ಒಂದು ದಿನಕ್ಕೆ 35 40 ಕಿಲೋಮೀಟರ್ ಪಾದಯಾತ್ರೆ ಮಾಡಿ, ಸುಮಾರು 13 ದಿವಸಗಳ ಪಾದಯಾತ್ರೆಯ ಮೂಲಕ ಗುರುವಿನ ಪಾದ ಪೂಜೆ ಮಾಡಿ ಕುಟುಂಬ ಸಹಿತವಾಗಿ ಗುರುವಿಗೆ ಸಮರ್ಪಿಸಿದೆ. ಆ ಸಮರ್ಪಿಸಿದ ಕ್ಷಣ ನನ್ನ ಜೀವನದ ತುಂಬಾ ಅಮೃತ ಕ್ಷಣ.  ನನ್ನ ಆರಾಧ್ಯ ದೈವ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಂದ ಆ ಪಾದುಕೆಗಳ ನಿತ್ಯ ಪೂಜೆ ನನಗೆ ಒಂದು ಶಕ್ತಿಯನ್ನು ನೀಡಿ ಕಾಯಕ ನಿಷ್ಠೆ ಗಿಂತ ಬೇರೊಂದು ಶಕ್ತಿ ಜಗತ್ತಿನಲ್ಲಿ ಇಲ್ಲ ಎಂಬ ಭಾವನೆಯನ್ನ ಮೂಡಿಸಿದೆ, ಇತಿಹಾಸದಲ್ಲಿ ಓದಿದ ಕೇಳಿದ ಶರಣರು, ಸಂತರನ್ನು, ನಿಜ ಶರಣ ಶ್ರೀ ಶಿವಕುಮಾರಸ್ವಾಮಿಗಳಲ್ಲಿ ನೋಡಿದೆ ಎನ್ನುವ ಭಾವ ನನ್ನದು. ಆ ಪಾದರಕ್ಷೆಗಳನ್ನು ಅರ್ಪಿಸಿದ ಕ್ಷಣ ಮಾತ್ರ ವರ್ಣನೆಗೆ ನಿಲುಕದ್ದು.
  ಜಗದೀಶ್ ಜಂಗಮ.......✍
ಅಧ್ಯಕ್ಷರು
ಜಂಗಮ ಫೌಂಡೇಶನ್
ಬೆಂಗಳೂರು.
@@@@@@@

91.

ನಾನು ಕಂಡಂತೆ ಪೂಜ್ಯರು
       ಇವ ನಮ್ಮವ ಎಂಬ ಗುರು ಬಸವತತ್ವ ನಿಷ್ಟರಾಗಿ,ಸಮಾನತೆಯ ಮೇರು ಶಿಖರವಾದರು. ಹತ್ತು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ,ಸಾವಿರಾರು  ಮಂದಿ ಶಿಕ್ಷಕರ ಬಾಳಿನ  ಜ್ಯೋತಿಯಾಗಿ ಶ್ರೀ ಸಿದ್ದಗಂಗಾ ಕ್ಷೇತ್ರವು ಗುಪ್ತರ ಕಾಲದ ನಳಂದ ವಿಶ್ವವಿದ್ಯಾಲಯವನ್ನು ನೆನಪಿಸುವಂತೆ ಮಾಡಿದ ಶ್ರೀಗಳು ಸುದ್ದಿಗಾಗಿ ಸಾಧನೆ ಮಾಡಲಿಲ್ಲ ಸಾಧನೆ ಮಾಡಿ ಸುದ್ಧಿಯಾದ  ಭರತಖಂಡದ ಅತ್ಯಂತ ಹಿರಿಯ ಬಸವಸಂತರು .ಅಲ್ಲದೆ ಶ್ರೀಗಳು ಲಿಂಗೈಕ್ಯರಾದ ದಿನದಿಂದ ಕ್ರಿಯಾವಿಧಿಯವರೆಗೆ ಸುಮಾರು ಮೂವತ್ತು ಲಕ್ಷದಷ್ಟು ಭಕ್ತರು ಪ್ರಸಾದ ಸೇವನೆ ಮಾಡಿರುವುದನ್ನು ನೋಡಿದರೆ ,ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂಬ ಬಸವಯೋಗಿ ಸಿದ್ದರಾಮೇಶ್ವರರ ವಚನವನ್ಶು ನೆನಪಿಸುತ್ತದೆ.ಸಕಲ ಜೀವಾತ್ಮರಿಗೆ ಲೇಸ ಬಯಸಿದ ಬಸವರಸರಂತೆ ಪೂಜ್ಯರೂ ಕೂಡ ಮಠದ ಆವರಣದಲ್ಲಿ ಓಡಾಡುತ್ತಾ ಆಕಳಎಳೆಗರುಗಳ ಮೈ ಸವರಿ ಮುದ್ದಾಡುತ್ತಿದ್ದುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಈ ಶತಮಾನದಲ್ಲಿಇಂತಹ ತ್ಯಾಗಮೂರ್ತಿಯ ಜೊತೆಯಲ್ಲಿಹಲವಾರು ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ನಿರೂಪಣೆ ಮಾಡಿ ಆಶೀರ್ವಾದ ಪಡೆದ ನಾನು ಧನ್ಯಳು.ಜೈ ಗುರು ಬಸವೇಶ ಹರಹರ ಮಹಾದೇವ.ಶರಣೂ ಶರಣಾರ್ಥಿಗಳು.

 ಬಸವಶರಣೆ 
ಸುಜಾತಮೇಲೆಗೌಡ.
ಉಪನ್ಯಾಸಕರು.ಆನಂದ ಪ.ಪೂ.ಕಾಲೇಜು.ಯಶವಂತಪುರ ಬೆಂ.20.

@@@@@@

92.

ನಾವು ಕಂಡ ಪೂಜ್ಯ ಶ್ರೀಗಳು ನಡೆದುಬಂದ ದಾರಿ 

ಬೆಳಗಿನ ಇಬ್ಬನಿಯು
ಸೂರ್ಯನ ತಾ ಕರೆದು
ಕಿರಣವನು ಬಿಂಬಿಸುತಾ
ಕರಗುವುದ ಮರೆಯುವುದು
ಅಂದರೆ ಸೂರ್ಯನ ಕಿರಣವನು ಕರಗುವ ಇಬ್ಬನಿಯು ಹೇಗೆ ಬಿಂಬಿಸುತ್ತದೆಯೊ ಹಾಗೆ ಶ್ರೀ ಗಳು ತಮ್ಮನ್ನು ತಾವು  ಕಾಯ ವಾಚಾ ಮನಸಾ ನೆಚ್ಚಿನ ಗುರುಗಳ ಅಜ್ಞಾನುಸಾರ ಅಂದು ಜೋಳಿಗೆ ಹಿಡಿದು ಹಚ್ಚಿದ ದಾಸೋಹದ ಜ್ವಾಲೆ ಇಂದಿಗೂ ಕೂಡ ನಿಲ್ಲದೆ ಸದಾಕಾಲ ಶ್ರೀ ಮಠಕ್ಕೆ ಬರುವ ಭಕ್ತರ ಹಾಗು ಮಠದಲಿರುವವರನ್ನು ಸೇರಿ ಮಕ್ಕಳ ದಾಸೋಹದ ಕಾಯಕವು ಹಗಲಿರುಳೆನ್ನದೆ  ತ್ರಿವರ್ಣ ಧ್ವಜದಂತೆ ಭಾರತದ ಕೀರ್ತಿ ಪಥಾಕೆಯನ್ನು ಎತ್ತಿ ಹಿಡಿದಿದೆ. ಹಾಗೆಯೇ ಅರಿವು ಮತ್ತು ಆಶ್ರಯವು ಸದಾಕಾಲ ಸೂರ್ಯನ ಕಿರಣದಂತೆ ಪ್ರಕಾಶಿಸುತ್ತ ಬಂದಿದೆ.ಶ್ರೀ ಗಳು ತಮಗರಿವಿಲ್ಲದಂತೆಯೆ ತಮ್ಮೊಳಗಿನ ಸಹನೆ ಮತ್ತು ತಾಳ್ಮೆಯಿಂದ ಶ್ರೀ ಮಠದಲ್ಲಿ ನಡೆದಾಡುವ ದೇವರಾಗಿ ವಿಶ್ವದ ಎರಡನೆಯ ಕಲಿಯುಗ ಬಸವಣ್ಣನವರಾಗಿ ಸದಾಕಾಲ ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಗೂಂಡಿದ್ದಾರೆ.ಶ್ರೀಗಳ ಮನಸ್ಸು ಮತ್ತು ಕಾಯಕವು ಸಿದ್ದಗಂಗೆಯಹಾಗೆ ಪರಿಶುದ್ಧ . ಶ್ರೀ ಗಳ ಪಾದಸ್ಪರ್ಶ ಪಡೆದ ನಾವೆ ಧನ್ಯ.
ಜೈ ಗುರು ಬಸವಲಿಂಗಾಯ ನಮ:

ಶರಣ ರಾಜಶೇಖರ್ ಹೆಚ್ ಎಂ
ಟ್ಯಾಕ್ಸಿ ಚಾಲಕರು 
 ಹಾಡ್ಯ ಗ್ರಾಮ 
ಮಂಡ್ಯ ತಾಲ್ಲೂಕು 

ಮಂಡ್ಯ ಜಿಲ್ಲೆ

@@@@@@

93.
ಜಗದೀಶ ಬಸವರಾಜ. ಮೇತ್ರಿ
ಸಹಶಿಕ್ಷಕರು
ಜಮಖಂಡಿ,
ಬಾಗಲಕೋಟೆ  ಜಿಲ್ಲೆ

@@@@
94.

@@@

95.

@@@@@@

96.

@@@@

97.

@@@@

98.

@@@@@

99.

@@@@

100.



@@@


No comments:

Post a Comment