ಮೈಸೂರು : ಬಸವಣ್ಣನವರು ಅರ್ಥಶಾಸ್ತ್ರದ ನಿಜವಾದ ಪಿತಾಮಹ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಬಸವ ಬಳಗ ಸೇವಾಟ್ರಸ್ಟ್ ಬೋಗಾದಿಯ ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಬಸವಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ೧೮ನೇ ಶತಮಾನದಲ್ಲಿ ಅರ್ಥಶಾಸ್ತ್ರ ಪಿತಾಮಹ ಎಂದು ಕರೆಯಲ್ಪಡುವ ಆಡಂಸ್ಮಿತ್ ಅರ್ಥಶಾಸ್ತ್ರ ಎಂದರೆ ಸಂಪತ್ತನ್ನು ಅರಿಯುವ ಶಾಸ್ತ್ರ ಎಂದನು. ೧೯ನೇ ಶತಮಾನದಲ್ಲಿ ಪ್ರೊ. ಮಾರ್ಷಲ್ ಅರ್ಥಶಾಸ್ತ್ರ ಕೇವಲ ಸಂಪತ್ತು ತಿಳಿಯುವುದು ಮಾತ್ರವಲ್ಲದೇ, ಗಳಿಸಿದ ಸಂಪತ್ತು ಮಾನವ ಕಲ್ಯಾಣಕ್ಕೆ ಉಪಯೋಗವಾಗಬೇಕು ಎಂದನು. ಆದರೆ ಈ ಅರ್ಥಶಾಸ್ತ್ರಜ್ಞರಿಗಿಂತ ೭೦೦ ವರ್ಷಗಳ ಹಿಂದೆಯೇ ಬಸವಣ್ಣನವರು ದುಡಿದು ಉಣ್ರೀ, ಉಳಿದಿದ್ದರಲ್ಲಿ ಸ್ವಲ್ಪ ಸಮಾಜಕ್ಕೆ ಹಂಚ್ರಿ ಎಂದರು. ಕಾಯಕ ಮತ್ತು ದಾಸೋಹ ತತ್ವವನ್ನು ವಿಶ್ವಕ್ಕೆ ಪ್ರಥಮ ಬಾರಿಗೆ ಕೊಡುಗೆಯಾಗಿ ನೀಡಿದ ಬಸವಣ್ಣನವರು ಶ್ರೇಷ್ಠ ಅರ್ಥಶಾಸ್ತçಜ್ಞರಲ್ಲಿ ಮೊದಲಿಗರು. ಮನುಷ್ಯ ತನು, ಮನ ಮತ್ತು ಭಾವ ಶುದ್ಧಿಯಿಂದ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ. ಅದಕ್ಕಾಗಿ ಬಸವಣ್ಣನವರು ತನು ಶುದ್ಧಿಗಾಗಿ ಕಾಯಕ, ಮನಶುದ್ಧಿಗಾಗಿ ಇಷ್ಟಲಿಂಗ ಮತ್ತು ಭಾವ ಶುದ್ಧಿಗಾಗಿ ದಾಸೋಹವನ್ನು ಸ್ವತಃ ತಾವು ಅನುಷ್ಟಾನ ಮಾಡಿ ನಂತರ ಇತರರಿಗೆ ಆಚರಿಸಲು ಕರೆ ನೀಡಿದರು ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಯಶಂಕರ್ ಬದನಗುಪ್ಪೆ ಮಾತನಾಡಿ ೧೨ನೇ ಶತಮಾನದ ದಾಸೋಹ ಪರಿಕಲ್ಪನೆ, ಸಮಾನತೆ, ಸೌಹಾರ್ಧತೆ, ಸ್ತ್ರೀ ಸ್ವಾತಂತ್ರ್ಯ, ಸರ್ವರಿಗೂ ಶಿಕ್ಷಣ ಎಂಬ ಪರಿಕಲ್ಪನೆ ಒಳಗೊಂಡ ವಚನ ಚಳುವಳಿ ಸಂವಿಧಾನಕ್ಕೆ ಭದ್ರ ತಳಹದಿ ಹಾಕಿಕೊಟ್ಟಿತು ಎಂದರು.
ಇದೇ ಸಂದರ್ಭದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ೨೬೩ನೇ ರ್ಯಾಂಕ್ ಪಡೆದ ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ರೈತ ಕುಟುಂಬದ ಎ.ಸಿ ಪ್ರೀತಿ ಹಾಗೂ ಸಂಗೀತದಲ್ಲಿ ಚಿನ್ನದ ಪದಕ ಪಡೆದ ಜೆ ಆರ್ ಅನುಷಾ ನಟೇಶ್ ಅವರನ್ನು ಅಭಿನಂದಿಸಲಾಯಿತು.
ನಂತರ ೨೦೨೪-೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ೨೧ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಿ. ನರಸೀಪುರ ತಾ. ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಬಸವರಾಜು, ಖಜಾಂಚಿ ಪ್ರೊ. ವಿಶ್ವನಾಥ್, ಉಪನ್ಯಾಸಕ ಮೂಗೂರು ನಟರಾಜ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


No comments:
Post a Comment