🙏ಓಂ ಶ್ರೀ ಗುರುಬಸವಲಿಂಗಾಯ ನಮಃ🙏
✍ಶ್ರೀ ಸಿದ್ಧಲಿಂಗ ಶಿವಯೋಗಿಗಳ ವಚನ✍
ನಿರವಯಂ ನಿರಾಮಯಂ ನಿರಾಕುಳಂ
ನಿರ್ದ್ವಂದ್ವಂ ನಿರ್ಮಳ ನಿಜಸ್ವರೂಪಂ
ನಿರ್ಭಾವ ನಿಃಪುರುಷ ನಿರಂಜನ ನಿರಾಕಾರಂ
ನಿರಾವರಣ ನಿರುಪಮ ನಿರ್ಗುಣ ನಿರಾಧಾರ ನಿರಾಲಂಬಂ
ಸರ್ವಾಧಾರ ಸದಾಶಿವಂ ಆತ್ಯತಿಷ್ಠದ್ದಶಾಂಗುಲಂ ನಿತ್ಯನಿಶ್ಚಿಂತಂ
ನಿರ್ಮಲ ನಿರ್ಮಾಯ ನಿರಾಳಕಂ
ಹರ ಹರಾ ಶಿವಶಿವಾ ಜಯ ಜಯ ಜಯತು
ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ
ತಾತ್ಪರ್ಯ
ಸಿದ್ಧಲಿಂಗಯತಿಗಳು ಪರಶಿವನ ಸ್ವಭಾವವನ್ನು ಸ್ತುತಿಸುತ್ತಿದ್ದಾರೆ.ಪರಶಿವ ನಿರವಯ ಅಂದರೆ ಅವನಿಗೆ ಯಾವ ಅಂಗಗಳೂ ಇಲ್ಲ.
ನಿರಾಮಯ ಅಂದರೆ ಯಾವ ವ್ಯಾಧಿಯೂ ಇಲ್ಲದವನು. ನಿರಾಕುಳ ಅಂದರೆ ವ್ಯಾಕುಲವೂ ಇಲ್ಲದವನು. ಇರುವವನು ಅವನೊಬ್ಬನೇ ಆದುದರಿಂದ ಅವನು ನಿರ್ದ್ವಂದ್ವ, ನಿರ್ಮಲ ಅಂದರೆ ಪವಿತ್ರನಾದವನು. ನಿಜಸ್ವರೂಪ ಅಂದರೆ ಮೂಲದಲ್ಲಿ ಪ್ರಣವಸ್ವರೂಪಿಯಾದವನು. ನಿರ್ಭಾವ ಅವನು ಪುರುಷನಲ್ಲ. ಏಕೆಂದರೆ ಸಾಂಖ್ಯ ಮತ್ತು ಯೋಗದರ್ಶನಗಳ ಪ್ರಕಾರ ಪುರುಷ ಎಂದರೆ ಪ್ರತ್ಯೇಕ ಆತ್ಮ, ಜೀವಭಾವ ಉಳ್ಳ ಆತ್ಮ. ಪರಶಿವ ಜೀವಾತ್ಮನಲ್ಲ ನಿರಂಜನ; ಅವನಿಗೆ ಯಾವುದೇ ಸ್ಪಷ್ಟ ಆಕಾರವಿಲ್ಲದುದರಿಂದ ಅವನು ನಿರಾಕಾರ; ಅವನನ್ನು ಆವರಿಸಿಕೊಳ್ಳುವಷ್ಟು ವಿಶಾಲವಾದುದು ಏನೂ ಇಲ್ಲವಾದುದರಿಂದ ಅವನು ನಿರಾವರಣ; ಅವನನ್ನು ಹೋಲುವ ಮತ್ತೊಬ್ಬ ವ್ಯಕ್ತಿ ಇಲ್ಲವಾದುದರಿಂದ ಅವನು ನಿರುಪಮ; ಅವನು ನಿರ್ಗುಣ; ಅವನಿಗೆ ಯಾವ ಆಧಾರವೂ ಇಲ್ಲ, ಅವನು ಏನನ್ನೂ ಅವಲಂಬಿಸಿಲ್ಲವಾದುದರಿಂದ ಅವನು ನಿರಾಧಾರ, ನಿರಾಲಂಬ; ಅವನೇ ಎಲ್ಲದಕ್ಕೂ ಆಧಾರ; ಒಳಿತಿನ ಮೂರ್ತಿ; ಎಲ್ಲವನ್ನೂ ಮೀರಿದವನು; ಅವನಿಗೆ ಯಾವ ಚಿಂತೆಯೂ ಇಲ್ಲ; ಮಾಯೆಗೆ ಒಳಗಾಗದವನು; ಪ್ರಾಕೃತಿಕ ಗುಣಗಳಿಲ್ಲದವನು.
☘ತಾತ್ಪರ್ಯ ಕೃಪೆ: ಡಾ. ಎನ್ ಜಿ ಮಹಾದೇವಪ್ಪ☘
.................
No comments:
Post a Comment