ಭಾಲ್ಕಿ ಶ್ರೀಗಳಿಗೆ 70 ನೇ ಜನುಮದಿನದ ಶುಭಾಶಯಗಳು
ಶರಣ ಸಾಹಿತ್ಯ ಚಟುವಟಿಕೆ ಪ್ರೋತ್ಸಾಹಿಸಿ ಶರಣು ವಿಶ್ವವಚನ ಫೌಂಡೇಷನ್ ಚಟುವಟಿಕೆಗಳ ವಿಸ್ತಾರಕ್ಕೆ
ಕೊಡುಗೆ ನೀಡಿದ ಭಾಲ್ಕಿ ಶ್ರೀಗಳ ಮಾತೃಹೃದಯ ನಿಜವಾಗಿಯೂ ಪ್ರತಿಯೊಬ್ಬರಿಗೂ ಅನುಕರಣೀಯ
ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು , ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು ಕೆಳದೇ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ,ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯಾರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ .ಎಂ.ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.
ನಡೆದಾಡುವ ದೇವರು, ನಿಜಾಮನ ಕಾಲದಲ್ಲಿ 1936 ರಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಪ್ರಸಾರ ಮಾಡಿದವರು. ಉರ್ದು ಬೋರ್ಡು ಹಾಕಿ, ಕನ್ನಡ ಕಲಿಸಿದವರು. ‘ಕನ್ನಡದ ಮಠ ‘ ಕನ್ನಡದ ಪಟ್ಟದೇವರೆಂದೇ ಖ್ಯಾತನಾಮ ಪಡೆದವರು.ತಮ್ಮ ಆಯುಷ್ಯದುದ್ದಕ್ಕೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಬೆಳೆಸಿದವರು. ಸಾವಿರ ಸಾವಿರ ಸಂಖ್ಯೆಯ ಕುಟುಂಬಗಳು ಅಪ್ಪಗಳನ್ನು ನೆನೆಸುತ್ತಾ ಶಾಂತಿವರ್ಧಕ ಸಂಸ್ಥೆಯಲ್ಲಿ ಆಶ್ರಯ ಪಡೆದಿರುತ್ತಾರೆ. ಬಸವಕಲ್ಯಾಣದ ನೂತನ ಅನುಭವ ಮಂಟಪ ಸ್ಥಾಪಕರೂ ಆಗಿದ್ದಾರೆ. ಕರ್ನಾಟಕದ ಯಾವ ಸರ್ಕಾರ , ಯಾವ ಮಠಗಳು ಬಸವಕಲ್ಯಾಣದ ಕಡೆ ಮುಖ ಮಾಡದಿದ್ದಾಗ , ಭಾಲ್ಕಿ ಮಠದಿಂದ ಪಾದಯಾತ್ರೆ ಮೂಲಕ ಬಸವಕಲ್ಯಾಣಕ್ಕೆ ಹೋಗಿ ಅನುಭವ ಮಂಟಪ ಸ್ಥಾಪಿಸಿ ನಾಡಿನ ಗಮನ ಸೆಳೆದವರು. ಆ ಕಾಲದಲ್ಲಿ ದಲಿತರಿಗೆ ಲಿಂಗದೀಕ್ಷೆ ನೀಡಿ , ಮಠದಲ್ಲಿ ಕರೆಯಿಸಿ ಬಾವಿ ಮುಟ್ಟಿಸಿದ್ದು ಇಂಥ ಹತ್ತಾರು ಕಾರ್ಯಮಾಡಿದವರು . ಎಲ್ಲಕ್ಕಿಂತ ಹೆಚ್ಚಾಗಿ ಶ್ರೀ ಮಠಕ್ಕೆ ಸಮರ್ಥ ಉತ್ತರಾಧಿಕಾರಿಯಾಗಿ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರನ್ನು ಗುರುತಿಸಿ ನಮಗೆ ಬಿಟ್ಟು ಹೋದದ್ದು ದೊಡ್ಡ ಅಪ್ಪಗಳ ಬಹುದೊಡ್ಡ ಕೊಡುಗೆ.
ಇಂದು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರುರವರ 70 ನೇ ಜನುಮದಿನ ಅವರ ಸಂಕ್ಷಿಪ್ತ ಪರಿಚಯ
ಮೃದು ಸ್ವಭಾವದವರು , ದಯೆ ಪ್ರೀತಿಯುಳ್ಳವರು. ಕಷ್ಟ ಕಾರ್ಪಣ್ಣ್ಯದಲ್ಲಿದ್ದವರನ್ನು ನೋಡಿ ಕರಗುವವರು , ಅವರ ಹೃದಯ ತಾಯಿ ಹೃದಯವಾಗಿದೆ. ಅನೇಕ ನೊಂದ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅವರ ಸರ್ವಸ್ವವೇ ಆಗಿದ್ದಾರೆ. ಇತರರ ದುಃಖ ನೋಡಿದ ಕೂಡಲೇ ತಮ್ಮ ಕಣ್ಣಲ್ಲೆ ನೀರುಬರುವುದು. ಅಷ್ಟೊಂದು ಸರಳ ಸಹಜ ವ್ಯಕ್ತಿತ್ವವುಳ್ಳ ಪೂಜ್ಯರು ರಾತ್ರಿಯನ್ನದೇ ಹಗಲು ಮಾಡಿ ದುಡಿಯುತ್ತಿರುವರು. ಪೂಜೆಯೇ ಕಾಯಕ ಮಾಡಿಕೊಂಡವರಲ್ಲ. ಕಾಯಕವೇ ಲಿಂಗಪೂಜೆ ಎಂದು ಶ್ರಮಪಟ್ಟವರು . ಕಷ್ಟಕಾರ್ಪಣ್ಯವನ್ನು ಮೆಟ್ಟಿ ನಿಂತು ಭಾಲ್ಕಿಮಠವನ್ನು ಸರ್ವತೋಮುಖ ಅಭಿವ್ರದ್ಧಿಪಡಿಸಿದ್ದಾರೆ . ಜನತೆಯತ್ತ ಮಠ ತೆಗೆದುಕೊಂಡು ಹೋಗಿದ್ದಾರೆ. ಜನರ ಮಠ ಸಮಾಜದ ಮಠವಾಗಿಸಿದ್ದಾರೆ. ಸ್ವಾವಲಂಬಿಯಾಗಿ ಸ್ವತಂತ್ರ ಮಠವಾಗಿಸಿದ್ದಾರೆ, ಹತ್ತು ಹಲವು ರೀತಿಯ ಕಾರ್ಯಗಳನ್ನು ಮಾಡಿದ್ದಾರೆ.
ಪೂಜ್ಯ ಶ್ರೀಗಳು ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಅಂತರರಾಷ್ಟ್ರೀಯ ಅಂತರ್ಜಾಲ
ಸರಣಿ ಪ್ರವಚನದಲ್ಲಿ ಎಂಟನೇ ಪ್ರವಚನಕಾರರಾಗಿ ಭಾಗವಹಿಸಿ ತ್ರಿವಿಧ ನಿಷ್ಠೆಗಳಾದ ಬಸವನಿಷ್ಠೆ, ವಚನ
ನಿಷ್ಠೆ ಮತ್ತು ಲಿಂಗ ನಿಷ್ಠೆಯ ಬಗ್ಗೆ ಪ್ರವಚನ ನೀಡಿದ್ದಾರೆ. ಅದಾದ ಒಂದೇ ವಾರದಲ್ಲಿ ಶರಣು ವಿಶ್ವವಚನ
ಫೌಂಡೇಷನ್ ಚಟುವಟಿಕೆಗಳನ್ನು ಗಮನಿಸಿ ಶರಣ ಸಾಹಿತ್ಯ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಸಂಸ್ಥೆಗೆ
ಆಶೀರ್ವಾದದ ಚೆಕ್ ನೀಡಿ ಪ್ರೋತ್ಸಾಹಿಸಿದ ಗುರುಗಳ ಮಾತೃಹೃದಯಕ್ಕೆ ನಾವು ಸದಾ ಕಾಲ ಸ್ಮರಿಸುವಂತೆ ಮಾಡಿತು.
ಶ್ರೀಗಳು ನೂರಾರು ವರ್ಷ ಬಾಳಿ ಬಸವ ತತ್ವವನ್ನು ವಿಶ್ವಮಾನ್ಯವಾಗಿ ಮಾಡಲು ನಮ್ಮಂತಹ ಲಕ್ಷಾಂತರ
ಭಕ್ತರನ್ನು ಸೃಷ್ಟಿಸಲು ಬಸವಾದಿ ಪ್ರಮಥರು ಶಕ್ತಿಯನ್ನು ಕರುಣಿಸಲಿ ಎಂದು ಆ ಸೃಷ್ಟಿಕರ್ತನಲ್ಲಿ ಬೇಡಿಕೊಳ್ಳುತ್ತೇನೆ.
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು

ಶರಣು ಶರಣಾರ್ಥಿಗಳು ಸ್ವಾಮಿಜಿಗಳಿಗೆ , ತುಂಬಾ ತುಂಬಾ ಒಳ್ಳೆಯ ಕಾಯಕ ಮಾಡುತ್ತಿದ್ದಾರೆ.... ಅವರನ್ನು ನಾವುಗಳು ನೋಡುವುದೇ , ಅವರ ನುಡಿಯನ್ನು ಕೇಳುವುದು ಮತ್ತು ಅವರ ಕಾಲದಲ್ಲೇ ಇರುವುದೇ ನಮ್ಮ ಪುಣ್ಣ....🙏🙏🙏🙏
ReplyDelete