Tuesday, November 1, 2022

ಕನ್ನಡ ರಾಜ್ಯೋತ್ಸವ -೨೦೨೨


 ಮೈಸೂರು : ಅನ್ಯ ಭಾಷಿಗರಿಗೂ ಕನ್ನಡ ಕಲಿಸಿ ವಚನ ರಚಿಸಲು ಪ್ರೇರಣೆ ನೀಡಿದ ಬಸವಣ್ಣನವರ ಕನ್ನಡಾಭಿಮಾನ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಯೂರಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಗರದ ಬೋಗಾದಿಯ ಶಾರದಾ ನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಕನ್ನಡ ಐದನೇ ಶತಮಾನದಿಂದಲೇ ಬಳಕೆಯಲ್ಲಿದ್ದರೂ ಕೂಡಾ ಕನ್ನಡದ ನಿಜವಾದ ಉತ್ಸವ ಪ್ರಾರಂಭವಾದದ್ದು ಹನ್ನೆರಡನೆಯ ಶತಮಾನದಲ್ಲಿ ಏಕೆಂದರೆ ಓದು ಬರೆಹ ಬಾರದ ವಿವಿಧ ಕಾಯಕಗಳಲ್ಲಿ ತೊಡಗಿಕೊಂಡಿದ್ದ ಕಾಯಕ ಜೀವಿಗಳನ್ನು ಅನುಭವ ಮಂಟಪದಲ್ಲಿ ಕಲೆಹಾಕಿ ಅವರೂ ಕೂಡಾ ವಚನ ಸಾಹಿತ್ಯ ರಚಿಸಲು ಪ್ರೇರಣೆ ನೀಡಿದರು. ಜೊತೆಗೆ ಆಪ್ಘಾನಿಸ್ಥಾನದಿಂದ ಬಂದ ಮರುಳ ಶಂಕರದೇವ, ಕಾಶ್ಮೀರದಿಂದ ಬಂದ ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ, ಇಂದಿನ ಗುಜರಾತನ್ನು ಅಂದು ಸೌರಾಷ್ಟç ಎಂದು ಕರೆಯಲಾಗುತ್ತಿತ್ತು. ಅಲ್ಲಿಂದ ಬಂದ ಆದಯ್ಯನವರಿಗೆ ಕನ್ನಡ ಭಾಷೆ ಕಲಿಸಿ ಅವರು ಸಾವಿರಾರು ವಚನಗಳನ್ನು ರಚಿಸಲು ನೆರವಾದರು. ಆಂಡಯ್ಯ ಕವಿ ಹದಿಮೂರನೇ ಶತಮಾನದಲ್ಲಿ ಒಂದು ಸಂಸ್ಕೃತ ಪದವನ್ನು ಕೂಡಾ ಬಳಸದೆ ಕಬ್ಬಿಗರ ಕಾವಂ ಕೃತಿ ರಚಿಸಿ ಅಚ್ಚಗನ್ನಡದ ಕವಿ ಎಂದು ಎನಿಸಿಕೊಂಡರೆ ಹದಿನೇಳನೆಯ ಶತಮಾನದಲ್ಲಿ ದೇಶಿಕೇಂದ್ರ ಸಂಗನ ಬಸವಯ್ಯ ಎಂಬ ಬಸವೋತ್ತರ ಯುಗದ ವಚನಕಾರ ತಮ್ಮ ವಚನಗಳಲ್ಲಿ ಒಂದೂ ಸಂಸ್ಕೃತ ಉದ್ಧರಣೆಗಳನ್ನು ಬಳಸದೆ ಅಚ್ಛಗನ್ನಡದಲ್ಲಿ ವಚನಗಳನ್ನು ರಚಿಸಿ ಅಚ್ಛಗನ್ನಡ ವಚನಕಾರ ಎನಿಸಿದ್ದಾರೆ. ಇಂತಹ ಕನ್ನಡ ಪ್ರೇಮ ನಮಗೆ ಮಾದರಿಯಾಗಬೇಕು ಎಂದರು. ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಮಾತನಾಡಿ ೧೯೫೬ರಲ್ಲಿ ಉದಯವಾದ ಮೈಸೂರು ರಾಜ್ಯ ನಂತರ ೧೯೭೩ರಲ್ಲಿ ಕರ್ನಾಟಕ ಎಂದು ಮರು ನಾಮಕರಣವಾಯಿತು. ಅಂದಿನಿAದಲೂ ಕೂಡಾ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಕನ್ನಡದ ಉಳಿವಿಗಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿವೆ. ಪ್ರಸ್ತುತ ವರ್ಷ ಕೋಟಿ ಕಂಠಗಾಯನದ ಮೂಲಕ ಪ್ರತಿಯೊಬ್ಬರ ಧ್ವನಿಯೂ ಕನ್ನಡವಾಗಿ ಹೊರಹೊಮ್ಮಲು ಸರ್ಕಾರ ಕೈಗೊಂಡ ಇಂತಹ ಚಟುವಟಿಕೆಗಳು ಹೆಚ್ಚಾದಾಗ ಕನ್ನಡದ ಬಗ್ಗೆ ಬದ್ಧತೆಯೂ ಕೂಡಾ ಹೆಚ್ಚುತ್ತದೆ. ಕರ್ನಾಟಕ ಎಂದ ತಕ್ಷಣ ಯಾವುದೇ ದೇಶದವರೂ ಭೇಟಿ ಕೊಡಲು ಉತ್ಸುಕರಾಗಿರುತ್ತಾರೆ ಕಾರಣ ಕನ್ನಡದ ಪ್ರಾಕೃತಿಕ ಸಂಪತ್ತು, ವಿಶಾಲವಾದ ನದಿಗಳು, ಕವಿಗಳ ಮತ್ತು ಶರಣರ ಸಾಹಿತ್ಯ ಕನ್ನಡದ ಬಾಹ್ಯ ಮತ್ತು ಆಂತರಿಕ ಸೊಬಗನ್ನು ಹೆಚ್ಚಿಸಿದೆ ಎಂದರು. ನಂತರ ಪೌರ ಕಾರ್ಮಿಕ ವಿದ್ಯಾರ್ಥಿಗಳಿಗೆ ಸಮವಸ್ತç ಹಂಚಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಸಮವಸ್ತç ದಾಸೋಹಿಗಳಾದ ಶಿವಪುರ ಉಮಾಪತಿ, ವಚನ, ಗಿರಿಜೇಶ್, ನಿಜಗುಣ, ಮಂಜುಳ, ಕಾವ್ಯ, ಸಾದನ, ಚಂದ್ರು, ಬಿ.ಆರ್.ಕಾವ್ಯ ಉಪಸ್ಥಿತರಿದ್ದರು.


No comments:

Post a Comment