Sunday, August 22, 2021

ಮಹಾತ್ಮಗಾಂಧೀಜಿ

 ಮಹಾತ್ಮ ಗಾಂಧೀಜಿ ಅವರ ವಿರೋಧಿಗಳು ಮತ್ತು ಅವರ ಕುರಿತು ಇನ್ನಷ್ಟು ಅರಿತುಕೊಳ್ಳಬೇಕೆಂಬ ಆಸಕ್ತಿ ಇರುವವರು ಈ ಲೇಖನವನ್ನು ಓದಬೇಕಾಗಿ ವಿನಮ್ರ ವಿನಂತಿ. 👍💞🙏


ಚರಕದಿಂದ ಸ್ವಾತಂತ್ರ್ಯದ ಬಗ್ಗೆ ಕೇಳಿದ್ದೀರಿ. ಚರಕದಿಂದ ಬರುವುದು ನೂಲು. ಸ್ವಾತಂತ್ರ್ಯ ಅಲ್ಲ. ಆದರೆ ಚರಕ ಸ್ವಾವಲಂಬನೆಯ ಸಂಕೇತ. ಜೀವಿಯ ಮೂಲಭೂತ ಅಗತ್ಯ ಆಹಾರ. ಆದರೆ ಮನುಷ್ಯನಿಗೆ ಬಟ್ಟೆಯೂ ಮೂಲಭೂತ ಅಗತ್ಯವೆ. ಅದನ್ನು ತಯಾರಿಸುವುದು ಚರಕ. ಬಟ್ಟೆ ಬತ್ತಲೆಯನ್ನು ಮುಚ್ಚುತ್ತದೆ. ಅದನ್ನೂ ಬ್ರಿಟಿಷರು ಇಂಗ್ಲೆಂಡಿನ ಫ್ಯಾಕ್ಟರಿಯಲ್ಲಿ ಮಾಡಿ ತಂದು ಮಾರುತ್ತಿದ್ದರು. ನಮ್ಮ ಮಾನದ ಮೇಲೆ ನಿಮ್ಮ ಅಧಿಕಾರವಿಲ್ಲ ನಮ್ಮ‌ಮಾನ ರಕ್ಷಣೆಯ ಬಟ್ಟೆಯನ್ನು ನಾವೇ ಮಾಡಬಲ್ಲೆವು ಎನ್ನುವುದು ತಾತ್ವಿಕ ಪ್ರತಿಭಟನೆ. ಅದರ ಸಂಕೇತ ಚರಕ. ಬ್ರಿಟಿಷರಿಗೆ ಅತ್ಯಧಿಕ ಲಾಭದ್ದು ಬಟ್ಟೆ ಉದ್ಯಮ. ಚರಕದ ಮೂಲಕ ನಮ್ಮ ಬಟ್ಟೆಯನ್ನು ನಾವೇ ತಯಾರಿಸಿದ್ಷು ಬ್ರಿಟಿಷರ ವಸ್ತ್ರೋದ್ಯಮಕ್ಕೆ ಹೊಡೆತ ಕೊಟ್ಟಿತ್ತು. ಬ್ರಿಟಿಷರ ಆರ್ಥಿಕ ಹಿನ್ನಡೆಗೆ ಚರಕವೂ ಕಾರಣವೆ.


ಎರಡನೆಯದು ಗಾಂಧೀಜಿ ಹೇಗೆ ಸಂತ? ಎಂದು. ಋಗ್ವೇದದ ಪ್ರಕಾರ ತನ್ನ ನಂಬಿಕೆಗೆ ನಿಷ್ಠನಾದವನು ಋಷಿ. ಚೌರಿ ಚೌರ ಹಿಂಸಾ ಕೃತ್ಯಕ್ಕೆ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡಾಗ ಇಡೀ ಕಾಂಗ್ರೆಸ್ ಗಾಂಧಿಯ ವಿರೋಧಿಯಾಗಿತ್ತು. ಆದರೂ ಅಹಿಂಸೆಗೆ ಅವರು ನಿಷ್ಠರು. ಏಕಾಂಗಿಯಾಗಿ ತಮ್ಮ‌ ನಿಲುವಿಗೆ ಬದ್ಧರಾದರು. ಹಾಗೆಂದು ಬೇರೆಯವರು ಹೋರಾಟ ಮಾಡಬಾರದು ಎಂದಿಲ್ಲ. ಗಾಂಧಿಯನ್ನು ಪ್ರತಿಭಟಿಸಿ ಮೋತಿಲಾಲ್‌ ನೆಹರು, ಸಿ. ಆರ್. ದಾಸ್ ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದರು ಕೂಡ. ಸುಭಾಶ್ ಭೋಸರ ಅಂತಿಮ ಭೇಟಿಯಲ್ಲೂ ಭೋಸರ ದಾರಿಯನ್ನು ತಡೆಯಲಿಲ್ಲ. ಆದರೆ ತನ್ನ ನಿಲುವಿಗೆ ತಾನು ಬದ್ಧ ಎಂದರು. ಆದ್ದರಿಂದಲೇ ಭೋಸರು,

" ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿಯ ವಿಶ್ವಾಸ ನನಗೆ ಸಿಗಲಿಲ್ಲ" ಎಂದೇ ಹೇಳಿದರು. ಗಾಂಧಿಯನ್ನು ರಾಷ್ಟ್ರಪಿತ ಎಂದವರೂ ಭೋಸರೇ. 


ಗಾಂಧಿ ಒಬ್ಬ ಆಧ್ಯಾತ್ಮಿಕ ಸಾಧಕರೂ ಹೌದು. ಎಲ್ಲೂ ಅವರದನ್ನು ಹೇಳಲಿಲ್ಲ. ಅವರಿಗೆ ರಮಣ ಮಹರ್ಷಿಗಳನ್ನು ಭೇಟಿಯಾಗುವ ಬಯಕೆ ಇತ್ತು.‌ ಆದರೆ ರಾಜಗೋಪಾಲಾಚಾರಿ ಅದನ್ನು ಆಗಗೊಡಲಿಲ್ಲ. ರಮಣ ಮಹರ್ಷಿಗಳನ್ನು ಭೇಟಿಯಾದರೆ ಮತ್ತೆ ಗಾಂಧಿ ದೇಶಕ್ಕೆ ಸಿಗುವುದಿಲ್ಲ ಎಂದು. ಗಾಂಧಿಯ ಟೆಲಿಗ್ರಾಮಿಗೆ ರಮಣ ಮಹರ್ಷಿಗಳಲ್ಲಿಂದ ಹೊರಡುವಾಗ ಬಜಾಜ್, ರಾಜೇಂದ್ರ ಪ್ರಸಾದ್, ಕೃಪಲಾನಿ,"ಗಾಂಧಿಗೇನಾದರೂ ಸಂದೇಶವಿದೆಯೆ?" ಎಂದು ಕೇಳಿದರು. ಆಗ ರಮಣ ಮಹರ್ಷಿಗಳು," ನಮ್ಮ ಆತ್ಮಗಳೇ ಮಾತಾಡಬಲ್ಲವು. ಆದ್ದರಿಂದ ಯಾವ ಸಂದೇಶವೂ ಇಲ್ಲ" ಎಂದು ಉತ್ತರಿಸಿದರು. ಗಾಂಧೀಜಿಯ ಬ್ರಹ್ಮಚರ್ಯದ ಪ್ರಯೋಗದ ಬಗ್ಗೆ ಹಲವು ಸುಳ್ಳುಗಳನ್ನು ಹರಿಯಬಿಡಲಾಗುತ್ತಿದೆ. ಆದರೆ ಆ ಪ್ರಯೋಗದ ಬಗ್ಗೆ ರಾಜಕುಮಾರಿ ಅಮೃತ್ ಕೌರ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದವರು ಗಾಂಧಿಯೇ. ಒಬ್ಬ ಮಹಿಳೆಗೆ ಇಂತಹ ವಿಷಯವನ್ನು ಓಪನ್ ಲೆಟರ್ ನಲ್ಲಿ ಬರೆಯಬೇಕಾದರೆ ಮಗುವಿನ‌ ಮುಗ್ಧತೆ ಬೇಕು. ಅದು ಅವರಲ್ಲಿತ್ತು. 


ಸಂತ ಯಾರು? ತನಗಾಗಿ ಬಾಳದವನು, ಇನ್ನೊಬ್ಬರಿಗೆ ಕೆಡುಕು ಬಯಸದವನು ಸಂತ. ಗಾಂಧಿ ತನಗಾಗಿ ಯಾವ ಸುಖವನ್ನು ಪಟ್ಟಿದ್ದರು. ಸಾಯುವಾಗ ಅವರ ಬಳಿ ಹಣ ಎಷ್ಟಿತ್ತು? ಗಾಂಧಿಯ ಬಗ್ಗೆ ಸಾವರ್ಕರ್ ಎಲ್ಲೂ ಒಳ್ಳೆಯ ಮಾತು ಹೇಳಿಲ್ಲ. ಆದರೆ,"ಸಾವರ್ಕರ್ ಪ್ರತಿಭಾವಂತರಿದ್ದಾರೆ. ಅವರಿಗೆ ಉನ್ನತ ಹುದ್ದೆಯನ್ನು ಕೊಡಬೇಕು" ಎಂದು ಯಂಗ್ ಇಂಡಿಯಾದಲ್ಲಿ ಗಾಂಧೀಜಿ ಬರೆದಿದ್ದರು. ಜೈಲಿನಿಂದ ಬಂದ ಸಾವರ್ಕರ್ ಕುಗ್ಗಿ ಹೋಗಿದ್ದಾಗ ಅವರಿದ್ದಲ್ಲಿಗೆ ಹೋಗಿ ಗಾಂಧಿ ಸಾಂತ್ವನ ಹೇಳಿ ಬಂದಿದ್ದರು. ಅಂಬೇಡ್ಕರರೂ ಗಾಂಧಿಯ ಬಗ್ಗೆ ಒಳ್ಳೆಯ ಮಾತು ಹೇಳಿದವರಲ್ಲ. ಆದರೆ ಐವರ್ ಜೆನ್ನಿಂಗ್ಸ್ ಅನ್ನು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷ ಮಾಡಲು ಹೊರಟಾಗ ಗಾಂಧಿ, ಅಂಬೇಡ್ಕರ್ ರನ್ನೆ ಅಧ್ಯಕ್ಷ ಮಾಡಬೇಕು ಎಂದರು. ಕಡೆಗೆ ಗಾಂಧಿ ಹತ್ಯೆಗೆ ವಾರಕ್ಕೆ ಮೊದಲು ನಾರಾಯಣ ಆಪ್ಟೆ ಅವರ ಪ್ರಾರ್ಥನಾ ಸಭೆಗೆ ಬಾಂಬ್ ಹಾಕಿದಾಗ ಆತನನ್ನು ಬಂಧಿಸಿದ ಪೊಲೀಸ್ ಕಮಿಷನರ್‌ಗೆ ನೀವು ಅವನಿಗೆ ಯಾವ ಹಿಂಸೆಯನ್ನೂ ಕೊಡಬಾರದೆಂದೇ ಹೇಳಿದರು. ಕಲ್ಕತ್ತಾದಲ್ಲಿ,"ಪಂಜಾಬಿಗೆ ಹಿಂದೂಗಳನ್ನು ಕತ್ತರಿಸುತ್ತಿರುವ ಮುಸ್ಲಿಮರಿಗೆ ಎದುರಾಗಿ ನಾನು ನಿಲ್ಲುತ್ತೇನೆ" ಎಂದು ಹೊರಟ ಮುಸ್ಲಿಂ ಹುಡುಗಿಗೆ," ನೀನು ಹೋಗಬೇಡ. ನಾನು ಹೋಗುತ್ತೇನೆ. ಪ್ರಾಣ ಕೊಡಬೇಕಾದ ಜವಾಬ್ದಾರಿ ನಿನಗಿಂತ ಮೊದಲು ನನ್ನದು" ಎಂದರು. ಕೊನೆಗೆ ಪೌರ ಕಾರ್ಮಿಕರೊಂದಿಗೆ ಅವರ ಮನೆಗಳಲ್ಲೆ ವಾಸಿಸುತ್ತಿದ್ದರು.‌ಗಾಂಧಿಯನ್ನು ಭಾರೀ ಟೀಕಿಸುವವ ಒಬ್ಬ ಪೌರ ಕಾರ್ಮಿಕರ ಮನೆಯಲ್ಲಿ ನಾಲ್ಕು ದಿನ ಇದ್ದು ಬರಲಿ. ನೂರಾ ಎಪ್ಪತ್ತೈದು ದೇಶಗಳು ಅಂಚೆ ಚೀಟಿ ಹೊರತರುವ, ಮರಣೋತ್ತರ ಗೌರವವಾಗಿ ವಿಶ್ವ ಸಂಸ್ಥೆ ಎಲ್ಲ ದೇಶಗಳ ಧ್ವಜವನ್ನೂ ಅರ್ಧಕ್ಕಿಳಿಸಿದ ಏಕೈಕ ಜಾಗತಿಕ ನಾಯಕನಿಗೆ ಪೌರ ಕಾರ್ಮಿಕರ ಮನೆಯಲ್ಲಿ ಅವರೊಂದಿಗೆ ಬದುಕಲು, ಕಕ್ಕೊಸು ಗುಂಡಿಯಿಂದ ಎಲ್ಲರ ಮಲವನ್ನು ಹೊತ್ತುಕೊಂಡು ಹೋಗುವ ಶಕ್ತಿ ಇತ್ತು.‌ ಸಂತನಾಗಲು ಇದಕ್ಕಿಂತ ಹೆಚ್ಚಿನ ಅರ್ಹತೆ ಏನು ಬೇಕು? ಗಾಂಧಿಯನ್ನಲ್ಲದೆ ಕಾವಿ ಹಾಕ್ಕೊಂಡು ಅನಾಚಾರ ಮಾಡುವವರನ್ನು ಸಂತ ಎನ್ನಲು ಬರುತ್ತದೆಯೆ? ವಸಿಷ್ಟ ವಿಶ್ವಾಮಿತ್ರರ ಸಂವಾದವನ್ನು ಉಲ್ಲೇಖಿಸಿ ಸತ್ಯಶೋಧಕ ಧೂಳಿಗಿಂತ ವಿನಮ್ರನಿರಬೇಕು ಎಂದ ಗಾಂಧಿ ಹಾಗೆಯೇ ಬದುಕಿದರು. "ನನ್ನ ಜೀವನವೆ ನನ್ನ ಸಂದೇಶ" ಎನ್ನುವ ಅರ್ಹತೆ ಇದ್ದ ಏಕೈಕ ವ್ಯಕ್ತಿ ಅವರು.


ಗಾಂಧಿಯ ಕುರಿತ ಅಪಪ್ರಚಾರ ಇಂದು ಶುರುವಲ್ಲ. ಅವರು ಬದುಕಿದ್ದ ಕಾಲದಲ್ಲೆ ಶುರುವಾಗಿದೆ. ಈಗಲೂ ಇದೆ. ಇನ್ನು ಮುಂದೆಯೂ ಇರುತ್ತದೆ. ಆದರೆ ಗಾಂಧಿಗಿಂತ ಎತ್ತರಕ್ಕೆ ಯಾವ ನಾಯಕತ್ವವನ್ನೂ ಒಯ್ಯಲು ಯಾರಿಗೂ ಸಾಧ್ಯವಾಗಿಲ್ಲ. ಆಗುವುದೂ ಇಲ್ಲ.


https://www.facebook.com/100013329571933/posts/1282852928835681/

No comments:

Post a Comment