Tuesday, August 19, 2025

ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ವಚನ ಪಾಠಶಾಲೆ ಉದ್ಘಾಟನೆ

 



ನಂಬಿ ಕರೆದಡೆ ಶಿವನು ಓಗೊಡುತ್ತಾನೆ ಎಂದು ದೇವನೂರು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಶ್ರೀ ಮಹಾಂತಸ್ವಾಮಿಗಳು ಹೇಳಿದರು. ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ವಚನ ಪಾಠಶಾಲೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು



 ವಚನ ಸಾಹಿತ್ಯ ಅನುಭಾವಿಕ ಸಾಹಿತ್ಯವಾಗಿದ್ದು, ಶರಣರು ಮೇಲಾಗಲೊಲ್ಲದೆ ಕೀಳಾಗಿರುವೆನು ಎಂದು ಹೇಳಿ ಎಲ್ಲರಿಗಿಂತ ತಾನು ಮೇಲೆಂದು ಮೆರೆಯುವ ಅಹಂಕಾರವನ್ನು ಹತ್ತಿರ ಸುಳಿಯದಂತೆ ನೋಡಿಕೊಂಡು ಜನಸೇವೆ ಮಾಡುತ್ತಾ ಹಿಂದೆ ನಿಲ್ಲಬಯಸಿದುದರಿಂದ ೯೦೦ ವರ್ಷ ಕಳೆದರೂ ಅವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದರು.



ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿಸ್ವಾಮಿಗಳು ಮಾತನಾಡಿ ಮನದ ಮೈಲಿಗೆಯನ್ನು ಕಳೆಯಲು ಶರಣರ ವಚನಗಳು ಸಹಕಾರಿಯಾಗಿದ್ದು, ಇಂತಹ ವಚನ ಸಾಹಿತ್ಯದ ಅಭಿರುಚಿ ಬಾಲ್ಯದಲ್ಲಿಯೇ ಚಿಗುರೊಡೆದಾಗ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಾಯಕವಾಗುತ್ತದೆ ಎಂದರು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್ ಗುರು ಇಂದಿನ ಕಾಲಘಟ್ಟದಲ್ಲಿ ಮನುಷ್ಯ ತಾನು ಮಾತ್ರ ಬದುಕಬೇಕು ಎಂಬ ಸ್ವಾರ್ಥ ಹೆಚ್ಚಾಗಿ ಸಮಾಜ ನೈತಿಕ ಅಧಃಪತನತ್ತ ವಾಲುತ್ತಿರುವುದು ನೋವಿನ ಸಂಗತಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ದೇವಲಾಪುರ ಮಠದಲ್ಲಿ ವಚನ ಪಾಠಶಾಲೆ ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.



ಶರಣರ ವಿಚಾರಧಾರೆ ವಿಷಯದ ಬಗ್ಗೆ ಪ್ರವಚನ ನೀಡಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಕಣ್ಮರೆಯಾಗುತ್ತಿದ್ದ ವಚನ ಸಾಹಿತ್ಯವನ್ನು ಗುರು ರೂಪದಲ್ಲಿ ಬೆಳಕಿಗೆ ತಂದ ಡಾ. ಫ.ಗು ಹಳಕಟ್ಟಿ, ಲಿಂಗ ಸ್ವರೂಪದಲ್ಲಿ ಸಂಶೋಧಿಸಿದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಮತ್ತು ಜಂಗಮ ಸ್ವರೂಪವಾಗಿ ಪ್ರಚುರಪಡಿಸಿದ ಉತ್ತಂಗಿ ಚೆನ್ನಪ್ಪನವರನ್ನು ಪ್ರತಿಯೊಬ್ಬ ಸಾಹಿತ್ಯಾಭಿಮಾನಿಯೂ ಸ್ಮರಿಸಬೇಕು ಎಂದರು.



ವಚನ ಪಾಠಶಾಲೆ ಉದ್ಘಾಟಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಉಚ್ಛಾರ ಮಾಡಿದಾಗ ಒಂದೊAದು ಅಕ್ಷರದಲ್ಲಿಯೂ ವಚನಕಾರರು ಮತ್ತು ವಚನಗಳನ್ನು ಕಾಣಬೇಕು. ಅ ಎಂದರೆ ಅಲ್ಲಮಪ್ರಭು, ಆ ಎಂದರೆ ಆಯ್ದಕ್ಕಿ ಮಾರಯ್ಯ, ಇ ಎಂದರೆ ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳು ನೆನಪಾಗಬೇಕು ಎಂದು ವಚನ ವರ್ಣಮಾಲೆಯನ್ನು ಪರಿಚಯಿಸಿದರು.



ದೇವಲಾಪುರ ಶ್ರೀ ಗುರುಮಲ್ಲೇಶ್ವರಮಠದ ಶ್ರೀ ಜಡೇಸ್ವಾಮಿಗಳು ಮಾತನಾಡಿ ಶ್ರೀಮಠಕ್ಕೆ ಭಕ್ತರೇ ಆಸ್ತಿ. ಸಮಾಜಕ್ಕೆ ಶರಣರು ನೀಡಿರುವ ಅಮೂಲ್ಯವಾದ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ ಸಹಕಾರದೊಂದಿಗೆ ವಚನಪಾಠಶಾಲೆ ಪ್ರಾರಂಭಿಸುತ್ತಿದ್ದೇವೆ. ಭಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ನಿವೃತ್ತ ಗ್ರಾಮಲೆಕ್ಕಾಧಿಕಾರಿ ನಾಗರಾಜು ನಿರೂಪಿಸಿದರು.

 ದೇವಿಕಾ  ಪ್ರಾರ್ಥಿಸಿದರು. ವಿವಿಧ ಮಠಗಳ ಮಠಾಧೀಶರು ಮತ್ತು ಗ್ರಾಮಸ್ಥರು, ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.



No comments:

Post a Comment