ಧಾರ್ಮಿಕ ಇತಿಹಾಸದಲ್ಲಿಯೇ ಹೊಸ ಮನ್ವಂತರಕ್ಕೆ ಕಾರಣರಾದವರು ಬಸವಣ್ಣನವರು : ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
ಚಾ.ನಗರ : ಧಾರ್ಮಿಕ ಇತಿಹಾಸದಲ್ಲಿಯೇ ಹೊಸ ಮನ್ವಂತರಕ್ಕೆ ಕಾರಣರಾದವರು ಬಸವಣ್ಣನವರು ಎಂದು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು. ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯ ಶ್ರೀ ಬಸವನಗುಡಿಯ ಸಂಪ್ರೋಕ್ಷಣ, ನೂತನ ಗೋಪುರದ ಕಳಸಾರೋಹಣದ ಧಾರ್ಮಿಕ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು
ಬಸವಣ್ಣನವರು ತಮ್ಮ ಮನೆಯಲ್ಲಿ ಇದ್ದ ಕರ್ಮಠತನ ಮತ್ತು ಅಸಮಾನತೆ ವಿರುದ್ಧ ಧ್ವನಿ ಎತ್ತಿ ಮನೆಯಿಂದ ಹೊರನಡೆದು ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಲ್ಲರಿಗೂ ಅವಕಾಶ ನೀಡಿದುದರ ಫಲವಾಗಿ ಅವರು ಜಗಜ್ಯೋತಿ ಆದರು ಎಂದರು.
ತುಮಕೂರು ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರಮಹಾಸ್ವಾಮಿಗಳು ಮಾತನಾಡಿ ಜಗತ್ತನ್ನು ನಡೆಸುತ್ತಿರುವ ಮಹಾಶಕ್ತಿಯಾದ ಭಗವಂತನ ದರ್ಶನಕ್ಕೆ ಶರಣ ಸಿದ್ಧಾಂತ ಸುಲಭ ಮಾರ್ಗ. ಹಣ ಸಂಪಾದನೆ ಮುಖ್ಯವಾಗದೆ ಗುಣ ಸಂಪಾದನೆ ಮುಖ್ಯವಾಗಬೇಕು. ಧಾರ್ಮಿಕ ಸಭೆಗಳು ಆಧ್ಯಾತ್ಮಿಕ ಜ್ಞಾನವನ್ನು ಉಂಟು ಮಾಡಿ ನಮ್ಮಲ್ಲಿರುವ ದುರ್ಗುಣಗಳನ್ನು ಕಳೆದು ಸುಜ್ಞಾನವನ್ನು ಉಂಟುಮಾಡಿ ನಮ್ಮ ಜೀವನವನ್ನು ಪಾವನ ಮಾಡುತ್ತವೆ ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಉಪನ್ಯಾಸ ನೀಡಿ ಮನದ ಮೈಲಿಗೆಯನ್ನು ತೊಳೆದುಕೊಳ್ಳಲು ಶರಣರ ವಚನಗಳು ಸಹಕಾರಿಯಾಗಿದ್ದು, ಜೀವಿತದ ಅವಧಿಯಲ್ಲಿಯೇ ನಾವು ಕಳೆಯುವ ಸಂತಸದ ಕ್ಷಣಗಳೇ ಸ್ವರ್ಗ, ದುಃಖದ ಸಂದರ್ಭಗಳೇ ನರಕ. ಲೇಸೆನಿಸಿಕೊಂಡು ಎಷ್ಟು ವರ್ಷ ಬದುಕುತ್ತೇವೆಯೋ ಅದೇ ಮನುಷ್ಯನ ನಿಜವಾದ ವಯಸ್ಸು ಎಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ ಮನದಟ್ಟು ಮಾಡಿಸಿದರು. ಜಗತ್ತು ಎಂಬುದು ದೇವನ ಜಾತ್ರೆಯಾಗಿದ್ದು, ದೇವರು ನಮಗೆ ಇಲ್ಲಿ ಆಮಂತ್ರಣವನ್ನು ನೀಡಿದ್ದು, ನಾವು ಅತಿಥಿಯಾಗಿ ಬಂದು ಅತಿಥಿಯಾಗಿ ಹೋದಾಗ ಮಾತ್ರ ನಮ್ಮ ಜೀವಕ್ಕೆ ಬೆಲೆ ಬರುತ್ತದೆ ಎಂದರು. ಯಾರ ಹೃದಯದಲ್ಲಿ ಪ್ರೇಮ ತುಂಬಿದೆಯೋ, ಯಾರ ಸನಿಹ ಬಂದಾಗ ಪ್ರೇಮದ ತರಂಗಗಳು ಏಳುತ್ತವೆಯೋ ಅವರೇ ಸದ್ಗುರು. ಅಂತಹ ಸದ್ಗುರುಗಳ ದರ್ಶನವನ್ನು ಸಾವಿರಾರು ಮಂದಿಗೆ ಮಾಡಿಸಿದಂತಹ ಕಾಗಲವಾಡಿ ಗ್ರಾಮಸ್ಥರ ಆದರ್ಶ ಇತರ ಗ್ರಾಮಗಳಿಗೆ ಅನುಕರಣೀಯ ಎಂದರು.
ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗಶಿವಾಚಾರ್ಯಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀ ಇಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಕಾರಾಪುರ ಮಠದ ಶ್ರೀ ಬಸವರಾಜಸ್ವಾಮಿಗಳು, ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮಿಗಳು, ಮುಡಕನಪುರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರಸ್ವಾಮಿಗಳು, ಮುಡಿಗುಂಡ ಮಠದ ಶ್ರೀ ಶ್ರೀಕಂಠಸ್ವಾಮಿಗಳು, ಚಾಮರಾಜನಗರ ಮಠದ ಶ್ರೀ ಚನ್ನಬಸವಸ್ವಾಮಿಗಳು, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳು, ಹಂಡ್ರಕಳ್ಳಿ ಮಠದ ಶ್ರೀ ಪಂಚಾಕ್ಷರಿಸ್ವಾಮಿಗಳು, ಆಲಹಳ್ಳಿ ಮಠದ ಶ್ರೀ ಇಮ್ಮಡಿ ಬಸಪ್ಪ ಸ್ವಾಮಿಗಳು, ಅರಕಲವಾಡಿ ಮಠದ ಶ್ರೀ ಬಸವಣ್ಣಸ್ವಾಮಿಗಳು, ಕೆಸ್ತೂರು ಮಠದ ತೋಂಟದಾರ್ಯಸ್ವಾಮಿಗಳು, ಕಿರಾಳು ಮಠದ ಶ್ರೀ ಚನ್ನಬಸವಸ್ವಾಮಿಗಳು, ನಾಗವಳ್ಳಿ ಮಠದ ಶ್ರೀ ಬಸವರಾಜಸ್ವಾಮಿಗಳು, ಕಾಗಲವಾಡಿಯ ಶ್ರೀ ವೀರಭದ್ರಸ್ವಾಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಸ್ವಾಗತವನ್ನು ಕೆ.ವಿ ಶಿವಸ್ವಾಮಿ, ಪ್ರಾರ್ಥನೆಯನ್ನು ಮೀನಾ ಮಹದೇವಪ್ಪ, ವಂದನಾರ್ಪಣೆಯನ್ನು ಕೆ.ಬಿ ಸ್ವಾಮಿ ನಡೆಸಿಕೊಟ್ಟರು.






No comments:
Post a Comment