Sunday, April 12, 2020

ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗಪೂಜೆ

                                                     ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗಪೂಜೆ

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ 
ಶಿವಾರ್ಚನೆಯ ಬೆರಕೊಳ್ಳಿ,
ಸಕಲಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ,
ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ,
ಇವರಿಂದ ರುಜೆದರ್ಪಂಗಡಗು
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ.

ಹನ್ನೆರಡನೆಯ ಶತಮಾನದ ಶರಣ ವೈದ್ಯ ಸಂಗಣ್ಣ ವೃತ್ತಿಯಲ್ಲಿ ವೈದ್ಯನಾಗಿದ್ದು ವೈದ್ಯಶಾಸ್ತ್ರ ಮತ್ತು ಶರೀರ ಶಾಸ್ತ್ರಗಳನ್ನು ಚೆನ್ನಾಗಿ ತಿಳಿದುಕೊಂಡು ವಿವಿಧ ಕಾಯಿಲೆಗಳಿಗೆ ಔಷಧಗಳನ್ನು ಕೊಡುವುದರ ಮುಖಾಂತರ ಗುಣಪಡಿಸುತ್ತಿದ್ದನು. ವ್ಯಕ್ತಿಗೆ ನೀಡಿದ ಬಹಿರಂಗ ಚಿಕಿತ್ಸೆಗೆ ಕಾಯಿಲೆ ಗುಣವಾಗದಿದ್ದಾಗ ಅಂತರಂಗದ ಚಿಕಿತ್ಸೆ ಅವಶ್ಯ ಎಂದು ತಿಳಿದು ಪರಶಿವನನ್ನು ದಿನದ ಮೂರು ಹೊತ್ತು ಪೂಜಿಸಿ ಸೃಷ್ಟಿಕರ್ತನನ್ನು ನೆನೆಯುವುದರ ಮೂಲಕ ಕಾಯಿಲೆ ಗುಣಪಡಿಸಿಕೊಳ್ಳಬಹುದು ಎಂದು ಹೇಳುತ್ತಿದ್ದನು. ಈ ವಚನ ರಚನೆಯಾಗಿ 900 ವರ್ಷಗಳು ಕಳೆದಿವೆ. ಈ ವಚನವನ್ನು ವಿಮರ್ಶೆ ಮಾಡಿ ನೋಡಿದಾಗ ನಾವು ಬಹಿರಂಗದ ಶುದ್ಧಿಯ ಜೊತೆಗೆ ನಮ್ಮ ಅಂತರಂಗವನ್ನು ಶುದ್ಧಿಮಾಡಿಕೊಳ್ಳುವುದು ಅಗತ್ಯವಾಗಿದೆ.
     ಕೊರೋನಾದಿಂದ ಇಡೀ ವಿಶ್ವವೇ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಲಿಂಗಾಯತ ಮಠಾಧೀಶರುಗಳು ಹಾಗೂ ವಿವಿಧ ಲಿಂಗಾಯತ ಸಂಘಟನೆಗಳು ಏಪ್ರಿಲ್ 13ನೇ ತಾರೀಖು ಸಂಜೆ 7 ಗಂಟೆಗೆ sಸಾಮೂಹಿಕ ಇಷ್ಟಲಿಂಗಪೂಜೆಗೆ ಲೋಕಕಲ್ಯಾಣ ದೃಷ್ಟಿಯಿಂದ ಕರೆ ನೀಡಿರುವುದು ಸ್ವಾಗತಾರ್ಹ. ಏಕೆಂದರೆ ಇಷ್ಟಲಿಂಗವು ದೇವರ ಅರಿವನ್ನು ಮಾಡಿಕೊಡುವ ಕುರುಹಾಗಿದ್ದು ಇಷ್ಟಾರ್ಥಗಳನ್ನು ನೆರವೇರಿಸುವ ಕರಸ್ಥಲದ ಜ್ಯೋತಿಯಾಗಿದೆ. ಆ ಇಷ್ಟಲಿಂಗವು ಪರಶಿವನ ಪ್ರತಿರೂಪ ಎಂಬುದನ್ನು ಬಸವಣ್ಣ ತಮ್ಮ ಈ ವಚನದ ಮೂಲಕ ತಿಳಿಸುತ್ತಾರೆ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಈ ವಚನದ ಮೊದಲ ಮೂರು ಸಾಲುಗಳು ಭಗವಂತನ ವಿರಾಡ್ರೂಪವನ್ನು ನಾಲ್ಕನೆಯ ಸಾಲು ಅನುಭೂತಿಗಾಗಿ ಭಗವಂತನ ಸ್ವರೂಪವನ್ನು ಕೊನೆಯ ಸಾಲು ಸಾಧನೆಗಾಗಿ ಭಗವಂತನ ಸಾಧನಾ ಸ್ವರೂಪವನ್ನು ನಿರ್ದೇಶಿಸುತ್ತದೆ. ಒಟ್ಟಿನಲ್ಲಿ ಈ ವಚನ ಪರಿಭಾವಿಸಿದಷ್ಟೂ ಆಧ್ಯಾತ್ಮದ ಪರಿಮಳವನ್ನು ಪಸರಿಸುತ್ತದೆ. ಆದುದರಿಂದ ಇಷ್ಟಲಿಂಗವು ಜಗದಗಲ ಮತ್ತು ಮುಗಿಲಗಲವಾಗಿರುವ ದೇವರ ಅರಿವನ್ನು ಉಂಟುಮಾಡಿರುವ ದೇವರ ಪ್ರತಿನಿಧಿಯಾಗಿದ್ದು ನಾವು ಅದರ ಮೊರೆ ಹೋಗಬೇಕಾಗಿರುವುದು ಅನಿವಾರ್ಯವಾಗಿದೆ. ಮೊದಲು ನಾವು ಕೈಗೊಳ್ಳುತ್ತಿರುವ ಈ ಕ್ರಿಯೆಯ ಮೇಲೆ ನಂಬಿಕೆ ಇಟ್ಟು ಪೂಜಿಸಿದ್ದೇ ಆದರೆ ಪರಶಿವನು ವಿಶ್ವಕ್ಕೆ ಬಂದಿರುವ ಈ ಸಂಕಷ್ಟವನ್ನು ನಿವಾರಿಸುತ್ತಾನೆ ಎಂಬುದಕ್ಕೆ ಬಸವಣ್ಣನವರ ಮತ್ತೊಂದು ವಚನವನ್ನು ಉದಾಹರಿಸಬಹುದು.
ನಂಬರು ನಚ್ಚರು ಬರಿದೆ ಕರೆವರು,
ನಂಬಲರಿಯರೀ ಲೋಕದ ಮನುಜರು,
ನಂಬಿ ಕರೆದಡೆ ಓ ಎನ್ನನೆ ಶಿವನು?
ನಂಬದೆ ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.
ಈ ವಚನ ದೇವರಲ್ಲಿ ಅಪಾರವಾದ ನಂಬಿಕೆ ನೆಲೆಗೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಅಚಲವಾದ ಶ್ರದ್ಧೆ, ಭಕ್ತಿ ಹಾಗೂ ಏಕೈಕ ನಿಷ್ಠೆಯಿಂದ ‘ಶರಣ ಸತಿ ಲಿಂಗ ಪತಿ’ ಎಂಬ ಭಾವದಲ್ಲಿ ಪರಶಿವನನ್ನು ನೆನೆಯುವುದರ ಮೂಲಕ ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಳ್ಳೋಣ ಬನ್ನಿ.

                                               ಡಾ. ವಚನ ಕುಮಾರಸ್ವಾಮಿ
                                                ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು
ಫೋನ್ ನಂ - 9980393469

   


No comments:

Post a Comment