ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು
ಬಸವಣ್ಣನವರನ್ನು ಶರಣ ಬಹುರೂಪಿ ಚೌಡಯ್ಯನವರು ತಮ್ಮ
ಅನೇಕ ವಚನಗಳಲ್ಲಿ “ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ”
ಎಂದು ಕೊಂಡಾಡಿದ್ದಾರೆ. ಈ ವಾಕ್ಯ ಅಕ್ಷರಶಃ ಸತ್ಯವಾದದ್ದು
ಏಕೆಂದರೆ ಅದುವರೆಗೆ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ವಾಕ್ಯ ಎಲ್ಲರನ್ನೂ ಆಶೀರ್ವದಿಸುವ ವಾಕ್ಯವಾಗಿ
ಜನಮನ್ನಣೆ ಪಡೆದಿತ್ತು . ಆದರೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು “ಸಕಲ ಜೀವಾತ್ಮರಿಗೆ ಲೇಸನೆ
ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು” ಎಂಬ ವಾಕ್ಯವನ್ನು ಪ್ರಯೋಗ ಮಾಡುವುದರ ಮೂಲಕ ವಿಶ್ವದ ಭೂಪಟದಲ್ಲಿ
ಶಾಶ್ವತವಾದ ಸ್ಥಾನ ಪಡೆದರು. ಬಸವಣ್ಣನವರು ಜೀವವಿರುವ ಪ್ರತಿಯೊಂದು ಜೀವಿಗೂ ಲೇಸನ್ನು ಬಯಸಿದುದರ ಪರಿಣಾಮ
ಬಹುರೂಪಿ ಚೌಡಯ್ಯನವರು “ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ” ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದು ಸಮಂಜಸವಾಗಿದೆ.
ಬಸವಣ್ಣನವರು ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿಮ್ಮೈಸಿರಿ ಹಾರಿ ಹೋಹುದೆ? ಕುಳ್ಳಿರೆಂದಡೆ ನೆಲ
ಕುಳಿಹೋಹುದೆ? ಎಂದು ಹೇಳುವುದರ ಮೂಲಕ ಹಾಗೂ “ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ,
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ” ಎಂಬ ವಚನದ ಮೂಲಕ ಅವರು ತಮ್ಮನ್ನೇ ತಾವು ಪಾಠವಾಗಿಸಿಕೊಂಡು,
ಪಠ್ಯವಾಗಿಸಿಕೊಂಡು, ಪ್ರಯೋಗಶಾಲೆಯನ್ನಾಗಿಸಿಕೊಂಡು ನಮಗೆಲ್ಲ ಬದುಕಲು ಕಲಿಸಿಕೊಟ್ಟರು.
ಕಲ್ಯಾಣದಲ್ಲಿ ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಭಂಡಾರ
ಮಂತ್ರಿಯಾಗಿದ್ದರೂ ಕೂಡಾ “ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲಸಂಗಮದೇವಾ” ಎಂದು
ಹೇಳುವುದರ ಮೂಲಕ “ಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ದಂಟು ಬಾಗುತ್ತದೆ, ಏನೇನೂ ಇಲ್ಲದುದು
ಬೀಗುತ್ತದೆ ಎಂಬ ಕವಿ ಸಿದ್ಧಯ್ಯ ಪುರಾಣಿಕರವರ ಕವಿತೆಯ ಸಾಲಿನಂತೆ ನಾನು ಬೀಗುವುದಿಲ್ಲ ಬಾಗುತ್ತೇನೆ
ಎಂಬ ಆದರ್ಶವನ್ನು ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ.
ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು
ವಿದ್ಯಾಸಾಧಕರೆಲ್ಲ ಬುದ್ಧಿಗೆಟ್ಟರು
ತತ್ವಸಾಧಕರೆಲ್ಲ ಭಕ್ತಿಹೀನರಾದರು.
ಲಿಂಗಸಾಧಕರೆಲ್ಲ ಭೂಭಾರಕರಾದರು.
ಕೂಡಲಚೆನ್ನಸಂಗಮದೇವಾ ನಿಮ್ಮ ಬಸವಣ್ಣ
ಜಂಗಮಸಾಧಕನಾಗಿ ಸ್ವಯಂಲಿಂಗವಾದನು
ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಈ
ವಚನ ಬಸವಣ್ಣನವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರು ದೇಶ, ಕಾಲ ಮೀರಿ ಅದು ಹೇಗೆ
ಜಗಜ್ಯೋತಿಯಾದರು ಎಂಬುದನ್ನು ಸೂಚಿಸುತ್ತದೆ.
ಅಸಮಾನತೆಯ ವಿರುದ್ಧ ಶಾಲೆಯಲ್ಲಿ, ಕಛೇರಿಗಳಲ್ಲಿ, ಸಮಾಜದ
ವಿವಿಧ ಸಂಸ್ಥೆಗಳಲ್ಲಿ ಧ್ವನಿ ಎತ್ತಿರುವ ಸಮಾಜ ಸುಧಾರಕರನ್ನು ನೋಡಿದ್ದೇವೆ ಹಾಗೂ ಅವರ ಬಗ್ಗೆ ಇದುವರೆಗೆ
ಕೇಳಿದ್ದೇವೆ. ತಮ್ಮ ಮನೆಯಲ್ಲಿಯೇ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಕ್ಕನಿಗಿಲ್ಲದ ಜನಿವಾರ ನನಗೂ
ಬೇಡ ಎಂದು ತಿರಸ್ಕರಿಸಿ ಮನೆಯನ್ನು ತ್ಯಜಿಸಿದ ಬಸವಣ್ಣನವರು ಸಮಾಜ ಸುಧಾರಕರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ
ನಿಲ್ಲುತ್ತಾರೆ.
ವಿಶ್ವದ ಅನೇಕ ಧರ್ಮಗಳನ್ನು ಅಧ್ಯಯನ ಮಾಡಿದಾಗ ಹಿಂದಿನಿಂದಲೂ ಹೆಣ್ಣು ಅನಾದರಣೆಗೆ,
ಅನೇಕ ಪುರುಷರ ಅವಕೃಪೆಗೆ ಒಳಗಾಗಿರುವುದನ್ನು ನೋಡಿದ್ದೇವೆ. ಬಹುತೇಕ ಧರ್ಮಗಳು ಸ್ತ್ರೀಗೆ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ರಾಜಕೀಯ ಹೀಗೆ ಯಾವುದೇ ರಂಗದಲ್ಲೂ ಗುರುತರವಾದ ಸ್ಥಾನಮಾನ ನೀಡಿರುವುದು ವಿರಳ. ಹನ್ನೆರಡನೇ ಶತಮಾನದವರೆಗೂ ಭಾರತದಲ್ಲಂತೂ ಹೆಣ್ಣು ಶೂದ್ರಳು, ಯಾವುದೇ ಸಂಸ್ಕಾರಕ್ಕೆ ಅನರ್ಹಳು ಎಂದು ಅತ್ಯಂತ ಶೋಚನೀಯವಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಇದಕ್ಕೆ ಅಪವಾದವೆಂಬಂತೆ ಹನ್ನೆರಡನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ಗುರು ಬಸವಣ್ಣನವರು ತಮ್ಮ ಅಕ್ಕನಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಲಿಂಗತಾರತಮ್ಯವನ್ನು ಸಂಪೂರ್ಣ ಕಿತ್ತೆಸೆಯುವುದರ ಜೊತೆಗೆ ಸ್ತ್ರೀಯರಿಗೆ ಹಿಂದೆಂದೂ ಸಿಗದಂಥಾ ಅಭೂತಪೂರ್ವ ಸ್ಥಾನಮಾನ ಕಲ್ಪಿಸಿಕೊಟ್ಟರು. ಇದರ ಪರಿಣಾಮವೇ ಅಕ್ಕ ನಾಗಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಮುಕ್ತಾಯಕ್ಕ,
ಲಿಂಗಮ್ಮ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ ಮೊದಲುಗೊಂಡು 33 ಸ್ತ್ರೀಯರು ಶರಣೆಯರಾಗಿ ರೂಪುಗೊಂಡು ಅನುಭಾವಿಕ ವಚನಗಳನ್ನು ರಚಿಸಿದರು.
ಬಸವಣ್ಣನವರು ಕಲ್ಯಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿ
ಮಾಡಿದುದರ ಪರಿಣಾಮ ಕಲ್ಯಾಣ ಇಂದು ಬಸವಕಲ್ಯಾಣವಾಗಿರುವುದನ್ನು ನಾವು ಕಾಣಬಹುದು. ಬಸವಣ್ಣನವರು ಇಷ್ಟಲಿಂಗ
ದೀಕ್ಷ, ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮಾನತೆಯ ತತ್ವಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಬಸವಣ್ಣನವರಿಗಿಂತ
ಮುಂಚೆಯೇ ಇಷ್ಟಲಿಂಗ ಇತ್ತು ಎಂದು ಅಂತೆ ಕಂತೆ ಎಂಬ ತರ್ಕವಾದವನ್ನು ಇಂದಿಗೂ ಮಾಡುತ್ತಿರುವುದನ್ನು
ನಾವು ಕಾಣಬಹುದು. ಬಸವಣ್ಣನವರ ಸಮಕಾಲೀನರ ವಚನಗಳನ್ನು ಅಧ್ಯಯನ ಮಾಡಿದಾಗ ಅದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ.
ಅನುಭವಮಂಟಪದ ದ್ವೀತಿಯ ಅಧ್ಯಕ್ಷರಾದ ಚೆನ್ನಬಸವಣ್ಣನವರ ಒಂದು ವಚನ ಇಂತಿದೆ.
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ.
ಎಂದು ಹೇಳುವುದರ ಮೂಲಕ ವಿಶ್ವಗುರು ಬಸವಣ್ಣನವರೇ ಇಷ್ಟಲಿಂಗ
ಜನಕ ಎಂದು ಹೇಳುವುದರ ಮೂಲಕ ಆ ಕಾಲಘಟ್ಟದಲ್ಲಿಯೇ ಚೆನ್ನಬಸವಣ್ಣನವರು ಸಂದೇಹ ವ್ಯಕ್ತಪಡಿಸಿರುವವರ ಬಾಯಿ
ಮುಚ್ಚಿಸಿರುವುದನ್ನು ನಾವು ಕಾಣಬಹುದು. ತುಳಿತಕ್ಕೊಳಗಾದ ಜನರಿಗೆ ದೇವರು ಆ ಸಂದರ್ಭದಲ್ಲಿ ಗಗನ ಕುಸುಮವಾಗಿತ್ತು.
ಆಗ ಬಸವಣ್ಣನವರು ಅವರಿಗೆ ಇಷ್ಟಲಿಂಗ ದೀಕ್ಷೆ ನೀಡುವುವುದರ ಮೂಲಕ ಮುಖ್ಯವಾಹಿನಿಗೆ ತಂದರು. ಜನಸಾಮಾನ್ಯರೊಡನೆ
ಅದರಲ್ಲೂ ಅತ್ಯಂತ ಕೆಳಸ್ಥರದಲ್ಲಿದ್ದು ತುಳಿತಕ್ಕೊಳಗಾದ ಜನರೊಡನೆ ತಮ್ಮನ್ನು ಏಕೀಭವಿಸಿಕೊಳ್ಳುವುದರಲ್ಲಿ
ಬಸವಣ್ಣನವರ ಅಸಾಧಾರಣ ಮಾನವೀಯ ಅನುಕಂಪ ಅಸದೃಶವಾದುದು.
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
ಎಂದು ಹೇಳಿಕೊಳ್ಳುವುದರ ಮೂಲಕ ಹುಟ್ಟಿನ ಅಹಂಕಾರವನ್ನು ನಿರಾಕರಿಸಿಕೊಳ್ಳುವುದರಲ್ಲಿ
ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬುದನ್ನು ಕಾಣಬಹುದು.ಈ ಸಂದರ್ಭದಲ್ಲಿ ಅವರು ಚೆನ್ನಯ್ಯ ಕಕ್ಕಯ್ಯ ಮುಂತಾದ
ಕೆಳವರ್ಗದ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಅವರನ್ನು ಶರಣರನ್ನಾಗಿ ರೂಪಿಸಿದರು. ಬಸವಣ್ಣನವರು
ಕೆಳವರ್ಗದವರಿಂದಲೂ ಸಲಹೆಗಳನ್ನು ಸ್ವೀಕರಿಸುವ ಮನೋಭಾವವಿತ್ತು. ಅವರು ಶಂಕರ ಪದವಿಗೇರಿದರೂ ತಮ್ಮನ್ನು
ತಾವು ಕಿಂಕರರೆಂದೇ ಗುರುತಿಸಿಕೊಳ್ಳುವುದನ್ನು ಮತ್ತೊಂದು ವಚನದಲ್ಲಿ ಕಾಣಬಹುದು.
ಭಕ್ತಿಯಿಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ. ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲಾ ಪುರಾತನರು ನೆನೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
ಈ ವಚನದಲ್ಲಿ ಬಸವಣ್ಣನವರ ಭಕ್ತಿ ರಹಸ್ಯ ಅಡಗಿದ್ದು ಅಹಂಕಾರವನ್ನು
ಅಳಿದು ಸಮಷ್ಟಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಭೃತ್ಯಾಚಾರ ಮನೋಭಾವವನ್ನು ಕಾಣಬಹುದು. ಮರ್ತ್ಯಲೋಕದಲ್ಲಿ
ಭಕ್ತರುಂಟೆ ಎಂದು ಯಾರಾದರೂ ಪ್ರಶ್ನಿಸಿದರೆ ನಾನೊಬ್ಬನೇ ಭಕ್ತ ಉಳಿದವರೆಲ್ಲ ಲಿಂಗ ಜಂಗಮ ಸ್ವರೂಪ ಎಂದು
ಹೇಳಿದ ಬಸವಣ್ಣನವರ ಭಕ್ತಿ ಶ್ರೀಮಂತಿಕೆ ಎಂತಹದು ಎಂಬುದು ತಿಳಿಯುತ್ತದೆ. ತನ್ನ ಭಕ್ತಿಯಲ್ಲಿ ಪರಿಪಕ್ವತೆಯನ್ನು
ರೂಢಿಸಿಕೊಳ್ಳಲು ತಮ್ಮ ಸಮಕಾಲೀನರಾದ ಕಕ್ಕಯ್ಯ, ಚೆನ್ನಯ್ಯ ಮತ್ತು ದಾಸಯ್ಯನ ಮನೆಯಲ್ಲಿ ಕೂಡಾ ಬೇಡಲು
ಸಿದ್ಧ ಎನ್ನುವ ಅವರು ಎಲ್ಲಾ ಪುರಾತನರು ಪಾತ್ರೆಗೆ ಭಕ್ತಿಯನ್ನು ತುಂಬಿದರೆ ನಾನು ಪರಿಪೂರ್ಣ ಭಕ್ತನಾಗಬಹುದೆಂಬ
ಆಶಯ ಮನೋಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಸವಣ್ಣನವರು ಕಾಯಕ ಮತ್ತು ದಾಸೋಹ ವ್ಯವಸ್ಥೆಯನ್ನು ಜಾರಿಗೆ
ತಂದುದರಿಂದ ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ ಎಂಬಂತೆ ಅಲ್ಲಿನ ಪ್ರಜೆಗಳು ಆರ್ಥಿಕವಾಗಿ
ಸ್ವಾವಲಂಬಿಯಾದರು. ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ವಚನ ಸಾಹಿತ್ಯವನ್ನು ರಚನೆ ಮಾಡುವುದರ
ಮೂಲಕ ತುರುಗಾಹಿ ರಾಮಣ್ಣನಂತಹವರೂ ಕೂಡಾ ವಚನ ರಚಿಸಲು ಪ್ರೇರಣೆಯಾಗಿ ಸಾಕ್ಷರತೆಯ ಬೀಜ ನೆಟ್ಟರು. ದೇಹವೇ
ದೇವಾಲಯ ಎಂಬ ತತ್ವದ ಮೂಲಕ ಮಾನವನು ಮಹಾದೇವನಾಗಬಹುದು ಎಂಬುದನ್ನು ಸ್ವತಃ ಆಚರಿಸಿ ಇತರರಿಗೆ ಬೋಧಿಸಿದರು.
ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪ ವಿಶ್ವದಲ್ಲಿಯೇ ಪ್ರಥಮ
ಸಂಸತ್ತು ಎಂದೇ ಬಿಂಬಿತವಾಗಿದೆ. ಅನುಭವಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ ವಿಭಿನ್ನವಾದದ್ದು. ಅನುಭಾವಿಕ
ಹಿನ್ನೆಲೆಯಲ್ಲಿ ಶರಣರು ಆಡುತ್ತಿದ್ದ ಮಾತುಗಳೇ ವಚನಗಳಾದವು. ಅಂದಿನ ಅನುಭವಮಂಟಪದ ಪ್ರಭಾವ ಎಷ್ಟಿತ್ತೆಂದರೆ
ಅಂದು ಯಾವುದೇ ಪತ್ರಿಕಾ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಲ್ಲದಿದ್ದರೂ ಅದರ ಕೀರ್ತಿ ದೇಶ ವಿದೇಶಗಳಿಗೆ
ಹರಡಿತ್ತು. ಅನುಭವ ಮಂಟಪದ ಕೀರ್ತಿ ವಾರ್ತೆ ಕೇಳಿ ಆಫ್ಘಾನಿಸ್ಥಾನದಿಂದ ಮರುಳ ಶಂಕರದೇವರು, ಕಾಶ್ಮೀರದಿಂದ
ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಉತ್ತರಪ್ರದೇಶದಿಂದ
ಶಿವಲೆಂಕ ಮಂಚಣ್ಣ, ಮಹಾರಾಷ್ಟ್ರದಿಂದ ಸಿದ್ಧರಾಮೇಶ್ವರ, ಆಂಧ್ರಪ್ರದೇಶದಿಂದ ಉರಿಲಿಂಗದೇವ ಮತ್ತು ಉರಿಲಿಂಗಪೆದ್ದಿ,
ಗುಜರಾತ್‌ನಿಂದ ಆದಯ್ಯ ಕಲ್ಯಾಣದಲ್ಲಿ ನೆಲೆನಿಂತು ಶರಣರಾಗಿ ರೂಪುಗೊಂಡರು. ಅನುಭವಮಂಟಪದಲ್ಲಿ 770
ಅಮರಗಣಂಗಳು ಚರ್ಚೆ ಮಾಡುತ್ತಿದ್ದರು ಮತ್ತು ಏಕಕಾಲದಲ್ಲಿ 196000 ಶರಣರು ದಾಸೋಹ ಮಾಡುತ್ತಿದ್ದರು
ಎಂಬುದನ್ನು ಅನೇಕ ವಚನಗಳು ಉಲ್ಲೇಖಿಸುತ್ತವೆ.
ಬಸವಣ್ಣನವರು ಪ್ರತಿಪಾದಿಸಿದ ಜಾತಿ ಮತ್ತು ವರ್ಗರಹಿತ ಸಮಾಜ,
ಕಾಯಕ ತತ್ವ, ಮಾನವ ಕುಲದ ಕಲ್ಯಾಣಕ್ಕೆ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ದಾರಿದೀಪವಾಗಿರುವುದನ್ನು
ಮನಗಂಡು ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು
ಸಮಾನತೆಯ ತತ್ವಕ್ಕೆ ಮುನ್ನುಡಿ ಬರೆದಂತಾಗಿದೆ.
ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್
#೪೩೧, ೭ನೇ ಮುಖ್ಯರಸ್ತೆ,
೧೪ ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ,
ಬೋಗಾದಿ, ಮೈಸೂರು - 570026
ಮೊ. 9901137948
vachanakumaraswamy@gmail.com





