ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ ಸಂಪಾದನೆಯ ಗುರುಕರುಣ ತ್ರಿವಿಧಿ ಮತ್ತು ವಚನಗಳು ಕೃತಿ ಬಿಡುಗಡೆ
ಎಚ್.ಡಿ.ಕೋಟೆ ತಾ. ನಾಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಡಗಣ್ಣಸ್ವಾಮಿಯವರ ಪುತ್ರಿ ಮಹೇಶ್ವರಿ (ಚಂದು) ಮತ್ತು ಹೊಮ್ಮರಗಳ್ಳಿಯ ಎಚ್ ವಿ ಮಾದಪ್ಪನವರ ಪುತ್ರ
ಸೋಮಶೇಖರ್ ಮಾದಪ್ಪರವರ ವಿವಾಹ ಮಹೋತ್ಸವವು ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಹತ್ತಿರದ ಮಹಾದೇವತಾತಾರವರ ಸಂಗಮ ಕ್ಷೇತ್ರದಲ್ಲಿ 10 ಡಿಸೆಂಬರ್ 2022 ರಂದು ನಡೆಯಲಿದ್ದು ಅಂದು ಸಂಜೆ 6.30 ಕ್ಕೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ ವತಿಯಿಂದ ವಚನ ಕುಮಾರಸ್ವಾಮಿ ಸಂಪಾದನೆಯ ಗುರುಕರುಣ ತ್ರಿವಿಧಿ ಮತ್ತು ವಚನಗಳು ಎಂಬ ಕೃತಿಯನ್ನು ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹಾಂತಸ್ವಾಮೀಜಿ ಬಿಡುಗಡೆ ಮಾಡಲಿದ್ದಾರೆ.
ಮೈಲಾರ ಬಸವಲಿಂಗರ 101 ಗುರು ಸ್ತೋತ್ರಗಳು ಮತ್ತು ವಿವಿಧ ಶರಣರ 41 ವಚನಗಳನ್ನು ಕೃತಿಯು ಒಳಗೊಂಡಿದ್ದು, ಪುಸ್ತಕಾಭಿಮಾನ ಬೆಳೆಸಿ ಸಾಹಿತ್ಯ ಪರಂಪರೆಯನ್ನು ಮುಂದುವರಿಸಲು ಸಹಾಯಕವಾಗಿದೆ. ಹುಟ್ಟಿದಾಗಿನಿಂದ ಜೀವನದ ಅಂತ್ಯದವರೆಗೆ ಯಾವ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ವಿವರವಾಗಿ ನೀಡಲಾಗಿದೆ. ಹಾಸಿಗೆಯಿಂದ ಎದ್ದಾಗ ಯಾವ ವಚನವನ್ನು ಹೇಳಬೇಕು. ದೇವರನ್ನು ಯಾವಾಗ ಪೂಜಿಸಬೇಕು, ಯಾರಾದರೂ ಚುಚ್ಚು ಮಾತುಗಳನ್ನಾಡಿದಾಗ ಯಾವ ವಚನವನ್ನು ಪಾಲಿಸಿ ಸಮತೋಲಿತ ಜೀವನ ನಡೆಸಬೇಕು ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ನೀಡಲಾಗಿದ್ದು, ಮನುಷ್ಯನಿಗೆ ಆತ್ಮಸ್ಥೈರ್ಯ ವೃದ್ಧಿಯಾಗಲು ಕೃತಿ ಸಹಾಯಕವಾಗಲಿದೆ. ಒಟ್ಟು 3 ಸಾವಿರ ಕೃತಿಗಳನ್ನು ಮುದ್ರಣ ಮಾಡಿಸಿದ್ದು, ವಿವಾಹಕ್ಕೆ ಬರುವ ಎಲ್ಲರಿಗೂ ಉಚಿತವಾಗಿ ನೀಡಲಾಗುವುದು. ಇದುವರೆಗೆ ವಿವಾಹಕ್ಕೆ ಬರುವವರಿಗೆ ತೆಂಗಿನಕಾಯಿ, ತಟ್ಟೆ, ಲೋಟ, ವಸ್ತ್ರ ಮುಂತಾದ ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಪುಸ್ತಕವನ್ನು ಕೊಡುವುದರ ಮೂಲಕ ಹೊಸ ರೀತಿಯ ಸಂಪ್ರದಾಯ ಪ್ರಾರಂಭ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವಸ್ವಾಮಿಗಳು, ಪಟ್ಟದ ಮಠಾಧ್ಯಕ್ಷರು, ಹಂಚೀಪುರ, ಡಾ. ಷಡಕ್ಷರಿಸ್ವಾಮಿಗಳು, ಪಟ್ಟದ ಮಠಾಧ್ಯಕ್ಷರು, ದಡದಹಳ್ಳಿ, ಶ್ರೀಮಹದೇವಸ್ವಾಮಿಗಳು, ಮಠಾಧ್ಯಕ್ಷರು, ಶ್ರೀ ಪಡವಲು ವಿರಕ್ತ ಮಠ, ಬಿಡಗಲು, ಶ್ರೀ ಚಂದ್ರಶೇಖರಸ್ವಾಮಿಗಳು, ಶ್ರೀ ಬಸವೇಶ್ವರ ಪಟ್ಟದ ಮಠ, ಪುರ, ಶ್ರೀ ಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಚಂದ್ರಮೌಳೇಶ್ವರ ಪಟ್ಟದ ಮಠ, ಮಾದಾಪುರ, ಶ್ರೀ ನಾಗೇಂದ್ರಸ್ವಾಮಿಗಳು, ಪಟ್ಟದ ಮಠಾಧ್ಯಕ್ಷರು, ಬೀಚನಹಳ್ಳಿ, ಶ್ರೀ ತೋಂಟದಾರ್ಯಸ್ವಾಮಿಗಳು, ಪಟ್ಟದ ಮಠಾಧ್ಯಕ್ಷರು, ಹಂಚೀಪುರ, ಶ್ರೀ ನಂದೀಶ್ವರಸ್ವಾಮಿಗಳು, ದಾಸೋಹ ಮಠ, ಜಕ್ಕಳ್ಳಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಎಚ್.ಡಿ.ಕೋಟೆ ತಾ. ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ, ಕೆ.ಎಂ. ಮಹೇಶ್ ಉಪಸ್ಥಿತರಿರಲಿದ್ದಾರೆ.

No comments:
Post a Comment