Sunday, August 9, 2020

ಹನ್ನೊಂದನೆಯ ಅಂತರರಾಷ್ಷೀಯ ಅಂತರ್ಜಾಲ ಪ್ರವಚನ

 


ವಚನಗಳು ಕೇವಲ ಸಾಹಿತ್ಯವಲ್ಲ, ಅನುಭಾವಿಗಳ ಕ್ರಾಂತಿ

ಮೈಸೂರು : ವಚನಗಳು ಕೇವಲ ಸಾಹಿತ್ಯ ಮಾತ್ರವಲ್ಲದೆ ಅನುಭಾವಿಗಳ ಕ್ರಾಂತಿ ಎಂದು  ದಾವಣಗೆರೆ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಪ್ರಕಾಶ ಹಲಗೇರಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹನ್ನೊಂದನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ವಚನಕ್ರಾಂತಿಯ ಪ್ರತಿಭಟನೆಯ ನೆಲೆಗಳು ಎಂಬ ವಿಷಯ ಕುರಿತು ಪ್ರವಚನ ನೀಡಿ ಮಾತನಾಡಿದ ಅವರು ಭಕ್ತಿ ಹೆಸರಲ್ಲಿ ಅಂಧಾನುಕರಣೆ ಮತ್ತು ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಕಾಯಕದ ಮಹತ್ವ ತಿಳಿಸಿ ವೃತ್ತಿ ಗೌರವ ತಂದುಕೊಟ್ಟು ಕಾಯಕ ಆಧಾರಿತ ಸಮಾಜ ನಿರ್ಮಿಸಿದವರು ಕ್ರಾಂತಿಯೋಗಿ ಬಸವಣ್ಣನವರು. ಶರಣರ ವಚನಗಳು ಕ್ರಾಂತಿ ಗೀತೆಗಳಾಗಿ ದೇವರನ್ನು ಒಲಿಸಿಕೊಳ್ಳುವ ಹಾಗೂ ಲೋಕದ ಡೊಂಕನ್ನು ತಿದ್ದುವ ಸಾಹಿತ್ಯವಾಗಿದೆ. ವಚನಕಾರರು ಅನುಭವ, ಅನುಭಾವ ಹಾಗೂ ಅನುಭೂತಿ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಸಮಾಜದಲ್ಲಿ ಕಂಡು ಬರುತ್ತಿದ್ದ ಎಡರು ತೊಡರುಗಳು ಹಾಗೂ ನೋವು ನಲಿವುಗಳನ್ನು ಹೊರಹಾಕಲು ಅಖಂಡ ಕರ್ನಾಟಕದಲ್ಲಿ ಬಸವಾದಿ ಪ್ರಮಥರು ಅನುಭಾವದ ಕಿಚ್ಚನ್ನು ವಚನ ಸಾಹಿತ್ಯ ಮಾಧ್ಯಮದ ಮೂಲಕ ಹೊರಹಾಕಿದರು. ಸಂಸ್ಕøತದಿಂದ ಕನ್ನಡದ ಕಡೆಗೆ, ಪಂಡಿತ ಪಾಮರರಿಂದ ಜನಸಾಮಾನ್ಯರ ಕಡೆಗೆ, ಸಂಗ್ರಹದಿಂದ ಅಸಂಗ್ರಹದ ಕಡೆಗೆ ಪರಿವರ್ತಿಸಿದ ಶರಣರ ಕಾರ್ಯ ಎಲ್ಲಾ ಕಾರ್ಯಕ್ಕೂ ಪ್ರಸ್ತುತ. ಸರ್ಕಾರದ ಒಂದು ಅಂಗಸಂಸ್ಥೆಯ ರೀತಿ ಹತ್ತು ಹಲವು ಚಟುವಟಿಕೆಗಳನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಸ್ತುತ್ಯಾರ್ಹವಾದುದು ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ ಬೌದ್ಧಿಕ ಶ್ರಮದ ವಿದ್ವತ್ ಜನತಾ ಸಾಹಿತ್ಯಕ್ಕಿಂತ ದೈಹಿಕ ಶ್ರಮದ ಜನತಾ ಸಾಹಿತ್ಯ ಹೇಗೆ ಭಿನ್ನ ಎಂಬುದಕ್ಕೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ವ್ಯಕ್ತಿ ಕಲ್ಯಾಣದ ಜೊತೆ ಸಮಾಜದ ಕಲ್ಯಾಣ ಕೂಡಾ ಆಗಬೇಕು ಎಂಬುದು ವಚನ ಚಳುವಳಿಯ ಆಶಯ. ಸಾಹಿತ್ಯಕ್ಕಾಗಿ ಸಾಹಿತ್ಯವಲ್ಲ. ವ್ಯಕ್ತಿ ಪರಿವರ್ತನೆಗಾಗಿ ಸಮಾಜ ಪರಿವರ್ತನೆಗಾಗಿ ಸಾಹಿತ್ಯ ಎಂಬುದನ್ನು ತೋರಿಸಿಕೊಟ್ಟವರು ವಚನಕಾರರು ಎಂದರು. ನಂತರ ಮಾತನಾಡಿದ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಶರಣರು. ಮನುಕುಲದ ಕಲ್ಯಾಣಕ್ಕಾಗಿ ಅವರು ರಚಿಸಿದ ವಚನಗಳು ಇಂದು ಎಲ್ಲರೀಗೂ ದಾರಿದೀಪವಾಗಿವೆ ಎಂದರು. ಸುತ್ತೂರಿನ ಸಹನಾ ಬಸಲಿಂಗಯ್ಯ ಹಿರೇಮಠ ವಚನ ಗೀತೆ ಹಾಡಿದರು.  ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ, ವಿ. ಲಿಂಗಣ್ಣ, ಬಹ್ರೈನ್ ಶಿವಾನಂದ ಪಾಟೀಲ್, ಸಹನಾ ಬಸಲಿಂಗಯ್ಯ ಹಿರೇಮಠ,  ಮಸ್ಕತ್ ನಂದೀಶ್ವರ್ ನಂದು,  ಎಚ್. ಕೆ. ಚನ್ನಪ್ಪ, ಅನಿತಾ ನಾಗರಾಜ್, ಪಾಲಾಕ್ಷಯ್ಯ, ನಾಗಯ್ಯ, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಮಾರುತೇಶ್, ಮಲ್ಲಿಕಾರ್ಜುನಸ್ವಾಮಿ, ಜೆ. ಕವಿತ, ಜಯಾನಂದ ಟೋಪುಗೋಳ, ದೀಪ ತೊಲಗಿ, ಅರುಣ ಕುಮಾರ್ ರಾಜಮಾನೆ, ಬಸಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.


1 comment:

  1. ಅನುಭಾವ ಅಂದ್ರೆ ಏನು ಎಂಬುದರ ಉಪನ್ಯಾಸ ಚನ್ನಾಗಿ ಮೂಢಿ ಬಂದಿದೆ ಸ್ವಾಮಿಗಳೆ

    ಒಳ್ಳೆಯ ಸೇವೆ ತಮ್ಮದು

    ಶರಣ ಸೇವೆ ದೇವನ ಸೇವೆಯೇ ಆಗಿದೆ

    ReplyDelete