ಮೈಸೂರು : ಧರ್ಮಪೀಠವನ್ನು ಜ್ಞಾನಪೀಠವನ್ನಾಗಿಸಿದ ಮಹಾತ್ಮರು ಸುತ್ತೂರು ಜಗದ್ಗುರು ರಾಜೇಂದ್ರಶ್ರೀಗಳು ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ
ನಗರದ ಮೇಟಗಳ್ಳಿ ಜೆ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೦ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಅವರು ರಾಜೇಂದ್ರ ಶ್ರೀಗಳು ವಿಶಾಲವಾದ ಹಣೆಯ ತುಂಬಾ ಭಕ್ತಿ, ಜ್ಞಾನ ಮತ್ತು ವೈರಾಗ್ಯದ ಸಂಕೇತದAತೆ ಸದಾ ಶೋಭಿಸುವ ಬೆಳ್ಳಂಬೆಳಗಿನ ಭಸ್ಮಧಾರಣೆ ಮಾಡಿಕೊಂಡು ದರ್ಶನಕ್ಕೆ ಬಂದವರನ್ನು ಇವನಾರವನೆನ್ನದೆ ಇವನಮ್ಮವ ಎಂದು ಎಲ್ಲರನ್ನೂ ತಮ್ಮಲ್ಲಿಗೆ ಬರಮಾಡಿಕೊಳ್ಳುವ ವಿಶಾಲ ಬಾವನೆಯ ಮಾತೃ ಹೃದಯಿಗಳು. ಸಾವಿರಾರು ಮಕ್ಕಳಿಗೆ ವಸತಿ ಕಲ್ಪಿಸಿ ಅನ್ನದಾಸೋಹ ನೀಡಿ ಅನ್ನ ಬ್ರಹ್ಮ ಎನಿಸಿಕೊಂಡರು. ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ ಎಂಬ ಕವಿ ಈಶ್ವರ ಸಣಕಲ್ಲ ಅವರ ಕವಿತೆ ಅಕ್ಷರಶಃ ರಾಜೇಂದ್ರ ಶ್ರೀಗಳ ಜೀವನಕ್ಕೆ ಹೊಂದುತ್ತದೆ. ಶ್ರೀಗಳ ಸೇವೆಯನ್ನು ಕಣ್ಣಾರೆ ಕಂಡಿದ್ದ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ರಾಜಗುರುತಿಲಕ ಎಂಬ ಬಿರುದು ನೀಡಿ ಅರಮನೆಗೆ ರಾಜಗುರುವನ್ನಾಗಿ ಸ್ವೀಕರಿಸಿದರು ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಶಿಕ್ಷಕರ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಇಂದು ಕೃತಕ ಬುದ್ಧಿಮತ್ತೆಯನ್ನು ಅನೇಕರು ಗುರು ಎಂದು ಸಂಬೋಧಿಸುತ್ತಿದ್ದರೂ ಸಹಾ ಭೌತಿಕ ಗುರುಗಳು ಕೊಡುವ ಪ್ರೀತಿ, ಮಮತೆ, ಮೌಲ್ಯ, ಆತ್ಮವಿಶ್ವಾಸ, ಮತ್ತು ಸ್ಫೂರ್ತಿಯನ್ನು ನೀಡಲು ಸಾಧ್ಯವಿಲ್ಲ. ಬದಲಾದ ವಿದ್ಯಾರ್ಥಿಗಳ ಮನೋಭಾವ ಅರಿತು ಅವರನ್ನು ನಾಗರೀಕರನ್ನಾಗಿ ಮಾಡುತ್ತಿರುವ ಅನೇಕ ಪ್ರಾಮಾಣಿಕ ಶಿಕ್ಷಕರು ಭರವಸೆಯ ಸಾಕಾರಮೂರ್ತಿಗಳಾಗಿ ಕಂಗೊಳಿಸುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ದಿನ ನಾವು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುವುದರ ಜೊತೆಗೆ ಮಹಿಳೆಯರಿಗೆ ಶಿಕ್ಷಣ ನಿಷೇಧ ಏರಿದ್ದ ಕಾಲಘಟ್ಟದಲ್ಲಿ ಸಂಪ್ರದಾಯವಾದಿಗಳಿAದ ಅನೇಕ ಪೆಟ್ಟು ತಿಂದು ಮಹಿಳೆಯರಿಗೆ ಶಿಕ್ಷಣ ನೀಡಿ ಅವರು ಮುಖ್ಯವಾಹಿನಿಗೆ ಬರಲು ಕಾರಣೀಭೂತರಾದ ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರನ್ನೂ ಕೂಡಾ ಸ್ಮರಿಸಬೇಕು ಎಂದರು.
ಶಿರಮಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಮುರಘಿ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ರಾಜೇಂದ್ರ ಶ್ರೀಗಳಂತೆ ನಿಸ್ವಾರ್ಥವನ್ನು ರೂಢಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗಿ ಬಾಳಬೇಕು. ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳಿಂದ ವಿಧವಿಧದ ಹೂಗಳನ್ನು ಮಾಡಿ ಅಲಂಕಾರಕ್ಕೆ ಬಳಸಲಾಗುತ್ತದೆ. ಆದರೆ ನೈಜ ಹೂಗಳು ಕೊಡುವ ಸೌಂದÀರ್ಯ, ನೈಜತೆ ಮತ್ತು ಪರಿಮಳವನ್ನು ಕೃತಕ ಹೂಗಳು ನೀಡಲು ಸಾಧ್ಯವಿಲ್ಲ. ನಾವು ನೈಜ ಜೀವನಕ್ಕೆ ಬೆಲೆ ಕೊಟ್ಟು ವಿಶಾಲ ಹೃದಯಿಗಳಾಗಿ ರೂಪುಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಶೇ ೧೦೦ ಫಲಿತಾಂಶ ನೀಡಿದ ವಿಷಯ ಶಿಕ್ಷಕರಾದ ದೀಪ ಪ್ರಶಾಂತ್ ಮತ್ತು ದೀಪ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಸತೀಶ್ ಸ್ವಾಗತಿಸಿದರು. ಸಂಗೀತ ಶಿಕ್ಷಕಿ ಸುಮಂಗಲ ಜಂಗಮಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕಿ ಎಂ.ವಿ ಅಮೃತವಾಣಿ ವಂದಿಸಿದರು. ಶಿಕ್ಷಕ ಬಿ.ಆರ್ ಸುನೇಶ್ ಕುಮಾರ್ ನಿರೂಪಿಸಿದರು. ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

No comments:
Post a Comment