ಮೈಸೂರು : ಕತ್ತಲೆ ರಾಜ್ಯದ ಮೌಢ್ಯವನ್ನು ಅಳಿಸಿ ಕೋಟ್ಯಂತರ ಜನರ ಆರಾಧ್ಯದೈವ ಆದವರು ಶ್ರೀ ಮಲೆ ಮಹದೇಶ್ವರರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಕುಂತೂರು ಶ್ರೀ ವೀರಸಿಂಹಾಸನ ಮಠದಲ್ಲಿ ನಡೆದ ಶ್ರೀ ಮಲೆ ಮಹದೇಶ್ವರ ಜಯಂತಿ, ಗುರುಗಳ ಪುಣ್ಯಸ್ಮರಣೆ, ಶ್ರಾವಣಮಾಸದ ಪೂಜಾನುಷ್ಠಾನ ಮತ್ತು ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶ್ರೀಶೈಲದ ಚಂದ್ರಶೇಖರಮೂರ್ತಿ ಮತ್ತು ಉತ್ತರಾಜಮ್ಮರವರ ಸುಪುತ್ರರಾಗಿ ಜನಿಸಿದ ಮಹದೇಶ್ವರರು ನಂತರ ಭೀಮನಕೊಲ್ಲಿ, ಸುತ್ತೂರು, ವಾಟಾಳು ಮುಂತಾದ ಕಡೆ ಸಂಚರಿಸಿ ಅಂತಿಮವಾಗಿ ಇಂದಿನ ಮಹದೇಶ್ವರ ಬೆಟ್ಟದಲ್ಲಿ ಐಕ್ಯರಾಗುತ್ತಾರೆ. ಅಂದು ಹದಿನಾಲ್ಕನೇ ಶತಮಾನದಲ್ಲಿಯೇ ಸಾಲೂರು ಮಠದ ಶ್ರೀ ಮುಪ್ಪಿನ ಸ್ವಾಮಿಗಳು, ಕುಂತೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳೊಡನೆ ಮಹದೇಶ್ವರರು ಸಾಲೂರು ಮಠದಲ್ಲಿ ಸ್ಥಾಪಿಸಿದ ಮುಹೂರ್ತ ಕಂಬವನ್ನು ಇಂದಿಗೂ ಕಾಣಬಹುದು. ಸುತ್ತೂರಿನಲ್ಲಿ ಅಂದಿನ ಜಗದ್ಗುರುಗಳಾದ ಶ್ರೀ ಸಿದ್ಧನಂಜದೇಶಿಕೇಂದ್ರಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ರಾಗಿ ಕಲ್ಲನ್ನು ಬೀಸುವ ಮೂಲಕ ಕಾಯಕ ತತ್ವವನ್ನು ಎತ್ತಿಹಿಡಿದು, ಸುತ್ತೂರು ಮಠ ಸುಖ ಅಂತ ಬಂದ್ರೆ ಬೀಸೋಕೆ ಕುಕ್ಕೇಲಿ ರಾಗಿ ತುಂಬಿಟ್ರು ಎಂಬ ಗಾದೆ ಹುಟ್ಟುಕೊಳ್ಳಲು ಕಾರಣರಾದರು ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಮಹದೇಶ್ವರರು ಜಂಗಮಮೂರ್ತಿಯಾಗಿ ಕರ್ನಾಟಕದಾದ್ಯಂತ ಎಲ್ಲೆಡೆ ಸಂಚರಿಸಿ ಭಕ್ತರ ಮನ ಮತ್ತು ಮನೆದೈವವಾದುದರಿಂದ ಕೋಟ್ಯಂತರ ಭಕ್ತರನ್ನು ಹೊಂದಿದ್ದಾರೆ. ಮಹದೇಶ್ವರರು ಎಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಇಂದು ಮಹದೇಶ್ವರರ ದೇವಸ್ಥಾನ ನಿರ್ಮಾಣವಾಗಿರುವುದನ್ನು ಕಾಣಬಹುದು. ಕೆಳವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಕಂಡು ಅವರ ಹೃದಯದಲ್ಲಿ ಭಕ್ತಿಯ ಬೀಜವನ್ನು ಬಿತ್ತಿದುದರಿಂದ ಇಂದು ಶಿವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಜನರು ಕಾಲ್ನಡಿಗೆಯಲ್ಲಿ ಅವರ ದರ್ಶನ ಮಾಡಲು ಬರುವುದನ್ನು ಕಾಣಬಹುದು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚನ್ನಬಸವದೇಶಿಕೇಂದ್ರಸ್ವಾಮೀಜಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅರಿಷಡ್ವರ್ಗಗಳಿರುತ್ತವೆ. ಅವುಗಳನ್ನು ಗೆದ್ದಾಗ ಮಾನವ ಮಹಾದೇವನಾಗುತ್ತಾನೆ ಎಂದರು.
ನಂತರ ಮಲೆ ಮಹದೇವ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿ ಮಹದೇಶ್ವರರ ಬಗ್ಗೆ ಬೆಳಕು ಚೆಲ್ಲಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಪತ್ರಕರ್ತ ರಾಜಣ್ಣ ಮತ್ತು ಸಾವಯವ ಕೃಷಿಕ ಮಹೇಂದ್ರಕುಮಾರ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂತೂರು ಮಠದ ಶ್ರೀ ಶಿವಪ್ರಭುಸ್ವಾಮಿಗಳು, ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗಸ್ವಾಮಿಗಳು, ಮಡಿವಾಳಸ್ವಾಮಿ ಮಠದ ಅಡವಿಸ್ವಾಮಿಗಳು, ನರಗ್ಯಾತನಹಳ್ಳಿ ಮಠದ ಶಿವಕುಮಾರಸ್ವಾಮೀಜಿ, ದಂಡಿಕೆರೆ ಮಠದ ಶ್ರೀ ಬಸವಲಿಂಗಸ್ವಾಮಿಗಳು, ಗೌಡಳ್ಳಿ ಮಠದ ಶ್ರೀಗಳು, ಬಸಳ್ಳಿಹುಂಡಿ ಮಠದ ಶ್ರೀ ಬಸವರಾಜಸ್ವಾಮಿಗಳು, ಕುರಿಹುಂಡಿ ಮಠದ ಶ್ರೀಗಳು, ಶಿಕ್ಷಕ ತೋಂಟದಾರ್ಯ, ಜಯಶಂಕರ್, ವಿನೋದ್ ಕುಮಾರ್, ನಾಗರಾಜಪ್ಪ, ವಿ, ಲಿಂಗಣ್ಣ, ಉಪಸ್ಥಿತರಿದ್ದರು.


No comments:
Post a Comment