Friday, December 30, 2022

ವೈಶಾಲಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ

 

ಮೈಸೂರು : ವಿದ್ಯಾರ್ಥಿಗಳು ವಿದ್ಯಾವಂತರಾಗುವುದರ ಜೊತೆಗೆ ವಿನಯವಂತರಾಗಲು ಶಿಕ್ಷಕರು ಮತ್ತು ಪೋಷಕರು ಹೆಚ್ಚು  ಆಸಕ್ತಿ ವಹಿಸಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಕುಂಬಾರಕೊಪ್ಪಲಿನ ವೈಶಾಲಿ ವಿದ್ಯಾಸಂಸ್ಥೆ ಮೈಸೂರಿನ ಪುರಭವನದಲ್ಲಿ ಏರ್ಪಡಿಸಿದ್ದ ೪೨ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಬಸವಣ್ಣನವರ ವಚನವಾದ ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ ಎಂಬAತೆ ನಾವು ವಯಸ್ಸಾದ ಮೇಲೆ ದೇವರನ್ನು ನೂರು ಸಲ ನೆನೆಯುವುದಕ್ಕಿಂತ ವಯಸ್ಸಿರುವಾಗ ಕೇವಲ ಮೂರು ಸಲ ನೆನೆಯುವುದಕ್ಕೆ ಸಮ. ಆರೋಗ್ಯದ ಬಗ್ಗೆ ಹಿಂದಿಗಿAತಲೂ ಇಂದು ಕಾಳಜಿ ಹೆಚ್ಚಾಗಿದ್ದು, ದೇಹವನ್ನು ರೋಗ ಬಾರದಂತೆ ತಡೆಗಟ್ಟುವುದು ಮಾತ್ರ ಆರೋಗ್ಯವಲ್ಲ. ಪ್ರತಿಯೊಬ್ಬರೂ ಸಾಮಾಜಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ  ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ನಾಡು ಮತ್ತು ದೇಶವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೈಸೂರು ಮಾನಸ ಗಂಗೋತ್ರಿಯ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್.ಹೆಗಡೆ, ಉದ್ಯಮಿ ಬಿ.ಸುರೇಶ್, ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ಯಶೋಧಮ್ಮ, ಮುಖ್ಯಶಿಕ್ಷಕ ಈರೇಗೌಡ ಉಪಸ್ಥಿತರಿದ್ದರು.


Monday, December 26, 2022

ವಚನ ಮತ್ತು ಉಗಾಭೋಗ

 ಕರ್ನಾಟಕದ ಸಂಗೀತ ಪಿತಾಮಹ?

ಇಲ್ಲಿಯವರೆಗೆ #ಪುರಂದರದಾಸರೆ ಇದಕ್ಕೆ ಉತ್ತರ ಅಂತ ಅನೇಕರು, ಸರ್ಕಾರವು ಮತ್ತು ಇತಿಹಾಸಕಾರರು ಒಪ್ಪಿಕೊಂಡಿರುವುದು ದುರಂತ!.

ಖಂಡಿತ ಇದು ದಾರಿ ತಪ್ಪಿಸಿದ ಬಹುದೊಡ್ಡ ಸುಳ್ಳೆಂದೆ ಇಂದಿನ ಪೀಳಿಗೆ ಮನಗಾಣಬೇಕು!.


ಕಾರಣ ಕರ್ನಾಟಕ ಸಂಗೀತದ ನಿಜವಾದ ಜನಕರು, ಉದಕರು ಎಲ್ಲವೂ ಬಸವಾದಿ ಶರಣರೆ ಎನ್ನುವುದು ನನ್ನ ಮತ್ತು ಹಲವರ ಬಹುದೊಡ್ಡ ವಾದ.


ಕಾರಣ ದಾಸ ಸಾಹಿತ್ಯದ ೫೦% ಭಾಗ ವಚನಗಳ ಕಾಫಿಪೇಸ್ಟೆ ಆಗಿದೆ!.

ಉದಾ: 

ವಚನ


ನಾಳೆ ಬಪ್ಪುದು ನಮಗಿಂದೆ ಬರಲಿ, 

ಇಂದು ಬಪ್ಪುದು ನಮಗೀಗಲೆ ಬರಲಿ, 

ಇದಕಾರಂಜುವರು, ಇದಕಾರಳುಕುವರು 

`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ 

ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ

ಹರಿಬ್ರಹ್ಮಾದಿಗಳಿಗಳವಲ್ಲ. 

 #ಬಸವಣ್ಣನವರು.


ಉಗಾಭೋಗ


ಇದಕಾರಂಜುವರೋ ಗೋಪಾಲ?

ಇದಕಾರಂಜುವರೋ, ನಾಳೆ ಬಾಹೋದು

ಎಮಗಿಂದೆ ಬರಲಿ, ಇಂದೆ ಬಾಹೋದು

ನಾಳೆ ಬರಲಿ, ಆಗ ಬಾಹೋದು

ಎಮಗೀಕ್ಷಣ ಬರಲಿ ಯಾತರ ಭಯವು,

ಅಚಲಾನಂದವಿಠಲ. - ಪುರಂದರದಾಸ.


ಇನ್ನೊಂದು ಉದಾಹರಣೆಯನ್ನು ನೋಡಿ:


#ವಚನ


ಹರಿವ ಹಾವಿಂಗಂಜೆ, ಉರಿಯ ನಾಲಿಗೆಗಂಜೆ, 

ಸುರಗಿಯ ಮೊನೆಗಂಜೆ, 

ಒಂದಕ್ಕಂಜುವೆ, ಒಂದಕ್ಕಳುಕುವೆ 

ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ. 

ಮುನ್ನಂಜದ ರಾವಣನೇ ವಿಧಿಯಾದ ! 

ಅಂಜುವೆನಯ್ಯಾ, ಕೂಡಲಸಂಗಮದೇವಾ. 

  #ಬಸವಣ್ಣನವರು.


ಉಗಾಭೋಗ


ಉರಿಗಂಜೆ, ಸಿರಿಗಂಜೆ

ಶರೀರದ ಭಯಕಂಜೆ

ಪರಧನ ಪರಸತಿ ಎರಡಕ್ಕಂಜುವೆನಯ್ಯ

ಹಿಂದೆ ಮಾಡಿದ ರಾವಣನೇನಾಗಿ ಪೋದನು

ಮುಂದೆನ್ನ ಸಲಹಯ್ಯ ಪುರಂದರವಿಠಲ. - ಪುರಂದರದಾಸ.


ಈ ಮೇಲ್ಕಂಡ ಉದಾಹರಣೆಗಳನ್ನು ಗಮನಿಸಿದಾಗ ದಾಸರ ಮೇಲೆ ಶರಣರ ವಚನಗಳ ಪ್ರಭಾವ ಗಾಢವಾಗಿಯೇ ಆಗಿದೆ ಎಂಬುದನ್ನು ನೋಡಬಹುದು, ಮತ್ತು ಈತರ ಹುಡುಕುತ್ತಾ ಹೋದರೆ ೭೦%-೮೦% ದಾಸ ಸಾಹಿತ್ಯ ವಚನಗಳಿಂದಲೆ ಮರು‌ನಿರ್ಮಿತವಾಗಿದೆ ಎಂಬುದು ನಾವಿಲ್ಲಿ ಕಾಣಬಹುದು.


ಡಾ. ಎಂ. ಚಿದಾನಂದಮೂರ್ತಿಯವರು "ಉಗಾಭೋಗಗಳಂ ಮತ್ತು 

ವಚನೆಗಳು' ಎಂಬ ತಮ್ಮ ಪ್ರಬಂಧವೊಂದರಲ್ಲಿ ದಾಸಸಾಹಿತ್ಯದ ಮೇಲೆ 

ವಚನಸಾಹಿತ್ಯದ ಪ್ರಭಾವವಿರುವುದನ್ನು ಹೇಳಂತ್ತ ಉಗಾಭೋಗಗಳ ಬಂಧ 

ವಚನಗಳ ಬಂಧವನ್ನು ಬಹುಮಟ್ಟಿಗೆ Copy-Paste ಎನ್ನುವುದನ್ನು ಅನೇಕ ನಿದರ್ಶನಗಳೊಂದಿಗೆ ತೋರಿಸಿಕೊಟ್ಟಿದ್ದಾರೆ.


ವಚನ ಹಾಗೂ ಕೀರ್ತನೆಗಳಲ್ಲಿರಂವ 

ವೃತ್ಯಾಸಕ್ಕೂ ಈ ನಿದರ್ಶನವನ್ನು ಗಮನಿಸಬಹುದು - 


“ಎದೆ ಬಿರಿವನ್ನಕ ಮನ ದಣಿವನ್ನಕ 

ನಾಲಗೆ ನಲಿನಲಿದೋಲಾಡುವನ್ನಕ 

ನಿಮ್ಮ ನಾವಕಾಮೃತವ ಶಂದಿರಿಸು ಕಂಡ . 

ಬಿರಿಮುಗುಳಂತೆ ಎನ್ನ ಹೃದಯಂ 

ನಿಮ್ಮ ಶ್ರೀ ಚರಣದ ಮೇಲೆ ಬಿದ್ದರಳುಗೆ 

ಕೂಡಲಸಂಗಮದೇವ-

        ಈ ವಚನವನ್ನು 

ನಾರಾಯಣ ನಿನ್ನ ನಾಮದ ಸ್ಮರಣೆಯ 

ಸಾರಾಮೃತವೆನ್ನ ನಾಲಿಗ್ಗೆ ಬರಲಿ 

ಎಂಬ ಕೀರ್ತನೆಯೊಡನೆ ಹೋಲಿಸಿ ನೋಡಿದರೆ ಸ್ಪಷ್ಟವಾಗುತ್ತಾ ಹೋಗುತ್ತದೆ!.


ಬಸವಣ್ಣನವರು "ಎನಗಿಂತ ಕಿರಿಯರಿಲ್ಲ ಶಿವಭಕ್ತರಿ 

ಗಿಂತ ಹಿರಿಯರಿಲ್ಲ' ಎಂದಂತೆ ಪುರಂದರರೂ "ಬಡವರೊಳಗೆ ಎನ್ನಿಂದಾರಂ 

ಬಡವರಿಲ್ಲ ಕೊಡಂವರೊಳಗೆ ನಿನ್ನಿಂದಾರು ಕೊಡಂವರಿಲ್ಲ' ಎನ್ನುತ್ತಾರೆ.


ಬಸವಣ್ಣನವರು

ತಂದೆ ನೀನು ತಾಯಿ ನೀನು ಬಂಧು 

ಬಂಧು ಬಳೆಗೃನೀನಿ ತಂದೆ ತಾಯಿಯು 


ಪುರಂದರದಾಸರು

ನೀನು ನೀನೆ ಎಂದೆಂದಿಗೂ ನಿನ್ನ ನೆಂಬಿದೆನೊ 

ಬಳಗ ನೀನು ನೀನಲ್ಲದೆ ಮತ್ತಾರು ಕೃಷ್ಣ 

ಇಲ್ಲವಯ್ಯ 


ಬ: ಸಾರಸಜ್ಜನರ ಸಂಗವೇ ಲೇಸು 

ಪು: ದುಷ್ಟರ ಸಂಗವ ಬಿಡುವದೆ ಸ್ನಾನ 

ಕಂಡಯ್ಯ 


ಬ: ದೂರ ದಂರ್ಜನರ ಸಂಗವದು 

ಪು: ಭಂಗ ಶಿಷ್ಟರ ಸಹವಾಸ ವಣಡುವದೆ ಸ್ನಾನ 

` ವಯ್ಯ 


ಬ: ನುಡಿದರೆ. ಮುತ್ತಿನ ಹಾರದಂತಿರ 

ಪು: ಆಚಾರವಿಲ್ಲದ ನಾಲಗೆ ನಿನ್ನ 

ಭೇಕು - 


ಬ: ನುಡಿದರೆ ಲಿಂಗಮೆಚ್ಚಿ ಅಹುದೇನ 

ಪು: ನೀಚ ಬುದ್ಧಿಯ ಬಿಡು ನಾಲಗೆ 

ಬೇಕು . 


ಬ:ವಿಚಾರವಿಲ್ಲದೆ ಪರದ ದೂಸಿಸುವುದಕ್ಕೆ 

ಮೃದುವಚನವೇ ಸಕಲ ಜಪಂಗಳಯ್ಯ 

ಪು: ಚಾಚಿಕೊಂಡಿಯವಂಥ ನಾಲಗೆ 

ಮೃದುವಚನವೇ ಸಕಲ ತಪಂಗಳಯ್ಯ.


ಬ:ಹೊಯ್ದವರೆನ್ನೆ ಹೊರೆದವರೆಂಬೆ.

ಪು: ನಿಂದಕರಿರಬೇಕು ಹಂದಿಯಿದ್ದರೆ ಕೇರಿ 

ನಿಂದಿಸಿದರೆನ್ನ ತಂದೆ ತಾಯಿಗಳೆಂಬೆ ಹ್ಯಾಂಗೆ ಶುದ್ಧವೊ ಹಾಂಗೆ 

ಇತ್ಯಾದಿ ಇತ್ಯಾದಿ ಇತ್ಯಾದಿಗಳು


ಮತ್ತು ಶರಣರು ರಚಿಸಿರುವ ಸ್ವರವಚನಗಳ ಸ್ವರೂಪ ಸ್ಥೂಲವಾಗಿ ಹೀಗಿದೆ: ಮೊದಲು ಪಲ್ಲವಿ ಬಳಿಕ ಮೂರು ಅಥವಾ ಐದು ಚರಣಗಳು. ಸ್ವರವಚನಗಳಿಗೆ ಅವರು ಬಳಸಿರುವ ರಾಗಗಳ ಹೆಸರು ಹೀಗಿವೆ: ಆಹಿರಿ, ಆರಭಿ, ಕಾಂಬೋಧಿ, ಕೈಶಿಕಿಮಂಗಳ, ದೇವಗಾಂಧಾರಿ, ಘೊರ್ಜರಿ, ಗುಂಡಕ್ರಿಯ, ಗೌಳ, ಕನ್ನಡಗೌಳ, ನಾರಾಯಣಿ, ಮಾಳವಿ, ಗೌಳಿಪಂತು, ಜಂಝಾಟಿ, ಪುನ್ನಾಗವರಾಳಿ, ಫಲಮಂಜರಿ, ಭೌಳಿ, ದೇಶಾಕ್ಷಿ, ದೇಶಿ, ಧನ್ಯಾಸಿ, ನಾಟಿ, ನಾದನಾಮಕ್ರಿಯೆ, ಪಹಾಡಿ, ಪಂತುವರಾಳಿ, ಭೂಪಾಳಿ, ಭೈರವಿ, ಸಾರಂಗ, ಮಲಹರಿ, ಮಾಧುಮಾದವಿ, ರಾಮಕ್ರಿಯ, ಲಲಿತ, ವರಾಳಿ, ವಸಂತ, ಮಾಳವಗೌಳ, ಹಿಂದೋಳ, ಶಂಕರಾಭರಣ, ಶ್ರೀರಾಗ, ಸೌರಾಷ್ಟ್ರ - ಹೀಗೆ ಇಂದು ನಮ್ಮ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧವಾಗಿರುವ ಎಲ್ಲ ರಾಗಗಳನ್ನೂ ಬಳಸಿಕೊಂಡು ’ಸ್ವರವಚನ’ಗಳನ್ನು ರಚಿಸಲಾಗಿದೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮೇಲ್ಕಂಡ ರಾಗಗಳನ್ನು ’ಬತ್ತೀಸ ರಾಗಗಳು’ ಎಂದು ಬಣ್ಣಿಸಿದ್ದಾರೆ. ತಾಳಗಳಲ್ಲಿ ಆದಿತಾಳ, ರೂಪಕತಾಳ, ಆಟತಾಳ ಮತ್ತು ಝಂಪೆ ತಾಳಗಳನ್ನು ೧೨ ನೇ ಶತಮಾನದಲ್ಲಿಯೇ ಬಳಸಲಾಗಿದೆ.


ಅನಂತರ ೧೬ನೇ ಶತಮಾನದಲ್ಲಿ ಬಂದ ದಾಸರು ಇದೇ ’ಬತ್ತೀಸ’ ರಾಗ-ತಾಳಗಳನ್ನು ಬಳಸಿಕೊಂಡು ’ಪದ’ಗಳನ್ನು ರಚಿಸಿರುವುದನ್ನು ತಾವು ಮೆಲ್ಕಾಣಿಸಿದ ವಚನಗಳಿಂದ ಗಮನಿಸಬಹುದು.

 

ಮತ್ತು

ಎನ್ನ ಕಾಯವ ದಂಡಿಗೆಯ ಮಾಡಯ್ಯ 

ಎನ್ನ ಶಿರವ ಸೋರೆಯ ಮಾಡಯ್ಯ 

ಎನ್ನ ನರವ ತಂತಿಯ ಮಾಡಯ್ಯ 

ಬತ್ತಿಸರಾಗವ ಹಾಡಯ್ಯ ; ಉರದಲೊತ್ತಿ ಬಾರಿಸು

ಕೂಡಲಸಂಗಮದೇವಾ “


ಈ ವಚನದಲ್ಲಿ ಬಸವಾದಿ ಶರಣರಿಗೆ ಎಷ್ಟೊಂದು ಸಂಗೀತದ ಮೇಲೆ ಪ್ರೇಮ ಮತ್ತು ಪ್ರಭಾವವನ್ನು ಕಾಣಬಹುದು.


ಅನೇಕ ವಚನಗಳಲ್ಲಿ ಹಾಡಿನ ತಾಳತಂಬೂರಿಗಳ ಉಲ್ಲೇಖವಿದೆ. ಏಳುತಾಳಗಳ ಬಗೆಗೆ, ಶಾಸ್ತ್ರೀಯ ಸಂಗೀತ ವಾದ್ಯ, ಜಾನಪದರು ಬಳಸುವ ವಾದ್ಯಗಳು ಹೀಗೆ ಅನೇಕ ವಾದ್ಯಗಳ ಉಲ್ಲೇಖವಿದೆ. ಕೆಲವು ಸ್ವರವಚನಕಾರರಾದರೋ ರಾಗವನ್ನು ರಚನೆಗೆ ಸೂಚಿಸಿ, ರಾಗ ಸಂಚಾರವನ್ನೂ ರಚನೆಯ ಸಾಹಿತ್ಯದಲ್ಲೇ ಸೇರಿಸಿ ತಿಳಿಸಿದ್ದಾರೆ. ಬಹುತೇಕ ಸ್ವರವಚನಕಾರರು ಗಾನವ, ಹಾಡಿರಿ, ಪಾಡಿರಿ, ಭಜಿಸಿರಿ ಮುಂತಾದ ಪದಗಳನ್ನು ಬಳಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಿರ್ವಿವಾದವಾಗಿ ಬಸವಾದಿ ಶರಣರೆ  ಕರ್ನಾಟಕ ಸಂಗೀತದ ಉದಕರು ಎಂದು ನಾವು ತಿಳಿಯಬಹುದು.


ಮತ್ತು ಸರ್ಕಾರ ಇನ್ನೂ ಮೇಲಾದರು ಬೇಕಾದರೆ ಇನ್ನಷ್ಟು ಇದರ ಮೇಲೆ ಸಂಶೋಧನೆ ಮಾಡಿ ಇದಕ್ಕೆ ಸರಿಯಾದ ನ್ಯಾಯ ಕೊಡಿಸಬೇಕು! ಬಸವಾದಿ ಶರಣರೆ ಕರ್ನಾಟಕ ಸಂಗೀತದ ಪಿತಾಮಹರೆಂದು ಮತ್ತು ದಾಸ ಪರಂಪರೆ ಇದನ್ನ ಅಭಿವೃದ್ಧಿ ಪಡಿಸಿದರೆಂದು ಸ್ಪಯ ಸಮಾಜಕ್ಕೆ ಅರುಹಬೇಕಾಗಿ ನಮ್ರ ವಿನಂತಿ!


ರಾತ್ರಿ ಆದರೂ ಇದಕ್ಕೆ ತಲೆ ಕೆಡೆಸಿ ಬರೆಯುವ ಹಾಗೇ ಮಾಡಿದ ಮಾಚಿದೇವ ಭೋಸಲೆ ಬೆಳಗಾವಿ ರಾಯಣ್ಣ. ಶರಣರಿಗೆ 🙏 


ಶರಣು ಶರಣಾರ್ತಿಗಳ

ಶಿವಾನಂದ ಗುಂಡಾನವರ

Facebook massage

Sunday, December 25, 2022

ಇಷ್ಟಲಿಂಗದ ಮಹತ್ವ

ಇಷ್ಟಲಿಂಗ-ಚುಳುಕಾದ ದೇವ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗ-ಚುಳುಕಾದ ದೇವ

ಜಗದಗಲ ಮುಗಿಲಗಲ ಎಂಬ ವಚನದಲ್ಲಿ ಬಸವಣ್ಣನವರು ಪ್ರತಿಪಾದಿಸುವಂತೆ ಇಷ್ಟಲಿಂಗವು ಆ ಪರಾತ್ಪರ ಪರಮಾತ್ಮನ ಚುಳುಕಾದ ರೂಪ, ಅಕ್ಕಮಹಾದೇವಿಯೂ ಅದನ್ನು ತನ್ನ ವಚನದಲ್ಲಿ ಹೀಗೆ ಪ್ರತಿಪಾದಿಸಿದ್ದಾಳೆ,

ಅಯ್ಯಾ ! ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,
ಅಯ್ಯಾ ! ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ ಚನ್ನಮಲ್ಲಿಕಾರ್ಜುನಯ್ಯಾ,
ನೀನೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ !
-ಶ್ರೀ ಅಕ್ಕಮಹಾದೇವಿ
ಈ ಎರಡು ವಚನಗಳಲ್ಲಿ ಪರಶಿವನು ಜಗದಗಲವಾಗಿ, ಮುಗಿಲಗಲವಾಗಿ ಅರ್ಥಾತ್ ವಿಶ್ವಭರಿತನಾಗಿದ್ದು ಪಾತಾಳಕ್ಕತೀತವಾಗಿ ಅವನ ಪಾದಗಳೂ, ಬ್ರಹ್ಮಾಂಡಕ್ಕತೀತವಾಗಿ ಶ್ರೀ ಮುಕುಟವೂ, ದಶದಿಕ್ಕುಗಳಿಗತೀತವಾಗಿ ಅವನ ದಶಭುಜಂಗಳೂ ಇರುವುದಾಗಿ-ಅಂದರೆ ಪರಶಿವನು ವಿಶ್ವಾತೀತನಾಗಿರುವನು ಎಂಬುದಾಗಿ ಹೇಳಲಾಗಿದೆ. ಭೇದಿಸಲಸಾಧ್ಯವಾದ, ಪ್ರಮಾಣಗಳಿಗೆ ನಿಲುಕದಂಥ ಕಣ್ಣಿಗೆ ಕಾಣದಂಥ, ಹೇಗೂ ಉಪಮಿಸಬಾರದಂಥ ಆ ಪರವಸ್ತು ಶರಣನ ಕರಸ್ಥಲಕ್ಕೆ ಬಂದು ಚುಳುಕಾಗಿದೆ. ಅಂದರೆ ಕರಿಯು ಕನ್ನಡಿಯಲ್ಲಿ ಅಡಗುವಂತೆ (ಚುಳುಕಾಗುವಂತೆ) ಮತ್ತು ದೊಡ್ಡದಾದ ಒಂದು ಪಟ್ಟಣವು ಕ್ಯಾಮರಾದ ಚಿಕ್ಕಫಿಲ್ಮದಲ್ಲಿ ಚುಳುಕಾಗಿ ಮೂಡುವಂತೆ, ಆ ಘನವಸ್ತು ಶರಣನ ಕರಕಂಜದಲ್ಲಿ ಚುಳುಕಾಗಿ ಬಂದು ತನ್ನ ನಿಜದ ನಿಲುವನ್ನು ಅವನಿಗೆ ತೋರಿಸಿದೆ.

ಜಗವನೊಳಕೊಂಡ ಲಿಂಗವು
ಸೊಗಸಿಂದೆನ್ನ ಕರಸ್ಥಲಕ್ಕೆ ಬಂದಿರಲು
ಕಂಡು ಹಗರಣವಾಯಿತ್ತೆನಗೆ;


ಗುರುಲಿಂಗ ಜಂಗಮ ಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ. ಆಹಾ ಎನ್ನ ಪುಣ್ಯವೆ ! ಆಹಾ ಎನ್ನ ಭಾಗ್ಯವೆ!!

ಆಹಾ ಅಖಂಡೇಶ್ವರಾ ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
-ಷ.ವ, 64

ಈ ಜಗವನ್ನೆಲ್ಲ ತನ್ನಲ್ಲಿ ಗರ್ಭಿಕರಿಸಿಕೊಂಡು ಇದೆಲ್ಲದಕ್ಕೂ ಆಧಾರವಾಗಿ ಇರುವ ಆ ಪರಶಿವ ಲಿಂಗವು ಎನ್ನ ಕರಸ್ಥಲಕ್ಕೆ ಬಂದು ತನ್ನ ಘನ ಸ್ವರೂಪವನ್ನು ತೋರಿಸುವಾಗ, ಅದು ನನ್ನ ಪುಣ್ಯ ವಿಶೇಷವೆಂದೂ ಭಾಗ್ಯ ವಿಶೇಷವೆಂದೂ ಹೇಳಿ ತನ್ನ ಮನಕ್ಕೆ ಮಂಗಲವನ್ನುಂಟುಮಾಡಿದ ಆ ಲಿಂಗದ ಆನಂದದ ನಿಬ್ಬೆರಗಿನಲ್ಲಿ ನಿಂತು ನಲಿನಲಿದಾಡಿ ಲಿಂಗಾಂಗ ಸಮರಸಿಯಾಗಿದ್ದಾರೆ ಷಣ್ಮುಖ ಸ್ವಾಮಿಗಳು.

ಇಲ್ಲಿ ಒಂದು ಮಾತನ್ನು ಗಮನಿಸಬೇಕಾಗಿದೆ. ಒಂದು ಚಮಚ ಹಾಲು ಕುಡಿದರೆ ಆಗುವ ತೃಪ್ತಿಗಿಂತಲೂ ಒಂದು ಬಟ್ಟಲು ಹಾಲು ಕುಡಿದರೆ ಹೆಚ್ಚಿಗೆ ತೃಪ್ತಿಯಾಗುವದಷ್ಟೆ ! ಆದರೆ ಒಂದು ಹನಿ ಅಮೃತ ಕುಡಿದರೆ ಆಗುವ ತೃಪ್ತಿಗಿಂತ ಒಂದು ಚಮಚೆ ಅಮೃತ ಕುಡಿದರೆ ಹೆಚ್ಚಿಗೆ ತೃಪ್ತಿಯಾಗದೆ ಮೊದಲಿನಷ್ಟೇ ತೃಪ್ತಿಯಾಗುವುದು. ಏಕೆಂದರೆ ಅಮೃತವನ್ನು ಒಂದು ಹನಿ ಕುಡಿಯಲಿ, ಚಮಚೆ ಕುಡಿಯಲಿ, ತಂಬಿಗೆ ಕುಡಿಯಲಿ, ಅವನು ಅಮರನಾಗಿ ನಿಜಾನಂದವನ್ನು ಹೊಂದುವನಾಗಿ ತರತಮಕ್ಕೆ ಅಲ್ಲಿ ಅವಕಾಶವಿಲ್ಲ. ಅದರಂತೆ ಆ ಪರವಸ್ತುವನ್ನು ಶರಣನು ಕರಕಂಜದಲ್ಲಿ ಕಂಡಾಗ ಅದರ ಬೃಹತ್ ಸ್ವರೂಪವನ್ನೇ-ಘನಸ್ವರೂಪವನ್ನೇ ಕಂಡು ನಿಜಾನಂದ, ತೃಪ್ತಿಯನ್ನು ಹೊಂದುತ್ತಾನೇ ವಿನಾ ಅದರ ಅಂಶದಿಂದಲ್ಲ. ಏಕೆಂದರೆ ದೇವನು ಎಲ್ಲದರಲ್ಲಿಯೂ ಪೂರ್ಣವಾಗಿಯೇ ಇರುತ್ತಾನೆ. ಅವನು ಬೇರೆ ಬೇರೆ ವಸ್ತುಗಳಲ್ಲಿ ಖಂಡಿತ ಖಂಡಿತವಾಗಿರದೆ ಅಖಂಡ ಪರಿಪೂರ್ಣವಾಗಿಯೇ ವಿರಾಜಿಸುತ್ತಾನೆ. ಅಂತೆಯೇ ಉಪನಿಷತ್ತು ಹೀಗೆ ಹೇಳಿದೆ :

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ, ಪೂರ್ಣಮೇವಾವಶಿಷ್ಯತೆ ||
-ಈಶಾವಾಸ್ಕೋಪನಿಷತ್ ೧ : ೧

ಅದು ಪೂರ್ಣ, ಇದು ಪೂರ್ಣ: ಪೂರ್ಣದಿಂದ ಪೂರ್ಣವು ಹೊರಹೊಮ್ಮುತ್ತದೆ, ಪೂರ್ಣದಲ್ಲಿ ಪೂರ್ಣ ಕಳೆದರೆ ಪೂರ್ಣವೇ ಉಳಿಯುತ್ತದೆ. ಇಷ್ಟಲಿಂಗವು ಆ "ಪೂರ್ಣ" ಪರಬ್ರಹ್ಮನ ಪ್ರತೀಕ.

ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು
ಎಂದೆನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ !
ಉಪಮಾತೀತ ವಾಜನಕ್ಕಗೋಚರನು.
ಎಂದೆನಿಸುವ ಲಿಂಗದೇವನ ಕಂಡೆನಯಾ ಎನ್ನ ಕರಸ್ಥಲದಲ್ಲಿ !
ಶ್ರುತಿತತಿಯ ಶಿರದ ಮೇಲೆ ಅತ್ಯತಿಷ್ಠ ದಶಾಂಗುಲನು
ಎಂದೆನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ !
ಭಾವಭರಿತ ಜ್ಞಾನಗಮ್ಯನು
ಎಂದೆನಿಸುವ ಲಿಂಗದೇವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ !
ಅಖಂಡೇಶ್ವರನೆಂಬ
ಅನಾದಿ ಪರಶಿವನ ಕಂಡೆನಯ್ಯಾ ಎನ್ನ ಕರಸ್ಥಲದಲ್ಲಿ ! !
-ಷ.ವ. 65

ಆ ಅನಾದಿ ಪರಶಿವನು ಅಣುವಿಗಿಂತಲೂ ಅಣುವಾಗಿ ಅಂದರೆ ಅತಿ ಚಿಕ್ಕದಾದ ವಸ್ತುವಿಗಿಂತಲೂ ಚಿಕ್ಕವನಾಗಿಯೂ ಅತಿ ಘನವಾದುದು ವಿಶ್ವವಾದರೆ-ಅಂಥ ವಿಶ್ವಕ್ಕಿಂತಲೂ ಘನವಾಗಿ, ಮಹತ್ತಾಗಿ, ದೊಡ್ಡವನಾಗಿಯೂ; ಉಪಮೆಗಳಿಂದ ವರ್ಣಿಸಲು ಅಸಾಧ್ಯನಾಗಿಯೂ ವಾಕ್ ಮನಸ್ಸಿಗೆ ಅಗೋಚರನಾಗಿಯೂ, ಶ್ರುತಿ-ಸ್ಕೃತಿಗಳಿಗೆ ನಿಲುಕದೆ ಅತೀತನಾಗಿಯೂ ಇರುವನು. ಜ್ಞಾನಕ್ಕೆ ತರ್ಕಕ್ಕೆ ತಿಳಿಯಲಸಾಧ್ಯವಾಗಿ ಭಾವಭರಿತನಾದ ಪರಶಿವನನ್ನು ಎನ್ನ ಕರಸ್ಥಲದಲ್ಲಿ ಕಂಡು ಲಿಂಗಾನಂದ ಸಮರಸಿಯಾದೆನೆಂದು ಶ್ರೀ ಷಣ್ಮುಖ ಸ್ವಾಮಿಗಳು ಮನವಾರ ಹಾಡಿಕೊಂಡಿದ್ದಾರೆ.

ವೇದ ವೇದಾಂತಗಳಿಗೆ ಅಸಾಧ್ಯವಾದ
ಅನುಪಮ ಲಿಂಗವ ತಂದುಕೊಟ್ಟನಯ್ಯಾ
ಸದ್ಗುರು ಎನ್ನ ಕರಸ್ಥಲಕ್ಕೆ, ನಾದಬಿಂದು ಕಳೆಗಳಿಗಭೇದ್ಯವಾದ
ಅಚಲಿತ ಲಿಂಗವ ತಂದುಕೊಟ್ಟನಯ್ಯಾ
ಸದ್ಗುರು ಎನ್ನ ಕರಸ್ಥಲಕ್ಕೆ ವಾನಕ್ಕಗೋಚರವಾದ
ಅಖಂಡಿತ ಲಿಂಗವ ತಂದು ಕೊಟ್ಟನಯ್ಯಾ
ಸದ್ಗುರು ಎನ್ನ ಕರಸ್ಥಲಕ್ಕೆ ಇನ್ನು ನಾನು ಬದುಕಿದೆನು.
ನಾ ಬಯಸುವ ಬಯಕೆ ಕೈ ಸಾರಿತಿಂದು ಕೂಡಲಸಂಗಮದೇವಾ.
-ಬ.ಷ.ಹೆ.ವ. ೧೦೨೧

ವೇದಾಂತಗಳಿಗೆ ಅಸಾಧ್ಯವಾದ, ಉಪಮೆಗೆ ನಿಲುಕದಂಥ ಅನುಪಮವಾದ, [ಬೈಂದ್ವಾತ್ಮಕ ಪಿಂಡವನ್ನೂ, ನಾದಾತ್ಮಕ ಪ್ರಾಣವನ್ನೂ ಕಲಾತ್ಮಕ ಪುರುಷನನ್ನೂ ಮೀರಿ ಶಿವನು ಮನೋಮೂರ್ತಿ ಪ್ರಣವ ಸ್ವರೂಪಿ ನಿಃಕಲನಾಗಿರುವುದರಿಂದ] ನಾದಬಿಂದು ಕಲಾತೀತನಾದ, ಎಲ್ಲವನ್ನೂ ಚಲಿಸಿ ತಾನು ಮಾತ್ರ ಚಲಿಸದ [Unmoved Mover of this universeSocrates] ಅಚಲಿತನಾದ, ವಾಕ್ ಮನಕ್ಕೆ ಅಗೋಚರನಾದ, ಅಖಂಡ ಪರಿಪೂರ್ಣನಾದ ಪರಶಿವನನ್ನು ಲಿಂಗರೂಪವಾಗಿ ಎನ್ನ ಕರಸ್ಥಲಕ್ಕೆ ಸದ್ಗುರು ಸ್ವಾಮಿ ಕೊಟ್ಟ ಬಳಿಕ, ನಾನು ಅಮರನಾಗಿ, ಮುಕ್ತಿಯೆಂಬ ಎನ್ನ ಹೆಬ್ಬಯಕೆಯನ್ನು ಕೈವಶಮಾಡಿಕೊಂಡು ಧನ್ಯನಾಗುವೆನೆಂದು ಮಹಾತ್ಮಾ ಬಸವಣ್ಣನವರು ತಮ್ಮ ಹೃದಯದಲ್ಲಿ ರೂಪುಗೊಂಡು ಕರಸ್ಥಲದಲ್ಲಿ ಕುಳಿತಿರುವ ಲಿಂಗದ ಮಹತಿಯನ್ನು ಈ ವಚನದಲ್ಲಿ ಚೆಲ್ಲವರಿದಿದ್ದಾರೆ.

"ಆನು ಕಾಮಿಸುತ್ತಿಪ್ಪ ಸಾಲೋಕ್ಯವಿದೆ, ಸಾಮೀಪ್ಯವಿದೆ,
ಸಾರೂಪ್ಯವಿದೆ, ಸಾಯುಜ್ಯವಿದೆ, ಧರ್ಮವಿದೆ, ಅರ್ಥವಿದೆ,
ಕಾಮವಿದೆ, ಮೋಕ್ಷವಿದೆ. ಎನ್ನ ಧ್ಯಾನದ ಜಪ ತಪದಿಂದಲೇ.
ಸಿದ್ದಿಯಪ್ಪ ಮಹಾಸಿದ್ದಿ ಇದೆ. ಆನೇನ ಇಚ್ಛಿಸುವ
ಇಚ್ಛೆ ಎಲ್ಲವೂ ಇದೇ ನೋಡಾ. ಶ್ರೀಗುರು ಕಾರುಣ್ಯದಿಂದ
ಮಹಾವಸ್ತು ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖ ಇದೆ ನೋಡಾ.
ಇನ್ನು ಬಯಲ ಭ್ರಮೆಯಾಳಗೆ ಹೊಗಿಸದಿರಯ್ಯಾ,
ನಿಮ್ಮ ಬೇಡಿಕೊಂಬೆನು, ನಿಮಗೆ ಎನ್ನಾಣಿ
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ"
-ಉರಿಲಿಂಗಪೆದ್ದಿ

"ಸದ್ದು ರು ಎನ್ನ ಮೇಲೆ ಕರುಣಿಸಿ, ಎನ್ನ ಕರಸ್ಥಲಕ್ಕೆ ಮಹಾ ಘನವಸ್ತುವನ್ನು ಇಷ್ಟಲಿಂಗವನ್ನಾಗಿ ಸಾಕಾರಮಾಡಿ ಕೊಟ್ಟ ಬಳಿಕ, ನಾನು ಬಹು ದಿನಗಳಿಂದ ಹಾರೈಸುತ್ತಿದ್ದ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಪದವಿಗಳೂ, ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಪುರುಷಾರ್ಥಗಳೂ, ಧ್ಯಾನ-ಜಪ-ತಪದಿಂದ ಬರುವ ಎಲ್ಲ ಮಹಾಸಿದ್ದಿಗಳೂ, ಇಚ್ಚಿಸುವ ಸರ್ವ ಸುಖಗಳೆಲ್ಲವೂ ನನಗೆ ಲಭ್ಯವಾದವು." ಎಂದು ಉರಿಲಿಂಗ ಪೆದ್ದಿಗಳು ಕರಸ್ಥಲದ ಲಿಂಗದ ಮಹಿಮೆಯನ್ನು ಬಣ್ಣಿಸಿದ್ದಾರೆ. ನಿಮ್ಮಾಣಿಗೂ ಇನ್ನು ಮೇಲೆ ಲಿಂಗವಿಲ್ಲದೆ ಇವೆಲ್ಲವುಗಳನ್ನು ಕಾಣುವೆನೆಂಬ ಬಯಲ ಭ್ರಮೆಯನ್ನು ನನ್ನ ಮುಂದೆ ತರಲಾಗದೆಂದು ದೇವನಲ್ಲಿ ಶರಣನು ಮೊರೆಯಿಟ್ಟು ಬೇಡಿಕೊಳ್ಳುತ್ತಾನೆ.

ಇಂಥ ಉದಾತ್ತ ದೇವರ ಸ್ವರೂಪದರ್ಶನವನ್ನು ಕರದಿಷ್ಟಲಿಂಗದಲ್ಲಿ ಕಂಡು ಅನುಭವಿಸಿದವರಿಗೆ ಲಿಂಗದ ಬಗ್ಗೆ ಅಲ್ಲದ ಸಲ್ಲದ ಮಾತನಾಡಿದರೆ ಹೇಗೆ ತಾನೇ ಸಹಿಸಿಕೊಂಡಾರು ? ಇಂಥ ಲಿಂಗಸ್ವರೂಪವನ್ನು ವರ್ಣಿಸುವ ವಚನಗಳನ್ನು ಓದಿದರೆ, ಎಂಥ ದೇವವಿರೋಧಿಯೂ ಸಹ ಲಿಂಗ ಕಟ್ಟಿಕೊಳ್ಳುವ ಅಭಿಲಾಷೆ ತೋರಿಯಾನು !

ಲಿಂಗವೆನ್ನಯ ತಂದೆ ! ಲಿಂಗವೆನ್ನಯ ತಾಯಿ !
ಲಿಂಗವೆನ್ನಯ ಪರಮ ಜ್ಞಾನಮೂರ್ತಿ !!...
ಲಿಂಗ ಗುರುಮೂರ್ತಿಯ ಪಾದಕ್ಕೆ ಶರಣೆಂದು
ಲಿಂಗ ನೀ ನಾನಾದೆ ಯಾಗಿನಾಥ.
ಇಂದೆನ್ನ ಕರಸ್ಥಲಕ್ಕೆ ಬಂದಿಹನು ಪರಬ್ರಹ್ಮ
ನಿಂದು ನಿಜದಾನಂದ ಬಂದನಯಾ
ಮುಂದುವರಿವಾ ಮನದ, ಅಜ್ಞಾನಹರಬಂದ
ತಂದೆಗೆ ವಂದಿಸುವೆನು ಯಾಗಿನಾಥ.
-ಸಿದ್ದರಾಮೇಶ್ವರರು

ಡಾ. ಎ. ಎನ್. ವೈಟೆಡ್‌ನಂಥ ಮಹಾ ಪ್ರತಿಭಾವಂತ ತತ್ವ ದರ್ಶಿಯ ದೇವರ ಕಲ್ಪನೆಯನ್ನು ಹೋಲಬಹುದಾದ ಲಿಂಗದ ಸ್ವರೂಪವನ್ನು ಈ ಮೇಲಿನ ವಚನದಲ್ಲಿ ಸಿದ್ದರಾಮ ಶಿವಯೋಗಿಗಳು ಪ್ರತಿಪಾದಿಸಿದ್ದಾರೆ. ಡಾ. ವೈಟೆಡ್‌ನು ತನ್ನ "Process and Reality” ಎಂಬ ಗ್ರಂಥದಲ್ಲಿ ಹೇಳುತ್ತಾನೆ : “ಆಧುನಿಕ ಮಾನವನಿಗೆ ಪ್ರಿಯವಾದ ದೇವರೆಂದರೆ ಸಹಾನುಭೂತಿ ತೋರಿಸುವವನು, ಸುಖಸಂದೇಶಗಳನ್ನು ಕೊಡುವವನು, ಸನ್ಮಾರ್ಗದರ್ಶಿ, ತಾನು ಸಂಸಾರದಲ್ಲಿ ಭಾಗಿಯಾಗಿ, ಸಂಸಾರದಲ್ಲಿ ಭಾಗಿಗಳಾದ ಮಾನವರೊಂದಿಗೆ ಸಹಾನುಭೂತಿ ತೋರಿಸಿ, ತಾನೂ ಅವರನ್ನು ಪ್ರೀತಿಸಿ, ಅವರು ತನ್ನನ್ನು ಪ್ರೀತಿಸುವಂತೆ ಮಾಡುವಂಥ ಕರುಣಾನಿಧಿ ದೇವರು ಬೇಕಾಗಿದೆ."

ಲಿಂಗವು ತಂದೆಯಾಗಿ (Creator), ತಾಯಿಯಾಗಿ (Protector), ಜ್ಞಾನಮೂರುತಿ ಗುರುವಾಗಿ, ಮನದ ಅಜ್ಞಾನವನ್ನು ಕಳೆಯುವುದಕ್ಕಾಗಿ ಕರಸ್ಥಲದಲ್ಲಿ ಬಂದಿರುವುದನ್ನು ಕಂಡು ಕೃತಜ್ಞತೆಯಿಂದ ಶರಣು ಮಾಡುತ್ತಾನೆ ವಚನಕಾರನು. ತಪ್ಪುಗಳನ್ನು ಕಂಡು, ನ್ಯಾಯಾಧೀಶನಂತೆ ತಂದೆ ಶಿಕ್ಷಿಸಿದರೆ, ತಾಯಿ ತಪ್ಪುಗಳನ್ನು ಕ್ಷಮಿಸಿ ಮಗುವನ್ನು ಸೆರಗಿನಲ್ಲಿ ಅಡಗಿಸಿಕೊಳ್ಳುವಳು. ತಂದೆ ನಿಷ್ಟುರಿಯಾದರೆ ತಾಯಿ ದಯಾಮಯಿ ! ಗುರುವು ಸನ್ಮಾರ್ಗದರ್ಶಿ, ಅದರಂತೆ ದೇವರು ತಂದೆಯೂ ಹೌದು, ತಾಯಿಯೂ ಹೌದು, ಗುರುವೂ ಹೌದು. ಏಕೆ ಪತಿಯೂ ಹೌದು, ಗೆಳೆಯನೂ ಹೌದು, ಮಗನೂ ಹೌದು. ಅಕ್ಕಮಹಾದೇವಿ ಪತಿಯ ರೂಪದಲ್ಲಿ, ಬಿಜ್ಜ ಮಹಾದೇವಿಯು ಮಗುವಿನ ಸ್ವರೂಪದಲ್ಲಿ ದೇವನನ್ನು ಕಂಡಿದ್ದಾರಷ್ಟೆ !

ಲಿಂಗಮಧ್ಯೆ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ ಪರಂನಾಸ್ತಿ ತಸ್ಮಲಿಂಗಾಯ ತೇ ನಮಃ

ಸಚರಾಚರವನ್ನೊಳಗೊಂಡು ಮೂರು ಲೋಕವನ್ನು ಅರ್ಥಾತ್ ಈ ಜಗತ್ತನ್ನು ತನ್ನಲ್ಲಿಟ್ಟು ಕೊಂಡ ಲಿಂಗವು ಜಗದ್ರೂಪವಾಗಿದೆ. ಅಂದ ಮೇಲೆ ಜಗವ ಹೊರಗಿಕ್ಕಿ ತಾನಿರುವ ಯಾವ ವಸ್ತುವೂ ಈ ಪ್ರಪಂಚದಲ್ಲಿಲ್ಲ. ಅಂಥ ಬ್ರಹ್ಮಾಂಡಗತವಾದ ಲಿಂಗದ ನಿಲುವನ್ನು ಮೇಲಿನ ಶ್ಲೋಕದಿಂದ ನಾವು ಕಾಣಬಹುದಾಗಿದೆ. ಇದೇ ವಿಚಾರ ಸರಣಿಯಲ್ಲಿ ಸರ್ವಜ್ಞನು ಹಾಡಿರುವ ಒಂದು ವಚನವನ್ನು ನೋಡೋಣ.

ಲಿಂಗಕ್ಕೆ ಕಡೆಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು, ಲಿಂಗವನು
ಹಿಂಗಿದವರುಂಟೆ ಸರ್ವಜ್ಞ ?

ಲಿಂಗಕ್ಕೆ ಕಡೆಯಿಲ್ಲ. ಯಾಕೆಂದರೆ ಅದಕ್ಕೆ ಮೊದಲಿಲ್ಲ. ಯಾವುದಕ್ಕೆ ಆದಿಯಿದೆಯಾ ಅದಕ್ಕೆ ಅಂತ್ಯವಿರಲೇಬೇಕು. ಆದಿ ಅಂತ್ಯಗಳಿಲ್ಲದ ಲಿಂಗವು ಅನಂತವು. ಲಿಂಗವಿಲ್ಲದಿರುವ ಠಾವು ಇಲ್ಲ. ಯಾಕೆಂದರೆ ಲಿಂಗವು-ಶಿವನು ಸರ್ವಾಂತರ್ಯಾಮಿ, ಸರ್ವಭರಿತನು. ವಿಶ್ವದಲ್ಲೆಲ್ಲ ಓತಪ್ರೋತವಾಗಿ ತುಂಬಿ ತುಳುಕುತ್ತಿದ್ದಾನೆ ! "ಲಿಂಗಮಧ್ಯೆ ಜಗತ್ ಸರ್ವಂ" ಎಂಬಂತೆ, ಜಗವನ್ನೆಲ್ಲ ತನ್ನಲ್ಲಿ ಇಂಬಿಟ್ಟು ಕೊಂಡು ಲಿಂಗವನು ಹಿಂಗಿದವರು ಅಂದರೆ ಬಿಟ್ಟವರು ಯಾರೂ ಇಲ್ಲವೆಂದೂ; ಲಿಂಗವು ಎಲ್ಲರಲ್ಲಿಯೂ, ಎಲ್ಲೆಡೆಯಲ್ಲಿಯೂ ಇರುವದೆಂದೂ; ಅಂತಹ ಪರಬ್ರಹ್ಮ ಲಿಂಗದ ಪ್ರತಿರೂಪವಾದ ಇಷ್ಟಲಿಂಗವನ್ನು ಧರಿಸುವವನು ಭಾಗ್ಯವಂತನೆಂದೂ ಸರ್ವಜ್ಞ ಕವಿಯು ಈ ಮೇಲಿನ ವಚನದಲ್ಲಿ ತುಂಬಾ ಮಾರ್ಮಿಕವಾಗಿ ಅರ್ಥವತ್ತಾಗಿ ಪ್ರತಿಪಾದಿಸಿದ್ದಾನೆ.

ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,
ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ.
ಸರ್ವಕಾರಣ ಲಿಂಗವೆಂದುದಾಗಿ ಲಿಂಗವನೆ ಅರಿದೆ.
ಅರಿದರಿದು ಲಿಂಗಸಂಗವನೆ ಮಾಡುವೆ.
ಸಂಗಸುಖದೊಳಗೋಲಾಡುವೆ ಗುಹೇಶ್ವರಾ.
-ಅಲ್ಲಮಪ್ರಭು ೧೦೩೪

ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವದೋ ಅಂಥದನ್ನು ಅರಿತ ಮೇಲೆ ಇನ್ನಾವುದನ್ನೂ ಅರಿಯುವ ಆವಶ್ಯಕತೆ ಇಲ್ಲವೆಂಬ ವಿಚಾರ ಸರಣಿ ಅಲ್ಲಮಪ್ರಭುದೇವರ ಮೇಲಿನ ವಚನದಲ್ಲಿ ಮೂಡಿ ಬಂದಂತಿದೆ. ಲಿಂಗದ ಬೆಳಗ ಕಾಣುವ ಸಮ್ಯಗ್ ಜ್ಞಾನವಿಲ್ಲದೆ ವೇದಾಗಮಂಗಳಾದಿಯಾಗಿ ಏನನರಿದಡೆಯೂ ಲಿಂಗಾಂಗ ಸಾಮರಸ್ಯ ಸಾಧ್ಯವಾಗಲಾರದುದರಿಂದ ಅದು ನಿಷ್ಟಯಾಜಕವು. ಇಂಥ ಸಮ್ಯಗ್ ಜ್ಞಾನೋದಯವಾಗಿ ಲಿಂಗದ ಬೆಳಗ ಕಂಡು ನಿಶ್ಮಿಸಿದ ಸ್ವಾನುಭಾವಿಗೆ ಮತ್ತೆ ಬೇರೆ ಏನನ್ನೂ ಅರಿಯುವ ಅವಶ್ಯಕತೆ ಇಲ್ಲ. ಈ ತೋರುವ ತೋರಿಕೆಗಳೆಲ್ಲದಕ್ಕೂ ಕಾರಣಕರ್ತೃ ಲಿಂಗವೆಂಬುದನ್ನು ಅರಿತುಕೊಂಡು ಲಿಂಗಾಂಗ ಸಂಗವಂ ಹಿಂಗದೆ ಕೂಡಿ ಲಿಂಗಾನಂದದ ನಿಬ್ಬೆರಗಿನಲ್ಲಿ ಲೋಲಾಡುವೆನೆಂದು, ಲಿಂಗಾಂಗ ಸಾಮರಸ್ಯದ ರಹಸ್ಯವನ್ನು ಪ್ರಭುದೇವರು ಬಿಚ್ಚಿಟ್ಟಿದ್ದಾರೆ.

ಕಾಣಬಾರದ ಲಿಂಗವೆನ್ನ ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮನು,
ಗುಹೇಶ್ವರ ಲಿಂಗ ನಿರಾಳ-ನಿರಾಕಾರ-ಬಯಲು.
ಸಾಕಾರವಾಗಿ ಎನ್ನ ಕರಸ್ಥಲಕ್ಕೆ ಬಂದರೆ ಹೇಳಲಮ್ಮೆ ಕೇಳಲಮ್ಮೆ !
-ಅಲ್ಲಮ ಪ್ರಭು. ೯೦

ತಿಳಿಯಬಾರದುದನ್ನು ತಿಳಿಯುವದು, ಕಾಣಲಾರದುದನ್ನು ಕಾಣುವದೇ ಅನುಭಾವವು. ನಿರಾಳ ನಿರಾಕಾರ ಲಿಂಗವು ಚರ್ಮಚಕ್ಷುವಿಗೆ ತೋರಲು ಸಾಧ್ಯವಿಲ್ಲ. ಆದರೂ ಕರಸ್ಥಲಕ್ಕೆ ನಿರಾಕಾರವಾದ ಲಿಂಗ ಸಾಕಾರವಾಗಿ ಬಂದುದನ್ನು ಅನಿಮಿಷ ದೃಷ್ಟಿಯಿಂದ ನೋಡಿ ನೋಡಿ, ಪಾತಿಭಚಕ್ಷು ಉನ್ನಿಲನವಾಗುವದು. ಆ ಮೂರನೇ ಕಣ್ಣಿನಿಂದ ಅಗೋಚರವಾದ ನಿರಾಕಾರ ಲಿಂಗವನ್ನು ಕಂಡು ಹರ್ಷಪುಲಕಿತನಾಗಿ, ಹೌದು, ಅಲ್ಲವೆಂದು ಹೇಳಲಿಕ್ಕೆ ಬಾರದ ದ್ವಂದ್ವಾತೀತ ನಿಶ್ಯಬ್ದ ಬ್ರಹ್ಮನನ್ನು ಕಂಡು, ಹಸುಳೆ ಕಂಡ ಸ್ವಪ್ನದಂತೆ ಅಚ್ಚರಿಗೊಂಡು, ಪ್ರಭುದೇವರು ಲಿಂಗಾನಂದ ಸಮರಸದ ಸವಿರುಚಿಯನ್ನು, ಶಿವಾನುಭವವನ್ನು ಮುಮುಕ್ಷುಗಳಿಗೆ ಉಣಬಡಿಸಿದ್ದಾರೆ.

ವಿಶ್ವತೋಮುಖ, ವಿಶ್ವತೋಪಾದ
ವಿಶ್ವತೋ ಬಾಹು, ವಿಶ್ವತೋ ಚಕ್ಕು
ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯಾ
ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
-ಷಣ್ಮುಖ ಸ್ವಾಮಿಗಳು. ೭೩

ಶ್ರೀ ಷಣ್ಮುಖಸ್ಮಾಮಿಗಳು ದೇವನ ಸುಂದರ ಸ್ವರೂಪವನ್ನು ತಮ್ಮ ಕರಸ್ಥಲದಲ್ಲಿ ಕಂಡಿದ್ದಾರೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕೆಳಗಿನ ಇನ್ನೊಂದು ವಚನದಲ್ಲಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ವಸ್ತು ನನ್ನ ಕರಸ್ಥಲದಲ್ಲಿರುವಾಗ ಬೇರೆ ದೈವವ ನೆನೆವ ಚಿಂತೆ ಇಲ್ಲವೆಂದು ಹೇಳಿದ್ದಾರೆ :

ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಾದ
ಪರಮವಸ್ತುವು ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು....... ಅಖಂಡೇಶ್ವರ ಲಿಂಗವು ಎನ್ನೊಳ ಹೊರಗೆ ತಾನಾದ ಬಳಿಕ ಇನ್ನೆಲ್ಲಿಯದಯ್ಯಾ ಎನಗೆ ಬೇರೆ ತತ್ವವನರಿವ ಚಿಂತೆ ?
-ಷ.ವ. ೭೫


ಸಮಾರೋಪ : ಲಿಂಗವೆಂದರೆ ಪರಾತ್ಪರ ವಸ್ತು, ಲಿಂಗವೆಂದರೆ ಪರಬ್ರಹ್ಮ, ಲಿಂಗವೆಂದರೆ ಪರಶಿವ, ಲಿಂಗವೆಂದರೆ ಪರಮಾತ್ಮ, ಲಿಂಗವೆಂದರೆ ಪರಂಜ್ಯೋತಿ, ಲಿಂಗವೆಂದರೆ ಚೈತನ್ಯ, ಲಿಂಗವೆಂದರೆ ನಿರಂಜನ ನಿರವಯ ನಿರ್ಗುಣ ನಿರಾಕಾರ ನಿರುಪಮ ಪರತತ್ವವು. ಲಿಂಗವೆಂದರೆ ಸಚ್ಚಿದಾನಂದ ನಿತ್ಯ ಪರಿಪೂರ್ಣವು, ಲಿಂಗವೆಂದರೆ ಆತ್ಮ. ಇಂಥ ಸಮನ್ವಯ ಸುಂದರ ಲಿಂಗ ಸ್ವರೂಪವನ್ನು ನಾವು ಈ ಅಧ್ಯಾಯದ ಪೂರ್ವಾರ್ಧದಲ್ಲಿ ನಿರೀಕ್ಷಿಸಿದೆವು.

ಅಂತಹ ಪರಾತ್ಪರ ಲಿಂಗವು ಸಾಕಾರವಾಗಿ ಶಿಷ್ಯನ ಕರಕಂಜದಲ್ಲಿ ವಿರಾಜಿಸುವುದು. ಈ ಕರದಿಷ್ಟಲಿಂಗದಲ್ಲಿಯೇ ಅವನು ಲಿಂಗ ಸ್ವರೂಪವನ್ನರಿದು ಆಚರಿಸಿ ಸರ್ವಾಂಗಲಿಂಗಿಯಾಗುತ್ತಾನೆ. ಅವನ ಪ್ರಾಣದಲ್ಲಿ ಗಂಧ ಗ್ರಾಹಕ ಶಕ್ತಿಯುಳ್ಳ ಪ್ರಾಣತ್ವವೇ ಆಚಾರಲಿಂಗವಾಗಿ, ಅವನ ಮುಖದಲ್ಲಿ ಶಬ್ದವೇ ಗುರುಲಿಂಗವಾಗಿ, ಮಾತೆಂಬುದು ಜ್ಯೋತಿರ್ಲಿಂಗವಾಗಿ ಅವನ ಕಣ್ಣಿನ ಬೆಳಗು ಶಿವಲಿಂಗ [ದಿವ್ಯ ತೇಜೋಮಯಲಿಂಗ] ವಾಗಿ, ಅವನ ತ್ವಕ್ಕಿನಲ್ಲಿ ಸ್ಪರ್ಶಶಕ್ತಿಯು ಜಂಗಮಲಿಂಗವಾಗಿ, ಅವನ ಕಿವಿಯಲ್ಲಿ ನಾದವೇ ಪ್ರಸಾದಲಿಂಗವಾಗಿ, ಅವನ ಹೃದಯದಲ್ಲಿ ತೃಪ್ತಿಯೇ ಮಹಾಲಿಂಗವಾಗಿ ಸ್ಕೂಲ ತನುವೆಲ್ಲ ಲಿಂಗಮಯವಾಗಿ, ಸಾಂಗ ಲಿಂಗಿಯಾದ ಶರಣನು ಮಾತ್ರ ಆ ಲಿಂಗದ ನಿಜಸ್ವರೂಪವನ್ನು ತಿಳಿಯಬಲ್ಲನಲ್ಲದೆ ಉಳಿದವರಿಗೆ ಹೇಗೆ ಸಾಧ್ಯವಾದೀತು ? ತಮಗೆ ತಿಳಿಯದುದನ್ನು ತಿಳಿದವರಿಂದ ಕೇಳಿ ಅರಿಯಬೇಕು. ಅದು ಸತ್ಯಾನ್ವೇಷಣೆಯ ದೃಷ್ಟಿ, ಅದನ್ನು ಬಿಟ್ಟು ತನಗೆ ಗೊತ್ತಿಲ್ಲದ ವಿಷಯವಾಗಿ ಅಲ್ಲದ ಸಲ್ಲದ ಮಾತುಗಳನ್ನಾಡುವುದು ಸಾಧುವೂ ಅಲ್ಲ, ಸಮಂಜಸವೂ ಅಲ್ಲ; ವಿವೇಕವಂತೂ ಮೊದಲೇ ಅಲ್ಲ. ಇಲ್ಲಿ ಪ್ರತಿಪಾದಿಸಿದ ಲಿಂಗದ ಸ್ವರೂಪವನ್ನು ಅವಲೋಕಿಸಿದ ಎಂಥ ಓದುಗನೂ ಸಹ ದೇವರ ಬಗ್ಗೆ ಮತ್ತು ಅವನ ಸಾಕಾರವಾದ ಇಷ್ಟಲಿಂಗದ ಬಗ್ಗೆ ಪೂಜ್ಯ ಭಾವನೆಯನ್ನು ತಾಳಿಯಾನೆಂದು ಆತ್ಮವಿಶ್ವಾಸದಿಂದ ಹೇಳಬಹುದಾಗಿದೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

Previousಲಿಂಗದ ಸ್ವರೂಪಇಷ್ಟಲಿಂಗದ ಆವಶ್ಯಕತೆNext
 

Friday, December 23, 2022

ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ - 2022

                                     

 ಮೈಸೂರು : ವಿದ್ಯಾರ್ಥಿಗಳ ಚಿತ್ತವನ್ನು ದೇಶದತ್ತ ಹೊರಳಿಸಿ ಅವರಲ್ಲಿ ರಾಷ್ಟ್ರೀಯತೆಯ ಮೌಲ್ಯಗಳ ಬೀಜಗಳನ್ನು ಬಿತ್ತುವ ಜವಬ್ದಾರಿ ಶಿಕ್ಷಕರದು ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಹೊಸಮಠದ ನಟರಾಜ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು  ರಾಷ್ಟçದ ನಿರ್ಮಾಪಕರಾಗಲಿರುವ ಇಂದಿನ ವಿದ್ಯಾರ್ಥಿಗಳನ್ನು ಸತ್ಪçಜೆಗಳಾಗಿ ರೂಪಿಸುವ ಕಾಯಕದಲ್ಲಿ ಶಿಕ್ಷಕರು ನಿರತರಾಗಬೇಕು. ಭ್ರಷ್ಟಾಚಾರ, ಜಾತೀಯತೆ, ಅಪರಾಧಿಕತನ, ಅನೈತಿಕತೆ, ಅರಾಜಕತೆ ಮುಂತಾದ ಅಪಮೌಲ್ಯಗಳೇ ಮೌಲ್ಯಗಳಾಗಿ ದೇಶಾದ್ಯಂತ ವಿಜೃಂಬಿಸುತ್ತಿವೆ. ಇವುಗಳಿಂದ ಮುಕ್ತವಾಗದೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ. ನಮ್ಮ ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡುವುದು ಇಂದಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವಾಗಲಿದ್ದು, ಪ್ರತಿಯೊಬ್ಬರೂ “ದೇಶಕ್ಕಾಗಿ ನಾನೇನು ಮಾಡಬಲ್ಲೆ” ಎಂದು ಯೋಚಿಸುವಂತೆ ಮಾಡುವ ಹೊಣೆಗಾರಿಕೆಯನ್ನು ಪೂರ್ಣಗೊಳಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು. ಮೈಸೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಸಿ.ಆರ್. ನಾಗರಾಜಯ್ಯ ಮಾತನಾಡಿ ಹನ್ನೆರಡನೆಯ ಶತಮಾನದಲ್ಲಿ ಜ್ಞಾನಕ್ಕೆ ಹೆಸರಾದ ಚನ್ನಬಸವಣ್ಣನವರ ಹೆಸರಿನಲ್ಲಿ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಶಿಕ್ಷಕರು ಕೂಡಾ ಚಿನ್ಮಯಜ್ಞಾನಿಗಳಾಗಿ ಹೊರಹೊಮ್ಮಿ ಭವ್ಯ ಭಾರತದ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂದು ದಾರಿತಪ್ಪಲು ಅನೇಕ ಮಾರ್ಗಗಳಿದ್ದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ರೂಪಿಸಿ ಅವರು ಸರಿ ದಾರಿಯಲ್ಲಿ ಸಾಗಲು ಪ್ರೇರೇಪಿಸಬೇಕು ಎಂದರು. ನಂತರ ವಿವಿಧ ಜಿಲ್ಲೆಗಳ ೨೧ ಶಿಕ್ಷಕರಿಗೆ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಎನ್.ಜಿ.ಎಫ್ ನಿವೃತ್ತ ಮ್ಯಾನೇಜರ್ ಸಿದ್ಧರಾಮಣ್ಣನವರ್, ಎಸ್.ಎನ್.ಶಾರದಾ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್, ಸುಧಾ ಮೃತ್ಯುಂಜಯಪ್ಪ, ಮಂಗಳ ಮುದ್ದುಮಾದಪ್ಪ, ಮಂಜುಳ ಶಿವಪ್ರಸಾದ್, ಅನಿತಾ ನಾಗರಾಜ್, ಶಿವಪುರ ಉಮಾಪತಿ, ಮಮತ, ವಿ. ಲಿಂಗಣ್ಣ, ಕಣೇನೂರು ನಾಗೇಶಮೂರ್ತಿ, ಕಾವೇರಿ ವಾಜಂತ್ರಿ, ಜಗದೀಶ್, ನೀಲಾಂಬಿಕ, ಆನಗಟ್ಟಿ ಶಿವರುದ್ರಪ್ಪ, ಮಲ್ಲಿಕಾರ್ಜುನ, ಜಡೆ ಮಾದಪ್ಪ, ಓಂಕಾರಯ್ಯ ಉಪಸ್ಥಿತರಿದ್ದರು.

Saturday, December 10, 2022

ರಾಜ್ಯಮಟ್ಟದ ಚಿನ್ಮಯಜ್ಞಾನಿ ಪ್ರಶಸ್ತಿ ಪುರಸ್ಕೃತರು - 2022

 ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ 




ಮೈಸೂರು : ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ವರ್ಷ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಶಿಕ್ಷಕರನ್ನು ಗುರುತಿಸಿ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ೧೮ ಡಿಸೆಂಬರ್ ೨೦೨೨ರಂದು ಮೈಸೂರಿನ ಹೊಸಮಠದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ೨೦೨೨ನೇ ಸಾಲಿನ ೨೧ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುವುದು. ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಸಿ.ಆರ್.ನಾಗರಾಜಯ್ಯ, ಎನ್.ಜಿ.ಎಫ್ ನಿವೃತ್ತ ಮ್ಯಾನೇಜರ್ ಎನ್.ಟಿ. ಸಿದ್ಧರಾಮಣ್ಣನವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ತಿಳಿಸಿದ್ದಾರೆ.


ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರು


೧. ಶಿವಾನಂದಸ್ವಾಮಿ, ಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕುಂಬಾರಕೊಪ್ಪಲು,  ಮೈಸೂರು



೨. ಮಮತ ಎಚ್.ಬಿ, ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಬೀಡನಹಳ್ಳಿ, ಟಿ. ನರಸೀಪುರ ತಾ. ಮೈಸೂರು ಜಿಲ್ಲೆ



೩. ಶಂಕರ ದೇವರು ಹಿರೇಮಠ, ಮುಖ್ಯಶಿಕ್ಷಕರು, ಸ.ಕಿ.ಪ್ರಾ.ಶಾಲೆ, ದುಗ್ಗಮ್ಮನಗುಂಡ, ಸಿಂಧನೂರು ತಾ. ರಾಯಚೂರು ಜಿಲ್ಲೆ



೪. ಕೆ.ಎನ್ ರವಿಕುಮಾರ್, ಸಹಶಿಕ್ಷಕರು, ಬಿ.ಎಸ್.ಎಸ್ ಸ.ಪ.ಪೂ.ಕಾಲೇಜು, ಕೊಣನೂರು, ಅರಕಲಗೂಡು ತಾ., ಹಾಸನ ಜಿಲ್ಲೆ



೫. ಶಿವಕುಮಾರ್, ಎಚ್.ಎನ್, ಆಂಗ್ಲಭಾಷಾ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢ ವಿಭಾಗ, ಕಳಸ, ಮೂಡಿಗೆರೆ ತಾ. ಚಿಕ್ಕಮಗಳೂರು ಜಿಲ್ಲೆ



೬. ಭಾಸ್ಕರ್ ಪೂಜಾರಿ, ಸಹಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರಾಥಮಿಕ ವಿಭಾಗ, ಕೊಕ್ಕರ್ಣೆ, ಬ್ರಹ್ಮಾವರ, ಉಡುಪಿ ಜಿಲ್ಲೆ.



೭. ಸಂದೀಪ್ ಕೆ.ಎಲ್ ವಿಜ್ಞಾನ ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಎಳನೀರು, ಗುತ್ಯಡ್ಕ, ಬೆಳ್ತಂಗಡಿ ತಾ. ದಕ್ಷಿಣ ಕನ್ನಡ ಜಿಲ್ಲೆ


 

೮. ಶ್ರೀದೇವಿ, ಸಹಶಿಕ್ಷಕರು,  ಸ.ಹಿ.ಪ್ರಾ.ಶಾಲೆ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ



೯. ಯಶೋಧ ಎಸ್.ಪಿ, ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದರ್ಜೆ ಕಾಲೇಜು, ರಾಜಾಜಿನಗರ, ಬೆಂಗಳೂರು ನಗರ



೧೦. ಲಕ್ಷ್ಮಿಪ್ರಸಾದ್ ನಾಯಕ್, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ, ಕನ್ನಡ, ಕೆಂಗೇರಿ, ಬೆಂಗಳೂರು ಜಿಲ್ಲೆ



೧೧. ಪ್ರಾಣೇಶ ಬಿ.ಡಿ  ದೈಹಿಕ ಶಿಕ್ಷಣ ಶಿಕ್ಷಕರು. ಗ್ರೇಡ್ ೧, ಹೆಗ್ಗರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ, ಚಳ್ಳೆಕೆರೆ, ಚಿತ್ರದುರ್ಗ ಜಿಲ್ಲೆ 



೧೨. ಶಿವಾನಂದಪ್ಪ. ಬಿ.  ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಹರಗುವಳ್ಳಿ, ಶಿಕಾರಿಪುರ ತಾ. ಶಿವಮೊಗ್ಗ ಜಿಲ್ಲೆ



೧೩. ಕಲಾ ಹೆಗಡೆ, ಶಿಕ್ಷಕರು, ಸಾಧನಾ ವಿದ್ಯಾಕೇಂದ್ರ ಅನುದಾನಿತ ಶಾಲೆ, ಆನಂದಪುರ, ಸಾಗರ ತಾ. ಶಿವಮೊಗ್ಗ ಜಿಲ್ಲೆ.

\


೧೪. ಭಾರತಿ ಕೇದಾರಿ ನಲವಡೆ, ಸಹಶಿಕ್ಷಕರು, ಸ.ಹಿ.ಪ್ರಾ. ಕನ್ನಡ ಶಾಲೆ, ಮಂಗಳವಾಡ, ಹಳಿಯಾಳ ತಾ. ಉತ್ತರಕನ್ನಡ ಜಿಲ್ಲೆ




೧೫. ಸಂಗಮ್ಮ, ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು(ಬಾಲಕರ) ಪ್ರೌಢಶಾಲಾ ವಿಭಾಗ, ಹುಮನಾಬಾದ್. ಬೀದರ್ ಜಿಲ್ಲೆ



೧೬. ಕೆ.ವಿ. ಯುವರಾಣಿ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹುಳಿಬೆಲೆ, ಬಂಗಾರಪೇಟೆ ತಾ. ಕೋಲಾರ ಜಿಲ್ಲೆ



೧೭. ಸುಭಾಷ್ ಹೇಮಣ್ಣಾ ಚವ್ಹಾಣ, ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮಂಜುನಾಥನಗರ, ಹುಬ್ಬಳ್ಳಿ, ಶಹರ ತಾ. ಧಾರವಾಡ ಜಿಲ್ಲೆ



೧೮. ಸಿದ್ಧಲಿಂಗ ಜಿ ಬಾಳಿ ರಾವೂರ, ಸಹಶಿಕ್ಷಕರು, ಶ್ರೀ ಸಚ್ಛಿದಾನಂದ ಪ್ರೌಢಶಾಲೆ, ಶಹಾಬಾದ್ ತಾ. ಕಲಬುರಗಿ ಜಿಲ್ಲೆ.



೧೯. ಬಸವರಾಜ ಐನೋಳಿ, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಭಕ್ತಂಪಳ್ಳಿ, ಚಿಂಚೋಳಿ ತಾ. ಕಲಬುರಗಿ ಜಿಲ್ಲೆ.



   ೨೦. ಮಹೇಶ್ ಎಸ್.ಎಚ್. , ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಸರೂರು, ಮುಂದರಗಿ ತಾ. ಗದಗ ಜಿಲ್ಲೆ



   ೨೧. ಟಿ.ಜಿ. ಪ್ರೇಮಕುಮಾರ್, ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು, ಕೊಡಗು ಜಿಲ್ಲೆ