Saturday, June 5, 2021

ಅಷ್ಟಾವರಣ

 *ಅಷ್ಟಾವರಣ ತತ್ತ್ವಗಳು*

        🌼 ವಿಭೂತಿ ತತ್ತ್ವ 🌼


ಅನಾದಿ ಪರಶಿವನ ಮಹಾಪ್ರಕಾಶವೇ ವಿಭೂತಿ ತತ್ತ್ವವಾಗಿದೆ.ಪರಾತ್ಪರ ವಸ್ತುವು ಮಹಾಪ್ರಕಾಶದಿಂದೊಡಗೂಡಿ ದೆ.ಪರಶಿವನಲ್ಲಿ ಲೀಲಾವಿನೋದದ ನೆನಹು ತೋರಿದಲ್ಲಿ ಆ ಮಹಾಪ್ರಕಾಶವು ಪರಶಿವನಿಂದ ಹೊರಸೂಸುವದು.ಆ ಮಹಾಪ್ರಕಾಶವನ್ನೆ ಶರಣರು ಬೆಳಗಿನೊಳಗಣ ಬೆಳಗು ಮಹಾಬೆಳಗು ಎಂದು ವರ್ಣಿಸಿರುವರು. ಅದು ಶತಕೊಟಿ ಸೂರ್ಯರ ಪ್ರಕಾಶವ ಮೀರಿದ ಅನಂತ ಅಗಣಿತ ಬೆಳಗು ಎಂಬುದನ್ನು ಶರಣರು ತಮ್ಮ ಇಷ್ಟಲಿಂಗ ಅನುಸಂಧಾನದಲ್ಲಿ ಕಂಡಿರುವರು. ಅದು ಸಚ್ಚಿದಾನಂದ ನಿತ್ಯಪರಿಪೂರ್ಣವಾದ ಪರಾತ್ಪರ ಪ್ರಕಾಶವು ಆಗಿರುವದು.

 ಆ ಪ್ರಕಾಶದಿಂದಲೇ ಸಕಲ ಚರಾಚರವು ತೋರಿಬಂದ ಕಾರಣ ಅದು ನಮ್ಮೆಲ್ಲರ ಅಂತರಂಗದಲ್ಲಿ ಬೆಳಗುತ್ತಿರುವ ಪರಂಜ್ಯೊತಿಯಾಗಿರುವದು. 


ಬ್ರಹ್ಮಾಂಡ ಅಷ್ಟಾವರಣದಲ್ಲಿನ ವಾಯುತತ್ತ್ವದ ವಿಕಾರವಾದ ಜೀವಸಂಚಲಗುಣವನ್ನು ಕಳೆದು ಅಲ್ಲಿ ಪರಮ ಪ್ರಕಾಶವನ್ನು ಬೆಳಗಿಸುವದೇ ವಿಭೂತಿ ತತ್ತ್ವದ ಕಾರ್ಯವು.

ಜೀವಾತ್ಮನಲ್ಲಿರುವ ಪಂಚಪ್ರಾಣವಾಯುಗಳಾದ ಪ್ರಾಣ,ಆಪಾನ,ಉದಾನ,ವ್ಯಾನ ಹಾಗೂ ಸಮಾನವೆಂಬ ಪ್ರಾಣದ ವಾಯುವು ಜೀವಗುಣ ಭರಿತವಾಗಿದೆ, ಅದು ಜೀವಾತ್ಮನನ್ನು ಸಂಚಲನಗುಣಕ್ಕೆ ಒಳಪಡಿಸುವದು, ವಿಭೂತಿಯು ಈ ವಾಯುವನ್ನು ಶುದ್ಧಗೊಳಿಸುವದು ಅಂದರೆ ಶಿವಭಾವ ನೆಲೆಗೊಳಿಸುವದು.


ವಿಭೂತಿಯ ಮೂಲ ಉತ್ಪತ್ತಿಯ ಅನುಭಾವ ಉರಿಲಿಂಗಪೆದ್ದಿ ಶರಣರ ವಚನದಲ್ಲಿ..


" ಬಸವ ಬಸವ ಬಸವ ಎನುತಿರ್ಪವರೆಲ್ಲ ಬಸವನ ಘನವನಾರೂ ಅರಿಯರಲ್ಲ

ಅನಾದಿ ಪರಶಿವನಲ್ಲಿ ಮಹಾಪ್ರಕಾಶವು ಭಹಿಷ್ಕರಿಸಿತ್ತು, ಆ ಚಿತ್ತೇ ಚಿದಂಗ ಬಸವ ಆ ಬಸವನಿಂದ ಉದಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲ ಜ್ಯೋತಿರ್ಮಯಲಿಂಗವಪ್ಪುದು ತಪ್ಪದು ನೋಡಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ..

ಪರಶಿವನ ಮಹಾಬೆಳಗಿನಲ್ಲಿ ಬಸವ ಎಂಬ ಚಿತ್ ಸ್ವರೂಪದಲ್ಲಿ  ವಿಭೂತಿಯ ಉಗಮ.


ಬಹಿರಂಗದಲ್ಲಿ ವಿಭೂತಿಯು ಆಕಳಬೆರಣಿ, ಬೇವು ಹಾಗೂ ಆಲದ ಕಾಷ್ಟಗಳನ್ನು ದಹಿಸಿ ಪಡೆದ ಭಸ್ಮವನ್ನು ಮಂತ್ರೊದಕದಲ್ಲಿ ಸಂಸ್ಕರಿಸಿ ಪರಿಶುದ್ಧವಾದ ವಿಭೂತಿಯನ್ನು ಪಡೆಯುತ್ತೇವೆ. ಇಂತಪ್ಪ ವಿಭೂತಿಯನ್ನು ಶಿವಮಂತ್ರದಿಂದ ಸಂಸ್ಕರಿಸಿ ಇಷ್ಟಲಿಂಗಕ್ಕೂ ಹಾಗೂ ನಮ್ಮ ಅಂಗಕ್ಕೂ ಧರಿಸುವದುಂಟು.

ಇಂತಪ್ಪ ವಿಭೂತಿಯನ್ನು ನಿತ್ಯದಲಿ ಧರಿಸುವದರಿಂದ ಮಾನವನಲ್ಲಿ ಶಿವಕಳೆ ಯು ಪ್ರಾಪ್ತವಾಗುವದು. 


ಮಹಾಗುರು ಬಸವಣ್ಣನವರ ವಚನದಲ್ಲಿ ವಿಭೂತಿಯ ಅನುಭಾವ..


"ಸಕಲ ಕ್ರಿಯೆಗಳಿಗಿದು ಕವಚ

 ಸಕಲವಶ್ಯಕ್ಕಿದು ಶುಭತಿಲಕ

 ಸಕಲ ಸಂಪದಕ್ಕೆ ತಾಣವಿದು

 ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ .

 ಅಣುಮಾತ್ರ ವಿಭೂತಿಯ ಫಣಿಯೊಳಿಡೆ ಎಣಿಕೆಯಿಲ್ಲದ ಭವಪಾಶ ಹರಿವುದು.ತ್ರಿಣಯ ನೀನೊಲಿದು ಧರಿಸಿದೆ ಎಂದೆನೆ ಆನು ಧರಿಸಿ ಬದುಕಿದೆ ಕೂಡಲಸಂಗಮದೇವ.." 


ವಿಭೂತಿಯು ಭಕ್ತನ ಸಕಲ ಕ್ರಿಯೆಗಳಿಗೆ ರಕ್ಷಾಕವಚವಾಗಿದೆ.ಮಾಯಾವಾಯುವಿಂದ ಭಕ್ತನನ್ನು ಕಾಪಾಡುವ ರಕ್ಷೆ ಇದಾಗಿದೆ. ವಿಭೂತಿಯು ಸಕಲವಶ್ಯಕ ತಿಲಕವೆನಿಸಿದೆ. ಅಸಾಧ್ಯ ಸಾಧ್ಯವೆನಿಸುವ , ಅಘಟಿತ ಘಟಿತವೆನಿಸುವ ತ್ರಿಪುಂಡ್ರವು ಈ ವಿಭೂತಿಯಾಗಿದ್ದು ಭಕ್ತನ ಭವತಾರಕವಾಗಿ ಪರಿಣಮಿಸಿದೆ.


ಅವಿರಳಜ್ಞಾನಿ ಚನ್ನಬಸವೇಶ್ವರರ ವಿಭೂತಿಯ ಮಹಿಮೆಯ ವಚನ..


" ಅಯ್ಯ ಎನಗೆ ವಿಭೂತಿಯೆ ಕುಲದೈವ

 ಅಯ್ಯ ಎನಗೆ ವಿಭೂತಿಯೆ ಮನೆದೈವ

 ಅಯ್ಯ ಎನಗೆ ವಿಭೂತಿಯೇ ಸರ್ವಕಾರಣ, 

 ಅಯ್ಯ ಎನಗೆ ವಿಭೂತಿಯೆ ಸರ್ವಸಿದ್ಧಿ.

 ಅಯ್ಯ ಎನಗೆ ವಿಭೂತಿಯೆ ಸರ್ವವಶ್ಯ.

 *ಅಯ್ಯ ಕೂಡಲಚನ್ನಸಂಗಮದೇವ  ಶ್ರೀಮಹಾ ವಿಭೂತಿಯೆಂಬ ಪರಂಜ್ಯೊತಿ ನೀವಾದಿರಾಗಿ ಎನಗೆ ವಿಭೂತಿಯೆ ಸರ್ವಸಾಧನ*" 


ವಿಭೂತಿಯು ಪರಶಿವತೇಜಸ್ಸು. ಅಂತಪ್ಪ ವಿಭೂತಿಯು ಕುಲದೈವ,ಮನೆದೈವ,ಹಾಗೂ ಭಕ್ತನ ಸಾಧನೆಗೆ ಸರ್ವಕಾರಣ, ಭಕ್ತನಿಗೆ ವಿಭೂತಿಯೆ ಸರ್ವವಶ್ಯ ಎಂದು ವಿಭೂತಿ ತತ್ತ್ವದ ಘನಮಹಿಮೆಯನ್ನು ಅರುಹಿರುವರು. 


*"ಸಕಲ ಕರಣಂಗಳ ಚೇಷ್ಟೆಯ ಸುಟ್ಟುದೇ  ವಿಭೂತಿ"*


ತೋಂಟದ ಸಿದ್ದಲಿಂಗ ಶಿವಯೋಗಿಗಳ ವಿಭೂತಿ ಅನುಭಾವ..


" ಸಕಲ ಕರಣಂಗಳನು ಭಕುತಿ ಜ್ವಾಲೆಯಲಿ ಸುಟ್ಟು

 ಯುಕುತಿ ವಿಭೂತಿಯ ಧರಿಸಲು 

 ಮುಕುತಿಯಹುದಕೆ ಸಂದೇಹವಿಲ್ಲ.ಇದು ಕಾರಣ ಶಿವಸಂಬಂಧಿತವಾದ ವಿಭೂತಿಯನೊಲಿದು ಧರಿಸುತಿರ್ದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೆಶ್ವರ ಪ್ರಭುವೇ.." 


ಸಕಲ ಇಂದ್ರಿಯವೃತ್ತಿಗಳೆ ಮಾನವನನ್ನು ಬಂಧನಕ್ಕೊಳಗು ಮಾಡಿವೆ. ಆ ಇಂದ್ರಿಯಗಳ ವಿಕಾರತೆಯನ್ನೆ ಭಕ್ತಿಯೆಂಬ ಅಗ್ನಿಯಲ್ಲಿ ದಹಿಸಿದಾಗ ಉದಯಿಸುವ ಪರಿಶುದ್ಧ ಪ್ರಕಾಶವೇ ಕರಣ(ಇಂದ್ರಿಯ)ದ ಕತ್ತಲೆಯನ್ನು ಕಳೆದು ವಿಕಾರರಹಿತ ಶುದ್ಧತೆಯಾಗಿ ಪರಿಣಮಿಸುವದು. ಇದುವೇ ಭಕ್ತನ ಅಂತರಂಗದ ವಿಭೂತಿಯ ವ್ಯಕ್ತತೆ.

ಮಹಾಪ್ರಕಾಶವೇ ಸರ್ವಾಂಗದಲ್ಲಿ ಪ್ರವಹಿಸಿ ಕಾಯದ ಕತ್ತಲೆ ಕಳೆದು ಅಲ್ಲಿ ಬೆಳಗನುಂಟು ಮಾಡುವ ಕಾರಣ ಅಖಂಡ ಪರಶಿವತೇಜವು ಭಕ್ತನಲ್ಲಿ ನೆಲೆಗೊಳ್ಳುವದು. ಭಕ್ತನು ತಾನೇ ಸ್ವಯಂ ಲಿಂಗಪ್ರಕಾಶವಾಗಿ  ಬೆಳಗುವನು.


ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು ಮೂರು ಬೆರಳು ವಿಭೂತಿ ಧಾರಣೆಯ ಕುರಿತು ನೀಡೀದ ಅನುಭಾವ..


" ಎಸೆವ ಅಂಗುಲಿತ್ರಯವು ಭಸಿತ ರೇಖೆಗಳೆಲ್ಲ ಬಸವಾಕ್ಷರತ್ರಯಗಳೆಂದು ಮುದದಿ,ಹರಬಸವ, ಚರಬಸವ,ಗುರುಬಸವ ಎಂದೆನುತ ಶಿರಬಾಗಿ ಚರಣಾಂತ್ಯದೋಳ್ ಧರಿಸುವೆನು. 


ಮೂರು ಅಂಗುಲಿಗಳು ಬ ಸ ವ ಎಂಬ ಪ್ರಣವಾಕ್ಷರ ಪ್ರತೀಕವಾಗಿದ್ದು ಹರಬಸವ ಚರಬಸವ ಗುರುಬಸವ ಎಂದು ಪಠಿಸುತ್ತ ವಿಭೂತಿ ಧರಿಸುವ ಕ್ರಮ ಅರುಹಿರುವರು. 


*ವಿಭೂತಿ ಧಾರಣೆಯ ಮಹಿಮೆ*


" ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ 

ಕಹಿ ಸೋರೆಕಾಯ ತಂದು ವಿಭೂತಿ ತುಂಬಿಡಲು ಸಿಹಿಯಾಗದೇ ಮೂರು ದಿವಸಕ್ಕಯ್ಯ, 

ಹಲವುಕಾಲ ಕೊಂದ ಸೊನೆಗಾರನ ಕತ್ತಿಯಾದರೇನು? ಪರುಷ ಮುಟ್ಟಲು ಹೊನ್ನಾಗದೇ? ಲಲಾಟದಲ್ಲಿ ವಿಭೂತಿ ಬರೆಯಲು ಪಾಪ ಪಲ್ಲಟವಾಗದೇ ಕೂಡಲಸಂಗಮದೇವ.." 


ಮಾನವನ ಪಾಪಕರ್ಮಗಳನ್ನು ನಾಶ ಮಾಡಿ ತನು,ಮನ,ಭಾವದಲ್ಲಿ ಪರಿಶುದ್ಧ  ಬದುಕಿಗೆ ಮಾರ್ಗ ತೋರಿಸುವದೇ ವಿಭೂತಿಯ ಮಹಿಮೆಯು ಎಂದು ಬಸವಣ್ಣನವರು ಅನುಭಾವ ನೀಡಿರುವರು.


*ಸದ್ಭಕ್ತನಿಗೆ ಶ್ರೀವಿಭೂತಿಯೆ ಶೃಂಗಾರ*


" ನೀರಿಂಗೆ ನೈದಿಲೆಯೇ ಶೃಂಗಾರ

  ಸಮುದ್ರಕೆ ತೆರೆಯೇ ಶೃಂಗಾರ

  ಗಗನಕೆ ಚಂದ್ರಮನೆ ಶೃಂಗಾರ

  ನಾರಿಗೆ ಗುಣವೇ ಶೃಂಗಾರ

  ನಮ್ಮ ಕೂಡಲಸಂಗನ ಶರಣರ ನೊಸಲಿಗೆ ಶ್ರೀವಿಭೂತಿಯೇ ಶೃಂಗಾರ.." 


ಭಕ್ತನಿಗೆ ಶಿವ ಸಂಕೇತವಾದ ವಿಭೂತಿಯೆ ಶೃಂಗಾರವಾಗಿರುವದು.

ಕುಂಕುಮ ಚಂದನ ಕಸ್ತೂರಿಗಳು ಕೇವಲ ಬಾಹ್ಯ ಸೌಂದರ್ಯ ಸಾಧನಗಳೇ ಹೊರತು ಯಾವುದೇ ತಾತ್ತ್ವಿಕವಾದ ಮೌಲ್ಯಗಳಲ್ಲ.

ಆದ್ದರಿಂದ ಲಿಂಗವಂತರು ಕೇವಲ ವಿಭೂತಿ ಧರಿಸಬೇಕು ಹೊರತು ಯಾವುದೇ ಕಾಲ್ಪನಿಕ ಸ್ಥಾವರ ದೇವತೆಗಳ ಕುಂಕುಮ,ಭಂಡಾರ,ಅಂಗಾರವನ್ನು ಧರಿಸಬಾರದು. ಲಿಂಗವಂತರಿಗೆ ವಿಭೂತಿಯೆ ಸರ್ವಶ್ರೇಷ್ಠವಾದ ಸಾಧನವಾಗಿದೆ. 


ಜೀವಾತ್ಮನ ಅಂತರಂಗದ ದುರ್ಗುಣ,ದುರ್ವಿಚಾರ,ದುರ್ಭಾವಗಳೇ ಭೂತಿಗುಣಗಳು. ಈ ಭೂತಿಗುಣಗಳು ಅಳಿಯದ ಹೊರತು ತನ್ನಲ್ಲಿ ಹುದುಗಿರುವ ಪರವಸ್ತುವಿನ ಅರಿವು ಮೂಡಲಾರದು. ಆದ್ದರಿಂದ ಭೂತಿಗುಣಗಳನ್ನು ವಿಭೂತಿ ತತ್ತ್ವ ಸಂಸ್ಕಾರದಿಂದ ದಹಿಸಿಕೊಂಡ ಭಕ್ತನು ತಾನೆ ವಿಭೂತಿಯೆನಿಸುವನು.. 


ನಾಳೆ - ರುದ್ರಾಕ್ಷಿತತ್ತ್ವ

ಶರಣು ಶರಣಾರ್ಥಿ..

✍🏻 ಶಶಿಧರ ಗು.ಕರವೀರಶೆಟ್ಟರ 

       ಶ್ರೀಗುರುಬಸವ ಮಂಟಪ ಟ್ರಸ್ಟ್ 

                    ಹುಬ್ಬಳ್ಳಿ.

No comments:

Post a Comment