ವಿದ್ಯೆಯ ಜೊತೆಗೆ ವಿನಯವನ್ನು ರೂಢಿಸಿಕೊಳ್ಳಲು ವಚನಗಳನ್ನು ಅಧ್ಯಯನ ಮಾಡಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಹೇಳಿದರು. ಮೈಸೂರು ವೀರಶೈವ ಸಜ್ಜನ ಸಂಘ ಮೈಸೂರಿನ ಕಂಠಿಮಲ್ಲಣ್ಣ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಎಸ್.ಎಸ್,ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು ವಿದ್ಯಾರ್ಥಿಗಳು ದೇಹದಲ್ಲಿ ಬಲ, ಮನಸ್ಸಿನಲ್ಲಿ ಉತ್ಸಾಹ ಮತ್ತು ಬುದ್ಧಿಯಲ್ಲಿ ತೇಜಸ್ಸು ಇರುವಾಗಲೇ ಭಗವಂತನನ್ನು ಆರಾಧಿಸಬೇಕು. ಮುಪ್ಪಿನಲ್ಲಿ ನೂರು ಸಲ ದೇವರನ್ನು ಬೇಡುವುದು ಯೌವನದಲ್ಲಿ ಕೇವಲ ಮೂರು ಸಲ ಬೇಡುವುದಕ್ಕೆ ಸಮ. ಬದುಕಿನ ಸಾರ್ಥಕತೆ ದೀರ್ಘಕಾಲ ಬಾಳುವುದರಲ್ಲಿಲ್ಲ, ಲೇಸೆನಿಸಿಕೊಂಡು ಬದುಕುವುದರಲ್ಲಿದೆ. ಹಿಂದಿನ ಕಾಲದಲ್ಲಿ ಜ್ಞಾನ ಕಟ್ಟಿಕೊಳ್ಳಲು ಗುರು ಅನಿವಾರ್ಯವಾಗಿತ್ತು ಆದರೆ ಇಂದು ಜ್ಞಾನ ಪಡೆಯಲು ಅನೇಕ ಮಾಧ್ಯಮಗಳಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನಾವು ನಮ್ಮ ಬಾಯಿಚಪಲ ತೀರಿಸಿಕೊಳ್ಳಲು ಇಲ್ಲಸಲ್ಲದ ಸಂಗತಿಗಳನ್ನು ಮಾತನಾಡುವುದನ್ನು ಬಿಡಬೇಕು. ಮತ್ತೊಬ್ಬರಿಗೆ ಮುಟ್ಟಿಸಬೇಕೆಂದಿರುವ ವಿಷಯ ಸತ್ಯವೇ, ಉಪಯುಕ್ತವೇ, ಒಳ್ಳೆಯದೇ ಎಂದು ತುಲನೆ ಮಾಡಿ ತಿಳಿಸಿ ಅವರಿಗೆ ನೋವಾಗದಂತೆ ಎಚ್ಚರಿಕೆ ವಹಿಸಬೇಕು. ಸಂಕಷ್ಟದಲ್ಲಿರುವವರಿಗೆ ನೆರವಾಗುವುದರ ಮೂಲಕ ಮಾನವನು ಮಹಾದೇವನಾಗುವ ಹಂತವನ್ನು ತಲುಪಬೇಕು. ವಿದ್ಯಾರ್ಥಿಗಳು ಲಕ್ಷ್ಮೀ ಪುತ್ರರಾಗಲು ಬಯಸದೇ ಸರಸ್ವತಿ ಪುತ್ರರಾಗುವುದರ ಬಗ್ಗೆ ಆಲೋಚಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವೀರಶೈವ ಸಜ್ಜನ ಸಂಘದ ಅಧ್ಯಕ್ಷ ಎಂ.ಎನ್. ಜೈಪ್ರಕಾಶ್ ಮಾತನಾಡಿ ನಮ್ಮಲ್ಲಿ ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಉನ್ನತ ಹುದ್ಧೆ ಪಡೆದು ವಿದ್ಯಾರ್ಥಿಗಳಿಗೆ ಬಹುಮಾನ ಪ್ರಾಯೋಜಕರಾಗಿ ಪ್ರೋತ್ಸಾಹಿಸುತ್ತಿರುವುದು ಸಂತಸದ ವಿಷಯ ಎಂದರು. ನಂತರ ಭರತನಾಟ್ಯ ರಂಗ ಪ್ರವೇಶ ಪಡೆದ ಬಿ. ಚಂದನರವರಿಗೆ ಹಾಗೂ ಉತ್ತಮ ಅಂಕ ಪಡೆದ ಎಸ್.ಎಸ್.ಎಲ್.ಸಿ, ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಸ್.ಆರ್.ಜಗದೀಶ್, ಗೌರವ ಕಾರ್ಯದರ್ಶಿ ಎಂ.ಟಿ.ಮಲ್ಲಿಕಾರ್ಜುನ್, ಸಹ ಕಾರ್ಯದರ್ಶಿ ಕೆ.ವಿ.ಪ್ರದೀಪ್ ಕುಮಾರ್, ಖಜಾಂಚಿ ಎಸ್. ರಮಾನಂದ್ ಮತ್ತು ಎಂ.ಎಸ್. ಶೋಭಾರಾಣಿ, ವಾಗ್ದೇವಿ ವಿಜಯಶೇಖರ್, ಎಂ.ಆರ್.ವಿಜಯಶೇಖರ್ ಉಪಸ್ಥಿತರಿದ್ದರು.

No comments:
Post a Comment