ಶರಣ ಪ್ರವಾಸ ಕಥನ
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ.
ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ.
ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ,
ಆನು ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
ಎಂಬ ಜಗನ್ಮಾತೆ ಅಕ್ಕಮಹಾದೇವಿಯವರ ವಚನದಂತೆ ಶರಣರುಗಳು ಮೆಟ್ಟಿದ ನೆಲಗಳು ಪಾವನವಾಗಿ, ಅವರುಗಳು ಇದ್ದಂತಹ ಸ್ಥಳಗಳು ಕೈಲಾಸಗಳಾಗಿ, ಅವರುಗಳು ನೆಲೆನಿಂತ ಸ್ಥಳಗಳು ನಿಜ ನಿವಾಸವಾಗಿ ಗೋಚರಿಸಿ ಬಸವತತ್ವವನ್ನು ಒಪ್ಪಿ ಅಪ್ಪಿಕೊಳ್ಳುವವರಿಗೆ ಶರಣರ ಹೆಸರು ಮತ್ತು ಅವರ ನೆಲೆಗಳು ಕಿವಿಗೆ ಬಿದ್ದೊಡನೆ ಒಂದು ರೀತಿಯ ರೋಮಾಂಚನವಾಗುತ್ತದೆ.
ನಾನು ಮತ್ತು ನನ್ನ ಶ್ರೀಮತಿ ಹಾಗೂ ಮಕ್ಕಳು ಪ್ರತೀ ವರ್ಷ ನಾಲ್ಕರಿಂದ ಐದು ಶರಣ ಕ್ಷೇತ್ರಗಳನ್ನು ಭೇಟಿ ಮಾಡಿ ಆ ನೆಲೆಗಳನ್ನು ಸ್ಪರ್ಶಿಸಿ ಧನ್ಯತಾ ಭಾವವನ್ನು ಪಡೆಯುತ್ತಿರುತ್ತೇವೆ. ಶರಣರ ನೆಲೆಗಳನ್ನು ಸ್ಪರ್ಶಿಸಿದ ಕೂಡಲೇ ಬಸವಾಭಿಮಾನಿಗಳಿಗೆ ಒಂದು ರೀತಿಯ ರೋಮಾಂಚನ ಅನುಭವವಾಗುತ್ತದೆ. ಆ ರೋಮಾಂಚನ ಹೇಗಿರುತ್ತದೆ ಎಂದರೆ ಒಂದು ಸಲ ದೇ. ಜವರೇಗೌಡರು ಬಸವಕಲ್ಯಾಣ ನೋಡಲು ಹೋಗಿ ಅಲ್ಲಿನ ಬಸವಣ್ಣನವರ ವಾಸದ ಮನೆಯಾದ ಅರಿವಿನ ಮನೆಯ ನೆಲೆಯನ್ನು ಮೆಟ್ಟಿದ ಕೂಡಲೇ ಆ ಅಂಗಳದ ನೆಲದಲ್ಲಿ ಸಂಪೂರ್ಣವಾಗಿ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟರಂತೆ. ಆಗ ಜೊತೆಯಲ್ಲಿದ್ದವರು ಏನು ಮಾಡುತ್ತಿದ್ದೀರಿ ಸರ್ ಎಂದಾಗ ಇದು ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ ಮುಂತಾದ ಶರಣರು ಮೆಟ್ಟಿದ ನೆಲೆ ಕಣಪ್ಪ. ಈ ಸ್ಥಳದ ಮಣ್ಣಿನ ಕಣಕಣಗಳು ನನ್ನ ದೇಹಕ್ಕೆ ತಾಗಿದರೆ ನಾನು ಪಾವನನಾಗುತ್ತೇನೆ ಅಂದರಂತೆ. ಹೀಗೆ ಶರಣರ ನೆಲೆಗಳ ಸ್ಪರ್ಶ ಒಂದು ರೀತಿಯ ಅಯಸ್ಕಾಂತೀಯ ಸೆಳೆತದಂತೆ ಸೆಳೆದು ನಮ್ಮಲ್ಲಿ ಸಕಾರಾತ್ಮಕ ಆಲೋಚನೆ ಬೆಳೆಸಿ ಮಾನವ ಮಹಾದೇವನಾಗಲು ದಾರಿಮಾಡಿಕೊಡುತ್ತದೆ.
2023 ನೇ ಈ ವರ್ಷ ನಾವು ನೋಡಿದ ಕೆಲವು ಕ್ಷೇತ್ರಗಳ ಪರಿಚಯ ಮಾಡಲು ಇಚ್ಛಿಸಿ ಅಂತಹ ಕ್ಷೇತ್ರಗಳ ದರ್ಶನವನ್ನು ತಾವೂ ಕೂಡ ಮಾಡಿ ಆ ಸ್ಥಳದ ಮಹತ್ವ ಅರಿಯಬೇಕೆಂಬುದೇ ನನ್ನ ಶರಣ ಪ್ರವಾಸ ಕಥನದ ಲೇಖನದ ಉದ್ದೇಶ.
ಕನ್ನಡದ ಮೊಟ್ಟಮೊದಲ ಕವಯತ್ರಿ ಅಕ್ಕಮಹಾದೇವಿಯವರ ಜನ್ಮಸ್ಥಳ ಉಡುತಡಿ

ಶಿವಮೊಗ್ಗದ ಹೊರವಲಯದ ಕಿಮ್ಮನೆ ರೆಸಾರ್ಟ್ ನಲ್ಲಿ ನಾನು ಮತ್ತು ನನ್ನ ಶ್ರೀಮತಿ ರೂಪ ಕುಮಾರಸ್ವಾಮಿ, ಮಗಳು ವಚನ 17.5. 2023 ರಂದು ಶ್ರೀಮತಿ ಶ್ವೇತ ಗುರುಪ್ರಸಾದ್ ಅವರ ವಚನ ಕಲ್ಯಾಣ ಮಹೋತ್ಸವ ನೆರವೇರಿಸಿ ನಂತರ 18.5.2023 ರಂದು ಶಿವಮೊಗ್ಗ ನಗರದ ಹತ್ತಿರದಲ್ಲಿರುವ ಹರಮಘಟ್ಟಕ್ಕೆ ನಮ್ಮ ಕಾರಿನಲ್ಲಿ ಪಯಣ ಬೆಳೆಸಿ ಅಲ್ಲಿ ಆತ್ಮೀಯರಾದ ಶ್ರೀ ಭೋಜರಾಜರವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಅವರನ್ನು ಕರೆದುಕೊಂಡು ಅಲ್ಲಿಗೆ ಹತ್ತಿರದಲ್ಲಿರುವ ಅಕ್ಕಮಹಾದೇವಿಯವರ ಜನ್ಮಸ್ಥಳ ಉಡುತಡಿಗೆ ಹೋದೆವು. ಉಡುತಡಿ ಅಕ್ಕನ ಜನ್ಮಸ್ಥಳ. ಇದು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ತಾಲ್ಲೂಕಿನಲ್ಲಿದೆ. ಇದು ಶಿವಮೊಗ್ಗದಿಂದ 67 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರ ಇಂದು ಅಮೂಲಾಗ್ರವಾಗಿ ಬದಲಾವಣೆಯಾಗಿದ್ದು, ಉಡುತಡಿಯ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರು ಒಂದು ಸಮಿತಿಯನ್ನು ರಚಿಸಿ ಅದರ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಹಿಂದೆ ಇದು ಕಗ್ಗಾಡು ಆಗಿತ್ತು. ಒತ್ತುವರಿಗೆ ತುತ್ತಾಗಿ ಅಲ್ಲಿದ್ದ ಹತ್ತು ಎಕರೆ ಭೂಮಿಯನ್ನು ರಕ್ಷಿಸಿದ್ದರಿಂದ ಆ ಸ್ಥಳ ಈಗ ಅಭಿವೃದ್ಧಿಯ ಘಮಲು ಕಂಡಿರುವುದು ಸಂತಸ ಮೂಡಿಸಿದೆ’ ಎಂಬ ಅಭಿಪ್ರಾಯವನ್ನು ಲೀಲಾದೇವಿ
ಆರ್ ಪ್ರಸಾದ್ ಅವರು ನಮ್ಮೊಡನೆ ಅವರ ಅಭಿಪ್ರಾಯ ಹಂಚಿಕೊಂಡರು. ಜೊತೆಗೆ ನಮ್ಮ ಶರಣು ವಿಶ್ವವಚನ ಫೌಂಡೇಷನ್ ಚಟುವಟಿಕೆಗಳನ್ನು ಕೇಳಿ ಶ್ಲಾಘನೆ ವ್ಯಕ್ತಪಡಿಸಿದರು. ಇಲ್ಲಿ ಬೀದರ್ ಜಿಲ್ಲೆ ಬಸವ ಕಲ್ಯಾಣದಲ್ಲಿ 108 ಅಡಿಯ ಬಸವೇಶ್ವರ ಪ್ರತಿಮೆ ತಯಾರಿಸಿರುವ ಶಿವಮೊಗ್ಗದ ಶಿಲ್ಪಿ ಶ್ರೀಧರಮೂರ್ತಿ ಅವರು ಮಾತೆ ಅಕ್ಕಮಹಾದೇವಿಯವರ ಪ್ರತಿಮೆಯನ್ನು ಸಿಮೆಂಟ್ ಕಾಂಕ್ರೀಟ್ನಲ್ಲಿ ನಿರ್ಮಿಸಿದ್ದು ಅದು ಲೋಕಾರ್ಪಣೆ ಕೂಡಾ ಆಗಿದ್ದು ಶರಣಾಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. 51 ಅಡಿಯ ಪ್ರತಿಮೆಯ ರಕ್ಷಣೆಗೆ 14 ಅಡಿಯ ಸ್ತಂಭ ನಿರ್ಮಿಸಲಾಗಿದ್ದು ಅದರ ಒಟ್ಟು ಎತ್ತರ 65 ಅಡಿ. ಅದಕ್ಕೆ ಕಂಚಿನ ಬಣ್ಣ ಬಳಿದಿದ್ದು, ಪ್ರತಿಮೆ ಒಟ್ಟು 500 ಟನ್ ಭಾರವಿದೆ. ಇಷ್ಟಲಿಂಗ ಹಿಡಿದ ಮಂದಸ್ಮಿತೆ ಅಕ್ಕನ ಮೂರ್ತಿಯಂತೂ ಕ್ಷಣಕಾಲ ನಮ್ಮನ್ನು ನೋಟಮುಗ್ಧರನ್ನಾಗಿ ಮಾಡಿ ರಸ್ತೆಯಲ್ಲಿ ಹಾದುಹೋಗುವ ಯಾರನ್ನಾದರೂ ತನ್ನತ್ತ ಸೆಳೆದು ಒಂದು ರೀತಿಯ ಆಧ್ಯಾತ್ಮಿಕ ಬಂಧನ ಉಂಟುಮಾಡುವಲ್ಲಿ ಯಶಸ್ವಿಯಾಗಿದೆ.
ಅಕ್ಕಮಹಾದೇವಿಯ ಪುತ್ಥಳಿ ಹಾಗೂ ಪರಿಸರದ ಸುತ್ತಲೂ ನಿರ್ಮಿಸಿರುವ ಕಂದಕಕ್ಕೆ ತುಂಗಭದ್ರೆಯ ನೀರು ಹರಿಸಲಾಗುತ್ತಿದೆ. ಹಿರೇಕೆರೂರು ತಾಲ್ಲೂಕಿನ ಪುರದಕೆರೆಯ ಬಳಿ ತುಂಗಾಭದ್ರಾ ನದಿಯಿಂದ ಏತನೀರಾವರಿ ಮೂಲಕ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಯ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಅಲ್ಲಿಂದ ಪೈಪ್ಲೈನ್ ಮೂಲಕ ನಿರಂತರವಾಗಿ ಕಂದಕಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಲಾಗಿದ್ದು ಈ ಕ್ಷೇತ್ರವನ್ನು ದೆಹಲಿಯ ಅಕ್ಷರಧಾಮದ ಮಾದರಿಯಲ್ಲಿ ಅಭಿವೃದ್ದಿ
ಮಾಡಲಾಗುತ್ತಿದೆ. ಥೀಮ್ ಪಾರ್ಕ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಕ್ಷೇತ್ರದಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ಗಂಟೆಯ ಸಮಯ ಈ ಕ್ಷೇತ್ರದಲ್ಲಿ ಇದ್ದು ನಂತರ ಶರಣೆ ಸತ್ಯಕ್ಕನವರ ಜನ್ಮಸ್ಥಳ ಹಿರೇಜಂಬೂರಿಗೆ ಪಯಣ ಬೆಳೆಸಿದೆವು.
ಶರಣೆ ಸತ್ಯಕ್ಕನವರ ಕ್ಷೇತ್ರ ಹಿರೇಜಂಬೂರು
ಅರ್ಚನೆ ಪೂಜೆ ನೇಮವಲ್ಲ
ಮಂತ್ರ-ತಂತ್ರ ನೇಮವಲ್ಲ
ಧೂಪ-ದೀಪದಾರತಿ ನೇಮವಲ್ಲ
ಪರಸ್ತೀ-ಪರದೈವಗಳಿಗೆರಗದಿಪ್ಪುದೇ ನೇಮ
ಶಂಭುಜಕೇಶ್ವರನಲ್ಲಿ ಇವನ್ನು ಕಾಣಿರಣ್ಣಾ!
ಇವೇ ನಿತ್ಯನೇಮ
ನೇಮದ ಬಗ್ಗೆ ಒಂದು ಹೊಸ ವ್ಯಾಖ್ಯಾನವನ್ನು ನೀಡಿದ ಸತ್ಯಕ್ಕನವರ ಜನ್ಮಸ್ಥಳ ಹಿರೇಜಂಬೂರು ಅಕ್ಕಮಹಾದೇವಿಯವರ ಕ್ಷೇತ್ರ ಉಡುತಡಿಯಿಂದ 12 ಕಿ.ಮೀ ದೂರದಲ್ಲಿದೆ. ಇಲ್ಲಿ ಶಿವಶರಣೆ ಸತ್ಯಕ್ಕನವರ ದೇವಸ್ಥಾನ ಇದ್ದು, ಅಲ್ಲಿಗೆ ನಾವು ಹೋದೆವು. ವಿಶಾಲವಾದ ಪ್ರಾಕಾರ ಹೊಂದಿರುವ ದೇವಸ್ಥಾನದ ಪ್ರಾಕಾರವಿರುವ ದೇವಸ್ಥಾನದ ಗರ್ಭಗುಡಿಯೊಳಗೆ ಕಲ್ಲಿನಲ್ಲಿ
ಕೆತ್ತಿದ ಲಿಂಗು ಮತ್ತು ವಿವಿಧ ಶರಣರ ಚಿತ್ರಗಳನ್ನು ಕೆತ್ತಲಾಗಿದೆ.
ಈ ಸ್ಥಳವನ್ನು ನೋಡಿ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಮನೆಗಳವರ ಜೊತೆ ಮಾತನಾಡಿ ನಂತರ ಅವರುಗಳಿಗೆ ವಚನ ಪುಸ್ತಕ ನೀಡಿ ತರಳಬಾಳು ಮಠದ ಕಡೆ ಪಯಣ ಬೆಳೆಸಿದೆವು. ನಂತರ ನಮ್ಮ ಜೊತೆ ಇದ್ದ ಭೋಜರಾಜರವರ ಮಗಳ ಮದುವಗೆ ಕೆಲವು ತಿಂಗಳುಗಳ ಹಿಂದೆ ಆಹ್ವಾನ ಮಾಡಿದ್ದರು. ಆದರೆ ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ. ನಂತರ ದಾವಣಗೆರೆ ಜಿಲ್ಲೆ ಹರಿಹರ ತಾ. ನಿಟ್ಟೂರಿಗೆ ಹೋಗಿ ಅವರ ಮಗಳು ಅಳಿಯ ಮತ್ತು ಬೀಗರುಗಳನ್ನು ನೋಡಿ ಅವರ ಜೊತೆ ಸ್ವಲ್ಪ ಹೊತ್ತು ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿ ಅಲ್ಲೇ ಮಧ್ಯಾಹ್ನದ ಊಟ ಮುಗಿಸಿದೆವು. ಭೋಜರಾಜರವರು
ಅಲ್ಲೇ ಉಳಿದರು. ನಂತರ ನಾವು ಸಿರಿಗೆರೆಯ ತರಳಬಾಳು ಮಠಕ್ಕೆ ಹೊರಟೆವು.
ಶ್ರೀ ತರಳಬಾಳು ಬೃಹನ್ಮಠ

ತರಳಬಾಳು ಮಠವು ಚಿತ್ರದುರ್ಗ ಜಿಲ್ಲೆ ಸಿರಿಗೆರೆಯಲ್ಲಿದೆ. ಸಿರಿಗೆರೆಯ ಮೂಲ ಮಠ ಉಜ್ಜಯಿನಿ ಸದ್ಧರ್ಮ ಪೀಠ. ವಿಶ್ವಬಂಧು ಮರುಳಸಿದ್ದರು 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ಹಿರಿಯ ಸಮಕಾಲೀನರು. ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ. ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ‘ತರಳ, ನೀ ಬಾಳು’ ತರಳ ಬಾಳು. ವಚನ ಚಳವಳಿ ತಾತ್ವಿಕ ಸ್ವರೂಪ ಪಡೆದು ಸಾಮಾಜಿಕ ಸಂಘರ್ಷ ಆರಂಭಿಸುವ ಮುನ್ನವೇ ಇಂತಹ ಚಳವಳಿಯಲ್ಲಿ ತೊಡಗಿಸಿಕೊಂಡ ಮಹಾನ್ ಸಾಧಕರು. ಸಮಾಜದಲ್ಲಿ ಮೂಢನಂಬಿಕೆ, ಮೌಢ್ಯ ಬಿತ್ತಿದ್ದ ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಸಾಮಾಜಿಕ ಆಂದೋಲನವನ್ನೇ ರೂಪಿಸಿದ ಮಹಾನ್ ಶರಣರು. ಮಾದಿಗ ಸಮುದಾಯದಲ್ಲಿ ಜನಿಸಿದ ಮರುಳಸಿದ್ದರು, ಬಾಲ್ಯದಲ್ಲೇ ತಾಯಿ–ತಂದೆ ಕಳೆದುಕೊಂಡು ಕಗ್ಗಲುಪುರದ ಬಾಚಣ್ಣನ ಮನೆಯಲ್ಲಿ ಸಾಕು ಮಗನಂತೆ ಬೆಳೆಯುತ್ತಾರೆ. ದನಕರು ಕಾಯುವ ಕಾಯಕ ಮಾಡಿಕೊಂಡಿದ್ದರು. ಪ್ರಾಣಿಗಳ ಜತೆ ಒಡನಾಟ ಇದ್ದ ಅವರಿಗೆ ಒಮ್ಮೆ ಅವರ ಊರಿನಲ್ಲಿ ನಡೆದ ಮಾರಿ ಜಾತ್ರೆಗೆ ಕೋಣ ಬಲಿ ಕೊಡುವ ಪ್ರಸಂಗ ಬಂದಾಗ ನೊಂದುಕೊಂಡರು. ಮೂಢನಂಬಿಕೆಯ ನಡುವೆ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಇಂತಹ ಆಚರಣೆ ವಿರುದ್ಧ ಧ್ವನಿ ಎತ್ತಿದರು. ಪಟ್ಟಭದ್ರರ ಬಲದ ಮುಂದೆ ಅವರ ಧ್ವನಿ ಚಿಕ್ಕದೆನಿಸಿತು. ಅದರಿಂದ ಬೇಸರಗೊಂಡ ಅವರು ಊರು ತೊರೆದು ಕಾಡು–ಮೇಡು ಅಲೆಯುತ್ತಾರೆ. ಸಾಧಕರ ಬೀಡು ಎಂದೇ ಪ್ರಸಿದ್ಧಿ ಪಡೆದಿದ್ದ ಚಿನ್ಮೂಲಾದ್ರಿ ಬೆಟ್ಟ ತಲುಪುತ್ತಾರೆ. ಅಲ್ಲಿ ಗುರು ರೇವಣಸಿದ್ದರ ಸಂಗ ದೊರೆಯುತ್ತದೆ. ಅಲ್ಲಿ ಅವರು ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ. ತರಳ... ಬಾಳು... ತಾವು ಮಾಡಿದ ವೈಚಾರಿಕ ಕ್ರಾಂತಿ ಜ್ಯೋತಿಯನ್ನು ನಿರಂತರ ಉರಿಸುವ ಉದ್ದೇಶದಿಂದ ಮಾಘ ಶುದ್ಧ ಭಾರತ ಹುಣ್ಣಿಮೆಯ ದಿನ ತಮ್ಮ ಶಿಷ್ಯ ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ‘ತರಳ, ನೀ ಬಾಳು’ ತರಳ ಬಾಳು... ತರಳಬಾಳು ಎಂದರೆ ‘ದೀರ್ಘ ಕಾಲ ನೀ ಚಿರಂಜೀವಿಯಾಗಿ ಬಾಳು ಮಗು’ ಎಂದು. ಅಂದರೆ, ಸದ್ಧರ್ಮ ಪೀಠ ಸೂರ್ಯ ಚಂದ್ರರು ಇರುವವರೆಗೂ ಬಾಳಲಿ... ಜಗತ್ತಿನ ಎಲ್ಲ ಜನರ ಬಾಳು ಹಸನಾಗಲಿ ಎನ್ನುವ ತತ್ವಾರ್ಥ. ತರಳಬಾಳು ಪೀಠ ಸ್ಥಾಪನೆಯ ಉದ್ದೇಶವೇ ನೈತಿಕ, ಸಮಾನತೆ, ಕಾಯಕ ತತ್ವದ ಆಧಾರದ ಮೇಲೆ ಧರ್ಮದ ಆಚರಣೆ ಸಾಗಬೇಕು ಎಂಬುದು. ಹೀಗೆ ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ವಿಶ್ವ ಬಂಧು ಮರುಳಸಿದ್ದರು ತಮ್ಮ ಶಿಷ್ಯ ತೆಲುಗುಬಾಳು (ಬಳ್ಳಾರಿ ಜಿಲ್ಲೆ) ಸಿದ್ದರನ್ನು ಸಿಂಹಾಸನದಲ್ಲಿ ಪೀಠಾರೋಹಣ ಮಾಡಿದ ನೆನಪಿಗಾಗಿ ಪ್ರತಿ ವರ್ಷ ಭಾರತ ಹುಣ್ಣಿಮೆಯ ದಿನ ತರಳಬಾಳು ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.


ಈ ಮಠಕ್ಕೆ ನಾವು ಹೋಗಿದ್ದು ಅದೇ ಮೊದಲು. ಮಠದ ಆವರಣದಲ್ಲಿ ಕಾರು ನಿಲ್ಲಿಸಿ ಮಠದ ಒಳ ಆವರಣ ಪ್ರವೇಶಿಸಿದೆವು. ಅಲ್ಲಿನ ಜಗದ್ಗುರುಗಳವರ ಮರಿಯವರಾದ ಶ್ರೀ ರವಿಯವರು ಮುಖಾಮುಖಿಯಾದರು. ಅವರಿಗೆ ನಮ್ಮ ಪರಿಚಯ ಮಾಡಿಕೊಂಡೆವು. ಈಗಾಗಲೇ ನಮ್ಮ ಶರಣು ವಿಶ್ವವಚನ ಫೌಂಡೇಷನ್ ಚಟುವಟಿಕೆಗಳು ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ನಲ್ಲಿ ಪ್ರಸಾರವಾಗುತ್ತಿದ್ದುರಿಂದ
ನಮ್ಮ ಬಗ್ಗೆ ತಿಳಿದಿದ್ದ ಅವರು ಮಠದಲ್ಲಿ ಶ್ರೀ ಶಿವಕುಮಾರಸ್ವಾಮಿಗಳವರ ಗದ್ದುಗೆ ಮತ್ತು ಮರುಳ ಸಿದ್ಧರ ಮೂರ್ತಿಗಳು ಇರುವ ಸ್ಥಳಗಳ ದರ್ಶನ ಮಾಡಿಸಿ ವಿವರಣೆ ನೀಡಿದರು. ನಂತರ ಅಲ್ಲಿರುವ ಗ್ರಂಥಾಲಯ ನಮ್ಮ ಗಮನ ಸೆಳೆಯಿತು. ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿರುವ ಬೃಹತ್ ಗ್ರಂಥಗಳನ್ನು ಪರಿಚಯಿಸಿ ನಮಗೂ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಉಚಿತವಾಗಿ ನೀಡಿದರು. ತದನಂತರ ಒಂದು ಹುಡುಗನನ್ನು ಕಳಿಸಿ ಉಜ್ಜಯಿನಿ ಸದ್ಧರ್ಮ ನ್ಯಾಯಪೀಠವನ್ನು ನೋಡುವಂತೆ ತಿಳಿಸಿದರು.
ಈ ನ್ಯಾಯಪೀಠದಲ್ಲಿ ಲಕ್ಷಾಂತರ ಜನರು ತಮ್ಮ ವ್ಯಾಜ್ಯಗಳನ್ನು ತಂದು ಶ್ರೀಗಳಿಗೆ ತಿಳಿಸಿ ಅವುಗಳನ್ನು ಪರಿಹರಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದನ್ನು ಕಾಣಬಹುದು. ನಂತರ ಸಿರಿಗೆರೆ ಬಿಟ್ಟು ತಳುಕು ಕಡೆ ಪಯಣ ಬೆಳೆಸಿದೆವು.
ತಳುಕು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ ಉತ್ತರ ದಿಕ್ಕಿಗೆ 15ಕಿ.ಮೀ. ದೂರದಲ್ಲಿರುವ ತಳಕು ಗ್ರಾಮಕ್ಕೆ ‘ತಳುಕು’ ಎಂಬ ಹೆಸರು ಬರಲು ಹಲವು ಐತಿಹ್ಯ ಕಥೆಗಳಿವೆ. ಹಿಂದೊಮ್ಮೆ ಎರಡು ಹೋರಿಗಳು ಒಂದರ ಕೊಂಬಿನಲ್ಲಿ ಇನ್ನೊಂದು ತಳುಕು ಹಾಕಿಕೊಂಡು ಕಾದಾಟ ನಡೆಸಲು ಪ್ರಾರಂಭಿಸಿದ್ದವು. ಎಷ್ಟೇ ಪ್ರಯತ್ನಿಸಿದರೂ ಅವುಗಳು ಸೆಣೆಸಾಟ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಅಂದಿನ ಪಾಳೆಯಗಾರರು, ಇದು ಗಂಡು ಮೆಟ್ಟಿನ ನೆಲ ಎಂದೂ ಘೋಷಿಸಿ ಅದೇ ಜಾಗದಲ್ಲಿ ಹೊಸ ಗ್ರಾಮವೊಂದನ್ನು ನಿರ್ಮಿಸಿ ಅದಕ್ಕೆ ‘ತಳುಕು’ ಎಂದು ಹೆಸರು ನೀಡಿದರು ಎಂಬ ಕಥೆಯನ್ನು ಹೇಳಲಾಗುತ್ತದೆ. ಸುಮಾರು 16ನೇ ಶತಮಾನದಲ್ಲಿ ವಿಜಯನಗರ ಕಾಲದ ಶಾಸನವೊಂದರಲ್ಲಿ ಈ ಗ್ರಾಮದ ಬಗ್ಗೆ ಉಲ್ಲೇಖವಿದ್ದು, ತಳಕು ಗ್ರಾಮವು ಮೊದಲಿಗೆ ನಿಡುಗಲ್ಲು ಪ್ರಾಂತ್ಯಕ್ಕೆ ಸೇರಿದ್ದು, ನಂತರ ಚಿತ್ರದುರ್ಗದ ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿದೆ ಎಂದು ಪಾಳೆಯಗಾರರ ಹಲವು ದಾಖಲೆಗಳಲ್ಲಿ ದೊರೆಯುತ್ತದೆ. ಈ ಊರಿನಲ್ಲಿ ನಮ್ಮ ಶರಣು ವಿಶ್ವವಚನ ಫೌಂಡೇಷನ್ ಅಂತಾರಾಷ್ಟ್ರೀಯ ಅಂತರ್ಜಾಲ ಸಂಚಾಲಕ ಪಿ.ವಿ ರುದ್ರೇಶ್ ಅವರ ಮನೆ ಇದ್ದು ಅಲ್ಲಿ ವಾಸ್ತವ್ಯ ಹೂಡಿದೆವು. ರುದ್ರೇಶ್ ಅವರ
ತಂದೆ ಶ್ರೀ ವಿಜಯ ಮತ್ತು ಅವರ ತಾಯಿ ಶ್ರೀಮತಿ ಮಹೇಶ್ವರಿ ಅವರ ಆತಿಥ್ಯ ನಮ್ಮ ಮನಕ್ಕೆ ಮುದ ನೀಡಿತು. ನಂತರ ಬೆಳಗ್ಗೆ ಶರಣು ವಿಶ್ವವಚನ ಫೌಂಡೇಷನ್ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಸಂದರ್ಶನ ನೀಡಿ 19 ಮೇ 2023 ರಂದು ಸಂಜೆ ಮೈಸೂರಿನ ನಮ್ಮ ಶರಣು ಕುಟೀರಕ್ಕೆ ಹಿಂದಿರುಗಿದೆವು.
ಮರೆಯಲಾರದ
ಗಂಡು ಮೆಟ್ಟಿದ ನೆಲ ಹುಬ್ಬಳ್ಳಿಯ ಶರಣ ಪ್ರವಾಸ
ಮೈಸೂರಿನಿಂದ ಬಸವ ಎಕ್ಸ್ಪ್ರೆಸ್ ನಲ್ಲಿ ಹುಬ್ಬಳ್ಳಿಗೆ
2 ಸೆಪ್ಟೆಂಬರ್ 2023 ರಂದು ಸಂಜೆ ಹುಬ್ಬಳ್ಳಿಯ ಕಡೆ ಪಯಣ ಬೆಳೆಸಿದೆವು. 3 ಸೆಪ್ಟೆಂಬರ್ 2023ರಂದು
ಬೆಳಗ್ಗೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ತಲುಪಿದೆವು. ನಾವು ನಿಲ್ದಾಣ ತಲುಪುವ ಮೊದಲೇ ನಮ್ಮ ಶರಣಾಭಿಮಾನಿಗಳಾದ
ಶ್ರೀ ಬಸವರಾಜ್ ಕುಬಸದ್ ಅವರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡರು. ಅವರ ಮನೆಗೆ ನಮ್ಮನ್ನು
ಕರೆದುಕೊಂಡು ಹೋದರು, ಅವರು ನಮ್ಮ ದಂಪತಿಗಳನ್ನು ಮನೆಯ ಒಳಗೆ ಬರಮಾಡಿಕೊಂಡ ರೀತಿ ಇನ್ನೂ ಕಣ್ಣಿಗೆ
ಕಟ್ಟಿದಂತಿದೆ. ಸಾವಿರಾರು ಕೋಟಿಗಳ ಒಡೆಯರೂ ಕೂಡಾ ಶ್ರೀ ಬಸವರಾಜ್ ಕುಬಸದ್ ಮತ್ತು ಶ್ರೀಮತಿ ಅನಿತಾ
ಕುಬಸದ್ ದಂಪತಿಗಳಿಗೆ ಸರಿ ಸಮಾನ ಬರಲಾರರು. ಅವರು ನಮ್ಮ ತಲೆಗೆ ಬಸವತತ್ವದಂತೆ ತಲೆಗೆ ಹೂ ಹಾಕಿ ಬರಮಾಡಿಕೊಂಡಿದ್ದನ್ನು
ನೋಡಿದಾಗ ಅಕ್ಕನವರ ಈ ವಚನ ನೆನಪಾಯಿತು.
ಅಯ್ಯಾ ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ.
ಅಯ್ಯಾ ನಿಮ್ಮ ಶರಣರ ಬರವಿಂಗೆ ಮುಡುಹಿನಲ್ಲಿ ಪಟ್ಟವ ಕಟ್ಟುವೆ.
ಅಯ್ಯಾ ನಿಮ್ಮ ಶರಣರೆನ್ನ ಮನೆಗೆ ಬಂದಡೆ
ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.
ಅವರ ನಿಷ್ಕಲ್ಮಷ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.
ನಂತರ ಅಲ್ಲಿ ಸ್ನಾನ ಬೆಳಗಿನ ತಿಂಡಿ ಮುಗಿಸಿದ ನಂತರ ಅವರ ಮನೆಯ ಪಕ್ಕದಲ್ಲಿಯೇ ಇರುವ ವಚನ ಪ್ರಸಾರ
ಕೇಂದ್ರವಾದ ಶ್ರೀ ಗುರುಬಸವ ಮಂಟಪಕ್ಕೆ ಹೋದೆವು. ಆ ಮಂಟಪಕ್ಕೆ 85 ವರ್ಷಗಳ ಇತಿಹಾಸವಿದ್ದು, ಅಲ್ಲಿ
ಪ್ರತಿ ತಿಂಗಳ ಮೊದಲ ರವಿವಾರ ಇಷ್ಟಲಿಂಗ ಶಿವಯೋಗದ ಬೆಳಕು ಕಾರ್ಯಕ್ರಮ ನಡೆಯುತ್ತದೆ. ನಾವು ರವಿವಾರ
ಹೋಗಿದ್ದರಿಂದ ಅನೇಕರನ್ನು ಭೇಟಿ ಮಾಡಿ ಬಸವತತ್ವದ ಬಗ್ಗೆ ಚರ್ಚೆ ಮಾಡಿದೆವು. ಅಲ್ಲಿ ಬಸವೇಶ ಕರವೀರ
ಶೆಟ್ಟರ್ ಅವರು, ಶರಣೆ ಸುಲೋಚನಕ್ಕ ಬೂಸನೂರು ಮುಂತಾದವರನ್ನು ಕಂಡು ಅನೇಕ ವಿಚಾರ ಚರ್ಚಿಸಿದೆವು.
ತದನಂತರ ಮತ್ತೊಂದು ಶರಣ ಕುಟುಂಬ ಶ್ರೀ ಕುಮಾರ್ ಪಾಟೀಲ್ ಮತ್ತು ಶ್ರೀಮತಿ ಶಾರದಾ ಪಾಟೀಲ್ ಅವರು
ನಮ್ಮನ್ನು ಬಾಮಸೆಫ್ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಕಾರ್ಯಕ್ರಮ ಮುಗಿಸಿ ಪ್ರಸಾದ
ಸೇವಿಸಿ ನಂತರ ಸಿದ್ಧಾರೂಢ ಮಠಕ್ಕೆ ಹೋದೆವು.
ಸಿದ್ಧಾರೂಢ ಮಠ
ಹುಬ್ಬಳ್ಳಿಯ ಹೊರವಲಯದಲ್ಲಿರುವ
ಸಿದ್ಧಾರೂಢ ಮಠಕ್ಕೆ ಕನ್ನಡ ನಾಡಿನ ಇತಿಹಾಸದಲ್ಲಿ ಪ್ರಮುಖ ಸ್ಥಾನವಿರುವುದನ್ನು ಮನಗಂಡು ಕರ್ನಾಟಕ
ಸರ್ಕಾರ ಆರನೇ ತರಗತಿ ಕನ್ನಡ ವಿಷಯದ ಪಠ್ಯಪುಸ್ತಕಕ್ಕೆ ಸೇರ್ಪಡೆ ಮಾಡಿದೆ. ಸದ್ಗುರು ಸಿದ್ಧಾರೂಢ ಮಹಾರಾಜರ
ಐಕ್ಯಸ್ಥಳವಾದ ಇದು. ಸಿದ್ಧಾರೂಢರು ಜಾತಿಪದ್ಧತಿಯನ್ನು ತಿರಸ್ಕರಿಸಿ, ಎಲ್ಲರೂ ಸಮಾನವಾಗಿ ಅರ್ಹರು
ಎಂದು ದೃಢವಾಗಿ ನಂಬಿದ್ದರು. ಇವರ ಬಗ್ಗೆ ಒಂದು ಗಾದೆ ಕನ್ನಡದಲ್ಲಿ ರೂಡಿಯಲ್ಲಿದೆ. “ ಸಿದ್ಧಾರೂಢರ
ಜೋಳಿಗೆ ಜಗಕ್ಕೆಲ್ಲ ಹೋಳಿಗೆ” ಇವರ ಆಶ್ರಮದಲ್ಲಿ ಪ್ರತಿನಿತ್ಯ ಇಂದಿಗೂ ಸಾವಿರಾರು ಜನರು ಪ್ರಸಾದ ಸ್ವೀಕರಿಸುತ್ತಾರೆ.
ಸಿದ್ಧಾರೂಢರ ಗದ್ದುಗೆ ನೋಡಿ ನಂತರ ಕಬೀರದಾಸ್ ಎಂಬ ಅವರ ಮುಸ್ಲಿಂ ಅನುಯಾಯಿಯ ಗದ್ದುಗೆ ಅವರ ಸಮಾಧಿಯ
ಹಿಂಭಾಗದಲ್ಲಿದ್ದು, ಅದನ್ನು ನೋಡಿದೆವು. ಅಂದು ಶರಣರ ತತ್ವಗಳಿಂದ ಪ್ರಭಾವಿತರಾಗಿ ವೈಚಾರಿಕ ಅಂಶಗಳಿಂದ
ಲಕ್ಷಾಂತರ ಜನ ಅನುಯಾಯಿಗಳನ್ನು ಸಂಪಾದಿಸಿದ ಸಿದ್ದಾರೂಢ ಮಠ ಇಂದು ಸಂಪೂರ್ಣ ವೈದಿಕತೆಯಿಂದ ಕೂಡಿದ್ದು
ಸಿದ್ದಾರೂಢರ ತತ್ವಗಳಿಗೆ ಎಳ್ಳು ನೀರು ಬಿಟ್ಟಿರುವುದನ್ನು ಕಂಡು ನಾನು ಮತ್ತು ಕುಮಾರ್ ಪಾಟೀಲ್
ಅವರು ಬೇಸರದಿಂದ ಹೊರಬಂದೆವು. ತದನಂತರ ಹುಬ್ಬಳ್ಳಿಯ ಬಸವಕೇಂದ್ರದಲ್ಲಿ ಶ್ರಾವಣ ಮಾಸದ ನಿಮಿತ್ತ ಉಪನ್ಯಾಸ
ಕಾರ್ಯಕ್ರಮ ಏರ್ಪಡಿಸಿದ್ದರು. ಶ್ರೀ ಕುಮಾರ್ ಪಾಟೀಲ್ ದಂಪತಿಗಳು ನಮ್ಮನ್ನು ಅಲ್ಲಿಗೆ ಕರೆದುಕೊಂಡು
ಹೋಗಿ ಶರಣರ ವಿಚಾರಧಾರೆಗಳಿಗೆ ಸಂಬಂಧಿಸಿದಂತೆ ಚಿಂತನ ಮಂಥನ ಮಾಡಲು ಅನುವು ಮಾಡಿಕೊಟ್ಟರು. ಅಲ್ಲಿ
ಕಾರ್ಯಕ್ರಮ ಮುಗಿಸಿ ಕುಮಾರ್ ಪಾಟೀಲ್ ಅವರ ಮನೆಗೆ ಬಂದು ನಿದ್ರಾಲೋಕಕ್ಕೆ ಹೋದೆವು.
ಮೂರುಸಾವಿರ ಮಠ
ಬೆಳಗ್ಗೆ ಕುಮಾರ್ ಪಾಟೀಲ್ ಅವರ ಮನೆಯಲ್ಲಿ
ತಿಂಡಿ ಮುಗಿಸಿದ ನಂತರ ಅವರ ಕಾರಿನಲ್ಲಿ ನಮ್ಮನ್ನು ಮೂರುಸಾವಿರ ಮಠಕ್ಕೆ ಕರೆದುಕೊಂಡು ಹೋದರು. ಚೆನ್ನಬಸವಣ್ಣನವರು
ಹುಬ್ಬಳ್ಳಿಯಲ್ಲಿ ಶ್ರೀ ಸಿದ್ದೇಶ್ವರ ಅವಧೂತರ ದರ್ಶನ ಪಡೆದು ಇಲ್ಲಿ ವಾಸ್ತವ್ಯ ಹೂಡಿದ್ದರು. ಚೆನ್ನಬಸವಣ್ಣನವರ
ಜೊತೆ ಮೂರುಸಾವಿರ ಶರಣರು ಇಲ್ಲಿ ವಾಸ್ತವ್ಯ ಹೂಡಿದ್ದರು. ಈ ಐತಿಹಾಸಿಕ ಘಟನೆಯ ಪರಿಣಾಮವಾಗಿ ಮೂರುಸಾವಿರ
ಮಠವೆಂದು ಹೆಸರು ಬಂದಿತು. ಈ ಮಠದ ಗತಯುಗದ ಪಕ್ಷಿನೋಟವನ್ನು ನೋಡಿದಾಗ ಪ್ರೊ. ವರದರಾಜ ಉಮರ್ಜಿಯವರು
ಬೆಳಕಿಗೆ ತಂದ ಕಲಚೂರಿಯ ೧೨ನೇ ಶತಮಾನದ ಶಿರಸಿಯ ಶಿಲಾಶಾಸನದಲ್ಲಿ ಮೂರುಸಾವಿರಮಠದ ಉಲ್ಲೇಖವಿದೆ. ಈ
ಮಠದಲ್ಲಿರುವ ಹುಬ್ಬಳ್ಳಿಯ ಮೂರುಸಾವಿರ ಮಠದ ತಪೋವನದ ಗವಿಯಲ್ಲಿ ಉಗ್ರ ಅನುಷ್ಠಾನಗೈದು ಲಿಂಗೈಕ್ಯರಾದ
ಜಗದ್ಗುರು ಗುರುಸಿದ್ಧರಾಜಯೋಗೀಂದ್ರರ ಜಾಗೃತ ಸಮಾಧಿಯು ಶ್ರೀಮಠದ ಬಲಭಾಗದಲ್ಲಿ ಇದ್ದು ಇದನ್ನು
"ಹುಚ್ಚನ ಗದ್ದಿಗೆ" ಎಂದೇ ಭಕ್ತರು ಕರೆಯುತ್ತಾರೆ. ಶ್ರೀ ಮೂರುಸಾವಿರಮಠದ ಹುಚ್ಚನೆಂದರೆ
ಬೆಂಕಿಯ ಕೆಂಡ. ಅವನ ಅಂಗಾರ ಹಿಡಿದು ಆಣೆಮಾಡಿದರೆ ಸಮಸ್ಯೆ ಮುಗಿಯಿತು ಎಂದು ಜನ ಇಂದಿಗೂ ನಂಬಿರುವರು.
ಈ ಕಾರಣದಿಂದ ಇದಕ್ಕೆ ಹುಚ್ಚನ ಮಠ, ಗುರುಸಿದ್ಧಪ್ಪನ ಮಠ ಎಂದು ಕರೆಯಲಾಗುತ್ತದೆ. ಕಿತ್ತೂರು ಚನ್ನಮ್ಮನ
ಸಂಸ್ಥಾನ ಅವನತಿಯ ನಂತರ ಅದೇ ಸಂಸ್ಥಾನದ ಕಟ್ಟಗೆಗಳನ್ನೇ ಈ ಮಠಕ್ಕೆ ಜೋಡಿಸಲಾಗಿದೆ. ತಾಳೆಗ್ರಂಥಗಳನ್ನು
ಸಂಗ್ರಹಿಸಿಡಲು ಓಲೆಮಠವನ್ನು ಕಟ್ಟಲಾಯಿತು.ಈ ಸ್ಥಳಗಳನ್ನು ನೋಡಿ ನಂತರ ಮಠದ ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರಸ್ವಾಮೀಜಿಗಳನ್ನು
ಭೇಟಿ ಮಾಡಿದೆವು. ಅವರ ಜೊತೆ ಒಂದು ಗಂಟೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ
ಚರ್ಚಿಸಿದೆವು. ಶ್ರೀಗಳು ನಮ್ಮ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ನಂತರ ನಮ್ಮನ್ನು ಗೌರವಿಸಿದರು.
ಅಲ್ಲಿಂದ ಚೆನ್ನಬಸವಸಾಗರದ ಕಡೆ ಪಯಣ ಬೆಳೆಸಿದೆವು.
ಹುಬ್ಬಳ್ಳಿ ಚನ್ನಬಸವಸಾಗರ

ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ನಂತರ ಶ್ರೀ
ಚನ್ನಬಸವೇಶ್ವರರ ನೇತೃತ್ವದ ಶರಣರ ತಂಡ ಸಹ್ಯಾದ್ರಿಯ ಅರಣ್ಯ ಪ್ರದೇಶದ ಮಧ್ಯದ ಉಳವಿಯತ್ತ ಸಾಗಿತು.
ಈ ಮಧ್ಯೆ ಅವರು ಹುಬ್ಬಳ್ಳಿಯ ಉಣಕಲ್ಲ ಕೆರೆ ದಂಡೆ ಮೇಲೆ ಕೆಲಕಾಲ ಉಳಿದು ಜನರಲ್ಲಿ ಧರ್ಮ ಜಾಗೃತಿ ಮೂಡಿಸಿದರು.
ಈ ಹಿನ್ನೆಲೆಯಲ್ಲಿ ಉಣಕಲ್ಲ ಕೆರೆ ದಂಡೆಯ ಮೇಲೆ ಬಸವಣ್ಣನವರ ದೇವಸ್ಥಾನ ನಿರ್ಮಾಣವಾಗಿದ್ದು ಬಸವ ಭಕ್ತರ
ಪವಿತ್ರ ಯಾತ್ರಾ ಸ್ಥಳವಾಗಿದೆ. ಉಣಕಲ್ ಕೆರೆಯಾಗಿದ್ದ ಇದು ಧಾರವಾಡ ಹೈಕೋರ್ಟ್ ನಿರ್ದೇಶನದ ಮೇರೆಗೆ
ಚನ್ನಬಸವಸಾಗರ ಎಂದು ನಾಮಕರಣವಾಗಿದೆ. ಈ ಕೆರೆಗೆ ಚನ್ನಬಸವಸಾಗರ ಎಂದು ನಾಮಕರಣವಾಗಲು ನಮ್ಮ ಜೊತೆ ಇರುವ
ಶ್ರೀ ಕುಮಾರ್ ಪಾಟೀಲ್ ಅವರ ಪಾತ್ರವೂ ತುಂಬಾ ಮುಖ್ಯವಾದದ್ದು. ಅವರು ಅನೇಕ ವರ್ಷಗಳ ಕಾಲ ಧಾರವಾಡದ
ಕೋರಿಶೆಟ್ಟರ್ ಎಂಬ ಹೆಸರಾಂತ ವಕೀಲರ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಿ ಚನ್ನಬಸವಸಾಗರ ಎಂದು ನಾಮಕರಣವಾಗಲು
ಶ್ರಮಿಸಿರುವುದನ್ನು ನೋಡಿ ತುಂಬಾ ಖುಷಿ ಆಯಿತು. ಅಲ್ಲಿ ಚೆನ್ನಬಸವಣ್ಣನವರ ಭವನದ ಹಿಂಭಾಗ ಕೆರೆಯ ದೃಶ್ಯವನ್ನು
ನೋಡಿ ಆ ಸ್ಥಳದ ಮಹಿಮೆಯ ಬಗ್ಗೆ ಒಂದು ವೀಡಿಯೋ ಮಾಡಿದೆವು. ಅಲ್ಲಿ ನಾನು ಮತ್ತು ನನ್ನ ಪತ್ನಿ ರೂಪ
ಕುಮಾರಸ್ವಾಮಿ, ಕುಮಾರ್ ಪಾಟೀಲ್ ಮತ್ತು ಅವರ ಶ್ರೀಮತಿ ಶಾರದಾ ಪಾಟೀಲ್, ಬಸವರಾಜ್ ಕುಬಸದ್ ಮತ್ತು
ಅವರ ಶ್ರೀಮತಿ ಅನಿತಾ ಕುಬಸದ್ ಜೊತೆಗೆ ಹುಬ್ಬಳ್ಳಿಯ ಪಾರ್ವತಿ ಅರಟಾಳ್, ಕವಿತಾ, ಪ್ರಭಾ ಮತ್ತು
ವಿಭಾ ಎಲ್ಲರೂ ಒಟ್ಟಿಗೆ ಸೇರಿ ಶರಣರ ವಚನಗಳನ್ನು ಸಾಮೂಹಿಕ ಗಾಯನ ಮಾಡಲಾಯಿತು. ಸುತ್ತಮುತ್ತ ವೈದಿಕ
ಆಚರಣೆಗಳಿಗೆ ಮೊರೆಹೋಗಿರುವ ಆ ಸ್ಥಳದಲ್ಲಿ ಶರಣರ ವಚನಗಳ ಗಾಳಿ ಬೀಸಿದಾಗ ಅಲ್ಲಿನ ವಾತಾವರಣ ಹೇಗಾಯಿತೆಂದರೆ
ಮಳೆಯ ಸಿಂಚನದ ಮೂಲಕ ವಚನಗಳಿಗೆ ಶುಭ ಕೋರಿತು. ಇದನ್ನು ನೋಡಿ ನಮಗೆ ಆನಂದವಾಯಿತು. ನಂತರ ನಾವು ಶ್ರೀಮತಿ
ಪಾರ್ವತಿ ಅರಟಾಳ್ ಅವರ ಮನೆಯಲ್ಲಿ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ ಕುಮಾರ್ ಪಾಟೀಲ್ ಅವರ ಮನೆಗೆ
ಹಿಂದಿರುಗಿದೆವು. ಕುಮಾರ್ ಪಾಟೀಲ್ ಮತ್ತು ಶಾರದಾ ಪಾಟೀಲ್ ಅವರ ಆತಿಥ್ಯ ಮತ್ತು ಅವರು ಶರಣ ಸಾಹಿತ್ಯವನ್ನು
ಅಪ್ಪಿಕೊಂಡು ಶರಣ ಸಾಹಿತ್ಯ ಆರಾಧಕರಾಗಿರುವುದನ್ನು ಕಂಡು ನಮಗೆ ಅತೀವ ಸಂತಸವಾಯಿತು. ಮತ್ತೆ ಮತ್ತೆ
ಇಂತಹ ದಂಪತಿಗಳ ದರ್ಶನ ಭಾಗ್ಯವನ್ನು ಕರುಣಿಸಿ ನಮ್ಮನ್ನು ಪುನೀತರನ್ನಾಗಿ ಮಾಡಿಸಿ ಎಂದು ಶರಣರನ್ನು
ನೆನೆದುಕೊಂಡು ಆ ರಾತ್ರಿ ಅವರ ಮನೆಯಿಂದ ಬಸವರಾಜ್ ಕುಬಸದ್ ಅವರ ಮನೆಗೆ ಬಂದು ಅಲ್ಲಿಂದ ರೈಲ್ವೆ
ನಿಲ್ದಾಣಕ್ಕೆ ತೆರಳಿ ಮೈಸೂರಿಗೆ ಹಿಂದಿರುಗಿದೆವು.
ಹುಬ್ಬಳ್ಳಿಯು ಹೂವು ಮತ್ತು ಬಳ್ಳಿಯಿಂದ
ಆಗಿರುವಂತಹ ನಗರ ಎಂದು ಹೇಳುತ್ತಾರೆ. ಹುಬ್ಬಳ್ಳಿಯ ಬಸವಭಕ್ತರ ಹೂವಿನಂತಹ ಮನಸ್ಸಿನಿಂದಲೇ ನಮ್ಮಂತಹ
ಸಂಬಂಧಗಳೆಂಬ ಬಳ್ಳಿಗಳು ಗಟ್ಟಿಯಾಗಲು ಕಾರಣವಾಯಿತು. ಒಟ್ಟಿನಲ್ಲಿ ನಮ್ಮ ಜೀವನದ ಇತಿಹಾಸದಲ್ಲಿ ಹುಬ್ಬಳ್ಳಿಯ
ಶರಣ ಪ್ರವಾಸ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತಹ ಸುಸಂದರ್ಭ.
2023ರ ಶರಣ ಪ್ರವಾಸ ಕಥನವು ಇದಾಗಿದ್ದು
ನಮ್ಮ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈ ಪ್ರವಾಸ ಕಥನ ಇಷ್ಟವಾದರೆ ದಯಮಾಡಿ ನಮಗೆ
ಹತ್ತರಿಂದ ಹದಿನೈದು ಸಾಲುಗಳ ಪತ್ರ ಬರೆಯಿರಿ. ನಿಮ್ಮ ಪತ್ರಗಳು ನಮ್ಮ ಮುಂದಿನ ಶರಣ ಪ್ರವಾಸ ಕಥನ ಬರೆಯಲು
ದಾರಿಯಾಗುತ್ತದೆ.
ಡಾ. ವಚನ ಕುಮಾರಸ್ವಾಮಿ
#431, 7ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ
ಮೈಸೂರು – 570026
ಮೊ. 9901137948